ಉಳಿಸಿಟ್ಟರೆ ನಮ್ಮದಲ್ಲ, ಖರ್ಚು ಮಾಡಿದರೆ ಕಿಮ್ಮತ್ತಿಲ್ಲ
ನಾವು ಗಳಿಸಿದ್ದನ್ನೆಲ್ಲ ಖರ್ಚು ಮಾಡದಿದ್ದರೆ, ಉಪಯೋಗಿಸದಿದ್ದರೆ, ಅಕ್ಷರಶಃ ಅದಕ್ಕೆ ಏನೂ ಬೆಲೆ ಇಲ್ಲ. ಅದನ್ನು ಉಪಯೋಗಿಸಿದರೆ ಮಾತ್ರ ಅದು ನಮ್ಮ ಹಣ. ಉಪಯೋಗಿಸದೇ ಇದ್ದಲ್ಲಿ ಅದು ಎಂದೂ ನಮ್ಮದಾಗಿರಲಿಲ್ಲ ಎಂದೇ ಅರ್ಥ. ನಾವು ಗಳಿಸಿದ್ದೆಲ್ಲವನ್ನೂ ಖರ್ಚು ಮಾಡುತ್ತೇವೆ ಎಂದರೂ ಅದಕ್ಕೆ ಬೆಲೆ ಇಲ್ಲ, ಏಕೆಂದರೆ ನಾವು ಖರ್ಚು ಮಾಡುವುದು ಬದುಕುವುದಕ್ಕೋಸ್ಕರ. ಅಷ್ಟೇ ಅಲ್ಲ, ಆವಶ್ಯಕತೆಗಾಗಿ ಖರ್ಚು ಮಾಡುವುದನ್ನು ಆಸ್ತಿ ಎಂದು ಪರಿಗಣಿಸಲಾಗುವುದಿಲ್ಲ. ಅವುಗಳನ್ನೆಲ್ಲ ಮನುಷ್ಯ ಬದುಕಲು ಬೇಕಾಗುವ ಮೂಲಭೂತ ಸೌಕರ್ಯ ಅಥವಾ ವಸ್ತುಗಳು ಎಂದು ಪರಿಗಣಿಸಲಾಗುತ್ತದೆ. ನಾವು ಮಾತ್ರ ನಮ್ಮ ಬದುಕಿನಲ್ಲಿ ಏನನ್ನು ಉಪಯೋಗಿಸುತ್ತಿದ್ದೆವೆಯೋ ಅದನ್ನು ಬಿಟ್ಟು ನಮ್ಮ ಬಳಿ ಉಪಯೋಗಿಸದೇ ಬಿದ್ದಿರುವುದರ ಬಗ್ಗೆಯೇ ಹೆಚ್ಚು ಹೆಮ್ಮೆಪಡುತ್ತೇವೆ.
ಹಾಗೆಯೇ ಒಮ್ಮೆ ಕಣ್ಣುಮುಚ್ಚಿ ಕುಳಿತು, ಎಲ್ಲವನ್ನೂ ಮರೆತು ಇದುವರೆಗೆ ಕೂಡಿ ಹಾಕಿದ್ದನ್ನು, ಇದುವರೆಗೆ ಸಾಧಿಸಿದ್ದನ್ನೂ ವಿಶ್ಲೇಷಿಸಿ ನೋಡಿ. ಆ ಸಂದರ್ಭದಲ್ಲಿ ಅದಕ್ಕಿದ್ದ ಮಹತ್ವವನ್ನೂ, ಈಗ ಅದಕ್ಕಿರುವ ಮಹತ್ವವನ್ನೂ ಗುರುತಿಸಿ. ಅದರಲ್ಲಿ ಎಷ್ಟೋ ವಸ್ತಗಳು ಈಗ ನಮ್ಮ ಕೈ ತಪ್ಪಿ ಹೋಗಿದ್ದು ಕಂಡುಬರುತ್ತದೆ. ಆದರೆ ಅವುಗಳ ನೆನಪು ಅಥವಾ ಯೋಚನೆ ಮಾತ್ರ ನಮ್ಮ ಮನಸ್ಸಿನಲ್ಲಿ ಇರುತ್ತದೆ. ಹಾಗಾದರೆ ನಮ್ಮ ಆಸ್ತಿಯೆಂಬುದು ನಮ್ಮ ಭೂತ ಮತ್ತು ಭವಿಷ್ಯದ ಕನಸೆಂದಾಯಿತು. ಸಣ್ಣದಾಗಲೀ, ದೊಡ್ಡದಾಗಲೀ, ಕನಸು ಕನಸೇ, ಯೋಚನೆ ಯೋಚನೆಯೇ, ಅದರಲ್ಲಿ ವ್ಯತ್ಯಾಸವಿಲ್ಲ. ಯೋಚನೆಯನ್ನು ಹಿಂದೆ ಬಿಟ್ಟು, ನಮ್ಮ ಬಳಿ ಇರುವುದನ್ನು ಬುದ್ಧಿಪೂರ್ವಕವಾಗಿ ವರ್ತಮಾನದಲ್ಲಿ ಉಪಯೋಗಿಸುತ್ತಿರುವುದನ್ನು ಮಾತ್ರ ನಮ್ಮ ಆಸ್ತಿ ಎಂದು ಹೇಳಬಹುದು. ಉಳಿದವುಗಳೆಲ್ಲ ಬೇರೆ ಬೇರೆ ವಿಧಾನದಿಂದ, ಆಕಾರದಿಂದ ನಮ್ಮ ಮನದಲ್ಲಿ ಮೂಡುವ ವಾಸ್ತವಿಕವಾದ ಭ್ರಮೆ. ಇದನ್ನೇ ಮಾಯೆ ಎಂದು ಕರೆಯುವುದು. ನಮ್ಮ ದೃಷ್ಟಿಕೋನ ಬದಲಾದಂತೆ ನಮ್ಮ ಭ್ರಮೆಯೂ ಬದಲಾಗುತ್ತದೆ. ಅದೆಷ್ಟೋ ಕಷ್ಟಪಟ್ಟು, ಶಾಂತಿ, ಪ್ರೀತಿ, ನೆಮ್ಮದಿಯನ್ನು ತ್ಯಾಗಮಾಡಿ, ಅಸುರಕ್ಷತೆಯನ್ನು ಎದುರಿಸಿ ಸಂಪಾದಿಸಿದ ಭ್ರಮೆ. ನಿಜವಾದ ಕಾರಣವಿಲ್ಲದೇ ಅದೆಷ್ಟೋ ಜನ ಕೇವಲ ಕಾಗದದ ಮೇಲಿನ ಅಂಕೆ-ಸಂಖ್ಯೆಗೋಸ್ಕರ ಕ್ರೂರಿಗಳಾಗುವುದನ್ನು, ಮೋಸ ಮಾಡುವುದನ್ನು ಕಾಣುತ್ತೇವೆ. ಅವರು ಕ್ರೂರಿಗಳಾಗುವುದು ಮನಸ್ಸಿನಲ್ಲಿ ಹಾದು ಹೋಗುವ, ಕಾಗದದ ಮೇಲಿನ ಆಸ್ತಿಯ ಅಂಕಿ-ಅಂಶವನ್ನು ಹೆಚ್ಚಿಸುವ ಯೋಚನೆಯಿಂದ. ಆದರೆ ಆ ಯೋಚನಾ ಲಹರಿಯನ್ನು ಎಷ್ಟು ಸಮಯ ಹಿಡಿದಿಡಲು ಸಾಧ್ಯ? ನಮ್ಮ ನೆನಪಿನ ಶಕ್ತಿ ಕಳೆದು ಹೋದಾಗ ಯೋಚನೆಯೂ ಅದರೊಂದಿಗೇ ಕಳೆದು ಹೋಗುತ್ತದೆ. ಹಾಗೆಯೇ ಯೋಚನೆಯಲ್ಲಿರುವ ಆಸ್ತಿಯೂ ಕಳೆದು ಹೋಗುತ್ತದೆ. ಗಾಢವಾದ ನಿದ್ರೆಯಲ್ಲಿರುವಾಗ ನಮ್ಮ ಸ್ಮರಣಶಕ್ತಿ ನಮ್ಮ ಹಿಡಿತದಲ್ಲಿರುವುದಿಲ್ಲ. ಹಾಗೆಯೇ ನಮ್ಮ ಆಸ್ತಿಯೂ ಕೂಡ. ಒಂದು ರೀತಿಯಲ್ಲಿ ವಿಚಾರಿಸಿ ನೋಡಿದರೆ ಪ್ರತಿಯೊಬ್ಬ ಮನುಷ್ಯನೂ ಪ್ರತಿದಿನ ನಿದ್ರಿಸಿದ ಎಂಟು ಗಂಟೆಗಳ ಕಾಲ ಆಸ್ತಿರಹಿತನಾಗಿರುತ್ತಾನೆ.
ಒಂದು ರೀತಿಯ ಅಜ್ಞಾನ ಅಥವಾ ಭ್ರಮೆಯಿಂದಾಗಿ ನಾವು ಏನನ್ನು ಉಪಯೋಗಿಸುತ್ತಿದ್ದೇವೆಯೋ ಅದಕ್ಕಿಂತ ಹೆಚ್ಚು ಏನನ್ನು ಹೊಂದಿದ್ದೇವೆಯೋ ಅದಕ್ಕೆ ಬೆಲೆ ಕೊಡುತ್ತಿದ್ದೇವೆ. ಕಾಲಕ್ರಮೇಣ ಇದು ಬದಲಾಗಲೂಬಹುದು. ಆದರೆ ವಾಸ್ತವಿಕತೆ ಎಂದರೆ ಅತಿಯಾದ ಬಯಕೆ ಅಥವಾ ಆಸೆ ಮನುಕುಲಕ್ಕೇ ಒಂದು ರೋಗವಿದ್ದಂತೆ. ಏಕೆಂದರೆ ಅದು ನಮಗೆ ಏನನ್ನೂ ಕೊಡುವುದಿಲ್ಲ. ಬದಲಾಗಿ ನಮ್ಮಿಂದ ಪಡೆದುಕೊಳ್ಳುತ್ತದೆ. ಆಸೆಯಿಂದಾಗಿ ನಾವು ನಮ್ಮ ಮನಃಶಾಂತಿ, ನೆಮ್ಮದಿಯನ್ನು ಕಳೆದುಕೊಳ್ಳುತ್ತೇವೆ, ಖಿನ್ನರಾಗುತ್ತೇವೆ. ಇತರರೊಂದಿಗೆ ವೈಮನಸ್ಸಿಗೆ ಇಳಿಯುತ್ತೇವೆ. ತಲೆತಲಾಂತರದಿಂದ ಈ ಲೋಕ ಭೂಮಿ ಸ್ಥಿರವಾಗಿದೆ, ಸೂರ್ಯ ಭೂಮಿಯ ಸುತ್ತಲೂ ಸುತ್ತುತ್ತಾನೆ ಎಂದು ಲೋಕ ನಂಬಿತ್ತು. ಭೂಮಿ ಗೋಳಾಕಾರದಲ್ಲಿದೆಯೆಂದು ಯಾರು ಊಹಿಸಿದ್ದರು? ಹಾಗೆಯೇ ಕೆಲವು ತಪ್ಪು ತಿಳುವಳಿಕೆಗಳು ಬಹುಕಾಲ ಇದ್ದರೂ ನಿಧಾನವಾಗಿ ಸತ್ಯ ತಿಳಿಯಪಡುತ್ತದಲ್ಲ!
-ಕಿರಣ್ ಉಪಾಧ್ಯಾಯ