ಒಲವಿನ ಒಲೆ
ನಮ್ಮ ಅಡುಗೆ ಮನೆಗಳಲ್ಲಿ ಸಾಕಷ್ಟು ಕ್ರಾಂತಿಕಾರಕ ಬದಲಾವಣೆಗಳಾಗಿವೆ. ಆದ್ರೆ ಅವೆಲ್ಲಾ ಉಳ್ಳವರಿಗೆ ಮಾತ್ರ. ಇಂದಿಗೂ ಬಡವರ ಪಾಲಿಗೆ ಮಣ್ಣಿನ ಒಲೆಗಳೇ ಆಸರೆ. ಹೀಗಾಗಿ ಅಚ್ಚುಕಟ್ಟಾದ ಒಲೆಗಳಿಗೆ ಇಂದಿಗೂ ಬೇಡಿಕೆ.
ಈ ಒಲೆಗಳನ್ನು ಸಂಪೂರ್ಣ ಮಣ್ಣಿನಿಂದ (ಕಪ್ಪು ಮಣ್ಣು) ತಯಾರಿಸುತ್ತಾರೆ. ಇದರ ತಯಾರಿಕೆಯನ್ನೇ ಕುಲ ಕಸಬಾಗಿಸಿಕೊಂಡಿರುವ ಹಲವಾರು ಕುಟುಂಬಗಳು (ಕುಂಬಾರರು) ನಮ್ಮ ಮಧ್ಯೆ ಇವೆ. ಹರಳು, ಕಲ್ಲುಗಳಿಲ್ಲದಂತೆ ಕಪ್ಪು ಮಣ್ಣನ್ನು ಸೋಸಿ, ಸಾಣಿಸಿ ತೆಗೆಯುತ್ತಾರೆ. ಹೀಗೆ ಸಿದ್ಧವಾದ ಮಣ್ಣಿಗೆ ನೀರು, ಅರಳೆ ಸ್ವಲ್ಪ ಪ್ರಮಾಣದ ಬೆಲ್ಲ ಹಾಕಿ ನಾಲ್ಕೈದು ದಿನ ನೆನೆ ಹಾಕುತ್ತಾರೆ. ನಂತರ ಅದನ್ನು ಕುಟ್ಟಿ ಮತ್ತೆ ನೆನೆಸಿ, ಆಮೇಲೆ ಈ ರೀತಿಯ ಒಲೆಗಳನ್ನು ಸಿದ್ಧಪಡಿಸಿ, ಬೆಂಕಿಯಲ್ಲಿ ಸುಟ್ಟು ಸಿದ್ಧಪಡಿಸುತ್ತಾರೆ. ಇದೆಲ್ಲ ಕೇವಲ ಕೈಯಿಂದಲೇ ನಡೆವ ಕೆಲಸ.
ಏನಿದರ ವಿಶೇಷ?
ಗ್ರಾಮೀಣ ಜನತೆ ಇಂದಿಗೂ ತಮ್ಮ ಹೊಲದ ಬೆಳೆಗಳನ್ನು ಕಟಾವು ಮಾಡಿದ ನಂತರ ಅದನ್ನೇ ಉರುವಲಾಗಿ ಬಳಸುತ್ತಾರೆ. ಹಾಗಾಗಿ ಅವರಿಗೆ ಈ ಮಣ್ಣಿನ ಒಲೆಗಳು ಅಡುಗೆ ಮಾಡಲು ಹೆಚ್ಚು ಸಹಕಾರಿ. ಇವುಗಳ ವಿನ್ಯಾಸದಲ್ಲಿ ಕುಂಬಾರರು ಹೆಚ್ಚಿನ ಜಾಗೃತಿ ವಹಿಸಿ ಒಂದು ದೊಡ್ಡ ಒಲೆ, ಅದರ ಹಿಂದೆ ಎರಡು ಸಣ್ಣ ಒಲೆಗಳನ್ನು ನಿರ್ಮಿಸಿರುತ್ತಾರೆ. ದೊಡ್ಡ ಒಲೆಯಲ್ಲಿ ಮುಖ್ಯ ಆಹಾರ, ಸಣ್ಣ ಒಲೆಯಲ್ಲಿ ಸಣ್ಣ ಪುಟ್ಟ ಆಹಾರ ತಯಾರಿಸಲಾಗುತ್ತದೆ. ಒಂದೇ ಒಲೆಯ ಬೆಂಕಿ ಮೂರಕ್ಕೂ ಸಾಕಾಗುತ್ತದೆ. ದೊಡ್ಡ ಒಲೆಗೆ ಗಂಡೊಲೆ ಎಂದೂ, ಸಣ್ಣ ಒಲೆಗಳಿಗೆ ಹೆಣ್ಣೊಲೆ ಎಂದೂ ಹೆಸರು. ಇವನ್ನು ತಯಾರಿಸಲು ಅನುಭವ, ಕೌಶಲ ಅಗತ್ಯ.
ಬೆಲೆ ಕಳೆದುಕೊಂಡಿಲ್ಲ
ಆಧುನಿಕತೆ ಮಧ್ಯೆ ಮಣ್ಣಿನೊಲೆ ಬೆಲೆ ಕಳೆದುಕೊಂಡಿಲ್ಲ ಎನ್ನುವುದೇ ಸಮಾಧಾನದ ಸಂಗತಿ. ಇದಕ್ಕೆ ಕಾರಣ ಗ್ರಾಮಾಂತರ ಜನತೆ ಇಂದಿಗೂ ಇವನ್ನೇ ನಂಬಿಕೊಂಡಿರುವುದು. ಗ್ರಾಮೀಣ ಪ್ರದೇಶದ ಜನತೆಗೆ ಅವರ ಕೈಗೆಟಕುವ ದರದಲ್ಲಿ ಇವು ಲಭ್ಯ.
ಈ ಮೊದಲು ಒಲೆಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದವು. ಈಗ ಅಲ್ಪ ಪ್ರಮಾಣದಲ್ಲಿ ಬೇಡಿಕೆ ಕಡಿಮೆಯಾಗಿದೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಬೇಡಿಕೆ ಇದೆ. ಇವುಗಳ ತಯಾರಿಕೆಯಿಂದಲೇ ನಮ್ಮ ಹೊಟ್ಟೆ ತುಂಬುತ್ತದೆ.
- ಗವಿಸಿದ್ದವ್ವ ಕುಂಬಾರ, ಪರಶುರಾಮ ಕುಂಬಾರ
-ಶಿವಕುಮಾರ ಕುಷ್ಟಗಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.