ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಅದೊಂದು ಬ್ಲೂಪ್ರಿಂಟ್ ಅಷ್ಟೆ!

Lingaraj Badiger
Updated On : 23 Aug 2013, 6:46 am

ಇನ್ನೂ ಒಂದು ವಿಷಯವೆಂದರೆ, ನಾವು ಎರಡು ವಾಹನ ಎರಡು ಮನೆ ಅಥವಾ ಒಂದೇ ಮನೆಯ ಎರಡು ಕೋಣೆಯನ್ನು ಉಪಯೋಗಿಸಲು, ಅನುಭವಿಸಲು ಸಾಧ್ಯವಿಲ್ಲ. ನಾವು ಯಾವುದನ್ನು ಅನುಭವಿಸುವುದಿಲ್ಲವೋ ಆ ಕ್ಷಣದಲ್ಲಿ ಅದು ನಮ್ಮದಲ್ಲ, ಅದೊಂದು ಕನಸಿನಂತೆ, ಬ್ಲೂ ಪ್ರಿಂಟ್‌ನಂತೆ. ಕನಸಾಗಲೀ, ಕಲ್ಪನೆಯಾಗಲೀ, ಯೋಚನೆಯಾಗಲೀ ಸಂಪೂರ್ಣ ನಮ್ಮದಾಗಲು ಸಾಧ್ಯವಿದ್ದಿದ್ದರೆ, ಪ್ರತಿಯೊಬ್ಬನೂ ತಾನು ಏನಾಗಬೇಕು, ಹೇಗೆ ಬದುಕಬೇಕು, ಏನನ್ನು ಪಡೆಯಬೇಕು ಎಂದು ಬಯಸಿದ್ದನೋ ಅದೆಲ್ಲವನ್ನೂ ಪಡೆಯುತ್ತಿದ್ದ. ಹಾಗಾದರೆ ನಾವು ಯಾವುದನ್ನು ಉಪಯೋಗಿಸಿ ಅನುಭವಿಸುವುದಿಲ್ಲವೋ ಅವೆಲ್ಲವೂ ನಮ್ಮ ತಲೆಯಲ್ಲಿ ಸುಳಿದಾಡುವ ಒಂದು 'ಬ್ಲೂ ಪ್ರಿಂಟ್‌' ಅಷ್ಟೇ.

ನಮಗೆ ಯಾವುದರ ಅರಿವೂ ಆಗದಿರುವ ಸ್ಥಿತಿಯನ್ನು ಪ್ರಜ್ಞಾಹೀನ ಸ್ಥಿತಿ ಎಂದು ಹೇಳುತ್ತೇವೆ. ಈ ಸ್ಥಿತಿಯಲ್ಲಿ ಮನುಷ್ಯನಿಗೆ ಸುತ್ತಮುತ್ತಲಿನ ಆಗುಹೋಗುಗಳಷ್ಟೇ ಅಲ್ಲ, ಸ್ವತಃ ತನ್ನ ದೈಹಿಕ ಸ್ಥಿತಿಯ ಅರಿವೂ ಇರುವುದಿಲ್ಲ. ಅಂತಹ ಸ್ಥಿತಿಯಲ್ಲಿ ಬದುಕಿಯೂ ಪ್ರಯೋಜನವಿಲ್ಲ. ಆದ್ದರಿಂದಲೇ ಪ್ರಜ್ಞೆ ತಪ್ಪಿದವರನ್ನು ಪುನಃ ಎಚ್ಚೆತ್ತುಕೊಳ್ಳುವಂತೆ ಮಾಡಲು ಸಕಲ ವಿಧಿ-ವಿಧಾನಗಳನ್ನೂ ಉಪಯೋಗಿಸಲಾಗುತ್ತದೆ. ಪ್ರಜ್ಞಾವಸ್ಥೆಯನ್ನು ನಾಲ್ಕು ಭಾಗವಾಗಿ ವಿಂಗಡಿಸಲಾಗಿದೆ. ಅವುಗಳಲ್ಲಿ ಮೊದಲನೆಯದು ಜಾಗೃತ ಅವಸ್ಥೆ ಅಥವಾ ಎಚ್ಚರವಾಗಿರುವುದು. ಎರಡನೆಯದು ನಿದ್ರಾವಸ್ಥೆ, ಮೂರನೆಯದು ಸ್ವಪ್ನಾವಸ್ಥೆ ಮತ್ತು ನಾಲ್ಕನೆಯದಾಗಿ ತುರೀಯ (ಖ್ಡ್ಠ್ಝಿಣಛ)- ಮೊದಲನೆಯ ಮೂರನ್ನು ಮೀರಿ ಇರುವಂತಹದ್ದು. ಸಾಮಾನ್ಯ ಜನರಲ್ಲಿ ಮೊದಲನೆಯ ಮೂರು ಸ್ಥಿತಿಯನ್ನು ಮಾತ್ರ ಕಾಣಬಹುದು. ಅದರಲ್ಲಿ ನಿದ್ರಾವಸ್ಥೆ ಮತ್ತು ಸ್ವಪ್ನಾವಸ್ಥೆಯಲ್ಲಿ ನಮಗೆ ಯಾವುದೇ ವಸ್ತುವಿನದ್ದಾಗಲೀ, ಆಗು ಹೋಗುಗಳ ಅನುಭವವಾಗಲೀ, ವಿಷಯದ ಅರಿವಾಗಲೀ ಆಗುವುದಿಲ್ಲ. ಪ್ರಾಪಂಚಿಕ ವಿಷಯವನ್ನಾಗಲೀ ಅಥವಾ ದೈಹಿಕ ಬದಲಾವಣೆಯನ್ನಾಗಲೀ ಗಮನಿಸಲು ನಾವು ಜಾಗೃತಾವಸ್ಥೆಯಲ್ಲಿಯೇ ಇರಬೇಕಾಗುತ್ತದೆಯೇ ವಿನಾ ಉಳಿದೆರಡು ಸ್ಥಿತಿಗಳು ನಮ್ಮಲ್ಲಿ ಅರಿವು ಮೂಡಿಸಲು, ಅನುಭವ ನೀಡಲು ಸಫಲವಾಗುವುದಿಲ್ಲ.
ನಿದ್ರೆ ಮತ್ತು ಸ್ವಪ್ನಾವಸ್ಥೆಯಲ್ಲಿರುವಾಗ ನಾವು ನಮ್ಮ ಸುಖ-ದುಃಖ, ಹಣ, ವ್ಯಕ್ತಿತ್ವ, ಅಹಂಕಾರ, ತಾಪತ್ರಯ, ಸ್ಥಾನ, ಸ್ವಾಭಿಮಾನ, ಪ್ರೀತಿ, ಮಮತೆ ಎಲ್ಲವನ್ನೂ ಮರೆಯುತ್ತೇವೆ. ಸುಂದರವಾದ ಮನೆ, ಸುಸಜ್ಜಿತವಾದ ಕೋಣೆ, ಮೆತ್ತನೆಯ ಹಾಸಿಗೆ, ಬೆಲೆಬಾಳುವ ಮಂಚ ಅಷ್ಟೇ ಅಲ್ಲ, ಅದರ ಮೇಲೆ ಪವಡಿಸಿದ ನಮ್ಮ ದೇಹವನ್ನೂ ಮರೆಯುತ್ತೇವೆ. ಲೋಕದ ಆಗು-ಹೋಗುಗಳು, ಸುತ್ತಮುತ್ತಲಿನ ವಸ್ತುಗಳು, ನಮ್ಮ ಮೇಲೆ ಯಾವುದೇ ರೀತಿಯ ಪ್ರಭಾವ ಬೀರದೇ ಇರುವುದರಿಂದ ಈ ಅವಸ್ಥೆಯನ್ನು ಪ್ರಜ್ಞಾಹೀನ ಸ್ಥಿತಿಗೆ ಹೋಲಿಸಬಹುದು.

- ಕಿರಣ್ ಉಪಾಧ್ಯಾಯ
 keyrun1970@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement