ಮತ್ತೆ ಮತ್ತೆ ಬೇಕು
ಕಾಸು ಖರ್ಚು ಮಾಡಿದಂತೆ ಉಕ್ಕುವುದಿಲ್ಲ. ಪ್ರಾಯ ಹೋದರೆ ಮತ್ತೆ ಬರುವುದಿಲ್ಲ. ಆದರೆ ಜಗತ್ತಿನಲ್ಲಿ ಕೆಲ ಸಂಗತಿಗಳಿವೆ- ಸೇವಿಸಿದಷ್ಟೂ ರುಚಿಯೆನಿಸುವ, ಮತ್ತೆ ಮತ್ತೆ ಬೇಕೆನಿಸುವಂಥವು.
ಉದ್ಯೋಗ ಕಲಹಃ ಕಂಡೂರ್ದ್ಯೂತಂ ಮದ್ಯಂ ಪರಸ್ತ್ರೀಯಃ
ಆಹಾರೋ ಮೈಥುನಂ ನಿದ್ರಾ ಸೇವನಾತ್ತು ವಿವರ್ಧತೇ
ದುಡಿಮೆಯೇ ಪ್ರಿಯರಾದವರಿಗೆ ಕೆಲಸ ಮಾಡಿದಷ್ಟೂ ಸಾಕೆನಿಸುವುದಿಲ್ಲ. ಸುತ್ತಮುತ್ತಲಿನವರ ಬಳಿ ಯಾವಾಗಲೂ ಜಗಳದಲ್ಲಿ ಸುಖ ಕಾಣುವವನಿಗೆ ಒಂದು ದಿನ ಕಾದದಿದ್ದರೆ ನಿದ್ರೆ ಬರುವುದಿಲ್ಲ. ತುರಿಕೆಯಾಯಿತೆನ್ನಿ, ತುರಿಸಿಕೊಂಡಷ್ಟೂ ಸಾಕೆನಿಸುವುದಿಲ್ಲ ಅಲ್ಲವೆ? ಜೂಜು ಹಾನಿಕರ ಎಂದು ಗೊತ್ತಿದ್ದರೂ ಧರ್ಮರಾಯ ನಳ ಮುಂತಾದವರು ಮತ್ತೆಮತ್ತೆ ಅತ್ತ ಹೋಗಲಿಲ್ಲವೆ? ಇನ್ನು ಕುಡುಕರ ವಿಷಯ ಹೇಳಲೇನು? ಊಟ ಒಮ್ಮೆಗೆ ಹೊಟ್ಟೆ ತುಂಬಿಸುತ್ತದೆ, ಮತ್ತೆ ಹಸಿದಾಗ ಅದೇ ಬೇಕು. ನಿದ್ರೆಯಿಂದ ಎದ್ದವನು, ಇನ್ನೂ ಸ್ವಲ್ಪ ಮಲಗಿದ್ದರಾಗುತ್ತಿತ್ತು ಎಂದೇ ಹೇಳುತ್ತಾನೆ.
ಇನ್ನೆರಡು ಇಲ್ಲಿವೆ- ಪರಸ್ತ್ರೀ ಮತ್ತು ಮೈಥುನ. ಕೆಲವರಿಗೆ ಮನೆಯೂಟ ರುಚಿಯೆನಿಸದು, ಹೋಟೆಲ್ಲೇ ಬೇಕು- ಅದೆಷ್ಟೇ ಕೊಳಕಾಗಿದ್ದರೂ ಸೈ. ಮತ್ತೆ ಮತ್ತೆ ಅಲ್ಲಿಗೇ ಹೋಗುತ್ತಾರೆ. ಮೈಥುನದ ಅಂತ್ಯದಲ್ಲಿ ಒದಗುವ ವೈರಾಗ್ಯ, ಅದು ಆ ಕ್ಷಣಕ್ಕೆ ಮಾತ್ರ, ಸ್ಮಶಾನ ವೈರಾಗ್ಯದಂತೆಯೇ. ಅರ್ಧ ಗಂಟೆ ಬಿಟ್ಟರೆ ಆತ ಮತ್ತೆ ತಯಾರಾಗುತ್ತಾನೆ! ಇವಿಷ್ಟೂ ಸೇವಿಸಿದಷ್ಟೂ ವರ್ಧಿಸುವ ಸಂಗತಿಗಳು ಅಂತ ಸುಭಾಷಿತಕಾರ ಸುಮ್ಮನೆ ಹೇಳಿದ್ದಾನೆಯೆ?
= ಹರಿಹರ