ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಬಳಸಿ ನೋಡಿ 'ರಹಸ್ಯ ಅಸ್ತ್ರ'

Vishwanath S
Updated On : 7 Aug 2013, 3:29 am

ಪದೇಪದೆ ಮೂಳೆ ಮುರಿತಕ್ಕೆ ಒಳಗಾಗುತ್ತಿದ್ದರೆ ವೈದ್ಯರು ಹೇಳುತ್ತಾರೆ, 'ನಿಮಗೆ ಕ್ಯಾಲ್ಶಿಯಂ ಕೊರತೆ ಇರಬಹುದು. ಒಮ್ಮೆ ಪರೀಕ್ಷೆ ಮಾಡಿಬಿಡೋಣ'. ಅಪಘಾತ ಅಥವಾ ಯಾವುದೇ ರೀತಿಯಿಂದ ಮೂಳೆ ಮುರಿತವಾದಾಗಲೂ ಕ್ಯಾಲ್ಶಿಯಂ ಅಧಿಕ ಪ್ರಮಾಣದಲ್ಲಿರುವ ಆಹಾರಗಳನ್ನು ಸೇವಿಸಲು ಸಲಹೆ ಮಾಡುತ್ತಾರೆ. ಏಕೆಂದರೆ ಮೂಳೆ ವೇಗವಾಗಿ ಬೆಳೆಯುತ್ತದೆ ಎಂದು. ಹೀಗಾಗಿ ನಮ್ಮ ಕಲ್ಪನೆಯಲ್ಲಿ ಕ್ಯಾಲ್ಶಿಯಂ ಎಂದರೆ ಮೂಳೆಗಳಿಗೆ ಬಲ ನೀಡುವ ಪೌಷ್ಟಿಕಾಂಶ ಎಂದು. ಗೊತ್ತಿರಲಿ, ಕ್ಯಾಲ್ಶಿಯಂ ಅಭಾವ ಅಧಿಕ ರಕ್ತದೊತ್ತಡಕ್ಕೂ ಕಾರಣವಾಗಬಲ್ಲದು. 'ಹೈಬಿಪಿಯನ್ನು ತಡೆಯುವ ರಹಸ್ಯ ಅಸ್ತ್ರ ಎಂದರೆ ಕ್ಯಾಲ್ಶಿಯಂ' ಎನ್ನುವ ಮಂತ್ರವನ್ನು ಈಗಿನ ವೈದ್ಯರು ಪಠಿಸುತ್ತಿದ್ದಾರೆ.
ಸತತ ಸಂಶೋಧನೆಗಳ ಬಳಿಕ ದೃಢಪಟ್ಟಿರುವ ಸಂಗತಿ ಎಂದರೆ ಸೋಡಿಯಂ ವಿರುದ್ಧ ಪರಿಣಾಮಕಾರಿಯಾಗಿ ಕ್ಯಾಲ್ಶಿಯಂ ಕೆಲಸ ಮಾಡಬಲ್ಲದು ಎನ್ನುವುದು. ಅಧಿಕ ಸೋಡಿಯಂನಂತೆಯೇ ಕ್ಯಾಲ್ಶಿಯಂ ಕೊರತೆ ಕೂಡ ಅಧಿಕ ರಕ್ತದೊತ್ತಡದ ಸಮಸ್ಯೆಗೆ ಕಾರಣವಾಗಬಲ್ಲದು ಎನ್ನುವುದನ್ನು ವೈದ್ಯಕೀಯ ಲೋಕ ಕಂಡುಕಂಡಿದೆ. ನಮ್ಮ ಶರೀರದಲ್ಲಿ ಹೆಚ್ಚುವರಿ ಸೋಡಿಯಂ ಸಂಗ್ರಹವಾದರೆ ಅದನ್ನು ಕರಗಿಸುವ ಸಾಮರ್ಥ್ಯ ಕೂಡ ಕ್ಯಾಲ್ಶಿಯಂಗೆ ಇದೆ. ಹೀಗಾಗಿ ಅಧಿಕ ಕ್ಯಾಲ್ಶಿಯಂ ಇರುವ ಆಹಾರ ಸೇವನೆಯಿಂದ ಎರಡು ರೀತಿಯ ಲಾಭ. 