ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ದೇವರ ಭಯ ಬೇಕಿಲ್ಲ

ಇವತ್ತೊಂದು ದಿನ ದೇವರನ್ನು ಪೂಜಿಸಲು ಆಗಲೇ ಇಲ್ಲ. ಸಿಕ್ಕಾಪಟ್ಟೆ ಕೆಲಸದ ಒತ್ತಡ. ಯಾವುದನ್ನು ಮಾಡಬೇಕು, ಯಾವುದನ್ನು...

Rashmi Kasaragodu
Updated On : 20 Aug 2013, 12:59 pm

ಇವತ್ತೊಂದು ದಿನ ದೇವರನ್ನು ಪೂಜಿಸಲು ಆಗಲೇ ಇಲ್ಲ. ಸಿಕ್ಕಾಪಟ್ಟೆ ಕೆಲಸದ ಒತ್ತಡ. ಯಾವುದನ್ನು ಮಾಡಬೇಕು, ಯಾವುದನ್ನು ಬಿಡಬೇಕು ಎಂಬುದೇ ಅರ್ಥವಾಗುತ್ತಿಲ್ಲ. ಬೆಳಗ್ಗಿನಿಂದ ಸಂಜೆಯವರೆಗೂ ಒಂದು ನಿಮಿಷವೂ ಬಿಡುವೇ ಇಲ್ಲ. ನಾಳೆಯೂ ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ. ಬಹುಶಃ ಈ ವಾರವೆಲ್ಲಾ ದೇವರತ್ತ ತಿರುಗಿ ನೋಡಲಿಕ್ಕೂ ಸಾಧ್ಯವಾಗುವುದಿಲ್ಲವೇನೋ. ಈಗ ಅವಷ್ಟನ್ನು ಮಾಡಿ ಮುಗಿಸದಿದ್ದರೆ ಮುಂದೆ ಎಲ್ಲವೂ ಹಾಳಾಗುತ್ತದೆ. ಛೇ, ದೇವರು ಮುನಿಸಿಕೊಂಡಾನು, ಪೂಜೆ ಮಾಡದಿದ್ದರೆ ಮುಂದೆ ಏನಾದರೂ ಹೆಚ್ಚೂ ಕಡಿಮೆ ಆದರೆ...? ಬಹುತೇಕರನ್ನು ಇಂಥ ವಿಚಿತ್ರವಾದುದೊಂದು ಹಳಹಳಿ ಕಾಡುತ್ತಲೇ ಇರುತ್ತದೆ. ಇಂಥ ಚಿಂತೆ ಏಕೆ? ಮಾಡುವ ಕೆಲಸದಲ್ಲೇ ನೀವು ದೇವರನ್ನು ಕಾಣಲು ಸಾಧ್ಯ. ಕರ್ಮ ಯೋಗಕ್ಕಿಂತ ಹೆಚ್ಚಿನ ಧ್ಯಾನ, ತಪಸ್ಸು, ಪೂಜೆಗಳಿಲ್ಲ ಎಂಬುದನ್ನು ನೆನಪಿಡಿ. ಕರ್ತವ್ಯ ಎಂಬುದು ಎಲ್ಲಕ್ಕಿಂತ ಹೆಚ್ಚಿನದ್ದು ಎಂಬುದನ್ನು ಮನಗಾಣಬೇಕು. ತಾಸುಗಟ್ಟಲೇ ದೇವರ ಪೂಜೆಯಲ್ಲಿ ಸಮಯ ಕಳೆದು, ನಿಮ್ಮ ಭಾಗದ ಕರ್ತವ್ಯವನ್ನೇ ಮರೆಯುವುದರಲ್ಲಿ, ಅಥವಾ ಅದನ್ನು ವ್ಯತ್ಯಯಗೊಳಿಸುವುದರಿಂದ ಆಗುವ ಸಾಧನೆಯೇನೂ ಇಲ್ಲ. ಹಾಗೆಂದು ದೇವರೆಂಬುದು ಪುರುಸೊತ್ತಿನ ಸಂಗತಿ ಅಲ್ಲವೇ ಅಲ್ಲ. ದೇವರು ಮನದೊಳಗೆ ಹುದುಗಿರುವ ಭಾವ. ನಮ್ಮ ಮನಸ್ಸನ್ನು ಮೀರಿದ ದೇವರೆಂಬುದು ಈ ಜಗತ್ತಿನಲ್ಲೇ ಇಲ್ಲ. ಎಲ್ಲ ದೇವರೂ ನಮ್ಮ ಕಲ್ಪನೆಯ ಮೂಸೆಯಲ್ಲೇ ಮೂಡಿರುವಂಥವನು. ಹೀಗಾಗಿ ದೇವರಂಬುವವನು ಇದ್ದರೆ ಅದು ನಮ್ಮ ಮನಸ್ಸಿನೊಳಕ್ಕೆ ಮಾತ್ರವೇ. ಪರಿಶುದ್ಧ, ಪ್ರಾಮಾಣಿಕ ಮನಸ್ಸಿನಲ್ಲಿ ದೇವರು ಸದಾ ನೆಲೆ ನಿಂತಿರುತ್ತಾನೆ. ಅಷ್ಟಕ್ಕೂ ದೇವರಿಗೆ ಬೇಕಿರುವುದು ನಮ್ಮ ಸದ್ಭಕ್ತಿಯ ಆರಾಧನೆಯೇ ಹೊರತು, ಜಂಜಡಗಳ ನಡುವಿನ ಆಡಂಬರವಲ್ಲ. ಒತ್ತಡವಿದೆಯೇ, ಮನಸ್ಸು ಸರಿ ಇಲ್ಲವೇ, ನಿಮ್ಮ ಮನಸ್ಸಿನಲ್ಲಿ ಏನೇನೋ ದುರಾಲೋಚನೆಗಳು ತುಂಬಿಕೊಂಡು ಏಕಾಗ್ರತೆ ಸಾಧಿಸಲು ಸಾಧ್ಯವಾಗುತ್ತಿಲ್ಲವೇ? ಖಂಡಿತಾ ಅಂಥವುಗಳ ನಡುವೆ ನೀವು ದೇವರ ಪೂಜೆಗೆ ಕೂರುವ ಅಗತ್ಯವೇ ಇಲ್ಲ. ಅಷ್ಟಕ್ಕೂ ಮುನಿಸಿಕೊಳ್ಳುವವ, ಕೇಡು ಮಾಡುವವ ದೇವರೆಂದು ಹೇಗೆನಿಸಿಕೊಳ್ಳುತ್ತಾನೆ? ಅವನು ಮಾನವನ ಎಲ್ಲ ಮಿತಿಗಳನ್ನೂ ದಾಟಿದ ಆದರ್ಶ. ಕಾಯಕಕ್ಕಿಂತ ಮಿಗಿಲಾದ ದೇವರಿಲ್ಲ. ಕರ್ತವ್ಯಕ್ಕಿಂತ ಹೆಚ್ಚಿನ ಧರ್ಮವಿಲ್ಲ ಎಂಬುದನ್ನು ನೆನಪಿಡಿ.

- ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments