ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಎಂಜಲಿನ ಜೂಲಿ

ಅಲೋಪತಿ ಲೆಕ್ಕದಲ್ಲಿ ವಿಕ್ಸೇ ಹಚ್ಚಿ. ಆಯುರ್ವೇದಿಕ್ ಲೆಕ್ಕದಲ್ಲಿ ಕಾಳುಮೆಣಸಿನ ಕಷಾಯ ಕುಡಿಸಿ. ಆದರೆ, ಈ ಹುಳುವಿನ ಸಿಂಬಳ...

Vishwanath S
Updated On : 8 Aug 2013, 1:24 am

ಅಲೋಪತಿ ಲೆಕ್ಕದಲ್ಲಿ ವಿಕ್ಸೇ ಹಚ್ಚಿ. ಆಯುರ್ವೇದಿಕ್ ಲೆಕ್ಕದಲ್ಲಿ ಕಾಳುಮೆಣಸಿನ ಕಷಾಯ ಕುಡಿಸಿ. ಆದರೆ, ಈ ಹುಳುವಿನ ಸಿಂಬಳ ಶಮನಕ್ಕೆ ವೈದ್ಯಪದ್ಧತಿಯಲ್ಲೆಲ್ಲೂ ಪರಿಹಾರ ಊ ಹ್ಞುಂ. ಇದೇ ಅದರ ಒರಿಜಿನಲ್ ಗೆಟಪ್ಪು. ಅಲ್ಲಿ ಇಲ್ಲಿ ತಿರುಗುವ ಆರೋಪಕ್ಕೋ, ಇದರ ಬೆನ್ನು ಗೂಳಿಯ ಗುಪ್ಪೆಯ ಥರ ಇದೆ ಎಂಬ ಕಾರಣಕ್ಕೋ, ಇದಕ್ಕೆ 'ಬಸವನ ಹುಳು' (ಶಂಖ ಹುಳು) ಎಂಬ ಹೆಸರಿಟ್ಟಿದ್ದಾರೆ, ಕೆಲವು ಶತಮಾನಗಳ ಹಿಂದೆ. ಯಾವುದೋ ಒಂದು ಅಕ್ಷರ ಇದರ ಮಧ್ಯ ಕುಳಿತಿದ್ದರೂ, ವಿವಾದದ ಬುಟ್ಟಿಗೆ ಈ ಹುಳುವೂ ಸೇರಿಬಿಡುತ್ತಿತ್ತು. ಬಚಾವಾದೆ ಮಗನೆ..!
ಇದು ಹೆಚ್ಚು ಶೋ ಕೊಡುವುದು ಮಳೆಗಾಲದಲ್ಲೇ. ಬೆನ್ನ ಮೇಲೆ ಬೆಚ್ಚನೆಯ ಚಿಪ್ಪಿನ ಮೂಟೆ. ಈ ಕಾರಣಕ್ಕಾಗಿಯೇ ಇದಕ್ಕೆ 'ನ್ಯಾನೋಆಮೆ'ಯ ಇಮೇಜು. ಆದರೆ, ಆಮೆಗೂ ಇಷ್ಟು ಗಲೀಜಾಗಿರಲು ಬರುತ್ತಾ ಕೇಳಬೇಡಿ. ದೇಹವನ್ನು ಹಿಗ್ಗಿಸುತ್ತಾ, ಕುಗ್ಗಿಸುತ್ತಾ ಇದೊಂದು ನಡಿಗೆಯೇ ಅಲ್ಲ ಎನ್ನುವಷ್ಟು ನಿಧಾನ ಹರಿದಾಡುತ್ತಾ, ದಾರಿಯುದ್ದಕ್ಕೂ ಲೋಳೆಯ ಎಂಜಲನ್ನು ಚೆಲ್ಲುವ ಇದರ ವ್ಯಕ್ತಿತ್ವಕ್ಕೆ ಹೋಲಿಸಲು ಇನ್ನೊಂದು ಹೊಲಸು ಜೀವಿಯ ಉದಾಹರಣೆ ಸಿಕ್ಕದು.
ನೆಲದ ಮೇಲೆ ಹರಿದಾಡಿದರೇನೇ ಸಹಿಸಲಸಾಧ್ಯ. ಆದರೆ, ಈ ಬಸವನ ಹುಳುವೀಗ ನಮ್ಮ ಮುಖದ ಮೇಲೂ ಹರಿದಾಡುತ್ತಿದೆ. ಇದರ ಸಿಂಬಳ ಅದ್ಭುತ ಫೇಶಿಯಲ್ಲು. ಜಪಾನಿನ ಬ್ಯೂಟಿ ಪಾರ್ಲರುಗಳು ಟೋಕಿಯೊದಿಂದ ಹಾಲಿವುಡ್ಡಿನ ತನಕ ಇದರ ಯಶಸ್ಸನ್ನು ಬಿತ್ತರಿಸಿ, ಈಗ ಭಾರತೀಯ ನಾರಿಯರ ಮುಖದ ಮೇಲೂ ಹರಿದಾಡಿಸಲು ತುದಿಬೆರಳಿನಲ್ಲಿ ನಿಂತಿದ್ದಾರೆ.

ಚಿರಯವ್ವನ ತಂದ...
ಮುಖದಲ್ಲಿ ಏನೇ ಕಲೆಗಳಿದ್ದರೂ, ಎಷ್ಟೇ ನೆರಿಗೆ ಹುಟ್ಟಿಕೊಂಡಿದ್ದರೂ ಅದರ ಮೇಲೆ ಬಸವನಹುಳು ಹರಿದಾಡಿಸಿಬಿಟ್ಟರೆ ಚರ್ಮವು ಬಿಗುವಾಗಿ, ಕಲೆಗಳೂ ಮಾಯವಾಗುತ್ತವಂತೆ, ಇವುಗಳ ಲೋಳೆಗಳಲ್ಲಿ ಆಂಟಿಆಕ್ಸಿಡೆಂಟ್ಸ್ ಮತ್ತು ಹ್ಯಾಲುರೊನಿಕ್ ಆ್ಯಸಿಡ್ಡುಗಳು ಯಥೇಚ್ಛ ಇರುವುದರಿಂದ ಚರ್ಮದ ಯಾವುದೇ ಕಲೆಗಳನ್ನು ಇವು ನುಂಗಬಲ್ಲವು. ಸತ್ತ ಚರ್ಮವನ್ನು ಮೊದಲಿನ ಲವಲವಿಕೆಗೆ ತರಬಲ್ಲವು. ಇದೇ ಯಶೋಗಾಥೆಯನ್ನಿಟ್ಟುಕೊಂಡೇ ಜಪಾನಿ ಸ್ಪಾಗಳು ಮುಂಬೈ, ದೆಹಲಿಯಂಥ ಮಹಾನಗರಗಳಲ್ಲಿ ಹೊಸ ಕೇಂದ್ರಗಳನ್ನು ತೆರೆಯುತ್ತಿವೆ.

