ವಧುವಿನ ಲಜ್ಜೆ
ಜಗಳಕ್ಕೆ ಮಾತಾಗುತ್ತೇವೆ. ವ್ಯವಹಾರಕ್ಕೆ ಮಾತು ಬಳಸುತ್ತೇವೆ. ಸಲ್ಲಾಪಕ್ಕೆ, ಶೃಂಗಾರಕ್ಕೆ ಮಾತು ಬಳಸುವುದೆ? ಇಲ್ಲವೇ ಇಲ್ಲವೆಂಬಷ್ಟು ಕಡಿಮೆ. ಇದೇ ನಮ್ಮ ಸಮಸ್ಯೆ. ಕಾಮವೆಂದರೆ ಮಾರು ದೂರ ಹಾರುವ, ಮರೆಯಲ್ಲಿ ಕದ್ದು ಇಣುಕುವ ನಮ್ಮ ಪ್ರವೃತ್ತಿ ವಿದೇಶೀಯರಿಗೆ ಚೋದ್ಯ. ಅವರ ಮುಕ್ತ ಕಾಮ ನಮಗೆ ಅಸ್ವೀಕಾರಾರ್ಹವೆಂದಿಟ್ಟುಕೊಳ್ಳಿ. ಆದರೆ ಮನುಷ್ಯನಿಗೆ ಕಾಮ ಅನಿವಾರ್ಯ. ನಮ್ಮ ಹಿರಿಯರು ನಮಗೆ ಬಿಟ್ಟುಹೋದ ಕಾಮಸೂತ್ರ, ಕೋಕಶಾಸ್ತ್ರ, ಶೃಂಗಾರಶತಕ, ಲಹರಿಗಳೆಲ್ಲ ನಮಗೆ ಯಾವ ಪಾಠ ಕಲಿಸಬೇಕು? ರಸಿಕರಿಗೆ ಗೊತ್ತು. ಇದು ಅಂಥ ಆರೋಗ್ಯಕರ ಸಂವಾದ, ಸಲ್ಲಾಪ, ಶೃಂಗಾರಕ್ಕೆ ಮೀಸಲಾದ ಹೊಸ ಅಂಕಣ.
---
ದಂಪತ್ಯೋರ್ನಿಶಿ
ಜಲ್ಪತೋರ್ಗೃಹಶುಕೇನಾಕರ್ಣಿತಂ ಯದ್
ವಚಸ್ತತ್ಪ್ರಾರ್ಗುರುಸನ್ನಿಧೌ ನಿಗದತಃ ಶ್ರುತ್ವೈವ
ತಾರಂ ವಧೂಃ
ಕರ್ಣಾಲಂಬಿತ ಪದ್ಮರಾಗಶಕಲಂ ವಿನ್ಯಸ್ಯ ಚಂಚ್ವಾಃ ಪುರಾ
ವ್ರೀಡಾರ್ತಾ ಪ್ರಕರೋತಿ ದಾಡಿಮಫಲವ್ಯಾಜೇನ
ವಾಗ್ಬಂಧನಂ
ನವದಂಪತಿ ಕೋಣೆಯಲ್ಲಿ ಪ್ರಣಯನಿರತರಾಗಿದ್ದಾರೆ. ಅವರ ಮಾತುಗಳನ್ನೆಲ್ಲ ಪಂಜರದಲ್ಲಿದ್ದ ಗಿಣಿ ಕೇಳಿಸಿಕೊಂಡಿದೆ. ಇರುಳು ಕಳೆದು ಬೆಳಗಾದ ಮೇಲೆ ಅವೇ ಮಾತುಗಳನ್ನು ಮನೆಯ ಹಿರಿಯರ ಮುಂದೆ ಗಿಣಿ ರಿಪೀಟ್ ಮಾಡುತ್ತಿದೆ. ಇದರಿಂದ ಲಜ್ಜೆಗೊಳಗಾದ ವಧು, ಅರ್ಜೆಂಟಾಗಿ ಗಿಣಿಯ ಬಾಯಲ್ಲಿಡಲು ಏನಾದರೂ ಇದೆಯೋ ಹುಡುಕುತ್ತಾಳೆ. ಸಿಗಬೇಕಲ್ಲ! ಬುದ್ಧಿವಂತೆ, ಕಿವಿಯೋಲೆಯಲ್ಲಿರುವ ಪದ್ಮರಾಗ ಹರಳನ್ನು ದಾಳಿಂಬೆ ಬೀಜವೋ ಎಂಬಂತೆ ಗಿಣಿಯ ಬಾಯಲ್ಲಿ ತುರುಕಿ ಸುಮ್ಮನಾಗಿಸುತ್ತಾಳೆ. ಹಾಗೆ ಹಿರಿಯರ ಮುಂದೆ ನಾಚಿಕೊಳ್ಳುವಂಥ ಯಾವ ಮಾತುಗಳನ್ನು ಅವರು ಆಡಿಕೊಂಡಿರಬಹುದು? ನೀವೇ ಊಹಿಸಿ!
ನವದಂಪತಿಯ ಲಜ್ಜೆಯ ಸ್ವರೂಪವನ್ನು ಅಮರುಕನ ಅಮರುಶತಕದಲ್ಲಿ ಬರುವ ಈ ಸೊಗಸಾದ ಶ್ಲೋಕವು ತೋರುತ್ತದೆ. ಪ್ರಣಯಕೇಳಿಯ ಸಂದರ್ಭ ಅನ್ಯರ್ಯಾರೂ ಇರಬಾರದೆಂಬ ನೀತಿಯನ್ನೂ ಇದು ಹೇಳುತ್ತದೆಯೆ?
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.