'ಸಾಲ್ಟ್ ಸೆನ್ಸೆಟಿವ್‌' ತೊಂದರೆ ಇರುವವರಿಗೆ ಅಂದರೆ ಉಪ್ಪು ಅಥವಾ ಸೋಡಿಯಂ ಜಾಸ್ತಿ ಇರುವ ಪದಾರ್ಥಗಳನ್ನು ಸೇವಿಸಿದರೆ ಆರೋಗ್ಯ ಸಮಸ್ಯೆಗಳನ್ನು ಎದುರಿಸುವವರಿಗೆ ಕ್ಯಾಲ್ಶಿಯಂ ಸಂಜೀವಿನಿ. ಸೋಡಿಯಂ ಅಗತ್ಯಕ್ಕಿಂತ ಜಾಸ್ತಿ ಪ್ರಮಾಣದಲ್ಲಿ ಶರೀರ ಸೇರಿದ್ದರೆ ಅದರಿಂದ ಬಚಾವಾಗಲು ಇರುವ ಸುಲಭ ದಾರಿ ಎಂದರೆ ಜಾಸ್ತಿ ನೀರು ಕುಡಿಯುವುದು ಮತ್ತು ಜಾಸ್ತಿ ಕ್ಯಾಲ್ಶಿಯಂ ಸೇವನೆ. ಇದರಿಂದ ಏನಾಗುತ್ತದೆ ಅಂದರೆ ಸೋಡಿಯಂ ಅನ್ನು ಮೂತ್ರದೊಂದಿಗೆ ಹೊರದೂಡಲು ಕ್ಯಾಲ್ಶಿಯಂ ಮೂತ್ರಕೋಶಗಳಿಗೆ ಸಹಾಯ ಮಾಡುತ್ತದೆ.
ಹೆಚ್ಚೆಚ್ಚು ಪ್ರಯೋಗಗಳು ನಡೆದಂತೆಲ್ಲ ಕ್ಯಾಲ್ಶಿಯಂ ಮಹತ್ವಗಳು ತಿಳಿಯತೊಡಗಿದವು. ಯೂನಿವರ್ಸಿಟಿ ಆಫ್ ಟೆಕ್ಸಾಸ್ ಹೆಲ್ತ್ ಸೈನ್ಸ್ ಸೆಂಟರ್ ವಿಜ್ಞಾನಿಗಳು ಕೈಗೊಂಡ ಪ್ರಯೋಗವನ್ನು ಸಾಮಾನ್ಯವಾಗಿ ಎಲ್ಲೆಡೆ ಉಲ್ಲೇಖಿಸಲಾಗುತ್ತದೆ. ಅವರು ಪ್ರಯೋಗಕ್ಕೆ ಆರಿಸಿಕೊಂಡ ಹೈಬಿಪಿ ಇರುವ ವ್ಯಕ್ತಿಗಳಿಗೆ ನಿತ್ಯ 80 ಮಿಲಿಗ್ರಾಂನಷ್ಟು ಕ್ಯಾಲ್ಶಿಯಂ ನೀಡಲಾಗುತ್ತಿತ್ತು. ಕೆಲವೇ ದಿನಗಳಲ್ಲಿ ಅವರ ರಕ್ತದೊತ್ತಡ 20ರಿಂದ 30 ಅಂಶಗಳಷ್ಟು ಕಡಿಮೆಯಾಗಿತ್ತು. 40 ವರ್ಷ ಪ್ರಾಯದ ಒಳಗಿನವರು ತಮ್ಮ ನಿತ್ಯದ ಆಹಾರ ಪದ್ಧತಿಯಲ್ಲಿ ಕ್ಯಾಲ್ಶಿಯಂಗೂ ಆದ್ಯತೆ ನೀಡಿದರೆ ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಪಾರಾಗಬಹುದು. ಸರಾಸರಿ 1000 ಮಿಲಿಗ್ರಾಂನಷ್ಟಾದರೂ ಕ್ಯಾಲ್ಶಿಯಂ ಶರೀರ ಪ್ರವೇಶಿಸುವುದು ಉತ್ತಮ ಎನ್ನುವುದು ವಿಜ್ಞಾನಿಗಳ ಅಭಿಪ್ರಾಯ.
ಹಾಲು ಮತ್ತು ಅದರ ಉತ್ಪನ್ನಗಳಲ್ಲಿ ಕ್ಯಾಲ್ಶಿಯಂ ಅಧಿಕ ಪ್ರಮಾಣದಲ್ಲಿರುತ್ತದೆ. ಹಾಲಿನ ಅಲರ್ಜಿ ಇಲ್ಲದೇ ಇದ್ದರೆ ನಿತ್ಯ ಹಾಲು ಕುಡಿಯುವ ಅಭ್ಯಾಸ ಒಳ್ಳೆಯದು. ಬ್ರೊಕೊಲಿ, ಯೋಗಾರ್ಟ್, ಓಕ್ರಾ, ಬೇಯಿಸಿದ ಬೀನ್ಸ್, ಸೋಯಾಬೀನ್ ಮೊದಲಾದವುಗಳಲ್ಲಿಯೂ ಕ್ಯಾಲ್ಶಿಯಂ ಅಧಿಕ ಪ್ರಮಾಣದಲ್ಲಿರುತ್ತದೆ.


-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement