ಹೈಬಿಪಿ ನಿಯಂತ್ರಣಕ್ಕೂ ಬೆಳ್ಳುಳ್ಳಿಯೇ ಮದ್ದು
ಚಳ್ಳಕೆರೆಯಿಂದ ಓದುಗ ಬಂಧುವೊಬ್ಬರು ಪತ್ರ ಬರೆದಿದ್ದಾರೆ. "ಬೆಳ್ಳಿತಟ್ಟೆ'ಯಲ್ಲಿ ಬೆಳ್ಳುಳ್ಳಿ ಕುರಿತು ಓದಿದ ನಂತರ ದಿನವೂ ಎದ್ದ ಕೂಡಲೇ ಒಂದು ಎಸಳು ನುಂಗುತ್ತಿದ್ದೆ. 30 ವರ್ಷಗಳಿಂದ ಕಾಡುತ್ತಿದ್ದ ಚರ್ಮದ ಅಲರ್ಜಿ ಒಣಗುತ್ತ ಬಂದಿದೆ. ಇನ್ನೊಬ್ಬರಿಗೆ ಒಂದೇ ವಾರದಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಮಾಯವಾಗಿದೆ' ಎನ್ನುವುದು ಅವರ ಪತ್ರದ ಸಾರಾಂಶ. ಬೆಳ್ಳುಳ್ಳಿ ಸರ್ವರೋಗಕ್ಕೂ ರಾಮಬಾಣ ಎಂದು ಈ ಹಿಂದೆಯೇ ಹೇಳಿದ್ದೆ. ಅದರ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ. ಅದೇ ಒಂದು ಬೃಹತ್ ಕೃತಿಯಾಗಬಹುದೇನೋ. ನಿರ್ದಿಷ್ಟ ಆರೋಗ್ಯ ತೊಂದರೆಯ ಹಿನ್ನೆಲೆ ಇಟ್ಟುಕೊಂಡು ಆಹಾರ ವಿಧಾನದ ಬಗ್ಗೆ ಚರ್ಚಿಸಿದರೆ ಉಪಯುಕ್ತವಾದೀತು ಎನ್ನುವ ನನ್ನ ಭಾವನೆಯನ್ನು ಈ ಬಂಧು ನಿಜಗೊಳಿಸಿದ್ದಾರೆ. ಈಗ ಮತ್ತೊಮ್ಮೆ ಬೆಳ್ಳುಳ್ಳಿ ಕುರಿತು ಹೇಳಬೇಕಾಗಿ ಬಂದಿರುವುದರಿಂದ ಈ ವಿಚಾರ ಪ್ರಸ್ತಾಪಿಸಿದೆ.
ಹೈಬಿಪಿ ಇರುವವರು ಹೆಚ್ಚೆಚ್ಚು ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದು ಎನ್ನುತ್ತಾರೆ ವೈದ್ಯರು. ನಮ್ಮಲ್ಲಿಯಷ್ಟೇ ಅಲ್ಲ, ಚೀನಾದಲ್ಲಿ ಕೂಡ ಪ್ರಾಚೀನ ಕಾಲದಲ್ಲಿ ಬೆಳ್ಳುಳ್ಳಿಯನ್ನು ರಕ್ತದೊತ್ತಡ ನಿವಾರಣೆಗೂ ಬಳಸುತ್ತಿದ್ದರು ಎನ್ನುವ ಕುರಿತು ದಾಖಲೆಗಳಿವೆ. ಇವತ್ತು ಜರ್ಮನಿಯಲ್ಲಿ ಹೈಬಿಪಿ ನಿಯಂತ್ರಣಕ್ಕೆ ಬೆಳ್ಳುಳ್ಳಿಯೇ ಪ್ರಮುಖವಾದ ಔಷಧ ಎಂದರೆ ಆಶ್ಚರ್ಯವಾದೀತು. ಅಲ್ಲಷ್ಟೇ ಅಲ್ಲ, ಭಾರತದಲ್ಲೂ ಬೆಳ್ಳುಳ್ಳಿ ಅಂಶವಿರುವ ಮಾತ್ರೆಗಳು ಬಂದಿವೆಯಂತೆ! ದಿನಕ್ಕೊಂದು ಎಸಳಿನ ಸೇವನೆ ರಕ್ತದೊತ್ತಡವನ್ನು ತ್ವರಿತವಾಗಿ ನಿಯಂತ್ರಿಸಬಲ್ಲದು ಎಂದು ಜರ್ಮನಿಯಲ್ಲಿ ನಡೆದ ಸಂಶೋಧನೆಯೂ ಸಾಬೀತುಪಡಿಸಿದೆ. ನಿತ್ಯ ಬೆಳ್ಳುಳ್ಳಿ ಸೇವಿಸುತ್ತಿದ್ದವರಲ್ಲಿ ರಕ್ತದೊತ್ತಡ ಮೂರು ತಿಂಗಳಿನಲ್ಲಿ 171/102 ಇದ್ದುದು, 152/89ಕ್ಕೆ ಇಳಿದಿದೆ ಎನ್ನುವುದು ಅಧಿಕೃತವಾಗಿಯೇ ದಾಖಲಾಗಿರುವ ಸಂಗತಿ. ಅದೇ ಅವಧಿಯಲ್ಲಿ ಬೆಳ್ಳುಳ್ಳಿ ಸೇವಿಸದೇ ಇರುವ, ಆದರೆ ಅಧಿಕ ರಕ್ತದೊತ್ತಡದ ತೊಂದರೆ ಇದ್ದವರ ಬಿಪಿಯಲ್ಲಿ ಇಳಿಕೆಯಾಗಿರಲಿಲ್ಲ. ನಿತ್ಯ ಬೆಳ್ಳುಳ್ಳಿ ಸೇವಿಸಿಸುವುದರಿಂದ ರಕ್ತದೊತ್ತಡ ನಿಯಂತ್ರಣ ಮಾತ್ರವಲ್ಲದೆ ಅನೇಕ ಆರೋಗ್ಯ ತೊಂದರೆಗಳಿಂದ ನಮ್ಮನ್ನು ಕಾಪಾಡಿಕೊಳ್ಳಬಹುದು ಎನ್ನುತ್ತಾರೆ ತಜ್ಞರು.
ಬೆಳ್ಳುಳ್ಳಿ ರಕ್ತನಾಳಗಳ ಸುತ್ತಲಿನ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ಇದರಿಂದ ರಕ್ತ ಪರಿಚಲನೆ ಸರಾಗವಾಗುತ್ತದೆ. ಅದರ ಫಲವಾಗಿ ರಕ್ತದೊತ್ತಡ ಕಡಿಮೆಯಾಗುತ್ತದೆ ಎನ್ನುವ ತೀರ್ಮಾನಕ್ಕೆ ವೈದ್ಯರು ಬಂದಿದ್ದಾರೆ. ಜಾರ್ಜ್ ವಾಷಿಂಗ್ಟನ್ ಯೂನಿವರ್ಸಿಟಿ ಸಂಶೋಧಕರು ಮೊಲಗಳ ಮೇಲೆ ಇಂತಹುದೇ ಪ್ರಯೋಗ ನಡೆಸಿ ಅದನ್ನು ಖಚಿತಪಡಿಸಿದ್ದಾರೆ ಕೂಡ. ಈರುಳ್ಳಿ ತಿಂದರೂ ಇದೇ ಪರಿಣಾಮ ಪಡೆಯಬಹುದು ಎನ್ನುವ ಅಭಿಪ್ರಾಯವೂ ಇದೆ. ಆ ಕುರಿತು ಮುಂದೆಂದಾದರೂ ಚರ್ಚೆ ಮಾಡೋಣ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com