ಮನಸೆಂಬ ಗೃಹಕ್ಕೆ ಬೇಕು
ಇಂದಿನ ಯಾಂತ್ರಿಕ ವೇಗದ ಜೀವನದಲ್ಲಿ, ಮನುಷ್ಯನು ಸುಖ ಶಾಂತಿ ಬಯಸಿ, ತನ್ನ ಆಸೆ, ನಿರೀಕ್ಷೆಗಳು ಬೇಗನೇ ಈಡೇರಬೇಕೆಂದು ವಾಸ್ತುವಿನ ಮೊರೆ ಹೋಗುತ್ತಿದ್ದಾನೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ನುಡಿದಂತೆ, 'ನಮ್ಮ ಜೀವನದ ಸುಖ ದುಃಖಗಳೆಲ್ಲವೂ, ಕರ್ಮಸಿದ್ಧಾಂತದ ಮೇಲೆ ಆಧಾರವಾಗಿದೆ. ಅಂದರೆ ನಾವು ಮಾಡುವ ಒಳ್ಳೆಯ ಕಾರ್ಯಗಳು ಒಳ್ಳೆಯ ಫಲ ಕೊಡುತ್ತವೆ. ಕೆಟ್ಟದ್ದನ್ನು ಮಾಡಿದರೆ ಕೆಡುಕಾಗುತ್ತದೆ' ಇದು ಪ್ರಮಾಣಿತ ಮೂಲ ಸಿದ್ಧಾಂತ. ವಾಸ್ತುಶಾಸ್ತ್ರಕ್ಕೆ ಅನುಗುಣವಾಗಿ ಮನೆ ಕಟ್ಟಿಸಿ, ಮಾಡಬಾರದ ಕೆಲಸಗಳನ್ನು ಮಾಡುತ್ತಿದ್ದರೆ, ವಾಸ್ತು ಏನು ಮಾಡುತ್ತದೆ. ಅತಿಯಾದ ಬಯಕೆಗಳಿಗೆ ಕಡಿವಾಣ ಹಾಕಿ, ಇದ್ದುದರಲ್ಲಿಯೇ ತೃಪ್ತಿಯನ್ನು ಕಾಣುವ ಪ್ರಾಮಾಣಿಕ ವ್ಯಕ್ತಿಗೆ ವಾಸ್ತು ಬೇಕಾಗಿಲ್ಲ. ನಿಜವಾಗಿಯೂ ವಾಸ್ತು ಬೇಕಾಗಿರುವುದು ನಮ್ಮ ಮನಸೆಂಬ ಗೃಹಕ್ಕೆ. ವಾಸ್ತು ಅನುಸರಿಸಿದರೆ ಎಲ್ಲವೂ ಸರಿಯಾಗುತ್ತದೆ ಎಂಬುವುದಕ್ಕೆ ಪ್ರಮಾಣವಿಲ್ಲ. ವಾಸ್ತವಿಕತೆಯನ್ನು ಅರ್ಥ ಮಾಡಿಕೊಂಡು ನಡೆಯುವವನಿಗೆ ವಾಸ್ತುವಿನ ಅಗತ್ಯತೆ ಇಲ್ಲ ಎನ್ನಬಹುದು.
- ಅಚ್ಯುತ ಅಕ್ಕಿಹೊಳಿ, ಹುಬ್ಬಳ್ಳಿ
ವಾಸ್ತು ಸುಸ್ತು
ವಾಸ್ತು ನಿನ್ನ ನಂಬಿದರೆ
ನಾವು ಆಗುತ್ತೇವೆ ಸುಸ್ತು
ಎಲ್ಲಾ ಸರಿಯಾದರೆ ಮಸ್ತು
ಇಲ್ಲವಾದರೆ ಬೀಳುತ್ತೇವೆ ಬೇಸ್ತು
ಇತ್ತೀಚೆಗೆ ಹೆಚ್ಚುತ್ತಿದೆ
ನಿನಗೆ ಭಾರಿ ಬೆಲೆ
ನಿನ್ನೇ ನಂಬಿದರೆ ಇಲ್ಲಾ ನೆಲೆ
ನಂಬಿಸುವುದು ಒಂದು ಕಲೆ
ಅತಿಯಾದರೆ ಕೆಡುವುದು ತಲೆ
ವಾಸ್ತು ಬೇಕೆನ್ನುವರು ಹಲವರು
ನಂಬದೇ ಇರುವವರು ಕೆಲವರು
ಹೇಳಲು ಕಲಿತಿರುವವರು ನೂರಾರು
ಖರ್ಚಾಗುತ್ತಿದೆ ಹಣ ಸಾವಿರಾರು
ವಾಸ್ತಿ ಬಾಡಿಗೆ ಮನೆಗೆ ಬೇಕೇ?
ಸ್ವಂತ ಮನೆಗೆ ಮಾತ್ರ ಸಾಕೇ?
ರಾಜಕಾರಣಿಗಳಿಗೂ ತಟ್ಟಿದೆ ವಾಸ್ತು ಸೆಖೆ
ಬದಲಾಗುತ್ತಿಹರು ಕಾಲ ಕಾಲಕ್ಕೆ
ಉರುಳುತ್ತಿವೆ ಕಟ್ಟಡ ನೆಲಕ್ಕೆ
ಸರಿಯಿಲ್ಲವೆಂದು ವಾಸ್ತು ದೋಷಕ್ಕೆ
ಹೋಮ ಶಾಂತಿಗಳು ಇಲ್ಲಾ ಲೆಕ್ಕಕ್ಕೆ
ಸಾಮಾನ್ಯ ಜನರಿಗೆ ವಾಸ್ತು ಬೇಕೇ?
- ಗೀತ ಪಲ್ಲೇದ, ಬೆಂಗಳೂರು