ವಾಸ್ತವಕ್ಕಿಂತ ಕನಸೇ ಶಕ್ತಿಶಾಲಿ!
ನಿದ್ರೆಯಲ್ಲಿ ಅಥವಾ ಸ್ವಪ್ನಾವಸ್ಥೆಯಲ್ಲಿರುವಾಗ ನಮಗೆ ನಮ್ಮ ಆಸ್ತಿಯ ನೆನಪೂ ಇರುವುದಿಲ್ಲ. ಅದನ್ನು ಉಪಯೋಗಿಸುವ ಬಗ್ಗೆಯೂ ನಾವು ಯೋಚಿಸುವುದಿಲ್ಲ. ಈ ಸ್ಥಿತಿಯಲ್ಲಿ ನಾವು ಪಟ್ಟ ಶ್ರಮವಾಗಲೀ, ನಮ್ಮ ಸಾಧನೆಯಾಗಲೀ ನಮ್ಮ ಅರಿವಿಗೆ ಬರುವುದಿಲ್ಲ. ಈ ಅವಸ್ಥೆಯಲ್ಲಿ ಒಡೆತನದ, ಶ್ರೀಮಂತಿಕೆಯ ಭಾವನೆ ನಮ್ಮ ಮನಸ್ಸಿನಿಂದ ತನ್ನಿಂದ ತಾನೆಯೇ ಮಾಯವಾಗುತ್ತದೆ. ನಾವು ಹಾಸಿಗೆಯಿಂದ ಏಳಬೇಕೆಂದೂ ಇಲ್ಲ. ಮನೆಯಿಂದ ಆಚೆ ಹೋಗಬೇಕೆಂದೂ ಇಲ್ಲ. ಆದರೂ ನಮ್ಮಲ್ಲಿ ಅರಿವು ಇಲ್ಲವಾದ್ದರಿಂದ ನಮ್ಮ ಮನಸ್ಸಿನಿಂದ ಇವೆಲ್ಲ ನಮಗೆ ತಿಳಿಯದಂತೆಯೇ ದೂರ ಹೋಗಿರುತ್ತವೆ.
ಒಬ್ಬ ವ್ಯಕ್ತಿ ಶ್ರೀಮಂತನಾಗಿದ್ದು, ಕನಸಲ್ಲಿ ತಾನು ಬಡವನಂತೆ ಕಂಡರೆ, ತಕ್ಷಣ ಗಾಬರಿಗೆ ಒಳಗಾಗುತ್ತಾನೆ. ಎಚ್ಚೆತ್ತುಕೊಳ್ಳುತ್ತಾನೆ. ಅದು ಕನಸೆಂದು ತಿಳಿದ ಮೇಲೆ ಸಮಾಧಾನದ ಉಸಿರು ಬಿಡುತ್ತಾನೆ. ಹಾಗಾದರೆ, ನಿದ್ರಾವಸ್ಥೆಯಲ್ಲಿ ವಾಸ್ತವಿಕತೆಗಿಂತ ಕನಸು ಹೆಚ್ಚು ಶಕ್ತಿಶಾಲಿಯೆಂದಾಯಿತು. ಇಲ್ಲವಾದರೆ ತಾನು ಆಸ್ತಿ ಹೊಂದಿದ್ದೇನೆಂದು ತಿಳಿದೂ, ಕನಸಿನಲ್ಲಿ ಕಂಡಿದ್ದಕ್ಕಾಗಿ ಗಾಬರಿಗೊಳ್ಳುವ ಆವಶ್ಯಕತೆ ಇರುತ್ತಿರಲಿಲ್ಲ. ಈ ಅರ್ಥದಲ್ಲಿ, ನಾವು ನಿದ್ರಿಸುತ್ತಿರುವಾಗ ಲೋಕದ ಬೇರೆ ಬೇರೆ ಮೂಲೆಯಲ್ಲಿರುವ, ವಿವಿಧ ಅಂತಸ್ತಿನಲ್ಲಿರುವ ಇತರರು ನಿದ್ರಿಸುತ್ತಿದ್ದರೆ, ಏಕಕಾಲದಲ್ಲಿ ನಿದ್ರಿಸುತ್ತಿರುವವರೆಲ್ಲರೂ ಸಮಾಧಾನರಾದಂತಾಯಿತು. ಅಷ್ಟೇ ಅಲ್ಲ, ಶ್ರೀಮಂತಿಕೆಯ ಅರಿವು ಅವರಲ್ಲಿ ಇರುವುದಿಲ್ಲವಾದ್ದರಿಂದ ಆ ಕ್ಷಣದಲ್ಲಿ ಅವರೆಲ್ಲ ಬಡವರೂ ಆದಂತಾಯಿತು. ಈ ಅರ್ಥದಲ್ಲಿ ಎಷ್ಟೇ ಶ್ರೀಮಂತರಾದರೂ ಜೀವನದ ಮೂರರ ಒಂದಂಶ ಬಡವರೇ.
ನಾವು ಜಾಗೃತಾವಸ್ಥೆಯಲ್ಲಿ ಇರುವಾಗಲೂ ಎಷ್ಟು ಸಮಯ ನಮ್ಮ ಆಸ್ತಿಯ ಬಗ್ಗೆ ವಿಚಾರಿಸುತ್ತಿರುತ್ತೇವೆ ಮತ್ತು ಅದನ್ನು ಅನುಭವಿಸುತ್ತಿರುತ್ತೇವೆ? ಪ್ರಮುಖ ಭಾಗವನ್ನು ನಾವು ನಮ್ಮ ಕಾರ್ಯದಲ್ಲಿ, ವೃತ್ತಿಯಲ್ಲಿ ತೊಡಗಿಸಿಕೊಳ್ಳುತ್ತೇವೆ. ನಮ್ಮ ದಿನನಿತ್ಯದ ಕೆಲಸದಲ್ಲಿರುವಾಗ, ನಮ್ಮ ಕಾರು, ಮನೆ, ಹಣ, ಚಿನ್ನ, ಠೇವಣಿ, ಜಾಗ ಮೊದಲಾದವುಗಳನ್ನು ಕೆಲವೇ ಕ್ಷಣ ಕೂಡ ನೆನಪಿಸಿಕೊಳ್ಳದೆ ಇರುವುದೂ ಉಂಟು. ಸಿನಿಮಾ ನೋಡುವಾಗ, ಟಿವಿ ನೋಡುವಾಗ, ಓದುವಾಗ, ಬರೆಯುವಾಗ, ಮಡದಿ-ಮಕ್ಕಳೊಡನೆ ಸಮಯ ಕಳೆಯುವಾಗ, ಮಾತನಾಡುವಾಗ, ಸಂಗೀತ ಕೇಳುವಾಗ, ಆಟವಾಡುವಾಗ ನಮ್ಮ ಮನದಲ್ಲಿ ಹಣಕ್ಕಾಗಲೀ, ಆಸ್ತಿಗಾಗಲೀ ಯಾವ ಮಹತ್ವವೂ ಇರುವುದಿಲ್ಲ. ಬಹಳಷ್ಟು ಜನರಿಗೆ ಸಿನಿಮಾ ನೋಡುವಾಗ, ಪುಸ್ತಕ ಕೈಯಲ್ಲಿದ್ದರೂ ಓದಲಾಗುವುದಿಲ್ಲ. ಹಾಗಾದರೆ ಆ ಸಂದರ್ಭದಲ್ಲಿ ಅದಕ್ಕೆ ಯಾವುದೇ ಬೆಲೆ ಇಲ್ಲವೆಂದಾಯಿತು ಅಥವಾ ಅದು ಮನಸ್ಸಿನಿಂದ ದೂರವಿದೆ ಎಂದಾಯಿತು. ಹಾಗೆಯೇ ನಾವು ಒಂದು ವಿಷಯದಲ್ಲಿ ಕಾರ್ಯಮಗ್ನರಾಗಿರುವಾಗ ನಮ್ಮ ಎಲ್ಲ ಧ್ಯಾನ ಆ ಕೆಲಸದಲ್ಲಿಯೇ ಇರುವುದರಿಂದ, ನಮ್ಮ ಬಳಿ ಇರುವ ಆಸ್ತಿ, ಹಣ, ಎಲ್ಲವೂ ನಮ್ಮ ಮನಸ್ಸಿನಿಂದ ದೂರವಾಗಿರುತ್ತದೆ. ನಮಗೆ ಪ್ರಿಯವಾದ ಕೆಲಸ ಮಾಡುವಾಗ, ಆ ಕಾರ್ಯವೇ ನಮಗೆ ಸಂತೋಷವನ್ನು ನೀಡುತ್ತದೆ ಎಂದಾದರೆ, ಆ ಕ್ಷಣದಲ್ಲಿ ಹಣದ, ಸಂಪತ್ತಿನ ಬೆಲೆ ಏನು?
ಕಿರಣ್ ಉಪಧ್ಯಾಯ
keyrun1970@gmail.com