ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಗ್ರೀನ್ ಟೀಯಲ್ಲಿ ಏನಿದೆ ಮಾಯೆ?

Mainashree
Updated On : 25 Aug 2013, 1:28 am

ಸಾಮಾನ್ಯವಾಗಿ ಸರ್ಕಾರಿ ಅಧಿಕಾರಿಗಳು, ಕಂಪನಿಯ ಮಾರಾಟ ವಿಭಾಗದಲ್ಲಿ ಕೆಲಸ ಮಾಡುವವರು, ಸಾರ್ವಜನಿಕ ಸಂಪರ್ಕಾಧಿಕಾರಿಗಳು ಹೆಚ್ಚು ಚಹಾ ಕುಡಿಯುತ್ತಾರೆ. ಇಷ್ಟ ಇದೆಯೋ ಇಲ್ಲವೊ. ಕೆಲವು ಸಲ ಅನಿವಾರ್ಯ. ಪ್ರಮುಖ ವ್ಯಕ್ತಿಗಳು ಬಂದಾಗ ಅವರೊಂದಿಗೆ ಚಹಾಪಾನ ಔಪಚಾರಿಕತೆ. ಬಹಳಷ್ಟು ಸಂದರ್ಭಗಳಲ್ಲಿ ಅವರ ಸಿಪಾಯಿ ತಮ್ಮ ಸಾಹೇಬರಿಗೆ ಸ್ವಲ್ಪವೇ ಸ್ವಲ್ಪ ಚಹಾ ಕೊಟ್ಟು, ಅತಿಥಿಗಳಿಗೆ ತುಂಬಿದ ಕಪ್ ನೀಡುತ್ತಾರೆ. ಇನ್ನು ಕೆಲವರು ಹಾಲು ಹಾಕದ ಗ್ರೀನ್ ಟೀ ಮೊರೆ ಹೋಗುತ್ತಾರೆ. ಚಹಾಕ್ಕೆ ಹೋಲಿಸಿದರೆ ಆರೋಗ್ಯದ ದೃಷ್ಟಿಯಿಂದ ಅದು ಬಹಳ ಒಳ್ಳೆಯದು. ಅತಿಯಾಗಿ ಅಂದರೆ ದಿನಕ್ಕೆ ನಾಲ್ಕೈದು ಕಪ್‌ಗಿಂತ ಜಾಸ್ತಿ ಚಹಾ ಸೇವಿಸುವವರಲ್ಲಿ ಕೆಲವರಿಗೆ ಪಿತ್ಥ, ಹಸಿವಾಗದಿರುವಿಕೆ ಮೊದಲಾದ ಸಮಸ್ಯೆಗಳು ಕಾಡಬಹುದು. ಒಮ್ಮೊಮ್ಮೆ ಆದು ಹಾಲಿನ ಮೇಲೂ ಅವಲಂಬಿತವಾಗಿರುತ್ತದೆ. ಆದರೆ ಗ್ರೀನ್ ಟೀ ಎಷ್ಟು ಕುಡಿದರೂ ಯಾವುದೇ ತೊಂದರೆ ಎದುರಾಗದು. ಗ್ರೀನ್ ಟೀ ಇರಲಿ, ಮಾಮೂಲು ಚಹಾ ಇರಲಿ, ಪಾರ್ಶ್ವವಾಯುವಿನ ಅಪಾಯದಿಂದ ಪಾರಾಗಲು ಅದು ಅತ್ಯುತ್ತಮ ಎನ್ನುವ ಸಮಾಚಾರ ಈಗ ಹೊರಬಿದ್ದಿದೆ. ಆದರೆ, ಗ್ರೀನ್ ಟೀ ಉತ್ತಮ ಎನ್ನುತ್ತಾರೆ ವಿಜ್ಞಾನಿಗಳು.
ಜಪಾನ್‌ನ ತೊಹೊಕು ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನ ವೈದ್ಯರು ನಾಲ್ಕು ವರ್ಷ ಕಾಲ 60 ದಾಟಿದ 6,000 ಮಹಿಳೆಯರನ್ನು ಪ್ರಯೋಗಕ್ಕೆ ಒಳಪಡಿಸಿ ಚಹಾದ ಮಹಿಮೆ ಕಂಡುಕೊಂಡಿದ್ದಾರೆ. ದಿನಕ್ಕೆ ಐದು ಕಪ್ ಟೀ ಕುಡಿದವರಲ್ಲಿ ಚಹಾ ಕುಡಿಯದೇ ಇರುವವರ ಅಥವಾ ಒಂದೆರಡು ಕಪ್ ಕುಡಿಯುವವರಿಗಿಂತ ಪಾರ್ಶ್ವವಾಯುವಿಗೆ ತುತ್ತಾದವರು ಕಡಿಮೆ ಇದ್ದರು. ಉಪ್ಪು ಅಧಿಕ ಸೇವಿಸಿ, ರಕ್ತದೊತ್ತಡದಿಂದ ಬಳಲುತ್ತಿರುವವರಲ್ಲಿಯೂ ಚಹಾ ಪರಿಣಾಮಕಾರಿಯಾಗಿ ಕೆಲಸ ಮಾಡಿತ್ತು. ಜಪಾನ್, ಚೀನಾ, ಅಮೆರಿಕಗಳಲ್ಲಿ ಬಹಳ ಹಿಂದೆ ಪ್ರಾಣಿಗಳ ಮೇಲೆ ಇಂಥ ಪ್ರಯೋಗ ಕೈಗೊಂಡು, ಪಾರ್ಶ್ವವಾಯು ತಡೆಯುವ ಸಾಮರ್ಥ್ಯ ಚಹಾಕ್ಕೆ ಇದೆ ಎನ್ನುವುದನ್ನು ಕಂಡುಕೊಳ್ಳಲಾಗಿತ್ತು. ಆದರೆ ಮನುಷ್ಯರ ಮೇಲೆ ಇಂಥ ಪ್ರಯೋಗ ನಡೆದದ್ದು ಇದೇ ಮೊದಲು.
ಚಹಾದಲ್ಲಿ ಆ್ಯಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿರುತ್ತವೆ. ಇವು ರಕ್ತನಾಳಗಳಿಗೆ ಹಾನಿಯಾಗುವುದನ್ನು ತಡೆಯುತ್ತವೆ. ಇದಕ್ಕೆ ಹೆಚ್ಚುವರಿಯಾಗಿ ಗ್ರೀನ್ ಟೀಯಲ್ಲಿ ವಿಟಮಿನ್ ಇ ಮತ್ತು ಸಿ ಇರುತ್ತವೆ. ರಕ್ತದೊತ್ತಡ ತಡೆಯುವಲ್ಲಿ ಇವು ಸಹಕಾರಿ. ಹೀಗಾಗಿ ಚಹಾ ಮತ್ತು ಗ್ರೀನ್ ಟೀ ಪಾರ್ಶ್ವವಾಯುವಿನ ಸಂಭವನೀಯತೆಯನ್ನು ಕಡಿಮೆ ಮಾಡುತ್ತವೆ ಎನ್ನುವುದು ವಿಜ್ಞಾನಿಗಳ ತರ್ಕ.

-ಡಾ. ಪಿ. ಸದಾನಂದ ಮೈಯ್ಯ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement