ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಹೆಂಡತಿ ಮಗಳನ್ನು ಕೊಂದ ವೈದ್ಯ!

Lingaraj Badiger
Updated On : 23 Aug 2013, 6:45 am

ಅದು ಹಾಸನ ಜಿಲ್ಲೆಯ ಒಂದು ಕುಗ್ರಾಮ. ಗಂಡ ತೀರಿಕೊಂಡ ಕಾರಣ ಸುಶೀಲಮ್ಮ ಒಬ್ಬ ಮಗನನ್ನು ಮುತುವರ್ಜಿಯಿಂದ ಸಾಕಿ ವೈದ್ಯಕೀಯ ಶಿಕ್ಷಣ ಕೊಡಿಸಿದರು. ಓದಿನಲ್ಲಿ ಚುರುಕಿದ್ದ ಮಹೇಶ್ ವೈದ್ಯಕೀಯ ಪದವಿ ಪಡೆಯುತ್ತಲೇ ಭಾರತೀಯ ಸೇನೆಯಲ್ಲಿ ಕೆಲಸ ನಿರ್ವಹಿಸುವ ಇಚ್ಛೆ ವ್ಯಕ್ತಪಡಿಸಿದ. ತಾಯಿ ಮತ್ತು ತಂಗಿ ರತ್ನ ಒಪ್ಪಿ ಸೇನೆ ಸೇರುವಂತೆ ಪ್ರೋತ್ಸಾಹಿಸಿದರು. ಪರಿಣಾಮ ಭಾರತೀಯ ಸೇನೆಯಲ್ಲಿ ಮಹೇಶ ವೈದ್ಯನಾಗಿ ಆಯ್ಕೆಯಾಗಿ ಪಂಜಾಬ್‌ಗೆ ಹೊರಟ.

ಸೇನೆ ಸೇರಿದ ಮಗ ಉತ್ತಮ ಸೇವೆ ಸಲ್ಲಿತ್ತಿದ್ದಾನೆ ಎಂಬ ಸುದ್ದಿ ತಿಳಿದು ಹಿರಿಹಿರಿ ಹಿಗ್ಗಿದಳು ಸುಶೀಲಮ್ಮ. ವಯಸ್ಸಿಗೆ ಬಂದ ಮಗನಿಗೆ ಮದುವೆ ಮಾಡಿ ಮುಗಿಸಿದರೆ ನಂತರ ಇರುವ ಒಬ್ಬಳೇ ಮಗಳಿಗೆ ಮದುವೆ ಮಾಡಿ ಅಳಿಯನನ್ನು ಮನೆಯಲ್ಲೇ ಇರಿಸಿಕೊಳ್ಳುವ ಆಸೆ. ಹಾಗಾಗಿಯೇ ತಮ್ಮ ಸಂಬಂಧಿಕರ ಮನೆಯಲ್ಲಿ ಒಂದು ಹೆಣ್ಣನ್ನು ನೋಡಿ ರಜೆಯಲ್ಲಿ ಮನೆಗೆ ಬಂದ ಮಗನಿಗೆ ವಿಷಯ ತಿಳಿಸಿದಳು. ಆದರೆ ಆತ ತಾನು ಇನ್ನೂ ಸೈನ್ಯಕ್ಕೆ ಸೇರಿ ಐದು ವರ್ಷ ಮಾತ್ರ ಆಗಿದೆ. ಇನ್ನು ಎರಡು ವರ್ಷ ಕಳೆದ ಮೇಲೆ ಮದುವೆ ಆಗುವುದಾಗಿ ಮತ್ತು ಕೆಲಸಕ್ಕೆ ರಾಜಿನಾಮೆ ನೀಡಿ ಬಂದು ಹಾಸನದಲ್ಲೇ ಆಸ್ಪತ್ರೆ ತೆಗೆಯುವುದಾಗಿ ಹೇಳಿದ.
ಪ್ರತಿ ಬಾರಿ ರಜೆಯಲ್ಲಿ ತಪ್ಪದೆ ಮನೆಗೆ ಬರುತ್ತಿದ್ದ ಮಗ ಮದುವೆ ವಿಚಾರ ಪ್ರಸ್ತಾಪಿಸಿದ ನಂತರ ಮನೆಗೆ ಬರುವುದು ಕಡಿಮೆಯಾಯಿತು. ಕೆಲಸದ ಒತ್ತಡದಿಂದ ಬರದಿರಬಹುದು ಎಂದೇ ಸುಶೀಲಮ್ಮ ಭಾವಿಸಿದ್ದರು. ಮಗ ಒಂದು ವರ್ಷವಾದರೂ ಬರಲಿಲ್ಲ. ತಾಯಿ ಫೋನ್ ಮಾಡಿ ವಾರ್ಷಿಕ ರಜೆಗಳಲ್ಲೂ ಮನೆಗೆ ಬರುತ್ತಿಲ್ಲ ಯಾಕೆ ಎಂದು ಪದೇ ಪದೆ ಕೇಳತೊಡಗಿದಳು. ಅದಕ್ಕೆ ಆತ ಸಮರ್ಪಕ ಉತ್ತರ ನೀಡಲಿಲ್ಲ. ಅದೊಂದು ದಿನ ಗಾಬರಿಯಿಂದ ಮನೆಗೆ ಬಂದ ಮಹೇಶ ದೊಡ್ಡ ಗಾತ್ರದ ಒಂದು ಬ್ಯಾಗ್ ಹೊತ್ತು ತಂದು ಮನೆಯಲ್ಲಿ ಅಟ್ಟದ ಮೇಲಿಟ್ಟ. ಅದು ತನ್ನ ವೃತ್ತಿಗೆ ಸಂಬಂಧಿಸಿದ ರಹಸ್ಯವಿರುವ ಬ್ಯಾಗೆಂದೂ ಅದನ್ನು ಯಾವುದೇ ಕಾರಣಕ್ಕೆ ತೆಗೆದು ನೋಡಬಾರದೆಂದು ತಾಯಿ ಮತ್ತು ತಂಗಿಗೆ ಎಚ್ಚರಿಸಿದ. ಕಳೆದ ಒಂದು ವರ್ಷದಿಂದ ಬಾರದಿದ್ದ ಮಗ ಏನೋ ರಹಸ್ಯ ಬ್ಯಾಗ್ ತಂದಿರುವುದು ಸುಶೀಲಮ್ಮ ಮತ್ತು ಮಗಳು ರತ್ನಾಳಿಗೆ ಅರ್ಥವಾಗಲಿಲ್ಲ.
ಪ್ರತಿ ಬಾರಿ ರಜೆಯಲ್ಲಿ ಬಂದಾಗ ಒಂದು ತಿಂಗಳು ಮನೆಯಲ್ಲಿರುತ್ತಿದ್ದ ಮಗ ಒಂದು ವರ್ಷದ ನಂತರ ಅಪರೂಪಕ್ಕೆ ಬಂದು ಎರಡೇ ದಿನದಲ್ಲಿ ಕೆಲಸಕ್ಕೆ ಹಾಜರಾಗಬೇಕು ಎಂದು ಹೊರಟು ನಿಂತ. ಮಗನ ಕೆಲಸದ ಮೇಲಿನ ಆಸಕ್ತಿ ಕಂಡು ಸುಶೀಲಮ್ಮ ತಡೆಯುವ ಪ್ರಯತ್ನ ಮಾಡಲಿಲ್ಲ. ಅಂದು ಮನೆಯಿಂದ ಹೊರಟ ಡಾ. ಮಹೇಶ್ ಮತ್ತೆ ಮನೆಗೆ ವಾಪಸ್ ಆಗಲಿಲ್ಲ. ಬದಲಿಗೆ ಮಹೇಶನನ್ನು ಹುಡುಕಿಕೊಂಡು ಪೊಲೀಸರು ಬಂದರು!

ಪೊಲೀಸರು ಬಂದು ಡಾ.ಮಹೇಶ್ ಬಗ್ಗೆ ವಿಚಾರಿಸಿದಾಗ ಮನೆಯಲ್ಲಿ ಗಂಡು ದಿಕ್ಕಿಲ್ಲದ ಸಂಸಾರದ ನೊಗ ಹೊತ್ತಿದ್ದ ಸುಶೀಲಮ್ಮನಿಗೆ ಹೆದರಿಕೆಯಾಗದಿರಲಿಲ್ಲ. ಆದರೆ ಮಗ ಸೈನ್ಯದಲ್ಲಿ ಉನ್ನತ ಹುದ್ದೆಯಲ್ಲಿರುವ ಕಾರಣ ಸಾವರಿಸಿಕೊಂಡೇ ಅವರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದರು. ಅಟ್ಟದ ಮೇಲಿರುವ ಪೆಟ್ಟಿಗೆ ವಿಷಯ ಹೊರತುಪಡಿಸಿ. ಪೆಟ್ಟಿಗೆಯಲ್ಲಿ ಏನಿದೆ ಎಂಬುದನ್ನೂ ಅವರು ನೋಡಿರಲಿಲ್ಲ. ಮಗನನ್ನು ಹುಡುಕಿಕೊಂಡು ಪೊಲೀಸರು ಬರಲು ಕಾರಣವೇನು ಎಂಬುದು ತಾಯಿ ಮಗಳನ್ನು ಕಾಡುತ್ತಲೇ ಇತ್ತು.
ರಾತ್ರಿ ಮಲಗುವ ಮೊದಲು ತಾಯಿ ಮಗಳು ಪೆಟ್ಟಿಗೆಯ ಬಗ್ಗೆ ಚರ್ಚೆ ಮಾಡಿದರು. ತಂದಿಟ್ಟು ಹೋದಾಗಲಿಂದ ಆತ ವಾಪಸ್ ಬಂದಿಲ್ಲ. ಇಂದು ಪೊಲೀಸರು ಹುಡುಕಿಕೊಂಡು ಬಂದಿದ್ದಾರೆ. ಪರಿಶೀಲನೆ ಮಾಡಿ ಅದನ್ನು ಅಲ್ಲಿಯೇ ಇಟ್ಟರೆ ಆಯಿತು ಎಂದು ಮಾತನಾಡಿಕೊಂಡು ಅಟ್ಟದ ಮೇಲಿದ್ದ ಪೆಟ್ಟಿಗೆಯನ್ನು ಇಳಿಸಿ ಬಾಗಿಲು ತೆಗೆದು ನೋಡಿದರು.
ಅದರಲ್ಲಿ ಹೆಂಗಸರ ಮತ್ತು ಮಕ್ಕಳ ಬಟ್ಟೆ ಇತ್ತು. ಜೊತೆಗೆ ತಾಳಿಸರ ಸೇರಿದಂತೆ ಮಹಿಳೆಯ ಒಡವೆಗಳೂ ಇದ್ದವು. ಇನ್ನೂ ಮದುವೆಯಾಗದ ತಮ್ಮ ಮಗನಿಗೆ ಹೆಂಗಸರ ಒಡವೆ ಮತ್ತು ಬಟ್ಟೆ ಏಕೆ ಎಂಬ ಚರ್ಚೆಯಲ್ಲಿ ತಾಯಿ ಮಗಳು ಇರಬೇಕಾದರೆ ಬಾಗಿಲು ಬಡಿದ ಶಬ್ದವಾಯಿತು. ಬೆಚ್ಚಿ ಬಿದ್ದ ತಾಯಿ ಮಗಳು ಪೆಟ್ಟಿಗೆಯನ್ನು ಯಥಾಸ್ಥಾನ ಸೇರಿಸಿ ಬಾಗಿಲು ತೆಗೆದರೆ ಬಾಗಿಲಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ನಿಂತಿದ್ದರು. ಬೆಳಗ್ಗೆ ಅವರ ಅಮಾಯಕ ಉತ್ತರದಿಂದ ಅನುಮಾನಗೊಂಡಿದ್ದ ಪೊಲೀಸ್ ಅಧಿಕಾರಿ ಮಾರುವೇಷದಲ್ಲಿ ಅವರ ಮನೆಯ ಬಳಿಯೇ ಇದ್ದ. ಇದನ್ನು ಅರಿಯದ ತಾಯಿ ಮಗಳು ಪೆಟ್ಟಿಗೆ ಪರಿಶೀಲನೆ ಮಾಡಿದ್ದರು. ಕೂಡಲೇ ಒಳಗೆ ಬಂದ ಪೊಲೀಸ್ ಅಧಿಕಾರಿ ಪೆಟ್ಟಿಗೆಯನ್ನು ವಶಕ್ಕೆ ಪಡೆದು ತಾಯಿ ಮಗಳಿಂದ ಪಂಚನಾಮೆ ಮೇಲೆ ಸಹಿ ಮಾಡಿಸಿಕೊಂಡು ಹೊರಟುಹೋದರು. ಮಗನನ್ನು ಹುಡುಕಿಕೊಂಡು ಪೊಲೀಸರು ಬಂದಿದ್ಯಾಕೆ, ಮಗ ತಂದಿಟ್ಟಿರುವ ಪೆಟ್ಟಿಗೆಯಲ್ಲಿರುವ ಹೆಂಗಸರ ಬಟ್ಟೆಗಳು ಯಾರದು, ಅದನ್ನು ಪೊಲೀಸರು ಯಾಕೆ ವಶಪಡಿಸಿಕೊಂಡರು ಎಂಬ ಪ್ರಶ್ನೆಗಳಿಗೆ ಉತ್ತರ ದೊರೆಯದೆ ತಾಯಿ ಮಗಳಿಬ್ಬರೂ ಚಿಂತೆಯಲ್ಲೇ ಮಗ್ನರಾಗಿದ್ದರು. ಹೀಗಿರುವಾಗಲೇ ಮಹೇಶನನ್ನು ಸೇನೆ ಬಂಧಿಸಿ ಕೋರ್ಟ್ ಮಾರ್ಷಲ್‌ಗೆ ಒಳಪಡಿಸಿತು. ಆಗ ಮಹೇಶನ ಬಾಯಿಂದ ಹೊರ ಬಂದ ಸತ್ಯಗಳು ಬೆಚ್ಚಿ ಬೀಳಿಸುವಂತಿತ್ತು.

ಸೇನೆಯಲ್ಲಿ ವೈದ್ಯನಾಗಿದ್ದ ಮಹೇಶ್‌ಗೆ ಹಿರಿಯ ಅಧಿಕಾರಿಯಾಗಿದ್ದ ಜನರಲ್ ಒಬ್ಬರು ಪರಿಚಯವಾದರು. ಆತನಿಗೆ ಒಬ್ಬಳೇ ಮಗಳು. ಯಾವುದೇ ದುರಭ್ಯಾಸಗಳಿಲ್ಲದ ಸೌಮ್ಯ ಸ್ವಭಾವದ ಮಹೇಶ್‌ಗೆ ತನ್ನ ಮಗಳನ್ನು ನೀಡುವ ಇಂಗಿತವನ್ನು ಜನರಲ್ ವ್ಯಕ್ತಪಡಿಸಿದರು. ಜತೆಗೆ ಹಿರಿಯರನ್ನು ಕರೆತಂದು ಮದುವೆ ಮುಹೂರ್ತ ನಿಗದಿ ಮಾಡುವಂತೆ ಕೋರಿದರು. ಒಪ್ಪಿದ ಮಹೇಶ್ ತಾನೊಬ್ಬ ಅನಾಥನಾಗಿದ್ದು ಹಿರಿಯರು ಯಾರೂ ಇಲ್ಲ ಎಂದ. ಇದಕ್ಕೆ ಕಾರಣ ಜಾತಿಯ ವಿಷಯದಲ್ಲಿ ತಾಯಿ ಮದುವೆಗೆ ವಿರೋಧ ವ್ಯಕ್ತಪಡಿಸುತ್ತಾರೆ ಎಂಬುದಾಗಿತ್ತು.

ಇದರಿಂದ ಜನರಲ್‌ಗೆ ಖುಷಿಯೇ ಆಯಿತು. ಕಾರಣ ಬಂಧುಗಳಿಲ್ಲದ ಮಹೇಶ್ ತನ್ನ ಬಳಿಯೇ ಇರುತ್ತಾನೆ ಎಂಬ ನಂಬಿಕೆ. ಮಗಳನ್ನು ಕೊಟ್ಟು ಮದುವೆ ಮಾಡಿದರು. ಮಹೇಶ್ ಎರಡು ವರ್ಷ ಕಾಲ ಅನ್ಯೋನ್ಯವಾಗಿಯೇ ಸಂಸಾರ ಮಾಡಿದ. ಆದರೆ ಒಂದು ಹೆಣ್ಣು ಮಗು ಹುಟ್ಟಿದ ನಂತರ ಆತನಲ್ಲಿ ಬದಲಾವಣೆ ಕಾಣಿಸತೊಡಗಿತು. ಹೆಂಡತಿ ಜೊತೆ ಪದೇ ಪದೆ ಜಗಳವಾಗತೊಡಗಿತು. ಇದು ಮಹೇಶನ ಮಾವನ ಗಮನಕ್ಕೂ ಬಂತು. ಗಂಡನನ್ನು ಬಿಟ್ಟು ಮನೆಗೆ ಬಂದ ಮಗಳಿಗೆ ಮತ್ತು ಅಳಿಯನಿಗೆ ಬುದ್ಧಿ ಹೇಳಿ ರಾಜಿ ಮಾಡಿಸಲಾಯಿತು.
ಇದು ಹೀಗೆ ಮುಂದುವರೆದಿರುವಾಗಲೇ ಮಹೇಶ್ ತನ್ನ ಹೆಂಡತಿಗೆ ನಿಜ ಹೇಳಿದ್ದ. ತಾನು ಅನಾಥನಲ್ಲವೆಂದೂ ತನಗೆ ತಾಯಿ ಮತ್ತು ತಂಗಿ ಇರುವುದಾಗಿ ಹೇಳಿದ್ದ. ಅಷ್ಟೇ ಅಲ್ಲ ಈ ಮದುವೆಗೆ ತಾಯಿ ಜಾತಿ ಕಾರಣವೊಡ್ಡಿ ವಿರೋಧಿಸುತ್ತಾಳೆಂದೂ ಹೇಳಿದ್ದ. ಮಹೇಶನ ಹೆಂಡತಿ ಕೂಡಲೇ ಊರಿಗೆ ಹೋಗೋಣವೆಂದೂ, ತಾನೇ ಕಾಲ ಮೇಲೆ ಬಿದ್ದು ಅತ್ತೆಯನ್ನು ಒಪ್ಪಿಸುವುದಾಗಿಯೂ ಹೇಳಿದಳು. ಆದರೆ ಮಹೇಶ್ ತೀವ್ರ ವಿರೋಧ ವ್ಯಕ್ತಪಡಿಸಿದ.
ಹೀಗಿರುವಾಗಲೇ ಗಂಡ ಹೆಂಡಿರ ಜಗಳ ವಿಕೋಪಕ್ಕೆ ತಿರುಗಿ ಹೆಂಡತಿ ತವರು ಸೇರಿದ್ದಳು. ಮತ್ತೆ ರಾಜಿ ಮಾಡಿಸುವ ಕೆಲಸ ನಡೆದಿತ್ತು. ಮಹೇಶ್ ಹೆಂಡತಿಯನ್ನು ಮನೆಗೆ ಕರೆದೊಯ್ಯುವುದಕ್ಕೆ ಒಪ್ಪಿಕೊಂಡಿದ್ದ. ಒಂದು ವರ್ಷದ ಮಗುವಿನೊಂದಿಗೆ ಗಂಡ ಹೆಂಡತಿ ಪಂಜಾಬಿನಿಂದ ಹೊರಟು ಹೈದರಾಬಾದ್ ಸೇರಿದರು. ಇಲ್ಲಿಗೆ ಬಂದಿದ್ದು ಯಾಕೆ ಎಂಬ ಹೆಂಡತಿ ಪ್ರಶ್ನೆಗೆ, ಪ್ರವಾಸ ಮುಗಿಸಿಕೊಂಡು ಮನೆಗೆ ಹೋಗೋಣ ಎಂದು ಹೇಳಿದ್ದ.

ಹೈದರಾಬಾದಿನ ಲಾಡ್ಜ್‌ವೊಂದರಲ್ಲಿ ರೂಮ್ ಮಾಡಿ ದಿನವಿಡೀ ನಗರ ತಿರುಗಿದರು. ರಾತ್ರಿ ಲಾಡ್ಜ್ ಸೇರಿದರು. ಮೊದಲೇ ಪ್ಲಾನ್ ಮಾಡಿಕೊಂಡಿದ್ದ ಮಹೇಶ್ ಹೆಂಡತಿಗೆ ಅಮಲು ಬರುವ ಇಂಜೆಕ್ಷನ್ ನೀಡಿದ. ಕೂಡಲೇ ಆಕೆ ಪ್ರಜ್ಞೆ ತಪ್ಪಿದಳು. ವೈದ್ಯ ಜ್ಞಾನ ಬಳಸಿಕೊಂಡು ಹೆಂಡತಿಯ ದೇಹವನ್ನು ಚೂರು ಚೂರು ಮಾಡಿದ! ದೇಹದಲ್ಲಿರುವ ಅಷ್ಟೂ ಜಾಯಿಂಟ್‌ಗಳನ್ನು ಕಟ್ ಮಾಡಿ ಮೊದಲೇ ತಂದಿಟ್ಟಿದ್ದ ದೊಡ್ಡ ಪ್ಲಾಸ್ಟಿಕ್ ಚೀಲಗಳಿಗೆ ತುಂಬಿದ. ಖಾಲಿ ಲಗ್ಗೇಜ್ ಬ್ಯಾಗ್‌ಗೆ ಅಂಗಾಂಗಳನ್ನು ತುಂಬಿದ. ಇದರ ಪರಿವೆಯೇ ಇಲ್ಲದೆ ನಿದ್ದೆ ಮಾಡುತ್ತಿದ್ದ ಒಂದು ವರ್ಷದ ಮಗುವನ್ನು ಬರ್ಬರವಾಗಿ ಕೊಲೆ ಮಾಡಿ ಅದರ ದೇಹಕ್ಕೂ ಅದೇ ಗತಿ ತೋರಿಸಿದ.
ಮಾರನೇ ದಿನ ಬೆಳಗಾಗುತ್ತಲೇ ಎರಡೂ ಬ್ಯಾಗ್‌ಗಳನ್ನು ಹಿಡಿದುಕೊಂಡು ರೂಮ್ ಖಾಲಿ ಮಾಡಿ ಹೊರಗೆ ನಡೆದ. ಅದು ಸಂಜೀವರೆಡ್ಡಿ ಪಾರ್ಕ್. ಅಲ್ಲಿ ಬೆಳಗಿನ ವ್ಯಾಯಾಮ ಮಾಡುವವರು, ವಾಕಿಂಗ್ ಮಾಡುವವರು, ವಾಯು ವಿಹಾರ ಮಾಡುವವರು ಹೇರಳವಾಗಿದ್ದರು. ಪಾರ್ಕಿನ ಒಂದು ದ್ವಾರದಿಂದ ಒಳ ನಡೆದ ಮಹೇಶ್ ಅಲ್ಲಿ ಹುಲುಸಾಗಿ ಬೆಳೆದಿದ್ದ ಒಂದು ಪೊದೆಯ ಮೇಲೆ ಹೆಣಗಳನ್ನು ತುಂಬಿರುವ ಚೀಲ ಎಸೆದು ಮತ್ತೊಂದು ದ್ವಾರದ ಮೂಲಕ ಹೊರ ನಡೆದ. ಅಲ್ಲಿಂದ ನೇರವಾಗಿ ಮನೆಗೆ ಬಂದು ಬ್ಯಾಗನ್ನು ರಹಸ್ಯವಾಗಿಡುವಂತೆ ತಾಯಿ ಮತ್ತು ತಂಗಿಗೆ ತಿಳಿಸಿ ಎರಡೇ ದಿನದಲ್ಲಿ ವಾಪಸ್ ಹೊರಟು ಕೆಲಸಕ್ಕೆ ಸೇರಿದ್ದ.

ಇತ್ತ ಹೈದರಾಬಾದಿನ ಸಂಜೀವರೆಡ್ಡಿ ಪಾರ್ಕ್‌ನಲ್ಲಿ ಮಹೇಶ ಬ್ಯಾಗ್ ಬಿಸಾಡಿದ್ದನಲ್ಲ, ಹಾಗೆ ಬಿಸಾಡಿ ಎರಡು ದಿನ ಕಳೆದಿತ್ತು. ಪಾರ್ಕಿನ ಆವರಣದಲ್ಲಿ ಸಹಿಸಲಸಾಧ್ಯವಾದ ಕೆಟ್ಟ ವಾಸನೆ. ನಗರಪಾಲಿಕೆಯವರಿಗೆ ಸಾರ್ವಜನಿಕರು ದೂರಿದರು. ಅಂದು ಪಾರ್ಕಿನಲ್ಲಿ ಆಟವಾಡುತ್ತಿದ್ದ ಒಂದು ಪುಟ್ಟ ಮಗು ಒಂದು ಪೊದೆಯ ಕೆಳಗೆ ಹೋಗಿ ಅವಿತುಕೊಂಡಿದ್ದಳು. ಅವಳನ್ನು ಹುಡುಕಿಕೊಂಡು ಬರುತ್ತಿದ್ದ ಮಗುವಿನ ಕಣ್ಣಿಗೆ ಬೀಳಬಾರದು ಎಂದು ಪೊದೆಯ ಮೇಲೆ ಹತ್ತುವ ಪ್ರಯತ್ನವನ್ನು ಮಗು ಮಾಡುತ್ತಿರುವಾಗ ಪೊದೆಯ ಮೇಲಿನಿಂದ ಒಂದು ಬೃಹತ್ ಗಾತ್ರದ ಬ್ಯಾಗ್ ನೆಲಕ್ಕೆ ಉರುಳಿ ಬಿತ್ತು. ಅದನ್ನು ಕಂಡ ಸಾರ್ವಜನಿಕರು ಅದರಿಂದಲೇ ವಾಸನೆ ಬರುತ್ತಿದೆ ಎಂಬುದನ್ನು ಅರಿತು ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಬಂದ ಪೊಲೀಸರಿಗೆ ಮಾಂಸ ಬ್ಯಾಗಿನಲ್ಲಿ ತುಂಬಲಾಗಿದೆ ಎಂಬುದು ಅರಿವಿಗೆ ಬಂತು. ಆದರೆ ಯಾವುದೇ ಸುಳಿವು ದೊರೆಯದಂತೆ ಹಂತಕ ಸಾಕ್ಷ್ಯಗಳನ್ನು ನಾಶ ಮಾಡಿದ್ದ. ಈ ಬಗ್ಗೆ ಪತ್ರಿಕೆಗಳಿಗೆ ಸುದ್ದಿ ನೀಡಿದ ಪೊಲೀಸರು ಮಾಂಸದ ಮುದ್ದೆಯಾಗಿದ್ದ ದೇಹಗಳನ್ನು ದಫನ್ ಮಾಡಿದರು. ಇದೊಂದು ಪತ್ತೆ ಹಚ್ಚಲಾರದ ಕೊಲೆ ಪ್ರಕರಣವೆಂದು ದೂರು ದಾಖಲಾಯಿತು.

ಮಹೇಶ್‌ನ ಮನೆಯಲ್ಲಿ ತನ್ನ ಮಗಳು ಇಲ್ಲದಿರುವುದನ್ನು ಕಂಡ ಜನರಲ್ ಮಗಳು ಮತ್ತು ಮೊಮ್ಮಗಳು ಎಲ್ಲಿ ಎಂದು ವಿಚಾರಿಸಿದರು. ಅದಕ್ಕೆ ಮಹೇಶ ಕಳೆದ ನಾಲ್ಕು ದಿನಗಳ ಹಿಂದೆ ತನ್ನ ಜತೆ ಜಗಳ ಆಡಿ ತವರಿಗೆ ಬಂದಳೆಂದು ಹೇಳಿದ. ಜನರಲ್‌ಗೆ ಅನುಮಾನ ಕಾಡತೊಡಗಿತು. ತಾಯಿ ಮಗಳು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಿಸಲಾಯಿತು. ಎಲ್ಲ ರೀತಿಯಲ್ಲೂ ಮಹೇಶ್ ಬಗ್ಗೆ ಅನುಮಾನಗಳು ಮೂಡಿದ ಪರಿಣಾಮ ಆತನಿಗೆ ತಿಳಿಯದಂತೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು. ಅದರ ಪರಿಣಾಮವೇ ಮಹೇಶನ ಮನೆಯಲ್ಲಿದ್ದ ಬಟ್ಟೆ ಮತ್ತು ಒಡವೆಗಳನ್ನು ವಶಪಡಿಸಿಕೊಂಡು ನಂತರ ಆತನನ್ನು ಬಂಧಿಸಿದ್ದರು.

ಬಂಧನದ ನಂತರ ವಿಚಾರಣೆಯಲ್ಲಿ ಮಹೇಶ್ ಎಲ್ಲ ಕತೆ ಹೇಳುತ್ತಿದ್ದಂತೆ ಹೈದರಾಬಾದ್ ಪೊಲೀಸರನ್ನು ಸಂಪರ್ಕಿಸಿ ಘಟನೆ ಬಗ್ಗೆ ತಿಳಿಸಲಾಯಿತು. ಪಾರ್ಕಿನಲ್ಲಿ ದೊರೆತ ಶವ ಯಾರದು ಎಂಬ ತಲೆ ನೋವಿನಲ್ಲಿದ್ದ ಹೈದರಾಬಾದ್ ಪೊಲೀಸರಿಗೆ ಇದರಿಂದ ಸ್ವಲ್ಪ ಮಟ್ಟಿಗೆ ನಿರಾಳವಾಯಿತು. ಈತ ಮಿಲಿಟರಿಯಲ್ಲಿರುವುದರಿಂದ ವಿಚಾರಣೆ ಪೂರ್ತಿ ಸೈನ್ಯದ ನ್ಯಾಯಾಲಯದಲ್ಲಿಯೇ ನಡೆಯುತ್ತಿತ್ತು. ಆದರೆ ಹೆಣ ಹಾಕಿರುವುದು ಹೈದರಾಬಾದ್‌ನಲ್ಲಿ. ಆದ್ದರಿಂದ ಆತನನ್ನು ವಿಚಾರಣೆಗಾಗಿ ಹೈದರಾಬಾದಿಗೆ ಕರೆತರಲಾಯಿತು. ಹೈದರಾಬಾದ್ ಹೈಕೋರ್ಟ್‌ನ ಐದನೇ ಮಹಡಿಯಲ್ಲಿ ವಿಚಾರಣೆ ಇತ್ತು. ಬೇಡಿ ಹಾಕಿ ಮಹೇಶ್‌ನನ್ನು ಕರೆತರಲಾಗಿತ್ತು. ಅಲ್ಲಿಗೆ ಆತನ ತಾಯಿ ಮತ್ತು ತಂಗಿ ಬಂದು ಕಣ್ಣೀರು ಹಾಕಿದ್ದರು. ಹೀಗೆ ಯಾಕೆ ಮಾಡಿದೆ? ಅವಳ ಜೊತೆಯೇ ಸಂಸಾರ ಮಾಡಬಹುದಿತ್ತಲ್ಲಾ ಎಂದು ತಾಯಿ ಕಣ್ಣೀರು ಹಾಕಿದ್ದು ಹಂತಕನ ಹೃದಯ ಕರಗಿಸಿತು. ಆತ ಒಂದು ನಿರ್ಧಾರಕ್ಕೆ ಬಂದಿದ್ದ. ಅದು ಆತನ ತಾಯಿ ತಂಗಿ ಜತೆಗೆ ಪೊಲೀಸರ ಊಹೆಗೂ ನಿಲುಕಿರಲಿಲ್ಲ.

ವಿಚಾರಣೆಗಾಗಿ ನ್ಯಾಯಾಲಯದ ಒಳಗೆ ಹೋಗುವಾಗ ಕೈಗೆ ಬೇಡಿ ಹಾಕುವಂತಿಲ್ಲ. ಹಾಗಾಗಿಯೇ ಆತನ ಕೈಗಿದ್ದ ಬೇಡಿಗಳನ್ನು ಪೊಲೀಸರು ತೆಗೆದಿದ್ದರು. ನ್ಯಾಯಾಲಯದಲ್ಲಿ ವಿಚಾರಣೆ ಮುಗಿಸಿ ಹೊರಗೆ ಬಂದ ಮಹೇಶ ಪೊಲೀಸರು ತನ್ನ ಕೈಗೆ ಬೇಡಿ ಹಾಕುವ ಮೊದಲೇ ಓಡಿ ಹೋಗಿ ಐದನೇ ಅಂತಸ್ತಿನಿಂದ ಕೆಳಗೆ ಜಿಗಿದ. ತಲೆ ಒಡೆದು ಸ್ಥಳದಲ್ಲೇ ಸಾವನ್ನಪ್ಪಿದ. ಮಾಡಬಾರದ ಕೆಲಸ ಮಾಡಿ ಮರಣ ಹೊಂದಿದ ಏಕೈಕ ಮಗನನ್ನು ಕಳೆದುಕೊಂಡ ಸುಶೀಲಮ್ಮನ ರೋದನ ಒಂದು ಕಡೆಯಾದರೆ, ಇದ್ದ ಒಬ್ಬಳೇ ಮಗಳನ್ನು ಕಳೆದುಕೊಂಡು ರೋದಿಸುತ್ತಿದ್ದ ಜನರಲ್ ಪರಿಸ್ಥಿತಿ ಇದಕ್ಕೆ ಭಿನ್ನವಾಗಿರಲಿಲ್ಲ.

- ಅಶ್ವತ್ಥನಾರಾಯಣ್ ಎಲ್.
sathyajns@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement