ನಿಜವಾದ ಬೆಲೆಯಿಂದ ಮೌಲ್ಯ ಹೆಚ್ಚುವುದೇ?
ಒಬ್ಬ ಮನುಷ್ಯ ಮೂರು ಲಕ್ಷ ರೂಪಾಯಿಗೆ ಒಂದು ಮನೆ ಕಟ್ಟಿದ್ದನೆಂದು ಇಟ್ಟುಕೊಳ್ಳೋಣ. ಕಾಲಕ್ರಮೇಣ, ಅದೆಷ್ಟೋ ವರ್ಷಗಳ ನಂತರ, ಇತ್ತೀಚೆಗೆ ಆ ಮನೆಯ ಬೆಲೆ ಐವತ್ತು ಲಕ್ಷ ರೂಪಾಯಿ ಆಗಿದೆಯೆಂದು ಎಣಿಸೋಣ. ವಾಸ್ತವಿಕತೆ ಎಂದರೆ ಮನೆ ಹಳೆಯದಾಗಿದೆ, ದುರಸ್ತಿಗೆ ಒಳಪಡಿಸಬೇಕಾದ ಸ್ಥಿತಿಯಲ್ಲಿದೆ. ಇಂದೋ-ಅಂದೋ ಬೀಳುವ ಸ್ಥಿತಿಯಲ್ಲಿದ್ದು, ಉಳಿಯಲು ಯೋಗ್ಯವಲ್ಲದಂತಾಗಿದೆ. ಆದರೆ ಸಮೀಪದಲ್ಲಿ ವಿಮಾನ ನಿಲ್ದಾಣವೋ, ರೇಲ್ವೆ ನಿಲ್ದಾಣವೋ, ಆಸ್ಪತ್ರೆಯೋ, ಶಾಲಾ-ಕಾಲೇಜುಗಳೋ ಬಂದು ಮಾರುಕಟ್ಟೆಯಲ್ಲಿ ಆ ಮನೆಯಿರುವ ಜಾಗಕ್ಕೆ ಹೆಚ್ಚಿನ ಬೆಲೆ ಬಂದು ಮನೆಯ ಮೌಲ್ಯ ಏರಿದೆ. ಮನೆಯಲ್ಲಿ ಅದರ ಮೌಲ್ಯ ವೃದ್ಧಿಸುವ ಯಾವುದೇ ಉತ್ತಮ ಬದಲಾವಣೆ ಆಗದಿದ್ದರೂ, ಸುತ್ತಮುತ್ತಲಿನ ಪರಿಸರದಿಂದಾಗಿ ಅದರ ಮೌಲ್ಯ ವೃದ್ಧಿಸಿದೆ ಎಂದಾಯಿತು. ಹಾಗಾದರೆ ಈಗ ಆ ಮನೆಯ ಒಡೆಯ ನಿಜವಾಗಿ ಶ್ರೀಮಂತನಾದಂತೆ ಆಯಿತೆ?
ಒಂದು ವೇಳೆ ಭಾವನಾತ್ಮಕ ಸಂಬಂಧದಿಂದಾಗಿ ಆ ಮನೆಯನ್ನು ಮನಯೊಡೆಯ ಮಾರಲು ಇಷ್ಟಪಡದಿದ್ದರೆ ಮಾರುಕಟ್ಟೆಯಲ್ಲಿ ಅದರ ಬೆಲೆ ಏನೇ ಇದ್ದರೂ ಅವನಿಗೆ ಪ್ರಯೋಜನವಿಲ್ಲದ್ದು ಎಂದಾಯಿತು. ಎಷ್ಟೋ ರೈತರು ಬೆಲೆ ಬಾಳುವ ಭೂಮಿ ಹೊಂದಿದ್ದರೂ ಅದನ್ನು ಮಾರದೆಯೇ ಇಟ್ಟುಕೊಂಡಿರುವ ಉದಾಹರಣೆ ಎಷ್ಟಿಲ್ಲ? ಹಾಗೆಂದು ಅವರೆಲ್ಲರೂ ಶ್ರೀಮಂತರಲ್ಲ. ಪಟ್ಟಣದ ಪ್ರಮುಖ ಬೀದಿಯಲ್ಲಿ ಇದ್ದರೂ ದಿನಕ್ಕೆ ಒಂದೂ ಗಿರಾಕಿ ಬಾರದ ಹೋಟೆಲ್ಗಳು, ಅಂಗಡಿಗಳು ಎಷ್ಟಿಲ್ಲ? ಕೆಲವು ಅಂಗಡಿಗಳಲ್ಲಿ, ಹೋಟೆಲುಗಳಲ್ಲಿ ಅತಿ ಕಡಿಮೆ ವ್ಯಾಪಾರವಿದ್ದರೂ, ನಿತ್ಯದ ವ್ಯವಹಾರ ಅಲ್ಲಿಂದಲ್ಲಿಗಾದರೂ, ಕೆಲವು ವ್ಯಾಪಾರಸ್ಥರು ಸ್ಪರ್ಧೆಗಾಗಿ, ಪ್ರತಿಷ್ಠೆಗಾಗಿ ಹಾಗೆಯೇ ಮುಂದುವರಿಯುತ್ತಾರೆ. ಆದರೆ ಹೊರಗಿನಿಂದ ನೋಡುವವರ ದೃಷ್ಟಿಯಲ್ಲಿ ಆತ ಶ್ರೀಮಂತನಾಗಿ ಕಾಣುತ್ತಾನೆ. ಅದಕ್ಕೆ ಕಾರಣ ಅವನ ನಿತ್ಯದ ವ್ಯವಹಾರವಲ್ಲ. ಅವನ ವ್ಯವಹಾರದ ಸ್ಥಳದ ಮೌಲ್ಯ.
ಕಾಲಕ್ರಮೇಣ ಒಬ್ಬ ಮನುಷ್ಯ ತನ್ನ ಆಸ್ತಿಗೆ ಏನನ್ನೂ ಕೂಡಿಸದೆಯೇ ಮಾರುಕಟ್ಟೆಯಲ್ಲಿ ಅದರ ಮೌಲ್ಯ ಏರಿದ್ದರಿಂದ ಲಕ್ಷಾಧೀಶ್ವರನಿಂದ ಕೋಟ್ಯಾಧೀಶ್ವರನಾಗುತ್ತಾನೆ ಎಂದಾದರೆ ಈ ರೀತಿಯ ಶ್ರೀಮಂತಿಕೆಗೆ ಏನಾದರೂ ಅರ್ಥವಿದೆಯೇ? ಅನೇಕ ಬಾರಿ ಆಸ್ತಿಯ ಮೌಲ್ಯ ವೃದ್ಧಿಸುತ್ತದೆ. ಆದರೆ ಸ್ವಭಾವದಲ್ಲಾಗಲೀ, ಗುಣಮಟ್ಟದಲ್ಲಾಗಲೀ, ಯೋಗ್ಯತೆಯಲ್ಲಾಗಲೀ ಯಾವುದೇ ಬದಲಾವಣೆ ಇರುವುದಿಲ್ಲ. ಶಹರದಲ್ಲಿರುವ ಅದರಲ್ಲೂ ಪ್ರಮುಖ ಸ್ಥಳದಲ್ಲಿರುವ ಒಂದೇ ಕೊಠಡಿಯಿರುವ ಚಿಕ್ಕ ಮನೆಗೆ ಕೋಟಿ ರುಪಾಯಿ ಬೆಲೆ ಇದ್ದರೆ, ಪಟ್ಟಣದಿಂದ ದೂರದಲ್ಲಿರುವ ವಿಶಾಲವಾದ ಬಂಗಲೆಗೆ ಅದಕ್ಕಿಂತ ಬೆಲೆ ಕಡಿಮೆ. ತುಲನೆ ಮಾಡಿ ನೋಡಿದರೆ ಚಿಕ್ಕ ಮನೆಗೂ, ಬಂಗಲೆಗೂ ಅಜಗಜಾಂತರ. ಚಿಕ್ಕ ಮನೆಗಿಂತ ಬಂಗಲೆಯಲ್ಲಿ ಸುಖಿಯಾಗಿ ಇರಬಹುದಾದರೂ, ಚಿಕ್ಕ ಮನೆಯಲ್ಲಿಯೇ ಕಷ್ಟಪಟ್ಟು ಉಳಿದು, ಅದರ ಬೆಲೆಯನ್ನು ಪರಿಗಣಿಸಿ ಸಂತೋಷಪಡುವವರು ಅದೆಷ್ಟಿಲ್ಲ?
ಒಂದು ಕಂಪನಿಯ ಷೇರು ವ್ಯಾಲ್ಯು ಕುಸಿದರೆ ಮಾರುಕಟ್ಟೆಯಲ್ಲಿ ಅದರ ಮೌಲ್ಯ ಕಡಿಮೆಯಾಗುತ್ತದೆ. ವಾಸ್ತವವಾಗಿ ಅಲ್ಲಿ ಒಂದು ಪೈಸೆಯೂ ಕಳೆದು ಹೋಗುವುದಿಲ್ಲ. ಆದರೆ ಆ ಕಂಪನಿಯು ಶ್ರೀಮಂತ ಕಂಪನಿಗಳ ಪಟ್ಟಿಯಲ್ಲಿ ಸ್ಥಾನ ಕಳೆದುಕೊಳ್ಳುತ್ತದೆ. ಮುಂಚೆ ಹೊಂದಿದ್ದ ಎಲ್ಲ ಆಸ್ತಿಯನ್ನೂ, ವಸ್ತುವನ್ನೂ ಯಥಾಸ್ಥಿತಿ ಹೊಂದಿದ್ದರೂ ಆ ಕಂಪನಿ ಬಡವಾಯಿತು. ಎಷ್ಟೋ ಬಾರಿ ಷೇರು ವ್ಯಾಲ್ಯು ಇಳಿಮುಖವಾಗುವುದು ಕೆಟ್ಟ ಸುದ್ದಿಯಿಂದ, ಗುಮಾನಿಯಿಂದ, ಅಪಪ್ರಚಾರದಿಂದ ಅಥವಾ ಮುಂದೊಂದು ದಿನ ಹೀಗಾಗಬಹುದು ಎಂಬ ಊಹೆಯಿಂದ. ಅಂತಹ ಅದೆಷ್ಟೋ ಕಂಪನಿಗಳನ್ನು ನಾವು ಕಾಣಬಹುದು. ಹಾಗಾದರೆ ಮೌಲ್ಯ ಅವಲಂಬಿಸಿರುವುದು, ನಿರ್ಧರಿತವಾಗುವುದು ನಿಜವಾದ ಆಯ-ವ್ಯಯದಿಂದ ಅಲ್ಲ, ಹೊಂದಿರುವ ಆಸ್ತಿಯಿಂದಲೂ ಅಲ್ಲ, ಭವಿಷ್ಯದ ಊಹೆಯಲ್ಲಿ ಎಂದಾ ಯಿತು. ಜಗತ್ತಿನ ಅದೆಷ್ಟೋ ವಸ್ತುಗಳ, ಆಸ್ತಿಯ ಮೌಲ್ಯ ಊಹೆಯಿಂದಲೋ ಅಥವಾ ಬೇಡಿಕೆ-ಪೂರೈಕೆಗೆ ಸಂಬಂಧಪಟ್ಟೇ ವಿನಾ ಅದರ ನಿಜವಾದ ಬೆಲೆಯಿಂದ ಅಲ್ಲ ಎನ್ನುವುದು ಅದಕ್ಕೇ.
(ಮುಂದುವರಿಯುವುದು)
-ಕಿರಣ್ ಉಪಾಧ್ಯಾಯ