ಹೆಚ್ಚು ಉಪ್ಪು ಅಪಾಯಕಾರಿಯೇ?
ಇದು ತಮಾಷೆ ಪ್ರಶ್ನೆ ಖಂಡಿತಾ ಅಲ್ಲ. ಉಪ್ಪನ್ನು ಅತಿಯಾಗಿ ತಿನ್ನುವ ಅಭ್ಯಾಸ ಉಳ್ಳವರು ಸ್ವಲ್ಪ ಎಚ್ಚರಿಕೆ ವಹಿಸಲೇಬೇಕು. ಅದರಲ್ಲೂ ಮಹಿಳೆಯರಂತೂ ಉಪ್ಪಿನ ವಿಚಾರದಲ್ಲಿ ಜಾಗರೂಕರಾಗಿರಬೇಕು. ರಕ್ತದೊತ್ತಡವನ್ನು ಹೆಚ್ಚಿಸದಿದ್ದರೂ ಉಪ್ಪು ಪಾರ್ಶ್ವವಾಯುವಿಗೂ ಕಾರಣ ಆಗಬಲ್ಲದು ಎನ್ನುವ ಸಂಗತಿ ಇತ್ತೀಚಿನ ಸಂಶೋಧನೆಗಳಿಂದ ತಿಳಿದುಬಂದಿದೆ. ಜಪಾನ್‌ನಲ್ಲಿ ಇಲಿಗಳ ಮೇಲೆ ಸಾಲ್ಟ್ ಡಯಟ್ ಪ್ರಯೋಗ ನಡೆಸಿದ ತಜ್ಞರು ಇದನ್ನು ಕಂಡುಕೊಂಡಿದ್ದಾರೆ.
ಇಲಿಗಳ ಮೇಲೆ ಸತತ 15 ವಾರ 'ಉಪ್ಪಿನ ಪಥ್ಯ' ಪ್ರಯೋಗಿಸಲಾಯಿತು. ಅಧಿಕ ಉಪ್ಪು ಸೇವಿಸಿದ ಇಲಿಗಳ ರಕ್ತದೊತ್ತಡದಲ್ಲಿ ವ್ಯತ್ಯಾಸವಾಗಲಿಲ್ಲ. ಆದರೆ ತೀವ್ರ ತೆರನಾದ ಪಾರ್ಶ್ವವಾಯುವಿಗೆ ತುತ್ತಾಗಿ ಸಾವನ್ನಪ್ಪಿದ್ದವು. ಅದಕ್ಕೆ ಕಾರಣ ಮೆದುಳಿನ ಭಾಗದಲ್ಲಿ ನಿರಂತರವಾಗಿ ನಡೆದ ಲಘು ಆಘಾತಗಳು. ಮೆದುಳಿಗೆ ರಕ್ತ ಪೂರೈಸುವ ರಕ್ತನಾಳಗಳಿಗೆ ಘಾಸಿ ಆಗಿತ್ತಲ್ಲದೆ ಆ ಭಾಗದ ಕೆಲವು ಅಂಗಾಂಗಗಳು ನಿಷ್ಕ್ರಿಯವಾಗಿದ್ದವು. ಇದು ಮೃತ ಇಲಿಗಳ ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿತು. 'ಉಪ್ಪಿನ ಅಧಿಕ ಸೇವನೆ ನಿಮ್ಮ ರಕ್ತದೊತ್ತಡವನ್ನು ಜಾಸ್ತಿ ಮಾಡದೇ ಇರಬಹುದು. ಆದರೂ ವಯಸ್ಸಾದ ನಂತರ ಉಪ್ಪನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದು ಒಳ್ಳೆಯದು' ಎಂದು ಸಲಹೆ ಮಾಡುತ್ತಾರೆ ಜಪಾನ್‌ನ ತಜ್ಞ ಡಾ.ತೋಬಿಯಾನ್.
ಪೊಟ್ಯಾಷಿಯಂ ಮಾಹಿತಿ
'ಪೊಟ್ಯಾಷಿಯಂ ಜಾಸ್ತಿ ಇರುವ ತರಕಾರಿ, ಹಣ್ಣುಗಳ ಬಗ್ಗೆ ಇನ್ನೂ ಸ್ವಲ್ಪ ಮಾಹಿತಿ ಕೊಡಿ' ಎಂದು ಕೆಲವು ಓದುಗ ಬಂಧುಗಳ ಎಸ್‌ಎಂಎಸ್ ಮಾಡಿದ್ದಾರೆ. ಹೀಗಾಗಿ ಯಾವ್ಯಾವ ತರಕಾರಿಯಲ್ಲಿ ಎಷ್ಟೆಷ್ಟು ಪ್ರಮಾಣದ ಪೊಟ್ಯಾಷಿಯಂ ಇರುತ್ತದೆ ಎನ್ನುವ ಕೋಷ್ಠಕವನ್ನು ಇಲ್ಲಿ ನೀಡುತ್ತಿದ್ದೇನೆ.
ಅರ್ಧ ಕಪ್ ಬೇಯಿಸಿದ ಕಾಜರುಗಡ್ಡೆ (ಬೀಟ್ ಗ್ರೀನ್ಸ್)- 654 ಮಿಲಿಗ್ರಾಂ, ಒಂದು ಚಹಾ ಚಮಚ ಕಾಕಂಬಿ- 400 ಮಿಲಿಗ್ರಾಂ, ಒಂದು ಕಪ್ ಟೊಮೆಟೊ ಜ್ಯೂಸ್- 536 ಮಿಲಿಗ್ರಾಂ, ಒಂದು ಕಪ್ ಕಿತ್ತಳೆ ಹಣ್ಣಿನ ರಸ- 472 ಮಿಲಿಗ್ರಾಂ, ಎರಡು ಕ್ಯಾರಟ್- 466 ಮಿಲಿಗ್ರಾಂ, ಎರಡು ಕಪ್ ಬೇಯಿಸಿದ ಸಿಹಿಗೆಣಸು- 455 ಮಿಲಿಗ್ರಾಂ, ಅರ್ಧ ಕಪ್ ಬೇಯಿಸಿದ ಹುರುಳಿ- 484 ಮಿಲಿಗ್ರಾಂ, ಒಂದು ಕಪ್ ಕೆನೆರಹಿತ ಹಾಲು- 418 ಮಿಲಿಗ್ರಾಂ, ಒಂದು ಬಾಳೆಹಣ್ಣು- 451 ಮಿಲಿಗ್ರಾಂ, ಎರಡು ಔನ್ಸ್ ಬಾದಾಮಿ- 440 ಮಿಲಿಗ್ರಾಂ, ಒಂದು ಔನ್ಸ್ ಹುರಿದ ಸೋಯಾಅವರೆ- 417 ಮಿಲಿಗ್ರಾಂ, 17 ಔನ್ಸ್ ಬೇಯಿಸಿದ ಸಿಪ್ಪೆರಹಿತ ಆಲೂಗಡ್ಡೆ- 512 ಮಿಲಿಗ್ರಾಂ, 17 ಔನ್ಸ್ ಬೇಯಿಸಿದ ಸಿಪ್ಪೆಸಹಿತ ಆಲೂಗಡ್ಡೆ- 844 ಮಿಲಿಗ್ರಾಂ, ಒಂದು ಕಪ್ ಬೇಯಿಸಿದ ಅವರೆ- 613 ಮಿಲಿಗ್ರಾಂ. ಒಬ್ಬ ವ್ಯಕ್ತಿ ತನ್ನ ದೈನಂದಿನ ಆಹಾರದ ಜತೆಯಲ್ಲಿ ಅಥವಾ ಹೆಚ್ಚುವರಿಯಾಗಿ 400 ಮಿಲಿಗ್ರಾಂ ಪೊಟ್ಯಾಶಿಯಂ ಸೇವಿಸಿದರೆ ಸಾಕು ಎನ್ನುವುದು ತಜ್ಞರ ಸಲಹೆ.
- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com