ಮತ್ತೊಂದು ಸೇರ್ಪಡೆ
ಬಸವನ ಮೈನಲ್ಲಿ ಇಷ್ಟೆಲ್ಲ ಮಾಯಾವಿದ್ಯೆ ಇರುವುದೂ ನಿಜವೇ. ಆದರೆ, ಒಪ್ಪಿಕೊಳ್ಳುವ ಧಾರಾಳರು ನಾವಾಗುತ್ತೀವಾ? ಎಂಬುದು ಪ್ರಶ್ನೆ. ವಿದೇಶಿ ಸಲೂನುಗಳಲ್ಲಿ ಇಂಬಳ ಚಿಕಿತ್ಸೆ, ಪಕ್ಷಿಯ ಹಿಕ್ಕೆಯ ಫೇಶಿಯಲ್, ಕೂದಲಿಗೆ ಗೂಳಿಯ ವೀರ್ಯ ಲೇಪನ, ಹಾವಿನ ಮಸಾಜು ಮತ್ತು ವಿಷದ ಟ್ರೀಟ್‌ಮೆಂಟುಗಳೆಲ್ಲ ಏಂಜಲಿನಾ ಜೂಲಿ, ಡೆಮಿ ಮೂರ್, ಜೆಸ್ಸಿಕಾ ಸಿಂಪ್ಸನ್, ಮಿಲಿ ಸಿರಿಸ್, ಪಮೇಲಾರಂಥ ಹಾಲಿವುಡ್ ನಟಿಯರನ್ನೂ ಆಕರ್ಷಿಸಿದ ಸಂಗತಿ. ಈಗ ಆ ಚಿಕಿತ್ಸೆಗಳು ಅಲ್ಲಿನ ಸಾಮಾನ್ಯರನ್ನೂ ತಲುಪಿವೆ. ಆದರೆ, ನಮ್ಮಲ್ಲಿ ಒಬ್ಬ ನಟಿಯೂ ಈ ಚಿಕಿತ್ಸೆಗಳಿಗೆ ಮೇಲ್ಪಂಕ್ತಿ ಹಾಕಿಲ್ಲ. ಇಲ್ಲಿನವರು ಅಂಥ ಮನಸ್ಥಿತಿಯನ್ನು ತಲುಪುವುದು ಕಷ್ಟ ಕಷ್ಟ. ಇದರ ಲೋಳೆಗಳು ಅಂಜಿಯೋಸ್ಟ್ರಾಂಗೈಲೋಸಿಸ್, ಇಸನೋಫಿಲಿಕ್ ಮೆನಿಂಜೈಟಿಸ್ ಮುಂತಾದ ಕಾಯಿಲೆಗಳನ್ನು ಹರಡುವುದರಿಂದ ಸಹಜವಾಗಿ ವಿಜ್ಞಾನಿಗಳಿಗೂ ಆತಂಕ ಇದ್ದೇ ಇದೆ.

ಕ್ರಿಮಿನಲ್ ಹಿನ್ನೆಲೆ
ಸೌಂದರ್ಯ ಕ್ಷೇತ್ರಕ್ಕೆ ಬಸವನ ಹುಳು ಇಳಿದು ಕೆಲವೇ ಸಮಯವಾಗಿದೆ. ಈಗಾಗಲೇ ಈ ಜೀವಿಯ ಸಂಹಾರ ಜಗತ್ತಿನೆಲ್ಲೆಡೆ ನಡೆಯುತ್ತಲೇ ಇದೆ. ಅಮೆರಿಕ, ಅರ್ಜೆಂಟೀನಾ, ಬ್ರೆಜಿಲ್‌ನ ಹೊಲಗಳಿಗೆ ದಾಳಿಯಿಟ್ಟು ಮಿಲಿಯನ್‌ಗಟ್ಟಲೆ ಡಾಲರಿನ ಫಸಲನ್ನು ನುಂಗಿನೀರು ಕುಡಿದ ಕ್ರಿಮಿನಲ್ ಹಿನ್ನೆಲೆಯುಳ್ಳ ಹುಳುವಿದು. ನಮ್ಮ ಉತ್ತರ ಕರ್ನಾಟಕ ಬದಿಯ ಹೊಲಗಳಲ್ಲೂ ಇದರ ಕಾಟ ಕಣ್ಣಲ್ಲಿ ನೀರೂರಿಸುವಷ್ಟು. ಗಾತ್ರ ಚಿಕ್ಕದಾದರೂ 500 ಸಸ್ಯ ಪ್ರಭೇದಗಳನ್ನು ತಿಂದು ಬದುಕಬಲ್ಲ ತಾಕತ್ತು. ಕೀಟನಾಶಕಗಳಲ್ಲದೆ, ಇದರ ಮೇಲೆ ಸಕ್ಕರೆ ಅಥವಾ ಉಪ್ಪು ಹಾಕಿ ಸಾಯಿಸುವ ಮಾರ್ಗವನ್ನು ರೈತರು ಅನುಸರಿಸುವುದುಂಟು. ಚೀನಾ, ಜಪಾನ್, ಹಾಂಕಾಂಗ್, ಆಫ್ರಿಕಗಳಲ್ಲಿ ಇದನ್ನು ಫ್ರೈ ಮಾಡಿಯೂ ತಿನ್ನುವುದರಿಂದ ಇದರ ಸಂತತಿ ವಿನಾಶದತ್ತಲೇ ತಲುಪಿತ್ತು. ಈ ಸೌಂದರ್ಯ ಪ್ರಯೋಜನದಿಂದಾಗಿ ಈಗಿದಕ್ಕೆ ಮರುಹುಟ್ಟು ಸಿಕ್ಕಂತಾಗಿದೆ. ಇದರ ತಳಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಬಸವನ ಹುಳುವಿನ ಮೈಯ್ಯ ಎಂಜಲಿನಿಂದ ಜೂಲಿ ಥರ ಕಾಣಿಸುತ್ತೀರಿ ಎಂದಾದರೆ, ಇನ್ನು ನಮ್ಮ ಮೂಗಿನ ಸಿಂಬಳದ ಬಗ್ಗೆ ಅಸಹ್ಯ ಪಡುವುದು ಸುಮ್ಮನೆ!

ಭಾರತಕ್ಕೆ ಬಂದಿದ್ದು ಹೇಗೆ?
ಬಸವನ ಹುಳುವಿನ ಮೂಲ ಆಫ್ರಿಕ. ಅದು ಅಲ್ಲಿಂದ ಹೇಗೆ ಭಾರತಕ್ಕೆ ತೆವಳಿಬಂತು? ಇದಕ್ಕೂ ಒಂದು ಕಥೆಯಿದೆ. ಈ ಹುಳುವನ್ನು ಭಾರತಕ್ಕೆ ತಂದುಬಿಟ್ಟವ ಇಂಗ್ಲೆಂಡಿನ ಶಂಖಶಾಸ್ತ್ರಜ್ಞ ವಿಲಿಯಂ ಹೆನ್ರಿ ಬೆನ್ಸನ್. ಕೋಲ್ಕತಾದ ಚೌರಂಗಿ ತೋಟದಲ್ಲಿ ತಂದುಬಿಟ್ಟನಂತೆ. ನಂತರ ಅವು ಎಲ್ಲೆಡೆ ಹರಡಿದವು. ತೇವವಿರುವ ಜಾಗದಲ್ಲಿ ಹೆಚ್ಚು ಕಾಣಿಸಿಕೊಳ್ಳುವ ಇವು ದ್ವಿಲಿಂಗಿಗಳು. ಒಂದು ಸಲಕ್ಕೆ 90ಕ್ಕೂ ಅಧಿಕ ಮೊಟ್ಟೆಗಳನ್ನಿಡುತ್ತವೆ. ಇವುಗಳಿಗೆ ಕೋಡಿನಂಥ 2 ಸ್ಪರ್ಶಾಂಗಗಳಿದ್ದು, ಅವುಗಳ ತುದಿಯಲ್ಲಿ ಕಣ್ಣಿದ್ದರೂ ಅದು ಕಾಣಿಸದು. ಕಿವಿಯೂ ಕೇಳಿಸದು. ತನಗೆ ಆಪತ್ತು ಎದುರಾದಾಗಲೆಲ್ಲ, ಚಿಪ್ಪಿನೊಳಗೆ ನಿರ್ಜೀವಿಯಂತೆ ಮುದುಡಿ ಕೂರುತ್ತದೆ.

- ಕೀರ್ತಿ ಕೋಲ್ಗಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments