ಹೈ ಬಿ.ಪಿ. ನಿಯಂತ್ರಣಕ್ಕೆ ಉಪ್ಪಿನ ಪಥ್ಯ ಬೇಕೆ?
ತಮಗೆ ಅಧಿಕ ರಕ್ತದೊತ್ತಡ ಇದೆ ಎನ್ನುವುದು ಗೊತ್ತಾದ ತಕ್ಷಣ ಹೆಚ್ಚಿನವರು ಮಾಡುವುದೇನು ಹೇಳಿ? ಉಪ್ಪು ತಿನ್ನುವುದನ್ನು ನಿಲ್ಲಿಸಿಬಿಡುವುದು. ಅದು ಕೆಟ್ಟದ್ದೇನಲ್ಲ. ಆದರೆ ಒಮ್ಮೊಮ್ಮೆ ಶರೀರದಲ್ಲಿ ಸೋಡಿಯಂ ಕಡಿಮೆಯಾದರೆ ಅದು ಮತ್ತೊಂದು ಅಪಾಯಕ್ಕೆ ಕಾರಣವಾಗುತ್ತದೆ. ಆ ಕುರಿತಾಗಿಯೂ ನಾವು ಗಮನ ಇಟ್ಟುಕೊಳ್ಳುವುದು ಅಗತ್ಯ. ಸಾಲ್ಟ್ ಡಯಟ್ ಮಾಡುವವರು ನಿಯಮಿತವಾಗಿ ವೈದ್ಯರಿಂದ ತಪಾಸಣೆಗೆ ಒಳಗಾಗಲೇಬೇಕು. ಇನ್ನೊಂದು ವಿಷಯ ಏನೆಂದರೆ ಉಪ್ಪಿನ ಪಥ್ಯ- ಅಂದರೆ ಅಡುಗೆಯಲ್ಲಿ ಉಪ್ಪಿನ ಬಳಕೆ ಕಡಿಮೆ ಮಾಡುವುದು ಅಥವಾ ಉಪ್ಪನ್ನು ಸಂಪೂರ್ಣವಾಗಿ ವರ್ಜಿಸುವುದು ಅಧಿಕ ರಕ್ತದೊತ್ತಡ ಇರುವ ಎಲ್ಲರ ಮೇಲೆಯೂ ಪರಿಣಾಮ ಬೀರುತ್ತದೆ ಎಂದೇನೂ ಅಲ್ಲ. ಅದು ಅವರವರ ಶಾರೀರಿಕ ಪ್ರಕೃತಿ ಮತ್ತು ಶರೀರದ ಜೈವಿಕ ಪ್ರತಿಕ್ರಿಯೆಯನ್ನು ಆಧರಿಸಿರುತ್ತದೆ. ಆದರೆ ಹೆಚ್ಚಿನವರಲ್ಲಿ ಉಪ್ಪಿನ ಪಥ್ಯ ಕೆಲಸ ಮಾಡುತ್ತದೆ. ಏನೇ ಇರಲಿ, ಉಪ್ಪನ್ನು ಕಡಿಮೆ ಸೇವಿಸುವುದು ಬೇರೇ ಕಾರಣಗಳಿಂದಲೂ ಒಳ್ಳೆಯದೇ. ಅದನ್ನು ಮುಂದೆ ಹೇಳುತ್ತೇನೆ.
ಉಪ್ಪಿನ ಸೇವನೆ ಕಡಿಮೆ ಮಾಡುವುದರಿಂದ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು ನಾವು ನಂಬಿಕೊಂಡಿರುವ, ಅಳವಡಿಸಿಕೊಂಡು ಬಂದಿರುವ ಸಂಗತಿ. ಆದರೆ ವೈದ್ಯಕೀಯ ಮತ್ತು ವಿಜ್ಞಾನ ಲೋಕ ಈ ಬಗ್ಗೆ ಹತ್ತಾರು ವರ್ಷಗಳಿಂದ ಚರ್ಚೆ ಮಾಡುತ್ತಲೇ ಇದೆ. ಕೆಲವರು 'ಇಲ್ಲ' ಎಂದರೆ, ಕೆಲವರು 'ಹೌದು' ಎನ್ನುತ್ತಾರೆ. 'ಅಷ್ಟೇನೂ ಪರಿಣಾಮಕಾರಿಯಲ್ಲ' ಎನ್ನುವವರೂ ಇದ್ದಾರೆ. ಆದರೆ ಪ್ರಯೋಗಗಳು ಮಾತ್ರ ಉಪ್ಪಿನ ಪಥ್ಯದಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬಹುದು ಎಂಬುದನ್ನೇ ಹೇಳುತ್ತಲೇ ಇವೆ.
ಹಾರ್ವರ್ಡ್ ವಿಶ್ವವಿದ್ಯಾಲಯದ ಸಂಶೋಧನೆ ಇರಬಹುದು, ಫ್ರಾಮಿಂಗ್‌ಹ್ಯಾಮ್ ಹಾರ್ಟ್ ಸ್ಟಡಿ ಇರಬಹುದು, ಯೂನಿವರ್ಸಿಟಿ ಆಫ್ ಲಂಡನ್‌ನ ತಜ್ಞರ ಅಧ್ಯಯನಗಳೇ ಇರಬಹುದು. ಎಲ್ಲವೂ ಹೇಳುವುದು 'ಅಧಿಕ ರಕ್ತದೊತ್ತಡದವರಿಗೆ ಉಪ್ಪಿನ ಪಥ್ಯ ಪರಿಣಾಮಕಾರಿ' ಎಂದೇ. ಉಪ್ಪನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುವ ಪ್ರದೇಶಗಳಲ್ಲಿ ಹೈಬಿಪಿಯಿಂದ ಬಳಲುವವರ ಸಂಖ್ಯೆಯೂ ಕಡಿಮೆ, ಅಂತಹ ಪ್ರದೇಶಗಳಲ್ಲಿ ವಯಸ್ಸಾದ ನಂತರ ಸಾಮಾನ್ಯವಾಗಿ ಕಂಡುಬರುವ ಅಧಿಕ ರಕ್ತದೊತ್ತಡದ ತೊಂದರೆಯೂ ಅಪರೂಪ ಎನ್ನುವುದನ್ನೂ ಅಧ್ಯಯನಗಳು ಹೇಳಿವೆ. ಸೋಡಿಯಂನಿಂದ ಯಾರಲ್ಲಿ ಅಧಿಕ ರಕ್ತದೊತ್ತಡ ಕಾಣಿಸಿಕೊಳ್ಳುತ್ತದೆಯೋ ಅಂಥವರು ಉಪ್ಪಿನ ಸೇವನೆ ಕಡಿಮೆ ಮಾಡುವುದು ಉತ್ತಮ ಎಂದು ತಜ್ಞರ ಶಿಫಾರಸ್ಸು. ಆದಾಗ್ಯೂ ಈ ಕುರಿತಾದ ಚರ್ಚೆಗಳು ಮುಂದುವರಿಯುತ್ತಿರುವುದು ಸೋಜಿಗ ಅನ್ನಿಸುತ್ತದೆ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com