ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಸ್ವಾಮೀಜಿಯ ಆಧ್ಯಾತ್ಮಿಕ ಆಂದೋಲನ

Vishwanath S
Updated On : 7 Aug 2013, 3:30 am

ಸ್ವಾಮೀಜಿ ಹಿಮಾಲಯ ಪರ್ಯಟನೆ ವೇಳೆಯಲ್ಲಿ ಭಾಗಲ್ಪುರದ ಮನ್ಮಥನಾಥನ ಮನೆಗೆ ಹೋದರು. ಮನ್ಮಥನಾಥ ಯಾರೋ ಭಿಕ್ಷುಕ ಸನ್ಯಾಸಿಗಳೆಂದು ಭಾವಿಸಿ, ಬೌದ್ಧಧರ್ಮ ಕುರಿತ ಇಂಗ್ಲಿಷ್ ಪುಸ್ತಕವನ್ನು ಓದುತ್ತ ಕುಳಿತುಬಿಟ್ಟ. ಸ್ವಲ್ಪ ಸಮಯದ ಬಳಿಕ ಸ್ವಾಮೀಜಿ 'ನೀವು ಓದುತ್ತಿರುವ ಪುಸ್ತಕ ಯಾವುದು?' ಎಂದು ಕೇಳಿದರು. ಆತ ಪುಸ್ತಕದ ಹೆಸರನ್ನು ಹೇಳಿ, 'ನಿಮಗೆ ಇಂಗ್ಲಿಷ್ ಬರುತ್ತದೆಯೇ?' ಎಂದು ಪ್ರಶ್ನಿಸಿದ. ಸ್ವಾಮೀಜಿ 'ಏನೋ ಸ್ವಲ್ಪಮಟ್ಟಿಗೆ' ಎಂದುತ್ತರಿಸಿದರು. ಆತ ಬೌದ್ಧ ತತ್ವಗಳ ಮೇಲೆ ಸಂಭಾಷಣೆ ಪ್ರಾರಂಭಿಸಿದ. ಸ್ವಾಮೀಜಿ ಹಲವಾರು ಪುಸ್ತಕಗಳನ್ನು ಉದಾಹರಿಸುತ್ತ, ಇಂಗ್ಲಿಷಿನಲ್ಲಿ ನಿರರ್ಗಳವಾಗಿ ಮಾತನಾಡಲಾರಂಭಿಸಿದರು. ಮನ್ಮಥನಾಥ ಬೆಕ್ಕಸಬೆರಗಾಗಿ, ಇಂಥವರು ತನ್ನ ಮನೆಗೆ ಅತಿಥಿಯಾಗಿ ಬಂದಿರುವುದು ತನ್ನ ಅದೃಷ್ಣವೆಂದರಿತು ಕೆಲದಿನ ತನ್ನ ಮನೆಯಲ್ಲಿಟ್ಟುಕೊಂಡು ಉಪಚರಿಸಿದ. ಅವರೊಡನೆ ಯೋಗ, ಆಧ್ಯಾತ್ಮ ಸಾಧನೆ, ಉಪನಿಷತ್ತು, ಭಗವದ್ಗೀತೆಗಳ ಕುರಿತಾಗಿ ಚರ್ಚೆ ಮಾಡಿ ತನ್ನೆಲ್ಲ ಸಂದೇಹಗಳನ್ನು ಪರಿಹರಿಸಿಕೊಂಡ.
ಒಂದು ದಿನ ಮನ್ಮಥನಾಥ ಸ್ವಾಮೀಜಿಯ ಸಂಗೀತ ಕಛೇರಿ ಏರ್ಪಡಿಸಿದ. ಊರಿನ ಕೆಲವು ಸಂಗೀತಗಾರರನ್ನು ಆಹ್ವಾನಿಸಿದ್ದ. ಆದರೆ ಸಂಜೆಯಿಂದ ಪ್ರಾರಂಭವಾದ ಸ್ವಾಮೀಜಿಯ ಹಾಡುಗಾರಿಕೆ ಬೆಳಗಿನಜಾವ ಮೂರು ಗಂಟೆಯವರೆಗೂ ನಿರರ್ಗಳವಾಗಿ ಹರಿಯುತ್ತಲೇ ಇತ್ತು. ಸೇರಿದ ಜನ ವಿಸ್ಮಯಗೊಂಡರು.
ಸ್ವಾಮೀಜಿ ಯಾವುದೇ ಕಾರಣಕ್ಕೂ ಶ್ರೀಮಂತರನ್ನು ಹುಡುಕಿಕೊಂಡು ಹೋಗಿ ಭೇಟಿ ಮಾಡುತ್ತಿರಲಿಲ್ಲ. ಅದು ಸನ್ಯಾಸಿಯ ಧರ್ಮವಲ್ಲ ಎನ್ನುತ್ತಿದ್ದರು. ಸ್ವಾಮೀಜಿಯವರಿಗೆ ಪರ್ಯಟನೆ ಎಂಬುದು ಬೌದ್ಧಿಕ ಸಂಚಲನ; ಆಧ್ಯಾತ್ಮಿಕ ಆಂದೋಲನವೇ ಆಗಿಬಿಡುತ್ತಿತ್ತು.


-ಆನಂದ ಎಸ್.ಎನ್.
anandsn193@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement