ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಆಸ್ತಿ ಬಳಸುವಾಗಲೂ ಯಾಂತ್ರಿಕತೆ!

Mainashree
Updated On : 20 Aug 2013, 1:00 am

ನಾವೊಂದು ಐಷಾರಾಮಿ ಕಾರಿನಲ್ಲಿ ಪ್ರಯಾಣ ಹೊರಟಿದ್ದೇವೆ ಅಂದುಕೊಳ್ಳೋಣ. ಪ್ರಯಾಣದುದ್ದಕ್ಕೂ, ನಾವು ಏನು ಮಾಡಬೇಕು, ಹೇಗೆ ವ್ಯವಹಾರ ಕುದುರಿಸಬೇಕು, ಹೇಗೆ ವರ್ತಿಸಬೇಕು ಇತ್ಯಾದಿಗಳನ್ನೇ ಆಲೋಚಿಸುತ್ತ ಕಾಲ ಕಳೆಯುತ್ತೇವೆ. ಒಮ್ಮೊಮ್ಮೆ ನಮ್ಮ ಪ್ರಯಾಣದ ಅವಧಿ ಕಳೆದದ್ದೇ ನಮ್ಮ ಗಮನಕ್ಕೆ ಬಾರದೇ ತಲುಪಬೇಕಾದ ಸ್ಥಳವನ್ನು ಸೇರಿದಾಗ ಎಚ್ಚೆತ್ತು ಆಶ್ಚರ್ಯಪಡುವುದುಂಟು. ಊಟ ಮಾಡುವಾಗ, ಸ್ನಾನ ಮಾಡುವಾಗ, ಪ್ರಯಾಣಿಸುವಾಗ.... ಹೀಗೆ ಕೆಲವು ಕ್ರಿಯೆಗಳು ನಡೆಯುವಾಗ ನಾವು ಸೂಕ್ಷ್ಮವಾಗಿ ಗಮನಿಸುವುದಿಲ್ಲ. ಅದನ್ನೇ 'ಯಾಂತ್ರಿಕತೆ' ಎಂದು ಹೇಳುವುದು.
ಒಂದು ಸ್ಥಳಕ್ಕೆ ನಾವು ನಡೆದುಕೊಂಡು ಹೊರಟರೆ, ಹೆಜ್ಜೆ ಸಾಗುತ್ತಲಿರುತ್ತದೆ. ಪ್ರತಿಯೊಂದು ಹೆಜ್ಜೆಯೆಡೆಗೂ ನಾವು ಗಮನ ಕೊಡುವುದಿಲ್ಲ. ಇವುಗಳೆಲ್ಲ ಗಮನ ಕೊಡದಿದ್ದರೂ ನಡೆಯುವ ಯಾಂತ್ರಿಕ ಕ್ರಿಯೆಗಳು. ಪ್ರತಿನಿತ್ಯ ಬಟ್ಟೆ ತೊಡುವಾಗ ಅಥವಾ ತೊಟ್ಟುಕೊಂಡ ಮೇಲೆ, ಬಟ್ಟೆ ನಮ್ಮ ಮೈಗೆ ಅಂಟಿಕೊಂಡಿದ್ದರೂ, ಸ್ಪರ್ಶದ ಅನುಭವ ನಮಗಿದ್ದರೂ, ಎಷ್ಟು ಕಾಲ ನಾವು ಅದರೆಡೆಗೆ ಗಮನವಿಟ್ಟಿರುತ್ತೇವೆ? ನಾವು ಪ್ರಯಾಣಿಸುತ್ತಿರುವ ಕಾರು, ಕೈಯಲ್ಲಿ ಕಟ್ಟಿದ ವಾಚು, ತೊಟ್ಟ ಉಡುಗೆ, ಪಾದರಕ್ಷೆ ಎಲ್ಲವೂ ಕ್ರಮೇಣ ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತವೆ. ಈಜುವುದನ್ನು ಕಲಿಯುವಾಗ, ಸೈಕಲ್ ತುಳಿಯುವುದು, ವಾಹನ ಚಾಲನೆ ಕಲಿಯುವ ಹಂತದಲ್ಲಿ ಅವುಗಳ ಬಗ್ಗೆ ನಾವು ಹೆಚ್ಚು ಉತ್ಸುಕರಾಗಿರುತ್ತೇವೆ. ಸಂತಸಪಡುತ್ತೇವೆ. ಕಲಿತು ಪರಿಪಕ್ವರಾದ ಮೇಲೆ ಕ್ರಮೇಣ ಉತ್ಸಾಹ ಕಡಿಮೆಯಾಗಿ ಅವುಗಳೆಲ್ಲ ಸಹಜ ಕ್ರಿಯೆಗಳಾಗಿ ಮಾರ್ಪಡುತ್ತವೆ. ವಾಹನ ಚಾಲನೆಯನ್ನು ಕಲಿಯುವ ಸಂದರ್ಭದಲ್ಲಿ ಅದನ್ನು ನಿಲ್ಲಿಸಬೇಕೆಂದಿದ್ದರೆ, ಬ್ರೇಕ್ ಎಲ್ಲಿದೆ ಎಂದು ಧ್ಯಾನ ಹರಿಸಿ ಬ್ರೇಕ್ ಒತ್ತಿ ನಿಲ್ಲಿಸುತ್ತೇವೆ. ನುರಿತ ಚಾಲಕರಾದ ಮೇಲೆ ಆಕಸ್ಮಿಕವಾಗಿ ಏನಾದರೂ ಎದುರಾದರೂ ನಾವು ಯೋಚಿಸುವ ವ ಮೊದಲೇ ನಮ್ಮ ಕಾಲು ಯಾಂತ್ರಿಕವಾಗಿ ಬ್ರೇಕ್ ಒತ್ತಿರುತ್ತದೆ. ಹಾಗೆ ಯಾಂತ್ರಿಕವಾಗಿ ನಡೆಯುವ ಕ್ರಿಯೆ ಎಂದಾದರೆ ಅದು ಸೂಕ್ಷ್ಮವನ್ನು ಕಳೆದುಕೊಂಡಿದೆ ಎಂದರ್ಥ. ಹಾಗೆಯೇ ಕೆಲವು ಆಸ್ತಿಯನ್ನು ಬಳಸುವಾಗಲೂ ನಾವು ಸೂಕ್ಷ್ಮವನ್ನು ಕಳೆದುಕೊಂಡು ಯಾಂತ್ರಿಕವಾಗಿರುತ್ತೇವೆ. ಒಂದು ಮಿತಿಯ ನಂತರ ಯಾವುದೇ ವಸ್ತುವಾಗಲೀ, ಕ್ರಿಯೆಯಾಗಲೀ ಹೆಚ್ಚಿನ ಆನಂದ ನೀಡುವುದಿಲ್ಲ. ನಮ್ಮ ಹೆಚ್ಚಿನ ಆಸ್ತಿಯೂ ಕೂಡ!
(ಮುಂದುವರಿಯುವುದು)

ಕಿರಣ್ ಉಪಧ್ಯಾಯ
keyrun1970@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement