ಜಾತಿ ಮತ ಮೀರಿನಿಂತ ಸಂತ!
ಸ್ವಾಮಿ ವಿವೇಕಾನಂದರು ಪರಿವ್ರಾಜಕರಾಗಿ ದಿಲ್ಲಿಯಿಂದ ರಜಪೂತರ್ ಅಲ್ವರ್ಗೆ ಬಂದರು. ವೀರ ಸೇನಾನಿಗಳ ನಾಡು, ಹಸಿರು ಹೊಲಗದ್ದೆಗಳ ಬೀಡು, ಸುಂದರ ನಗರದ ಸಾಲುಮನೆಗಳು, ಉದ್ಯಾನಗಳು ಸ್ವಾಮೀಜಿಗೆ ಆಹ್ಲಾದ ನೀಡಿದವು. ಅನಿರೀಕ್ಷಿತವಾಗಿ ಭೇಟಿಯಾದ ಡಾಕ್ಟರ್ ಗುರುಚರಣ ಲಸ್ಕರ್ ಸ್ವಾಮೀಜಿಯ ಪ್ರಭಾವಕ್ಕೆ ಒಳಗಾದರು. ಅವರ ವಾಗ್ಝರಿಗೆ, ಪ್ರಕಾಂಡ ಪಾಂಡಿತ್ಯಕ್ಕೆ ಮಾರುಹೋದರು. ಇದೇ ರೀತಿ ಜಾತಿ, ವರ್ಗ, ವರ್ಣ, ಮತಭೇದವಿಲ್ಲದೆ ನಾನಾ ಬಗೆಯ ಜನರು ಸ್ವಾಮೀಜಿಯನ್ನು ಬಂದು ಸೇರತೊಡಗಿದರು. ಅವರ ಅಪರಿಮಿತ ಜ್ಞಾನಶಕ್ತಿಯ ಪ್ರಭಾವಕ್ಕೆ ಒಳಗಾದರು. ಜನರು ಕೇಳುತ್ತಿದ್ದ ಪ್ರಶ್ನೆಗಳಿಗೆ ಸ್ವಾಮೀಜಿ ನೀಡುತ್ತಿದ್ದ ಉತ್ತರ, ಜನರನ್ನು ಮೂಕವಿಸ್ಮಿತಗೊಳಿಸಿದರೆ, ಅವರ ಗಾನಸುಧೆ ಜನರನ್ನು ಭಕ್ತಿಸಾಗರದಲ್ಲಿ ಮುಳುಗಿಸುತ್ತಿತ್ತು. ಇಡೀ ವಾತಾವರಣವನ್ನು ಸ್ವಾಮೀಜಿಯ ಆಧ್ಯಾತ್ಮಿಕ ಶಕ್ತಿ ಆವರಿಸಿಬಿಟ್ಟಿತ್ತು.
ಒಮ್ಮೆ ಮೌಲ್ವಿಸಾಹೇಬ ಸ್ವಾಮೀಜಿಯನ್ನು ತನ್ನ ಮನೆಗೆ ಆಹ್ವಾನಿಸಿದ. ಸ್ವಾಮೀಜಿ ಇದಕ್ಕೆ ಒಪ್ಪದಿರಬಹುದು, ತನ್ನ ಮನೆಯಲ್ಲಿ ಅವರು ಊಟ ಮಾಡದಿರಬಹುದು ಎಂಬ ಮೌಲ್ವಿಯ ಅನುಮಾನ ನಿಜವಾಗ ಲಿಲ್ಲ. ಸ್ವಾಮೀಜಿ ಮೌಲ್ವಿ ಮನೆಗೆ ಬಂದು ಊಟ ಮಾಡಿದರು. ಇದರಿಂದ ಉತ್ಸಾಹಿತರಾದ ಅನೇಕ ಮುಸ್ಲಿಂ ಭಕ್ತರು ಸ್ವಾಮೀಜಿಯನ್ನು ತಮ್ಮ ಮನೆಗಳಿಗೆ ಆಹ್ವಾನಿಸಿ ಧನ್ಯರಾದರು. ಸ್ವಾಮೀಜಿ ವಿಶ್ವಮಾನವ ತತ್ವವನ್ನು ಸಾರುವ ಮುನ್ನ ನಡೆದು ತೋರಿಸಿದರು.
- ಆನಂದ ಎಸ್.ಎನ್.
anandsn193@gmail.com