ಎರಡು ಲಿಪ್ ಒಂದೇ ಕಪ್
ಇವರು ಒಡಹುಟ್ಟಿದವರಲ್ಲ. ದಂಪತಿಗಳಂತೂ ಅಲ್ಲವೇ ಅಲ್ಲ. ಒಂದೇ ಕುಟುಂಬದವರಲ್ಲ. ಆದರೂ ಇವರ ಹೆಸರುಗಳು ಜೋಡಿಯಾಗಿಯೇ...
ಇವರು ಒಡಹುಟ್ಟಿದವರಲ್ಲ. ದಂಪತಿಗಳಂತೂ ಅಲ್ಲವೇ ಅಲ್ಲ. ಒಂದೇ ಕುಟುಂಬದವರಲ್ಲ. ಆದರೂ ಇವರ ಹೆಸರುಗಳು ಜೋಡಿಯಾಗಿಯೇ ಕೇಳಿಸುತ್ತವೆ- ಕಾಣಿಸುತ್ತವೆ. ತಮ್ಮ ಕ್ಷೇತ್ರಕ್ಕೆ ಇವರು ನೀಡಿದ ಕೊಡುಗೆ, ಸಾಧನೆಯನ್ನು ಗಮನಿಸಿದಾಗ ಇಬ್ಬರ ಪಾಲೂ ಸಮಾನವಾಗಿರುವುದು ಗೋಚರಿಸುತ್ತದೆ. ನಮ್ಮ ರಾಜ್ಯದ ಅಂಥ ಒಂದಷ್ಟು 'ಬೈಟೂ ಜೋಡಿ'ಗಳನ್ನು ಇಲ್ಲಿ ನೆನೆದಿದ್ದೇವೆ. ಬೈಟು ಕಾಫಿಗೆ ಒಂದು ವರ್ಷ ತುಂಬಿದ ಸಂಭ್ರಮವೇ ಇದಕ್ಕೆ ಪ್ರೇರಣೆ.
ಅನುರೂಪ
ರಾಜ್ಕುಮಾರ್- ಭಾರತಿ
'ಬಲ್ ಅಪರೂಪ ನಮ್ ಜೋಡಿ' ಎನ್ನುವಂತೆ ಕನ್ನಡ ಚಿತ್ರರಂಗದಲ್ಲಿ ಇವರಿಬ್ಬರದು ಫೇವರೇಟ್ ಪೇರ್. ರಾಜ್ ಅವರೊಂದಿಗೆ ಹೆಚ್ಚಿನ ಚಿತ್ರಗಳಲ್ಲಿ ನಾಯಕಿಯಾಗಿದ್ದವರು ಭಾರತಿ ವಿಷ್ಣುವರ್ಧನ್. 'ಬಂಗಾರದ ಮನುಷ್ಯ', 'ಭಲೇ ಜೋಡಿ', 'ಬೀದಿ ಬಸವಣ್ಣ' ಚಿತ್ರಗಳು ನೆನಪಾದರೆ ಈ ಜೋಡಿಯೂ ನಮಗೆ ನೆನಪಾಗುತ್ತದೆ.
ಮಧುರಕಾವ್ಯ
ಎಚ್.ಎಸ್.ವೆಂಕಟೇಶಮೂರ್ತಿ- ಬಿ.ಆರ್.ಲಕ್ಷ್ಮಣರಾವ್
ಎಚ್ಚೆಸ್ವಿ ಎಂಬ 'ಕುಮಾರವ್ಯಾಸ ಪ್ರತಿಭೆ' ಮತ್ತು ಬಿಆರ್ಎಲ್ ಎಂಬ 'ವಾತ್ಸಾಯನ ಪ್ರತಿಭೆ'ಗಳು ಸೃಷ್ಟಿಸಿದ ಕನ್ನಡ ಕಾವ್ಯದ ನವಿರು ಲೋಕ ಓದುಗರ ಮನದಲ್ಲಿ ಚಿರಸ್ಥಾಯಿ. ಹಾಗೇ ಅಸೂಯೆಯೆಣಿಸದ ಇಬ್ಬರ ಸ್ನೇಹವೂ.
ಫೋಟೋ ಪರ್ಫೆಕ್ಟ್
ಕೃಪಾಕರ ಸೇನಾನಿ
ಬಂಡೀಪುರ- ನಾಗರಹೊಳೆಯ ವನ್ಯಮೃಗಗಳ ಚಿತ್ರ ತೆಗೆಯುವಲ್ಲಿಂದ ಆರಂಭಿಸಿ, ಪರಿಸರ ಸಂರಕ್ಷಣೆ, ಅಧ್ಯಯನ, ಅಂತಾರಾಷ್ಟ್ರೀಯ ಮಾನ್ಯತೆಯ 'ದಿ ಪ್ಯಾಕ್' ಕಾಡುನಾಯಿಗಳ ಡಾಕ್ಯುಮೆಂಟರಿ ತೆಗೆಯುವವರೆಗೂ ಒಡೆಯದ ಜೋಡಿ.
ಸುಗಮಸ್ನೇಹ
ಸಿ.ಅಶ್ವತ್ಥ್- ಮೈಸೂರು ಅನಂತಸ್ವಾಮಿ
ಕನ್ನಡದ ಸುಗಮ ಸಂಗೀತ ಕ್ಷೇತ್ರಕ್ಕೆ ಭದ್ರ ತಳಹದಿ ಹಾಕಿದ ಇವರಿಬ್ಬರ ದಶಕಗಳ ಸ್ನೇಹ, ಸಾಧನೆಗೆ ಬೀಜ ಬಿದ್ದದ್ದು 'ಭಾವಸಂಗಮ' 'ಮೈಸೂರು ಮಲ್ಲಿಗೆ' ಕ್ಯಾಸೆಟ್ಗಳ ಕಾಲದಲ್ಲಿ. ಇವರ ನಾದದಲ್ಲಿ ಅನಂತಸ್ವಾಮಿ ರಾಗ, ಅಶ್ವತ್ಥ್ ಭಾವ.
ವಚೋವಿಲಾಸಿಗಳು
ಶೇಣಿ ಗೋಪಾಲಕೃಷ್ಣ ಭಟ್- ರಾಮದಾಸ ಸಾಮಗ
ದಶಕಗಳ ಕಾಲ ನಾಡಿನಾದ್ಯಂತದ ಯಕ್ಷಗಾನ ಪ್ರಿಯರನ್ನು ತಮ್ಮ ವಾಗ್ವಿಲಾಸ ವೈಭವದಿಂದ ಪುಳಕಗೊಳಿಸಿದ ಈ ಜೋಡಿ, ಪುರಾಣ ಪಾತ್ರಗಳಿಗೆ ತಮ್ಮ ಮಾತಿನ ಮೂಲಕವೇ ಹೊಸ ಆಯಾಮವನ್ನು ಜತೆಯಾಗಿ ನೀಡಿದರು.
ಬಳ್ಳಾರಿ ರಿಪಬ್ಲಿಕ್
ಜನಾರ್ದನ ರೆಡ್ಡಿ- ಶ್ರೀರಾಮುಲು
ಕಳೆದ ದಶಕದ ನಾಡಿನ ರಾಜಕೀಯವನ್ನು ನಿಸ್ಸಂಶಯವಾಗಿ 'ಧೂಳೀಪಟ' ಮಾಡಿದ ಜೋಡಿ ಇದು. ನೆಲ ಅಗೆಯುವುದು, ರಾಜಕಾರಣ ಎಲ್ಲದರಲ್ಲೂ ಸೋದರರಂತಿದ್ದ ಇವರು ಅದ್ಯಾಕೋ ಜೈಲಿಗೆ ಹೋಗುವುದರಲ್ಲಿ ಮಾತ್ರ ಜತೆಯಾಗಲಿಲ್ಲ.
ಬೌಲಿಂಗ್ ಪಡೆ
ಅನಿಲ್ ಕುಂಬ್ಳೆ- ಜಾವಗಲ್ ಶ್ರೀನಾಥ್
ಸ್ಪಿನ್ನಾದರೇನು, ಸ್ಪೀಡಾದರೇನು? ವಿಕೆಟ್ ತೆಗೆಯುವುದೇ ಗುರಿಯಲ್ಲವೇನು? ಎಂಬಂತಿದ್ದ ಈ ಜೋಡಿ, ಒಂದೊಮ್ಮೆ ಭಾರತ ಕ್ರಿಕೆಟ್ ತಂಡದಲ್ಲಿ ಐವರು ಕನ್ನಡಿಗರಿದ್ದ ಕಾಲಕ್ಕೆ, ಬಲಿಷ್ಠ ಬೌಲಿಂಗ್ ದಾಳಿಯನ್ನು ಜತೆಯಾಗಿ ಸಂಘಟಿಸಿದವರು.
ತೂಕದ ಪಾಲಿಟಿಕ್ಸ್
ಮಲ್ಲಿಕಾರ್ಜುನ ಖರ್ಗೆ- ಧರಂ ಸಿಂಗ್
ಇಬ್ಬರ ವ್ಯಕ್ತಿತ್ವದಂತೆಯೇ ಇಬ್ಬರ ರಾಜಕಾರಣವೂ ತೂಕದ್ದೇ. ಸಂಪನ್ಮೂಲದ ಕೊರತೆ ಕಂಡ ಉತ್ತರ ಕರ್ನಾಟಕಕ್ಕೆ ನಾಯಕತ್ವದ ವಿಚಾರದಲ್ಲಿ ಇಬ್ಬರೂ ಕೊರತೆ ಮಾಡಲಿಲ್ಲ.
ಯಕ್ಷದಂಪತಿ
ಚಿಟ್ಟಾಣಿ ರಾಮಚಂದ್ರ ಹೆಗಡೆ- ಮಂಟಪ ಪ್ರಭಾಕರ ಉಪಾಧ್ಯ
ಬಡಗುತಿಟ್ಟು ಯಕ್ಷಗಾನದ ಕುಣಿತ, ಅಭಿನಯ, ಮಾತು, ಹೊಸತನಗಳು ಪರಿಪೂರ್ಣವಾಗಿ ಮೇಳೈಸಿದ್ದ ಈ ಜೋಡಿ, ರಂಗದ ಮೇಲಿನ ಶೃಂಗಾರ ಸನ್ನಿವೇಶಗಳಿಗೆ ಹೊಸ ಭಾಷ್ಯ ಬರೆದು ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿತು.
ಹೊಸ ಅಲೆ
ಯೋಗರಾಜ್ ಭಟ್- ಸೂರಿ
ಕನ್ನಡ ಚಿತ್ರರಂಗಕ್ಕೆ ಮುಂಗಾರು ಮಳೆ, ದುನಿಯಾಗಳ ಮೂಲಕ ಏಕಕಾಲದಲ್ಲೇ ಜೀವ ತುಂಬಿದ ಇವರಿಬ್ಬರೂ ಬೇರೆ ಬೇರೆಯಾಗಿಯೇ ಕೆಲಸ ಮಾಡಿದ್ದರೂ, ಹೆಸರೇಕೋ ಜತೆಯಾಗಿಯೇ ನೆನೆಯಲ್ಪಡುತ್ತದೆ. ಉತ್ತಮ ಸ್ನೇಹಿತರು- ಆದರೆ ಚಿತ್ರಗಳ ಥೀಮ್ ಮಾತ್ರ ಸಂಪೂರ್ಣ ಭಿನ್ನ.
ಸಂಗೀತ ಸಹವಾಸ
ರಾಜನ್- ನಾಗೇಂದ್ರ
60, 70, 80ರ ದಶಕದ ಕನ್ನಡ ಚಿತ್ರಗೀತೆಗಳನ್ನು ಕೇಳಿದವರಿಗೆ ಈ ಸಂಗೀತ ನಿರ್ದೇಶಕರ ಹೆಸರು, ನಾದಗಳು ಚಿರಪರಿಚಿತ. ಆಕಾಶ ದೀಪವು ನೀನು, ನಾ ನಿನ್ನ ಮರೆಯಲಾರೆ, ಬಾನಲ್ಲು ನೀನೇ ಬುವಿಯಲ್ಲು ನೀನೇ, ಬಂದೆಯ ಬಾಳಿನ ಬೆಳಕಾಗಿ, ನಾವಾಡುವ ನುಡಿಯೇ ಕನ್ನಡ ನುಡಿ ಮೊದಲಾದ ಗೀತೆಗಳನ್ನು ಮರೆಯುವುದುಂಟೆ?
ಹಾಗೇ ಸುಮ್ಮನೆ
ಜಯಂತ ಕಾಯ್ಕಿಣಿ- ಮನೋಮೂರ್ತಿ
'ಅನಿಸುತಿದೆ ಯಾಕೋ ಇಂದು' ಎಂದು ಆರಂಭವಾದ ಇವರಿಬ್ಬರ ಸಾಹಿತ್ಯ- ಸಂಗೀತ ಯಾನ ಸದ್ಯ ಒಂದು ಅಲ್ಪವಿರಾಮ ಕಂಡಿದೆ. ಆದರೆ ಚಿತ್ರಗೀತೆಗಳ ಮಾಧುರ್ಯಮೌಲ್ಯ, ಹೊಸತನ, ಆಧುನಿಕ ಭಾಷೆಗಳ ವಿಚಾರದಲ್ಲಿ ನೆನೆಯಬೇಕಾದ ಜತೆ.
ಜತೆನಿರ್ಮಾಣ
ದೊರೈ- ಭಗವಾನ್
ಈ ನಿರ್ಮಾಪಕ- ನಿರ್ದೇಶಕ ಜೋಡಿಯ ಜೋಳಿಗೆಯಲ್ಲಿ ಕನ್ನಡವನ್ನು ಶ್ರೀಮಂತಗೊಳಿಸಿದ 55 ಚಲನಚಿತ್ರಗಳಿವೆ. ಅದರಲ್ಲೂ 23 ಕಾದಂಬರಿ ಆಧಾರಿತ. ಹೆಚ್ಚಿನದರಲ್ಲಿ ಡಾ.ರಾಜ್ ನಾಯಕ. ಜೇಡರ ಬಲೆ, ಕಸ್ತೂರಿ ನಿವಾಸ, ಜೀವನ ಚೈತ್ರ, ನೀನು ನಕ್ಕರೆ ಹಾಲು ಸಕ್ಕರೆ ಚಿತ್ರಗಳು ನೆನಪಾದವೆ? ಈಗ ದೊರೈರಾಜ್ ಇಲ್ಲ, ಬರೀ ಭಗವಾನ್ ಅಂದ್ರೆ ಯಾರಿಗೂ ನೆನಪಾಗಲ್ಲ!
ಶರೀರ ಶಾರೀರ
ರಾಜ್ಕುಮಾರ್- ಪಿ.ಬಿ.ಶ್ರೀನಿವಾಸ್
ರಾಜ್ ಪಾತ್ರಗಳ ಹಾಡುಗಳಿಗೆ ದನಿಯಾಗಿದ್ದ ಪಿ.ಬಿ.ಶ್ರೀನಿವಾಸ ಒಬ್ಬರನ್ನು ಬಿಟ್ಟು ಮತ್ತೊಬ್ಬರನ್ನು ನೆನೆಯುವ ಹಾಗಿಲ್ಲ. ಒಂದೇ ಚಿತ್ರದ ಎರಡು ಮುಖಗಳು. ಒಂದು ಶರೀರ ಮತ್ತೊಂದು ಶಾರೀರ. ಇವರ ಕಾಂಬಿನೇಷನ್ನಲ್ಲಿ ಮೂಡಿ ಬಂದ ಹಾಡುಗಳನ್ನು ಪಟ್ಟಿ ಮಾಡುತ್ತ ಹೋದರೆ ಅದೊಂದು ಕಾದಂಬರಿಯೇ ಆಗುತ್ತದೆ.
ಬೆಳಕಿನ ಕೋಲುಗಳು
ಗುರುದತ್- ವಿ.ಕೆ.ಮೂರ್ತಿ
ಪ್ಯಾಸಾ, ಸಾಹಿಬ್ ಬೀಬಿ ಔರ್ ಗುಲಾಮ್, ಕಾಗಜ್ ಕೆ ಫೂಲ್ ಮುಂತಾದ ಜಾದೂಗಳ ಹಿನ್ನೆಲೆಯಲ್ಲಿ ಕಾಣಿಸುವ ಬೆಳಕಿನ ಯುಗಳಗೀತೆ. ಒಬ್ಬ ತೆರೆಯ ಮೇಲಿನ ಜಾದೂಗಾರನಾದರೆ, ಇನ್ನೊಬ್ಬ ಅದರ ಹಿಂದಿನ ಮಂತ್ರದಂಡ.
ಪ್ರೇಮಲೋಕದಿಂದ
ರವಿಚಂದ್ರನ್- ಹಂಸಲೇಖ
ಕ್ರೇಜಿ ಸ್ಟಾರ್ ಮತ್ತು ನಾದಬ್ರಹ್ಮ ಸೇರಿ ಸೃಷ್ಟಿಸಿದ ಪ್ರೇಮಲೋಕ, ರಣಧೀರ, ಅಂಜದ ಗಂಡು, ರಾಮಾಚಾರಿಗಳು ಇಂದು ದಂತಕತೆ. ಕನ್ನಡ ಚಿತ್ರಗಳಿಗೆ 80ರ ದಶಕದಲ್ಲಿ ಹೊಸ ರೂಪ ಕೊಟ್ಟ ಇವರಿಬ್ಬರೂ ಮತ್ತೆ ಒಂದಾಗಿದ್ದಾರೆ. ಆದರೆ ಹಿಂದಿನ ಮ್ಯಾಜಿಕ್ ಮರಳಿಲ್ಲ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.