ಬ್ಯಾಡ್ಲಕ್ ಲಕ್ಷ್ಮಿ!
ಕಳೆದ ಬುಧವಾರ ವಿಜಯನಗರದ ಸರ್ವೀಸ್ ರಸ್ತೆಯಲ್ಲಿ ನಡೆದಕೊಂಡು ಬರುತ್ತಿದ್ದಾಗ ಕೋದಂಡರಾಮಸ್ವಾಮಿ ದೇವಸ್ಥಾನ ಇದೆಯಲ್ಲ, ಅದರ ಎದುರಿಗೆ ಇರುವ ಹಲವಾರು ತಳ್ಳುವ ತರಕಾರಿ ಗಾಡಿಗಳಲ್ಲಿ ಒಂದರ ಪಕ್ಕದಲ್ಲಿ ನಿಂತು ಸೊಪ್ಪು ಖರೀದಿಸುತ್ತಿದ್ದ ಮಧ್ಯವಯಸ್ಸಿನ ಮಹಿಳೆಯೊಬ್ಬರು ನನ್ನನ್ನು ಗಮನಿಸಿ ಪರಿಚಿತ ನಗೆ ಬೀರಿದರು.
ಜನ ಸಂದಣಿ ಹೆಚ್ಚಿದ್ದ ಕಾರಣ ಹೊರ ನಡೆದರೆ ಸಾಕು ಎಂದು ಬರುತ್ತಿದ್ದ ನನ್ನನ್ನು 'ಸರ್ ನಿಂತ್ಕೊಳ್ಳಿ' ಎಂದು ಕರೆದ ಶಬ್ದ ಕೇಳಿ ಹಿಂತಿರುಗಿ ನೋಡಿದೆ. ಅದೇ ಮಹಿಳೆ ನನ್ನತ್ತ ನಡೆದು ಬರುತ್ತಿದ್ದಳು. ಕೈಯಲ್ಲಿ ಒಂದು ಬ್ಯಾಗು ಹಿಡಿದು ಬರುತ್ತಿದ್ದ ಆಕೆಯನ್ನು ಎಲ್ಲೋ ನೋಡಿದ ಹಾಗಿದೆಯಾದರೂ ಎಲ್ಲಿ ಎಂಬುದು ಮಾತ್ರ ನೆನಪಾಗಲಿಲ್ಲ. ಕರೆಯುತ್ತಿರುವುದು ನನ್ನನ್ನೇ ಎಂಬುದು ಖಾತ್ರಿಯಾದ ಕಾರಣ ಜನಸಂದಣಿಯಲ್ಲೆ ಒಂದು ಮೂಲೆಗೆ ನಿಂತೆ. ಹತ್ತಿರ ಬಂದ ಆಕೆ 'ನಮಸ್ಕಾರ ಸರ್, ಚೆನ್ನಾಗಿದ್ದೀರಾ, ಗುರ್ತು ಸಿಗಲಿಲ್ಲವೇ? ನಾನು ಲಕ್ಷ್ಮಿ. ನನ್ನ ಮದುವೆ ಬಗ್ಗೆ ಸ್ಟೋರಿ ಮಾಡಿದ್ರಿ. ಅದರಿಂದ ನನ್ನ ಮಗಳ ಭವಿಷ್ಯಕ್ಕೊಂದು ದಾರಿ ಆಯಿತು' ಎಂದು ಇನ್ನೇನೋ ಹೇಳಲು ಆಕೆ ಮುಂದಾಗುತ್ತಿದ್ದಾಗಲೇ ನನಗೆ ನೆನಪಾಗಿತ್ತು.
ಈ ಲಕ್ಷ್ಮಿ ಎಂಬ ಹೆಣ್ಣು ಮಗಳು ಸರಿಯಾಗಿ ಎಂಟು ವರ್ಷಗಳ ಹಿಂದೆ ಎರಡನೇ ಕ್ಲಾಸ್ ಓದುತ್ತಿದ್ದ ತನ್ನ ಮಗಳನ್ನು ಕರೆದುಕೊಂಡು ನಮ್ಮ ಆಫೀಸಿಗೆ ಬಂದಿದ್ದಳು. ಆಕೆಯ ನೋವಿನ ಕತೆ ಕೇಳಿ ಅದನ್ನು ಪ್ರಸಾರವೂ ಮಾಡಲಾಗಿತ್ತು. ಅದರಿಂದ ಆಕೆಗೆ ಪೊಲೀಸ್ ಠಾಣೆಯಲ್ಲಿ ಸ್ವಲ್ಪ ಮಟ್ಟಿಗೆ ನ್ಯಾಯ ಸಿಕ್ಕಿ ಮಗಳಿಗೆ ಒಂದು ದಾರಿಯಾಗುವ ಭರವಸೆ ಸಿಕ್ಕಿತ್ತು. ಹಾಗಂತ ಆಕೆಯೇ ನಂತರ ಬಂದು ಹೇಳಿದ್ದಳು.
=
ಲಕ್ಷ್ಮಿ ಎಂಬ ಹೆಣ್ಣುಮಗಳು ಅನಕ್ಷರಸ್ಥೆ. ಇಬ್ಬರು ತಂಗಿಯರು ಒಬ್ಬ ತಮ್ಮ ಸೇರಿ ತಂದೆತಾಯಿಗೆ ನಾಲ್ಕು ಮಕ್ಕಳು. ಕೂಲಿ ಮಾಡಿ ಜೀವನ ಸಾಗಿಸುವ ಇವರದು ಬಡ ಕುಟುಂಬ. ಮೂರು ಜನ ಹೆಣ್ಣು ಮಕ್ಕಳಿಗೆ ಮದುವೆ ಮಾಡಬೇಕಾದ ಲಕ್ಷ್ಮಿಯ ತಂದೆಗೆ ಆಸ್ತಿ ಇಲ್ಲ. ಹಾಗಾಗಿಯೇ ಬೆಂಗಳೂರಿನಿಂದ ಶ್ರೀಮಂತ ವರ ಬಂದು ವರದಕ್ಷಣೆ ಇಲ್ಲದೆ ಮದುವೆ ಆಗುವುದಾಗಿ ಹೇಳಿದಾಗ ಖುಷಿಯಿಂದಲೇ ಒಪ್ಪಿಕೊಂಡಿದ್ದರು. ಆ ವರ ಮಹಾಶಯನ ವಯಸ್ಸು ಕೇವಲ 60 ವರ್ಷ! ಅಂದು ಈಕೆಯ ವಯಸ್ಸು ಕೇವಲ 13!
ಆತನಿಗೆ ಆಗಲೇ ಮದುವೆ ಆಗಿ ಇಬ್ಬರು ಮಕ್ಕಳಿದ್ದರು. ಇಬ್ಬರಿಗೂ ಮದುವೆ ಆಗಿತ್ತು. ಹೆಂಡತಿ ಅನಾರೋಗ್ಯದಿಂದ ತೀರಿಕೊಂಡಿದ್ದಳು. ತನಗೆ ಕೊನೆಗಾಲದಲ್ಲಿ ಆಸರೆಯಾಗಿರಲು ಆತ ಈ ಮದುವೆಯಾಗಿದ್ದನೋ ಅಥವಾ ಚಪಲಕ್ಕಾಗಿ ಆಗಿದ್ದನೋ ಇಂದಿಗೂ ಗೊತ್ತಿಲ್ಲ. ಮದುವೆಯಾಗದೆ ಮನೆಯಲ್ಲಿರುವುದಕ್ಕಿಂತ ಶ್ರೀಮಂತ ಕುಟುಂಬದ ಸೊಸೆಯಾಗಿ ಹೋಗುವುದು ಉತ್ತಮ ಎಂದು ಲಕ್ಷ್ಮಿಯ ತಂದೆತಾಯಿಗೆ ಅನಿಸಿತ್ತು. ಲಕ್ಷ್ಮಿಯ ಅಭಿಪ್ರಾಯ ಯಾರಿಗೂ ಬೇಡವಾಗಿತ್ತು. ಹಾಗಾಗಿಯೇ ಅವರ ಮದುವೆ ಯಾವುದೇ ಅಡ್ಡಿಯಿಲ್ಲದೆ ಆಗಿತ್ತು. ಮೈಮೇಲೆ ಚಿನ್ನದ ಒಡವೆಗಳನ್ನು ತುಂಬಿ ತನ್ನ ಮೊದಲ ಹೆಂಡತಿಯ ಮಗಳಿಗಿಂತ ಕಡಿಮೆ ವಯಸ್ಸಿನ ಹೆಣ್ಣುಮಗಳ ಕೈಹಿಡಿದು ಹೋಗಿದ್ದ ಅಳಿಯನ ಹೆಸರು ನರಸರಾಮಪ್ಪ. ಹಾಗೆ ಮುದುಕನನ್ನು ಮದುವೆ ಆಗಿ ಹೋದ ಲಕ್ಷ್ಮಿ ವರ್ಷ ಕಳೆಯುವುದರೊಳಗೆ ಗಂಡನನ್ನು ತೊರೆದು ತವರು ಸೇರಿದ್ದಳು.
ಇದರಿಂದ ಉಳಿದ ಹೆಣ್ಣುಮಕ್ಕಳ ಮದುವೆಗೆ ಅಡ್ಡಿಯಾಗುತ್ತದೆ ಎಂದು ಹೆದರಿದ ತಂದೆ ತಾಯಿ ಲಕ್ಷ್ಮಿಯನ್ನು ಏನಾದರೂ ಮಾಡಿ ಮನೆಯಿಂದ ಹೊರಗೆ ಸಾಗಹಾಕಬೇಕು ಎಂದು ಯೋಚಿಸುತ್ತಿದ್ದರು. ಅದೇ ಸಮಯಕ್ಕೆ ಚಿಕ್ಕಬಳ್ಳಾಪುರದ ಸೆರಗಿನಲ್ಲೇ ಇರುವ ಮುಷ್ಟೂರು ಎಂಬ ಗ್ರಾಮದ ಹೆಂಡತಿ ಬಿಟ್ಟ ವ್ಯಕ್ತಿಯೊಬ್ಬ ಲಕ್ಷ್ಮಿಯನ್ನು ಮದುವೆಯಾಗಲು ಮುಂದೆ ಬಂದ. ಆತನಿಗೆ ಲಕ್ಷ್ಮಿಯ ಮೊದಲ ಮದುವೆ ವಿಚಾರ ತಿಳಿದಿತ್ತಾ ಗೊತ್ತಿಲ್ಲ. ಆದರೆ ಆತ ಅವಳನ್ನು ಮದುವೆಯಾಗಿ ಎರಡು ವರ್ಷ ಸಂಸಾರ ಮಾಡಿದ್ದಂತೂ ನಿಜ.
ಎರಡು ವರ್ಷ ಕಳೆಯುವುದರೊಳಗಾಗಿ ಲಕ್ಷ್ಮಿ ಗರ್ಭಿಣಿಯಾಗಿದ್ದಳು. ಹೆರಿಗೆಗಾಗಿ ತವರು ಮನೆಗೆ ಬಂದಳು. ಅಷ್ಟೇ ಗಂಡನೆಂಬ ಗಂಡ ಮತ್ತೆ ಬರಲೇ ಇಲ್ಲ. ಇವರೇ ಆತನನ್ನು ಸಂಪರ್ಕಿಸುವ ಪ್ರಯತ್ನ ಮಾಡಿದರೂ ಅದು ಪ್ರಯೋಜನವಾಗಲಿಲ್ಲ. ಮಗಳೊಂದಿಗೆ ಮತ್ತೆ ತವರನ್ನೇ ಆಶ್ರಯಿಸಬೇಕಾದ ಅನಿವಾರ್ಯ ಸ್ಥಿತಿ ಲಕ್ಷ್ಮಿಗೆ ಎದುರಾಗಿತ್ತು.
ಬಿಟ್ಟಿರುವ ಗಂಡನಿಗೆ ಅಲ್ಪ ಸ್ವಲ್ಪ ಆಸ್ತಿ ಇತ್ತು. ಅದರಲ್ಲಿ ಪಾಲು ನೀಡದಿದ್ದರೂ ಬೇಡ ಮಗಳ ಮತ್ತು ತನ್ನ ಜೀವನಕ್ಕಾಗಿ ಸಹಾಯ ಮಾಡುವಂತೆ ಪರಿಪರಿಯಾಗಿ ಬೇಡಿಕೊಂಡಳು. ಆದರೆ ಅದಕ್ಕೆ ಆತ ಕ್ಯಾರೆ ಎನ್ನಲಿಲ್ಲ. ಇದರಿಂದ ಬೇಸತ್ತು ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದರೆ ಅಲ್ಲಿ ರೊಕ್ಕ ಬಿಚ್ಚದೆ ದೂರು ಸ್ವೀಕರಿಸುವುದಿಲ್ಲ ಎಂಬ ಅಲಿಖಿತ ನಿಯಮ ಇರುವುದು ಗಮನಕ್ಕೆ ಬಂದಿತು. ಈ ಎಲ್ಲ ಸಮಸ್ಯೆಗಳಿಂದ ರೋಸಿಹೋಗಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಆಕೆ ಬಂದಳು. ಆದರೆ ತನ್ನದಲ್ಲದ ತಪ್ಪಿಗೆ ಮಗಳು ಬಲಿಯಾಗುತ್ತಾಳೆ ಎಂಬ ಕೊರಗು. ಮಗಳಿಗಾಗಿಯಾದರೂ ತಾನು ಬದುಕಬೇಕು ಎಂಬ ಛಲ ಮೂಡಿತು.
ಇನ್ನೂ ಎಳೆಯ ವಯಸ್ಸು. ಎರಡೆರಡು ಬಾರಿ ಮದುವೆಯಾಗಿ ಒಂದು ಮಗುವಾಗಿ ವಿದ್ಯಾಭ್ಯಾಸವಿಲ್ಲದೆ ಮಾಡಲು ಏನೂ ಕೆಲಸ ಗೊತ್ತಿಲ್ಲದೆ ಪರದಾಡುತ್ತಿರುವಾಗ ಆಕೆಗೆ ನೆನಪಾಗಿದ್ದು ಅಂದಿನ ಕ್ರೈಂ ಕಚೇರಿ. ಹಾಗಾಗಿಯೇ ಅವಳು ಎರಡನೇ ಕ್ಲಾಸ್ ಓದುತ್ತಿದ್ದ ತನ್ನ ಮಗಳನ್ನು ಕರೆದುಕೊಂಡು ಬೆಂಗಳೂರಿನವರೆಗೆ ಬಸ್ಸು ಟಿಕೆಟ್ಗಾಗುವಷ್ಟು ಹಣ ಯಾರಿಂದಲೋ ಬೇಡಿಕೊಂಡು ಕಚೇರಿ ತಲುಪಿದ್ದಳು. ಬೆಳಗಿನಿಂದ ತಿಂಡಿ ತಿಂದಿರಲಿಲ್ಲ ಎಂಬುದಕ್ಕೆ ಮಗುವಿನ ಅಳು ಮತ್ತು ಆಕೆಯ ದಯನೀಯ ಸ್ಥಿತಿ ಸಾಕ್ಷಿಯಾಗಿತ್ತು. ಅವಳ ಪಾಡು ನೋಡಿದ ಕೂಡಲೇ ಹೋಟೆಲ್ನಿಂದ ತಿಂಡಿ ತರಿಸಿಕೊಟ್ಟು ತಾಯಿ ಮಗು ಇಬ್ಬರೂ ಊಟ ಮಾಡಿದ ನಂತರ ಆಕೆಯ ಕತೆ ಏನು ಎಂದು ಕೇಳಿದ್ದೆ.
ಆಕೆಯ ನೋವಿನ ಕುರಿತು ಮತ್ತು ಪೊಲೀಸರ ನಿರ್ಲಕ್ಷ್ಯದ ಕುರಿತು ವರದಿ ಪ್ರಸಾರವಾಗಿದ್ದೇ ಆಗಿದ್ದು, ಹುಡುಕಿಕೊಂಡು ಬಂದ ಪೊಲೀಸರು ಆಕೆಯಿಂದ ದೂರು ಪಡೆದು ದಾಖಲಿಸಿದರು. ಗಂಡನನ್ನು ಹುಡುಕಿ ತಂದು ರಿಪೇರಿ ಮಾಡಿದರು. ಪರಿಣಾಮವಾಗಿ ಆತ ಕೋರ್ಟಿಗೆ ಹೋಗದೆ ಹೊರಗೆಯೇ ರಾಜಿಯಾಗಲು ಒಪ್ಪಿದ. ಮಗುವಿನ ಭವಿಷ್ಯಕ್ಕಾಗಿ 50 ಸಾವಿರ ರುಪಾಯಿ ನೀಡಿದ. ಇನ್ನು ತಮ್ಮಿಬ್ಬರಿಗೂ ಸಂಬಂಧವಿಲ್ಲ ಎಂದು ಹೇಳಿ ಹೊರಟು ಹೋದ. ಅಂದು ಆತ ನೀಡಿದ 50 ಸಾವಿರ ರುಪಾಯಿ ಲಕ್ಷ್ಮಿಗೆ ಆಸರೆಯಾಯಿತು. ಅದರಲ್ಲಿ ಸ್ವಲ್ಪ ಹಣ ಹೂವಿನ ವ್ಯಾಪಾರ ಮಾಡಲು ಬಳಸಿ ಉಳಿದ ಹಣವನ್ನು ಬ್ಯಾಂಕಿನಲ್ಲಿಟ್ಟಳು. ತಂದೆ ತಾಯಿಗೆ ಹೊರೆಯಾಗದೆ, ಉಳಿದ ಇಬ್ಬರು ಹೆಣ್ಣು ಮಕ್ಕಳ ಮದುವೆಗೆ ಅಡ್ಡಿಯಾಗದೆ ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳುವ ಪ್ರಯತ್ನ ಮಾಡಿದಳು. ಮಗಳು ತನ್ನಂತೆ ಅನಕ್ಷರಸ್ಥಳಾಗಬಾರದು ಎಂದು ತೀರ್ಮಾನಿಸಿ ತನಗೆ ಎಷ್ಟೇ ಕಷ್ಟ ಬಂದರೂ ಬ್ಯಾಂಕಿನಲ್ಲಿದ್ದ ಹಣ ಉಪಯೋಗಿಸಲಿಲ್ಲ. ಮಗಳ ಓದು ನಿಲ್ಲಿಸಲಿಲ್ಲ. ಕಷ್ಟಪಟ್ಟು ದುಡಿದ ಹಣದಲ್ಲಿಯೇ ಮಗಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುತ್ತಿದ್ದಾಳೆ. ಜೀವನದಲ್ಲಿ ಎರಡೆರಡು ಬಾರಿ ಪೆಟ್ಟು ತಿಂದರೂ ಲಕ್ಷ್ಮಿ ಎಂಬ ಹೆಣ್ಣು ಮಗಳು ಗಂಡನ ಆಸರೆ ಇಲ್ಲದೆ ತವರಿನ ಬೆಂಬಲ ಇಲ್ಲದೆ ಬದುಕಲು ಒಂದು ಆಸರೆ ಕಂಡುಕೊಂಡಿದ್ದಳು.
=
ಲಕ್ಷ್ಮಿ ಮತ್ತೆ ಕಾಣಿಸಿದಾಗ ಆಕೆಯ ಹಳೆಯ ಕತೆಯಲ್ಲಾ ಮನಃಪಟಲದ ಮೇಲೆ ಹಾದು ಹೋಗಿತ್ತು. ಆಕೆಯ ಮಗಳ ಓದಿನ ಬಗ್ಗೆ ಕೇಳಿದೆ. 'ಈಗ 10ನೇ ತರಗತಿ ಓದುತ್ತಿದ್ದಾಳೆ, ಆದರೆ ಮತ್ತೆ ಒಂದು ಸಮಸ್ಯೆ ಎದುರಾಗಿದೆ' ಎಂದಳು.
ಹತ್ತನೇ ತರಗತಿ ಓದುತ್ತಿರುವ ಆಕೆಯ ಮಗಳ ಹೆಸರು ಯಶೋಧ. ಲಕ್ಷ್ಮಿಗೆ ಒಬ್ಬ ತಮ್ಮನಿದ್ದಾನೆ. ಆತನಿಗೆ ಮದುವೆ ಆಗಿ ಮೂರು ಜನ ಹೆಣ್ಣು ಮಕ್ಕಳು. ಗಂಡು ಮಗು ಆಗಲಿಲ್ಲ ಎಂಬ ಕೊರಗಿನಿಂದ ಆತ ಲಕ್ಷ್ಮಿಯ ಮಗಳನ್ನು ಎರಡನೇ ಮದುವೆ ಆಗಲು ನಿರ್ಧರಿಸಿದ್ದಾನಂತೆ. ಇದಕ್ಕೆ ಆಕೆಯ ತಂದೆತಾಯಿಯ ಬೆಂಬಲವೂ ಇದೆ. ಈಗ ಆ ದಡಿಯನಿಗೆ ಬರೋಬ್ಬರಿ 40 ವರ್ಷ. ಲಕ್ಷ್ಮಿಯ ಮಗಳಿಗೆ ಇನ್ನೂ 16 ವರ್ಷ. ತನಗೆ ಎದುರಾದ ಸಮಸ್ಯೆಯೇ ತನ್ನ ಮಗಳಿಗೂ ಎದುರಾಗುತ್ತಿದೆ ಎಂಬ ನೋವು ಆಕೆಯ ಮುಖದಲ್ಲಿ ಕಾಣುತ್ತಿತ್ತು. 'ನನಗೆ ಬಂದ ಕಷ್ಟ ನನ್ನ ಮಗಳಿಗೆ ಬರಬಾರದು ಸರ್. ಯಾವುದೇ ಕಾರಣಕ್ಕೂ ಅವಳ ಓದು ನಿಲ್ಲಬಾರದು. ಆದರೆ ನನ್ನ ತಮ್ಮನೇ ಈಗ ನನ್ನ ಮಗಳ ಭವಿಷ್ಯಕ್ಕೆ ಅಡ್ಡಿಯಾಗಿದ್ದಾನೆ. ಏನು ಮಾಡುವುದು ತೋಚುತ್ತಿಲ್ಲ, ನೀವೇ ಸಹಾಯ ಮಾಡಬೇಕು' ಎಂದು ನಿಂತುಕೊಂಡೇ ಅಲವತ್ತುಕೊಂಡಳು.
10ನೇ ತರಗತಿ ಓದುವ ಹುಡುಗಿ ಅಪ್ರಾಪ್ತಳು. ಅಪ್ರಾಪ್ತ ವಯಸ್ಕರ ಮದುವೆ ಕಾನೂನು ರೀತಿಯಲ್ಲಿ ಅಪರಾಧ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಒಂದು ದೂರು ನೀಡಿ ಎಂಬ ಸಲಹೆ ನೀಡಿದೆ. ದೂರು ನೀಡಿದರೆ ಊರಿನಲ್ಲಿ ನಾನು ಬದುಕುವುದು ಕಷ್ಟ ಎಂಬ ಭೀತಿ ಆಕೆಯಲ್ಲಿದೆ. ಮಹಿಳೆಗೆ ಕಾನೂನು ಯಾವ ರೀತಿಯಲ್ಲಿ ರಕ್ಷಣೆ ನೀಡುತ್ತೆ ಎಂಬುದು ಇನ್ನೂ ಕಾಡುತ್ತಿರುವ ಪ್ರಶ್ನೆಯಾಗಿಯೇ ಉಳಿದಿದೆ.
-ಅಶ್ವತ್ಥನಾರಾಯಣ್ ಎಲ್.
sathyajns@gmail.com