ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಕ್ಯಾರೆಟ್ ತಿನ್ನಿ ನಿಶ್ಚಿಂತರಾಗಿರಿ!

Mainashree
Updated On : 20 Aug 2013, 1:04 am

ತರಕಾರಿ ಬೆಲೆ ನಮ್ಮಲ್ಲಿ ಯಾವಾಗ ಏರುತ್ತದೆ, ಯಾವಾಗ ಇಳಿಯುತ್ತದೆ ಎಂದು ಹೇಳುವುದು ಕಷ್ಟ. ಹಿಂದೆಲ್ಲಾ ಸಾಮಾನ್ಯವಾಗಿ ವಾಡಿಕೆಗಿಂತ ಮಳೆ ಜಾಸ್ತಿಯಾದರೆ ಮಳೆಗಾಲದಲ್ಲಿ ಅಥವಾ ತರಕಾರಿ ಹೆಚ್ಚು ಬೆಳೆಯುವ ರಾಜ್ಯಗಳಲ್ಲಿ ಮುಷ್ಕರವಾದರೆ ಅಭಾವ ಉಂಟಾಗಿ ತರಕಾರಿ ಬೆಲೆಗಳು ದಿಢೀರ್ ಏರುತ್ತಿದ್ದವು. ಈಗ ಬೆಲೆಗಳು ಯಾವ ಕಾರಣಕ್ಕೆ ಏರುತ್ತವೆ, ಎಷ್ಟು ದಿನದಲ್ಲಿ ಇಳಿಯುತ್ತದೆ ಎಂದು ಊಹಿಸುವುದೂ ಕಷ್ಟ. ಒಂದನ್ನು ನೀವು ಗಮನಿಸಿ. ಯಾವ ತರಕಾರಿಯ ಬೆಲೆಯಾದರೂ ಇಳಿಯಬಹುದು, ಆದರೆ ಗಜ್ಜರಿ ಬೆಲೆ ಮಾತ್ರ ಇಳಿಯುವುದಿಲ್ಲ. ಮಕ್ಕಳಿಗಂತೂ ಕ್ಯಾರೆಟ್ ಎಂದರೆ ಪಂಚಪ್ರಾಣ. ಸದಾ ಬೇಡಿಕೆಯಲ್ಲಿರುವ ತರಕಾರಿ ಇದು. ಕೋಸಂಬರಿಗೆ ಬಳಸುವುದರಿಂದ ಭಾರಿ ಡಿಮ್ಯಾಂಡ್ ಇರಬಹುದು ಎಂದುಕೊಳ್ಳಬೇಡಿ. ಸರ್ವರೋಗಗಳಿಗೂ ಕ್ಯಾರೆಟ್ ಮದ್ದು ಎಂದರೂ ತಪ್ಪಲ್ಲ. ಇದರಲ್ಲಿರುವಷ್ಟು ಸತ್ವ ಮತ್ತು ರೋಗನಿರೋಧಕ ಶಕ್ತಿ ಬೇರೆ ಯಾವ ತರಕಾರಿಯಲ್ಲಿಯೂ ಇಲ್ಲ ಎಂದು ನಿಸ್ಸಂದೇಹವಾಗಿ ಹೇಳಬಹುದು.
ಪಾರ್ಶ್ವವಾಯುವನ್ನು ತಡೆಯುವ ಗುಣಗಳೂ ಕ್ಯಾರಟ್‌ನಲ್ಲಿ ಹೇರಳವಾಗಿವೆ. ನಿತ್ಯವೂ ತಿನ್ನಬೇಕು ಎಂದೇನೂ ಇಲ್ಲ. ತಿಂದರೆ ಒಳ್ಳೆಯದು. ವಾರಕ್ಕೆ ನಾಲ್ಕು ದಿನವಾದರೂ ಅಡುಗೆಯಲ್ಲಿ ಗಜ್ಜರಿ ಬಳಕೆ ಪಾರ್ಶ್ವವಾಯುವಿನ ಸಾಧ್ಯತೆಯನ್ನು ದೂರ ಮಾಡುತ್ತದೆ. ತಿಂಗಳಿಗೆ ಒಮ್ಮೆ ಅಥವಾ ಎರಡು ಸಲ ಗಜ್ಜರಿ ತಿನ್ನುವವರಿಗೆ ಹೋಲಿಸಿದರೆ ವಾರದಲ್ಲಿ ನಾಲ್ಕು ದಿನ ಕ್ಯಾರೆಟ್ ತಿಂದವರಲ್ಲಿ ಪಾರ್ಶ್ವವಾಯುವಿನ ಸಾಧ್ಯತೆ ಶೇ 68ರಷ್ಟು ಕಡಿಮೆ ಎನ್ನುವುದನ್ನು ಸಂಶೋಧನೆಗಳು ದೃಢಪಡಿಸಿವೆ. ಹಾರ್ವರ್ಡ್ ವಿಶ್ವವಿದ್ಯಾಲಯದ ತಂಡ ನಿರಂತರ ಎಂಟು ವರ್ಷ ಕಾಲ, 90 ಸಾವಿರ ಮಹಿಳಾ ನರ್ಸ್‌ಗಳನ್ನು ಪ್ರಯೋಗಕ್ಕೆ ಒಳಪಡಿಸಿ ಇದನ್ನು ಖಚಿತಪಡಿಸಿಕೊಂಡಿದೆ. ಕ್ಯಾರೆಟ್ ಮಾತ್ರವಲ್ಲ, ಪಾಲಕ್, ಬಸಳೆಯಂತಹ ಸೊಪ್ಪುಗಳಲ್ಲಿ; ಕೋಸುಗಡ್ಡೆ, ಸಿಹಿಗೆಣಸಿನಂತಹ ತರಕಾರಿಗಳು;  ವಿಟಮಿನ್ ಎ ಅಧಿಕ ಪ್ರಮಾಣದಲ್ಲಿರುವ ತರಕಾರಿಗಳು; ಕುಂಬಳದಂತಹ ಯಾವುದೇ ಗಾಢ ಕಂದು ಬಣ್ಣದ ತರಕಾರಿಗಳಿಂದಲೂ ಪಾರ್ಶ್ವವಾಯುವಿನ ಸಾಧ್ಯತೆಯನ್ನು ಕ್ಷೀಣಿಸಬಹುದು.
ಇಂಥ ತರಕಾರಿಗಳಲ್ಲಿರುವ ಯಾವ ಅಂಶ ಪಾರ್ಶ್ವವಾಯುವನ್ನು ತಡೆಯಬಲ್ಲದು? ವಿಜ್ಞಾನಿಗಳ ಪ್ರಕಾರ, ಇವುಗಳಲ್ಲಿ ಕ್ಯಾರೋಟಿನ್ ಹೇರಳವಾಗಿರುತ್ತದೆ. ಆ್ಯಂಟಿಆಕ್ಸಿಡೆಂಟ್ ಗುಣ ಹೊಂದಿರುತ್ತವೆ. ಇವುಗಳಿಂದ ಆಗುವ ಮಹದುಪಕಾರ ಎಂದರೆ ಕೊಲೆಸ್ಟರಾಲ್ ವಿಷಕಾರಿಯಾಗುವುದನ್ನು ತಪ್ಪಿಸುವ ಮೂಲಕ ರಕ್ತನಾಳಗಳಲ್ಲಿ ರಕ್ತತಟ್ಟೆಗಳು ನಿರ್ಮಾಣವಾಗುವುದನ್ನು ಅಂದರೆ ರಕ್ತ ಹೆಪ್ಪುಗಟ್ಟುವುದನ್ನು ತಡೆಯುವುದನ್ನು ತಡೆಯುತ್ತವೆ. ನಿತ್ಯವೂ 15ರಿಂದ 20 ಮಿಲಿಗ್ರಾಂನಷ್ಟು ಬೀಟಾ ಕ್ಯಾರೋಟಿನ್ ಸೇವಿಸುವುದು ಉತ್ತಮ ಎನ್ನುವುದು ತಜ್ಞರ ಸಲಹೆ.
ಎ ವಿಟಮಿನ್ ಪಾರ್ಶ್ವವಾಯುವಿನಿಂದ ಸಾವು ಸಂಭವಿಸುವುದನ್ನು, ಪಾರ್ಶ್ವವಾಯುವಿಗೆ ತುತ್ತಾದರೂ ಅಂಗಾಂಗಳಿಗೆ ಹಾನಿಯಾಗುವುದನ್ನು ತಡೆಯುವ ಗುಣ ಹೊಂದಿದೆ. ಮೆದುಳಿನಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಅನೇಕ ಚಟುವಟಿಕೆಗಳು ಶುರುವಾಗುತ್ತವೆ.
ವಿಟಮಿನ್ ಎ ಈ ಹಂತಗಳಲ್ಲಿ ತಕ್ಷಣ ಮಧ್ಯಪ್ರವೇಶಿಸಿ ಅನೇಕ ರಾಸಾಯನಿಕ ಪ್ರತಿಕ್ರಿಯೆಗಳಿಗೆ ತಡೆ ಒಡ್ಡುತ್ತದೆ.

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement