ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಅಮೃತ ಭಾಷೆ

Lingaraj Badiger
Updated On : 16 Aug 2013, 3:48 am

ವೇದಭಾಷೆಯಾದ ಸಂಸ್ಕೃತ ಹಿಂದೆ ಜನರ ಆಡುಭಾಷೆಯಾಗಿತ್ತು ಎನ್ನುವುದಕ್ಕೆ ಬೇಕಾದಷ್ಟು ಪುರಾವೆಗಳು ಸಿಗುತ್ತವೆ. ಅದು ಮತ್ತೆ ಜನರ ನಾಲಿಗೆಯಲ್ಲಿ ನಲಿಯಬೇಕು ಎಂಬ ಘನ ಉದ್ದೇಶದಿಂದ ಸಂಸ್ಕೃತ ಭಾರತಿಯ ಕತೆ ಮೊದಲಾಗುತ್ತದೆ.

ಸಂಸ್ಕೃತ ಭಾರತಿ 1981ರಲ್ಲಿ ಆರಂಭವಾಯಿತು. ಕಳೆದ 31 ವರ್ಷಗಳಲ್ಲಿ ಸುಮಾರು 1.30 ಲಕ್ಷ ಸಂಭಾಷಣಾ ಶಿಬಿರಗಳ ಮೂಲಕ 80 ಲಕ್ಷ ಜನರಿಗೆ ಸಂಸ್ಕೃತ ಮಾತನಾಡುವುದನ್ನು ಕಲಿಸಿದ ಹೆಗ್ಗಳಿಕೆ. ಲಕ್ಷ ಮಂದಿ ತಮ್ಮ ದಿನಚರಿಯನ್ನೂ ಸಂಸ್ಕೃತದಲ್ಲೇ ನಡೆಸುತ್ತಿದ್ದಾರೆ! ಇಂದು ಜಗತ್ತಿನ 19 ದೇಶಗಳಲ್ಲಿ, ದೇಶದ 2300 ಕಡೆ ಸಂಸ್ಕೃತ ಭಾರತಿಯ ಚಟುವಟಿಕೆಗಳು ನಡೆಯುತ್ತಿವೆ.

'ಸಂಸ್ಕೃತಂ ಸರಳಂ, ಸಂಸ್ಕೃತಂ ಸರ್ವೇಶಾಂ, ಸಂಸ್ಕೃತಂ ಅದ್ಯ ಅನಿವಾರ್ಯಂ' ಇದು ಸಂಸ್ಕೃತ ಭಾರತಿಯ ಬೀಜಮಂತ್ರ. ಇಂದು ನಮ್ಮಲ್ಲಿರುವ ಜಾತಿಭೇದ, ಭಾಷಾಭೇದ, ಪ್ರಾಂತಭೇದಗಳೆಲ್ಲಕ್ಕೂ ಸಂಸ್ಕೃತ ಪರಿಹಾರ ಕೊಡಬಲ್ಲದು. ಭಾವೈಕ್ಯತೆಗೆ ಸಂಸ್ಕೃತ ಸಾಧನವಾಗಬಹುದು ಎಂಬ ದೃಷ್ಟಿಯಿಂದ ಸಂಸ್ಕೃತ ಭಾರತಿ ಕೆಲಸ ಮಾಡುತ್ತಿದೆ. ಸ್ವಲ್ಪ ಪ್ರಮಾಣದಲ್ಲಿ ಯಶಸ್ಸನ್ನೂ ಕಂಡುಕೊಂಡಿದ್ದೇವೆ ಎನ್ನುತ್ತಾರೆ ಬೆಂಗಳೂರಿನ ಸಂಸ್ಕೃತ ಭಾರತಿಯ ಪ್ರಧಾನ ನಿರ್ವಾಹಕ, ಸಂಚಾಲಕ ಸತ್ಯನಾರಾಯಣ ಭಟ್ (9448396100).
'ಮೊದಲು ಸಂಭಾಷಣಾ ಶಿಬಿರ. ಹತ್ತು ದಿನಗಳ ಶಿಬಿರದಲ್ಲಿ ದಿನಕ್ಕೆ ಎರಡು ಗಂಟೆ ಸಮಯ ಕೊಟ್ಟರೆ ಯಾರು ಬೇಕಾದರೂ ಸಂಸ್ಕೃತ ಮಾತನಾಡುವುದನ್ನು ಕಲಿಯಬಹುದು. ನಾವು ಕೊಳೆಗೇರಿಯಿಂದ ಪಾರ್ಲಿಮೆಂಟ್‌ವರೆಗೆಶಿಬಿರಗಳನ್ನು ನಡೆಸಿದ್ದೇವೆ. ಬೆಂಗಳೂರಿನ 50 ಕೊಳಗೇರಿಗಳಲ್ಲಿ ಶಿಬಿರ ನಡೆಸಿದ ಹೆಗ್ಗಳಿಕೆ ನಮ್ಮದು. ಅಸ್ಸಾಂ, ನಾಗಾಲ್ಯಾಂಡ್, ಮಣಿಪುರದಂಥ ಗುಡ್ಡಗಾಡು ಪ್ರದೇಶಗಳಲ್ಲಿ ಕೂಡ ಶಿಬಿರ ನಡೆಸಿದ್ದೇವೆ. ಮೂರನೇ ಹಂತ ಅಂಚೆ ಮೂಲಕ ಸಂಸ್ಕೃತ ಕಲಿಯುವುದು. ದಿನಕ್ಕೆ 15-20 ನಿಮಿಷ ಈ ಪಾಠ ಓದಿದರೆ ಸಾಕು. ಕರ್ನಾಟಕದ ಅನೇಕ ಗಣ್ಯರು ಅಂಚೆ ಮೂಲಕವೇ ಸಂಸ್ಕೃತ ಕಲಿತಿದ್ದಾರೆ' ಎನ್ನುತ್ತಾರೆ ಸತ್ಯನಾರಾಯಣ ಭಟ್. ಸಂಸ್ಕೃತದ ಬಗ್ಗೆ ಜನರಲ್ಲಿ ಪ್ರೀತಿ ಇದೆ ಎಂಬುದಕ್ಕೆ 'ವರ್ಲ್ಡ್ ಸಂಸ್ಕೃತ ಬುಕ್‌ಫೇರ್‌'ನಲ್ಲಿ ನಾಲ್ಕು ಕೋಟಿಯಷ್ಟು ಪುಸ್ತಕ ಮಾರಾಟವಾಗಿ, ದಾಖಲೆ ನಿರ್ಮಿಸಿದ್ದೇ ಉದಾಹರಣೆ.

ಪುಸ್ತಕ ಪ್ರಕಟಣೆ
ಆಧುನಿಕ ಸಾಹಿತ್ಯ ಸಂಸ್ಕೃತದಲ್ಲಿ ಸಿಗುತ್ತಿಲ್ಲ. ಹಾಗಾಗಿ ಸಂಸ್ಕೃತ ಭಾರತಿ 350 ಪುಸ್ತಕಗಳನ್ನು ಮುದ್ರಿಸಿದೆ. ಅದರಲ್ಲಿ ಪ್ರಾಚೀನ ಸಂಸ್ಕೃತ ವಾಙ್ಮಯ ಮತ್ತು ಆಧುನಿಕ ಸಾಹಿತ್ಯವಿದೆ. ಇದು ಹೊರತಂದಿರುವ ಎಷ್ಟೋ ಪುಸ್ತಕಗಳು ವಿಶ್ವವಿದ್ಯಾಲಯಗಳಲ್ಲಿ ಪಠ್ಯಪುಸ್ತಕಗಳಾಗಿವೆ. ಡಾ. ಎಸ್.ಎಲ್. ಭೈರಪ್ಪನವರ ಐದು ಕಾದಂಬರಿಗಳನ್ನು ಸಂಸ್ಕೃತಕ್ಕೆ ಅನುವಾದಿಸಿದೆ. ಅದರಲ್ಲಿ ಮೂರಕ್ಕೆ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸಿಕ್ಕಿದೆ.

ಶ್ರೀಕೃಷ್ಣ ಸಂಸ್ಕೃತ ಬಾಲಕೇಂದ್ರ
ಆಡಾಡ್ತಾ ಮಕ್ಕಳು ಸಂಸ್ಕೃತ ಕಲಿಯಬೇಕೆಂಬುದು ಭಾರತಿಯ ಅಪೇಕ್ಷೆ. ದೇಶದ ವಿವಿಧೆಡೆಯ 500 ಕೇಂದ್ರಗಳಲ್ಲಿ 15 ವರ್ಷಗಳಿಂದ ಮಕ್ಕಳಿಗೆ ಸಂಸ್ಕೃತ ಕಲಿಸಲಾಗುತ್ತಿದೆ. ಮಕ್ಕಳಿಗೆ ಬೇಕಾದ ಪಠ್ಯಪುಸ್ತಕಗಳನ್ನು ಭಾರತಿ ಮುದ್ರಿಸುತ್ತಿದೆ. ಇಲ್ಲಿ ಕಲಿತ ಎಷ್ಟೋ ಮಕ್ಕಳು ಇಂದು ಬೇರೆ ಬೇರೆಡೆ ದೊಡ್ಡ ಹುದ್ದೆಗಳಲ್ಲಿದ್ದರೂ, ಸಂಸ್ಕೃತ ಮಾತನಾಡುವುದನ್ನು ಮರೆತಿಲ್ಲ.

ಸಂಸ್ಕೃತ ಮಾಸಪತ್ರಿಕೆ
'ಸಂಭಾಷಣ ಸಂದೇಶಃ' ಎಂಬ ಸಂಸ್ಕೃತ ಮಾಸಿಕ ಪತ್ರಿಕೆಯನ್ನು 16 ವರ್ಷಗಳಿಂದ ಭಾರತಿ ಪ್ರಕಟಿಸುತ್ತಿದೆ. ಪತ್ರಿಕೆ ಪ್ರಸಾರವನ್ನು 12 ದೇಶಗಳಿಗೆ ವಿಸ್ತರಿಸಿಕೊಂಡಿದೆ. ಇದೊಂದು ಕುಟುಂಬ ಪತ್ರಿಕೆ. ಮನೆಯ ಎಲ್ಲರೂ ಇಷ್ಟಪಡುವ ವಿಷಯಗಳು ಇದರಲ್ಲಿವೆ.

ನೂತನ ಕಟ್ಟಡ
ಇತ್ತೀಚೆಗೆ ಸಂಸ್ಕೃತ ಭಾರತಿಯ ಹೊಸ ಕಟ್ಟಡ ಬೆಂಗಳೂರಿನಲ್ಲಿ ಉದ್ಘಾಟನೆಗೊಂಡಿದೆ. ದೇಶದಾದ್ಯಂತ 15 ರಾಜ್ಯಗಳಲ್ಲಿ ಇಂಥ ಕೇಂದ್ರಗಳಿವೆ. ಇಲ್ಲಿ ಅನೇಕ ಹಂತದ ಶಿಕ್ಷಣ, ತರಬೇತಿಗಳು ನಡೆಯುತ್ತವೆ. ಬೇರೆ ದೇಶಗಳಿಂದಲೂ ಜನ ಸಂಸ್ಕೃತ ಕಲಿಯಲು ಬರುತ್ತಿದ್ದಾರೆ. ಸಂಸ್ಕೃತ ಸಂಪರ್ಕ ಭಾಷೆಯಾಗಿದ್ದ ಕಾಲದಲ್ಲಿ ಭಾರತ ಉನ್ನತ ವ್ಯಾಸಂಗಕ್ಕೆ ವಿದೇಶಿಯರನ್ನು ಆಕರ್ಷಿಸಿತ್ತು ಎಂಬುದನ್ನು ಇತಿಹಾಸ ಹೇಳುತ್ತದೆ. ಅಂತಹ ಕೆಲಸವನ್ನೀಗ ಸಂಸ್ಕೃತ ಭಾರತಿ ಮಾಡುತ್ತಿದೆ.

ಸಂಸ್ಕೃತ ವಿಕಿಪೀಡಿಯಾ
'ವಿಕಿಪೀಡಿಯಾ' ಸಂಸ್ಕೃತ ಭಾರತಿಯ ಒಂದು ಚಿಕ್ಕ ಪ್ರಕಲ್ಪ. 2011ರಲ್ಲಿ ಸಂಸ್ಕೃತ ಭಾರತಿ ಈ ಯೋಜನೆ ಕೈಗೆತ್ತಿಕೊಂಡಿತು. ವೇದ ಸಾಹಿತ್ಯ, ಪುರಾಣ, ಇತಿಹಾಸ... ಎಲ್ಲ ವಿಷಯಗಳಿಗೆ ಸಂಬಂಧಿಸಿದ ಪ್ರಾಚೀನ ಗ್ರಂಥಗಳ ಜತೆ ಆಧುನಿಕ ವಿಷಯಗಳೂ ವಿಕಿಪೀಡಿಯಾದಲ್ಲಿ ಸಿಗಬೇಕು ಎಂಬ ಉದ್ದೇಶದಿಂದ 'ಸಂಸ್ಕೃತ ವಿಕಿಪೀಡಿಯಾ' ಪ್ರಾರಂಭಿಸಲಾಗಿದೆ. ಬೆಂಗಳೂರಿನಲ್ಲಿ ಶ್ರದ್ಧಾಳುಗಳ ಒಂದು ಗುಂಪು ಇದಕ್ಕಾಗಿ ಕೆಲಸ ಮಾಡುತ್ತಿದೆ. ವಿಕಿ ಕೋರ್ಸ್, ವಿಕಿ ಸೋರ್ಸ್, ವಿಕಿ ಸುಭಾಷಿತ... ಹೀಗೆ ನಾನಾ ವಿಭಾಗಗಳಿಲ್ಲಿವೆ. ಈಗಾಗಲೇ 10-12 ಸಾವಿರ ಲೇಖನಗಳಿವೆ. ಸಂಸ್ಕೃತದಲ್ಲೇ ಎಲ್ಲ ಮಾಹಿತಿಗಳೂ ಸಿಗುವಂತೆ ಮಾಡಿದೆ ಸಂಸ್ಕೃತ ಭಾರತಿ.

ಇದು ಸಂಸ್ಕೃತ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಪ್ರಮುಖ ಆಕರ. ಹದಿನೆಂಟು ಪುರಾಣಗಳು, ವೇದಗಳು, ಉಪನಿಷತ್ತುಗಳು ಸಹ ಇಲ್ಲಿ ಲಭ್ಯ.
ನೋಡಿ: www.sa.wikipedia.org.

ಸಂಸ್ಕೃತದಿಂದ ಸಂಸ್ಕಾರ
ಮಧ್ಯಪ್ರದೇಶದ ಗಿರಿ ಗ್ರಾಮದ ಜನರ ಮಾತೃಭಾಷೆ ಭೋಜ್‌ಪುರಿಯಾಗಿದ್ದರೂ ಪ್ರತಿ ಮನೆಯಲ್ಲಿ ಇಬ್ಬರು-ಮೂವರು ಸಂಸ್ಕೃತದಲ್ಲಿ ಮಾತನಾಡುತ್ತಾರೆ! ಕರ್ನಾಟಕದ ಸಂಸ್ಕೃತ ಗ್ರಾಮ ಮತ್ತೂರಿನಂತೆ, ಗಿರಿ ಗ್ರಾಮ ಕೂಡ ಒಂದು ಆದರ್ಶ ಸಂಸ್ಕೃತ ಗ್ರಾಮವಾಗಿ ಮಾರ್ಪಟ್ಟಿದೆ. ಈ ಗ್ರಾಮದಲ್ಲಿ ಆದ ಇನ್ನೊಂದು ಪರಿವರ್ತನೆಯೆಂದರೆ, ಗ್ರಾಮದಲ್ಲೀಗ ಮದ್ಯದಂಗಡಿಗಳಿಲ್ಲ, ಒಳಜಗಳಗಳಿಲ್ಲ, ಪೊಲೀಸ್ ಚೆಕ್‌ಪೋಸ್ಟ್‌ಗಳಿಲ್ಲ! ಇದೆಲ್ಲ ಸಾಧ್ಯವಾಗಿದ್ದು ಸಂಸ್ಕೃತ ಕಲಿಕೆಯಿಂದ! ಇಂತಹ ಹತ್ತಾರು ಉದಾಹರಣೆಗಳನ್ನು ಸಂಸ್ಕೃತ ಭಾರತಿ ನಮಗೆ ನೀಡುತ್ತದೆ.

-ಶಶಿರೇಖಾ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments