ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ವಾತ್ಸಾಯನನೇ ಬೇಡ ಎಂದಿಲ್ಲವೆ?

Vishwanath S
Updated On : 9 Aug 2013, 3:43 am

ನಿಯಂತ್ರಣ ಇರಲಿ
ಲೈಂಗಿಕತೆ ಎಂಬ ಪದವನ್ನು ನಾಲ್ಕು ಜನರ ನಡುವೆ ಕೇಳಿದರೇನೇ ಅಸಹ್ಯಿಸಿಕೊಳ್ಳುವ ನಮ್ಮ ಭಾರತೀಯ ಸಮಾಜ, ಇನ್ನು ವಿವಾಹ ಪೂರ್ವ ಲೈಂಗಿಕತೆ ಎಂದರೆ ಸಹಿಸಿಕೊಳ್ಳುತ್ತದೆಯೇ? ಲೈಂಗಿಕತೆ ಎಂಬುದು ವ್ಯಕ್ತಿಯೊಬ್ಬನ ಬದುಕಿನಲ್ಲಿ ತನ್ನದೆ ಆದ ಸ್ಥಾನಮಾನವನ್ನು ಹೊಂದಿದ್ದರೂ, ಅದು ವಿವಾಹ ಪೂರ್ವದ್ದೆಂದಾದರೆ  ನಮ್ಮ ನೈತಿಕತೆಯ ಅಧಃಪತನವೇ ಸರಿ. ಮಾನವನ ಸಂಬಂಧಗಳನ್ನು ಗಟ್ಟಿಗೊಳಿಸುವ, ಬದುಕಿನ ಒಂದು ಅವಿಭಾಜ್ಯ ವಿಷಯವಾದ ಲೈಂಗಿಕತೆಯು ಕಾಲಚಕ್ರ ಉರುಳಿದಂತೆ ಸಾಕಷ್ಟು ಚರ್ಚೆಗೊಳಪಟ್ಟರೂ, ಅದು ಸಪ್ತಪದಿಗಳಿಂದೊಡಗೂಡಿದ ಮದುವೆಯೆಂಬ ಬಂಧನದಲ್ಲಿರುವ ಎರಡು ಪರಿಪಕ್ವ ವ್ಯಕ್ತಿತ್ವಗಳ ಮಿಲನವಾಗಬೇಕೇ ಹೊರತು ಕೇವಲ ಲೈಂಗಿಕತೆಗಾಗಿ ಆಗುವುದಲ್ಲ. ಸಮಾಜ ಮುಖಿಯಾಗಿ ಮರ್ಯಾದೆಯಿಂದ ಬದುಕೋಣ. ಹಾಗಾಗಿ, ದೇಹ ಮತ್ತು ಮನಸ್ಸುಗಳೆರಡರ ಮೇಲೆ ನಿಯಂತ್ರಣವಿರಲಿ.
-ಸಂಗಮೇಶ್ ಯಡ್ರಾಮಿ, ಅರಕೇರಾ (ರಾಯಚೂರು)

ವೈವಾಹಿಕ ಜೀವನಕ್ಕೆ ಅಪಾಯ
ಬೇರೆ ಬೇರೆ ಕಾರಣಗಳಿಗಾಗಿ ಅಥವಾ ದೇಹ ತೃಷೆಗಾಗಿ ವಿವಾಹಪೂರ್ವ ಲೈಂಗಿಕತೆ ಹೊಂದುವವರ ಮಾನಸಿಕ ಸ್ಥಿತಿ ಏನೇ ಇದ್ದರೂ ಇದರಿಂದ ಮುಂದೆ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ತಲೆದೋರಬಹುದು.  ಮುಖ್ಯವಾಗಿ ವಾತ್ಸಾಯನ ವಿವರಿಸುವಂತೆ, ವಿವಾಹಪೂರ್ವ ಲೈಂಗಿಕ ಸಂಪರ್ಕ ಹೊಂದಿದ ಮೊದಲ ಗಂಡು ಅಥವಾ ಹೆಣ್ಣನ್ನು ವಿವಾಹದ ನಂತರವೂ ಅಷ್ಟು ಸುಲಭವಾಗಿ ಮರೆಯಲು ಆಗುವುದಿಲ್ಲ. ವಿವಾಹದ ನಂತರದ, ದಿನಗಳಲ್ಲಿ ಬೇಗನೆ ಲೈಂಗಿಕ ಆಸಕ್ತಿ ಕಡಿಮೆಯಾಗಿ, ಪತಿ, ಪತ್ನಿಯರಲ್ಲಿ ಅಪನಂಬಿಕೆ ಹುಟ್ಟಿ ಕುಟುಂಬ ಜೀವನದಲ್ಲಿ ಬಿರುಕು ಉಂಟಾಗಬಹುದು. ಪ್ರೀತಿ, ವಿಶ್ವಾಸ, ನಂಬಿಕೆ ಇಲ್ಲದಂತಾಗಿ, ಜೀವನದಲ್ಲಿ ನೆಮ್ಮದಿ ಕಳೆದುಕೊಳ್ಳಬಹುದು. ಆಯಾ ಕಾಲಕ್ಕೆ ತಕ್ಕಂತೆ ಕ್ರಿಯೆ, ಕರ್ಮಗಳನ್ನು ಮಾಡುವುದರಿಂದ ಜೀವನವನ್ನು ಸುಖಮಯವಾಗಿ, ಕ್ರಮಬದ್ಧವಾಗಿ ರೂಪಿಸಿಕೊಳ್ಳಬಹುದಾಗಿದೆ.
-ಅಚ್ಯುತ, ಅಕ್ಕಿಹೊಳಿ

ಜೀವನಕ್ಕೆ ಮಾರಕ
ನಮ್ಮ ದೇಶ ಸಂಸ್ಕೃತಿಗೆ ಹೆಸರಾದದ್ದು. ಆದರೆ ಇಂದು ಜಾಗತೀಕರಣದ ಪ್ರಭಾವದಿಂದ ನಾವು ಪಾಶ್ಚಾತ್ಯ ಸಂಸ್ಕೃತಿಯ ದಾಸರಾಗುತ್ತಿದ್ದೇವೆ. ಇದರಿಂದ ನಮ್ಮ ಸಂಸ್ಕೃತಿಯನ್ನು ನಾವೇ ಹಾಳು ಮಾಡಿಕೊಳ್ಳುತ್ತಿದ್ದೇವೆ. ಹಿಂದೆ ವಿವಾಹವೆಂದರೆ ಸಂಭ್ರಮ, ಸಡಗರ ಹಾಗೂ ಮನೆಮಂದಿಯೆಲ್ಲಾ ಒಟ್ಟಿಗೆ ಸೇರಿ ವ್ಯವಹರಿಸಿ ಮಕ್ಕಳ ವಿವಾಹ ನಿಶ್ಚಯ ಮಾಡುತ್ತಿದ್ದರು. ಆದರೆ ಇಂದಿನ ವಿವಾಹಗಳಲ್ಲಿ ಕುಟುಂಬದ ಪಾತ್ರ ಕಡಿಮೆಯಾಗುತ್ತಿದೆ. ತಂದೆ-ತಾಯಿ ಪ್ರೀತಿಯಿಂದ ವಂಚಿತರಾಗುತ್ತಿದ್ದಾರೆ. ಸಮಾಜ ಕೂಡ ಇವರನ್ನು ನೋಡುವ ದೃಷ್ಟಿ ಬದಲಾಗಿದೆ. ವಿವಾಹ ಎನ್ನುವುದು ಪೋಷಕರ ಒಪ್ಪಿಗೆಯ ಮೇರೆಗೆ ನಿಶ್ಚಯಿಸಿ, ವಿಧಿ-ವಿಧಾನಗಳ ಪ್ರಕಾರ ನೆರವೇರಿಸಿ ನಂತರ ಲೈಂಗಿಕತೆಯಲ್ಲಿ ತೊಡಗಿದರೆ ಅದಕ್ಕೊಂದು ಅರ್ಥ. ವಿವಾಹಪೂರ್ವ ಲೈಂಗಿಕತೆ ಜೀವನಕ್ಕೆ ಮಾರಕ, ಅದು ಕೇವಲ ಬಾಹ್ಯ ಆಕರ್ಷಣೆಯಷ್ಟೆ.
-ಟಿ. ಲತಾ, ಕಡೂರು



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement