ಕನ್ಯಾದಾನಕ್ಕೆ ಅರ್ಥವಾದರೂ ಏನು?
ಸಂಬಂಧಗಳು ಛಿದ್ರ
ಹನಿ ನೀರಿಗೋಸ್ಕರ ಸಾಗರವನ್ನು ಕೆಣಕಬಾರದು. ಕ್ಷಣಿಕ ಸುಖಕ್ಕೋಸ್ಕರ ಸಂಸ್ಕೃತಿಯನ್ನು ಬಲಿಕೊಡಬಾರದು. ಮಡಿವಂತಿಕೆಯ ದೇಶ ನಮ್ಮದು. ಅರಿಷಡ್ವರ್ಗಗಳ ಮೂಲಕ ಜೀವನ ಅಂತ್ಯ. ಜೀವನದಲ್ಲಿ ನಂಬಿಕೆಗೆ ಇನ್ನೊಂದು ಹೆಸರೇ ಭಾರತೀಯ ಸಂಸ್ಕೃತಿ. ಆದ್ದರಿಂದ ವಿವಾಹ ಪೂರ್ವ ಲೈಂಗಿಕತೆಯಿಂದ ಪತಿ-ಪತ್ನಿ, ತಂದೆ-ತಾಯಿ, ಅಣ್ಣ-ತಮ್ಮ, ಅಕ್ಕ-ತಂಗಿ ಮುಂತಾದ ಸಂಬಂಧಗಳ ಸರಮಾಲೆಯೇ ಬಿರುಕು ಬಿಡುವಂತಾಗುತ್ತದೆ. ಏಕೆಂದರೆ ಸಂಬಂಧಕ್ಕೆ ಮುಖ್ಯ ಮಡಿವಂತಿಕೆಯ ನಂಬಿಕೆ ಆಗಿದೆ. ನೂಲಿನಂತೆ ಸೀರೆ, ತಾಯಿಯಂತೆ ಮಗಳು ಎಂಬಂತೆ ಇಂದಿನ ಈ ರೀತಿಯ ಚಟುವಟಿಕೆಗಳಿಂದ ಮಕ್ಕಳ ಮೇಲೂ ಈ ಲೈಂಗಿಕತೆಯ ಪರಿಣಾಮ ಗಾಢವಾಗಿ ಬೀಳಲಿದೆ. ಇದರಿಂದ ಎಲ್ಲಾ ರೀತಿಯ ಸಂಬಂಧಗಳಲ್ಲಿ ಅಭದ್ರತೆ ತಲೆ ಎತ್ತಲಿದೆ.
ಟರಮೇಶ ನಾ.ಇಟಗಿ, ಹಿರೇಬಾಗೇವಾಡಿ
ಸಾಮಾಜಿಕ ದುರಂತ
ಇವತ್ತಿನ ಧಾವಂತದ ಜೀವನದಲ್ಲಿ ವಿವಾಹ ಪೂರ್ವ ಸೆಕ್ಸ್ ನಡೆಯುತ್ತಿರುವುದು ಒಂದು ಸಾಮಾಜಿಕ ದುರಂತ. ಇವತ್ತಿನ ಚಾಟಿಂಗ್, ಮೆಸೇಜ್, ಫೇಸ್ಬುಕ್ ಎಂಬಿತ್ಯಾದಿ ಪೆಡಂಭೂತಗಳು ನಮ್ಮ ಯುವಜನಾಂಗವನ್ನು ಹಾಳು ಮಾಡುತ್ತಿರುವುದು ಸತ್ಯ. ದಾಂಪತ್ಯಕ್ಕೆ ಕಾಲಿರಿಸುವ ಮುನ್ನವೇ ಲೈಂಗಿಕ ಸಂಬಂಧ ಬೆಳೆಸಿಕೊಳ್ಳುವುದು ಸಮಾಜದ ಎಲ್ಲರೂ ತಲೆ ತಗ್ಗಿಸುವಂತಹ ವಿಚಾರ. ಇವತ್ತಿನ ಜಂಕ್ಫುಡ್ಗಳ ಹಾವಳಿಯಿಂದಾಗಿ ಮಕ್ಕಳು ಬೇಗ ಮೆಚೂರ್ ಆಗುತ್ತಿದ್ದು ಆಕರ್ಷಣೆಗೆ ಒಳಗಾಗುತ್ತಿದ್ದಾರೆ. ವಿವಾಹಪೂರ್ವ ಲೈಂಗಿಕತೆ ನಮ್ಮ ಭಾರತೀಯ ಸಂಪ್ರದಾಯಕ್ಕೆ ವಿರೋಧ. ನಾವು ಪಾಶ್ಚಾತ್ಯರ ರೀತಿ ನೀತಿಗೆ ಒಳಗಾಗುತ್ತಿರುವುದು ನಮ್ಮ ಸಂಸ್ಕೃತಿಗೆ ಕೊಡಲಿ ಪೆಟ್ಟನ್ನು ನೀಡುತ್ತಿದೆ. ಆದುದ್ದರಿಂದ ತಾಳಿ, ಬಾಳಿ ನಡೆಯಬೇಕಾಗಿದೆ.
-ಮಂಜುನಾಥ ಚಿನಕುರಳಿ
ಹೇಸಿಗೆಯ ಅನಾಚಾರ
ಒತ್ತಾಯಪೂರ್ವಕ ಲೈಂಗಿಕತೆ 'ಅತ್ಯಾಚಾರ' ಎನ್ನಬಹುದಾದರೆ ಒಪ್ಪಿಗೆಯುಕ್ತ 'ವಿವಾಹಪೂರ್ವ ಲೈಂಗಿಕತೆ' 'ಅನಾಚಾರ'. ಎನ್ನಬಹುದು. 'ಮದುವೆ' ಎಂಬುದು ಎರಡು ಸಂಬಂಧಗಳ ಭಾವನಾತ್ಮಕ ಬೆಸುಗೆಯಾದಾಗ ಮಾತ್ರ 'ಲೈಂಗಿಕತೆ' ಎಂಬ ಪದಕ್ಕೆ ಅರ್ಥ ಬರುತ್ತದೆ. ಇಲ್ಲದೇ ಹೋದರೆ ಅದು ವೇಶ್ಯಾವಾಟಿಕೆಗಿಂತ ಭಿನ್ನವಾಗುವುದಿಲ್ಲ. 'ಕನ್ಯಾದಾನ'ವೆಂಬ ಮಹಾದಾನ ನಮ್ಮಲ್ಲಿ ಶ್ರೇಷ್ಠತೆಯನ್ನು ಪಡೆದಿದೆ. ಆದರೆ ಹೆಣ್ಣಿನ ತಂದೆ-ತಾಯಿಗಳ ಪಾಲಿಗೆ ತಮ್ಮ ಮಗಳು ಕನ್ಯೆಯಾಗಿದ್ದರಷ್ಟೇ ಕನ್ಯಾದಾನ ಮಾಡಲು ಸಾಧ್ಯವಿಲ್ಲವೆ? ಇಲ್ಲದಿದ್ದರೆ 'ಮದುವೆ' ಎಂಬುದೂ ಕೂಡ ಅಪಚಾರವಾದಂತೆಯೇ ಸರಿ. ವಿವಾಹಪೂರ್ವ ಲೈಂಗಿಕ ಸಂಬಂಧ ಆತ್ಮಹತ್ಯೆ, ಖಿನ್ನತೆ, ಗರ್ಭಪಾತ, ಅನಾಥಾಲಯಗಳ ಸೃಷ್ಟಿಗೆ ಮುನ್ನುಡಿಯಷ್ಟೆ. ನಾಗರಿಕತೆಯ ಸೋಗಿನಲ್ಲಿ ಮಡಿವಂತಿಕೆಯನ್ನು ಬಂಧನ ಎಂದು ತಿಳಿಯುವುದು ಸರಿಯಲ್ಲ.
-ಮಾಗಡಿ ಶ್ರಿನಿವಾಸ್, ರಾಮನಗರ
'ಜಗುಲಿ'ಯಲ್ಲಿ ಮುಂದಿನ ವಾರದ ವಿಷಯ 'ವಾಸ್ತು ಬೇಕೆ?'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com