ಆ ಕ್ಷಣದಲ್ಲಿ ನಮ್ಮದಲ್ಲ!
ನಾವು ಯಾವುದಾದರೊಂದು ವಿಷಯದಲ್ಲಿ ಕಾರ್ಯಮಗ್ನರಾದಾಗ ನಮಗೆ ನಮ್ಮ ಸುತ್ತಮುತ್ತಲಿನ ಆಗು-ಹೋಗುಗಳ ಬಗ್ಗೆ ಗಮನವಿರುವುದಿಲ್ಲ. ನಾವೇ ಸಾಕಿದ ನಮ್ಮ ಮನೆಯ ಬೆಕ್ಕು ಪಕ್ಕದಲ್ಲಿ ಹಾದು ಹೋದರೂ ನಮಗೆ ತಿಳಿದಿರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನಮ್ಮ ಆಸ್ತಿಯ ವಿಷಯ ನೆನಪಿಗೆ ಬರುವುದಾದರೂ ಹೇಗೆ? ಈ ಒಂದು ಸ್ಥಿತಿಯನ್ನು ನಾವು ಪ್ರಜ್ಞಾಹೀನ ಸ್ಥಿತಿಗೆ ಹೋಲಿಸಿದರೆ ತಪ್ಪೇನು? ನಿದ್ರಾವಸ್ಥೆಯಲ್ಲಿ ಯಾವ ವಿಷಯವೂ ನಮಗೆ ತಿಳಿಯುವುದಿಲ್ಲ. ಎಚ್ಚರವಾಗಿದ್ದು, ಲಕ್ಷ್ಯ ಇನ್ನೆಲ್ಲೋ ಇದ್ದರೆ ಯಾವ ವಿಷಯಕ್ಕೂ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಒಂದು ಬಗೆಯ ಯೋಚನಾರಹಿತ ಸ್ಥಿತಿ ಅದಾಗಿರುತ್ತದೆ. ನಾವು ಏನನ್ನಾದರೂ ಮಾಡುವಾಗ ನಮ್ಮ ಮನಸ್ಸು ನಮ್ಮ ಆಸ್ತಿಯೆಡೆಗೆ, ಹಣದೆಡೆಗೆ ಹರಿಯುವುದಿಲ್ಲ ಎಂದಾದರೆ, ಆ ಕ್ಷಣದಲ್ಲಿ ಅದು ನಮ್ಮಲ್ಲಿ ಇಲ್ಲವಾದಂತೆಯೇ.
ಜನಕ ರಾಜನಿಗೆ ಸಂಬಂಧಿಸಿದ ಕಥೆಯೊಂದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಮಹಾನ್ ಮೇಧಾವಿಯಾದ ಜನಕರಾಜನಿಗೆ 'ವಿದೇಹಿ' ಎಂಬ ಹೆಸರೂ ಇತ್ತು. ವಿದೇಹಿ ಎಂದರೆ ದೇಹರಹಿತನಾದವನು ಅಥವಾ ಜ್ಞಾನೋದಯವಾದವನು ಎಂಬ ಅರ್ಥವನ್ನು ಕಲ್ಪಿಸಬಹುದು. ಮಹಾನ್ ಋಷಿಯೂ, ಜನಕ ರಾಜನ ಗುರುವೂ ಆದ ಅಷ್ಟಾವಕ್ರ ಒಮ್ಮೆ ತನ್ನ ಶಿಷ್ಯನೊಬ್ಬನನ್ನು ಅಧ್ಯಾತ್ಮದ ಅಭ್ಯಾಸಕ್ಕೆಂದು ನಕ ರಾಜನ ಬಳಿ ಕಳುಹಿಸಿಕೊಡುತ್ತಾನೆ. ಶಿಷ್ಯ ಜನಕ ರಾಜನ ಬಳಿ ಹೋದಾಗ ಅಧ್ಯಾತ್ಮದ ಗುರುವಾಗಿ ಕಾಣದೆ ರಾಜನಾಗಿ ಎಲ್ಲ ಸುಖವನ್ನು ಅನುಭವಿಸುತ್ತಿರುವುದನ್ನು ಕಂಡು ಆಶ್ಚರ್ಯಪಡುತ್ತಾನೆ. ಹಿಂದೂ ಧರ್ಮದ ಪ್ರಕಾರ ಅಧ್ಯಾತ್ಮದ ಮಾರ್ಗದಲ್ಲಿರುವವನಿಗೆ ಲೋಕ ರೂಢಿಯಲ್ಲಿರುವ ಸುಖ-ಭೋಗಗಳು ನಿಷೇಧವೆಂದು ತಿಳಿದ ಶಿಷ್ಯ ಸ್ವತಃ ಐಷಾರಾಮಿ ಜೀವನ ನಡೆಸುತ್ತಿರುವ ಈ ರಾಜ ನನಗೆ ಯಾವ ರೀತಿಯಿಂದ ಅಧ್ಯಾತ್ಮದ ಪಾಠ ಉಪದೇಶಿಸಲು ಸಾಧ್ಯ ಎಂದು ಮನದಲ್ಲಿ ಯೋಚಿಸುತ್ತಾನೆ. ಹೀಗಿರುವಾಗ ಜನಕ ರಾಜ ಶಿಷ್ಯನನ್ನು ಕರೆದು, ಅಭ್ಯಾಸ ಆರಂಭಿಸುವುದಕ್ಕೂ ಮೊದಲು ನೀನು ನಮ್ಮ ರಾಜ್ಯವನ್ನೆಲ್ಲ ಸುತ್ತಾಡಿಕೊಂಡು ಬರಬೇಕು. ಆದರೆ, ಒಂದು ಷರತ್ತು. ಸುತ್ತಾಡುವಾಗ ನಿನ್ನ ಕೈಯಲ್ಲಿ ತೈಲ ತುಂಬಿದ ಪಾತ್ರೆಯೊಂದನ್ನು ಕೊಡಲಾಗುವುದು. ಅದರಿಂದ ಒಂದು ಹನಿ ತೈಲವೂ ಹೊರ ಚೆಲ್ಲಬಾರದು. ಅಪ್ಪಿತಪ್ಪಿ ಒಂದು ಹನಿ ತೈಲ ಚೆಲ್ಲಿದರೆ, ನಿನ್ನ ಬೆನ್ನ ಹಿಂದೆ ಇರುವ ಭಟರು ನಿನ್ನ ಶಿರವನ್ನು ಕಡಿಯುತ್ತಾರೆ ಎಂದು ಹೇಳುತ್ತಾನೆ.
(ಮುಂದುವರಿಯುವುದು)
- ಕಿರಣ್ ಉಪಧ್ಯಾಯ
keyrun1970@gmail.com