ಬೈಟುಕಾಫಿ

ನಾಗರಿಕತೆ

ಮಾನವ ತನಗೆ ಬೇಕಾದಂತೆ ಪ್ರಕೃತಿಯನ್ನು ಬಳಸಿಕೊಳ್ಳುತ್ತಾ, ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಾ ಮುಂದೆ ಸಾಗುತ್ತಿದ್ದಾನೆ.

ಮಂಗನಿಂದ ಮಾನವ ಎಂದು ವಿಜ್ಞಾನ ಹೇಳಿದೆ. ಆದರೆ ಈ ಭೂಮಿ ಮೇಲೆ ಮಾನವನ ಸೃಷ್ಟಿಯಾದ ಮೇಲೆ ಸಾಕಷ್ಟು ಬದಲಾವಣೆಗಳು ಆಗುತ್ತಾ ಹೋಗಿವೆ. ಮಾನವ ತನಗೆ ಬೇಕಾದಂತೆ ಪ್ರಕೃತಿಯನ್ನು ಬಳಸಿಕೊಳ್ಳುತ್ತಾ, ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಾ ಮುಂದೆ ಸಾಗುತ್ತಿದ್ದಾನೆ. ಒಬ್ಬ ಮಾಡಿದ ಆವಿಷ್ಕಾರಗಳನ್ನು ಮತ್ತೊಬ್ಬ ಪರಿಷ್ಕರಿಸಿ ಇನ್ನಷ್ಟು ಸರಳ ಮಾಡುತ್ತಾನೆ. ಹೀಗೆ ಆವಿಷ್ಕಾರಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಸಣ್ಣ ಸಲಕರಣೆಗಳಿಂದ ಹಿಡಿದು ದೊಡ್ಡ ದೊಡ್ಡ ಯಂತ್ರೋಪಕರಣಗಳೂ ಇಂದು ನಿತ್ಯದ ಅವಶ್ಯಕತೆಗಳಲ್ಲೊಂದಾಗಿವೆ. ಈ ರೀತಿಯಾಗಿ ಪ್ರಪಂಚವನ್ನೇ ಒಂದು ವಿಸ್ಮಯವನ್ನಾಗಿ ಮಾಡಿದ್ದಾನೆ ಈ ಮಾನವ. ಎಲ್ಲವನ್ನೂ ತನ್ನ ತೆಕ್ಕೆಗೆ ಸೆಳೆದುಕೊಂಡಿದ್ದಾನೆ.
    ಈಗಾಗಲೇ ಮಿಲಿಯನ್‌ಗಟ್ಟಲೆ ಆವಿಷ್ಕಾರಗಳು ಆಗಿ ಹೋಗಿವೆ. ಇನ್ನೂ ಅದೆಷ್ಟೋ ಆಗಬೇಕಿವೆ. ಆದರೆ ಈಗಾಗಲೇ ಆಗಿರುವ ಆವಿಷ್ಕಾರಗಳ ಬಗ್ಗೆ ಒಮ್ಮೆ ಚಿಂತಿಸಿ. ಇವುಗಳು ಇಂದು ನಮ್ಮ ಜೊತೆಯಲ್ಲಿ ಇರದೇ ಹೋಗಿದ್ದರೆ ನಾವು ಹೇಗಿರುತ್ತಿದ್ದೆವು?
    ಹೌದು, ಬಲ್ಬ್‌ಗಳು, ಚಕ್ರಗಳು, ಸೋಪ್‌ಗಳು... ಅದೆಷ್ಟೋ. ಇವುಗಳು ನಮಗೆ ಬೇಕೇ ಬೇಕು. ಅಂತಹ ಆವಿಷ್ಕಾರಗಳಲ್ಲಿ ಇಲ್ಲಿ ಕೇವಲ 50 ಆವಿಷ್ಕಾರಗಳ ಪಟ್ಟಿಯನ್ನು ಮಾಡಿದ್ದೇವೆ. ಇವು ನಮ್ಮ ನಿತ್ಯದ ಕೆಲಸದ ಶ್ರಮವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಿವೆ.

1. ಮೂಲ ಸಲಕರಣೆಗಳು
26 ಲಕ್ಷ ವರ್ಷಗಳ ಹಿಂದೆ
ಪ್ರಾಚೀನ ಶಿಲಾಯುಗದಲ್ಲಿ ಮಾನವರು ತಮ್ಮ ರಕ್ಷಣೆಗಾಗಿ, ಆಹಾರ ಹುಡುಕಲು, ಬೇಟೆಗಾಗಿ ಕಲ್ಲುಗಳನ್ನೇ ಚೂಪಾಗಿ ಮತ್ತು ತಮಗೆ ಬೇಕಾದ ಆಕಾರದಲ್ಲಿ ಆಯುಧಗಳನ್ನಾಗಿ ರಚಿಸಿಕೊಂಡರು. 26 ಲಕ್ಷ ವರ್ಷ ಹಿಂದೆ ಇವುಗಳನ್ನು ಕಂಡುಹಿಡಿಯಲಾಯಿತು. ನಂತರ ಇವುಗಳನ್ನು ಪರಿಷ್ಕರಿಸುತ್ತಾ ವಿವಿಧ ಮೂಲಗಳಿಂದ ಆಯುಧಗಳ ರಚನೆ ಮಾಡಿಕೊಳ್ಳಲಾಗಿದೆ.

2. ಪ್ರಾಥಮಿಕ ಕೃಷಿ
12 ಸಾವಿರ ವರ್ಷಗಳ ಹಿಂದೆ
ನಾಗರಿಕತೆ ಬೆಳೆದಂತೆಲ್ಲಾ ಮಾನವ ಆಹಾರ ಉತ್ಪಾದನೆಯನ್ನೂ ಕಲಿತ. ಆತ ಕೃಷಿ ಮಾಡತೊಡಗಿದ. ಕುಡುಗೋಲಿನಿಂದ ಹಿಡಿದು ನೇಗಿಲ ವರೆಗೆ ಉಪಕರಣಗಳನ್ನು ಕಂಡುಹಿಡಿದು ಅವುಗಳನ್ನು ಜಾನವಾರುಗಳ ಸಹಾಯದಿಂದ ಉಳುಮೆ ಮಾಡುವುದನ್ನು ಕಲಿತ. ಇವುಗಳನ್ನು 12,000 ವರ್ಷಗಳ ಹಿಂದೆಯೇ ಆವಿಷ್ಕರಿಸಿದ್ದು, ಇಂದು ಅವುಗಳ ಪರಿಷ್ಕೃತ ಸಲಕರಣೆಗಳು ಬಂದಿವೆ.

3. ದೋಣಿ
ಕ್ರಿ.ಪೂ.7500
ಭೂಖಂಡ ಶೇ. 70ರಷ್ಟು ನೀರಿನಿಂದ ಆವೃತವಾಗಿದ್ದರಿಂದ ಎಲ್ಲೆಡೆ ಸಂಚರಿಸಲು, ವಸ್ತುಗಳ ಸಾಗಿಸುವ ಸಲುವಾಗಿ ಕ್ರಿ.ಪೂ. 7,500 ವರ್ಷ ಹಿಂದೆ ಬೋಟ್ ಕಂಡುಹಿಡಿಯಲಾಯಿತು. ಮೊದಲಿಗೆ ಕಂಡುಹಿಡಿದಿದ್ದು ತೋಡುದೋಣಿ. ಗಾತ್ರ ಹಾಗೂ ಸಾಮರ್ಥ್ಯವನ್ನು ಹೆಚ್ಚಿಸುತ್ತಾ ಪ್ರಸ್ತುತ ಕ್ರಾಂತಿಕಾರಿ ಆವಿಷ್ಕಾರಗಳನ್ನು ಮಾಡಲಾಗಿದೆ.
ತೋಡುದೋಣಿ (ಕೆನೊಯ್)- ಇವುಗಳನ್ನು ಅಮೆರಿಕಾ, ಯುರೋಪ್ ಜನರು ಬಳಸತೊಡಗಿದ್ದರು.
ಚೈನೀಸ್ ಜಂಕ್ - ಹ್ಯಾನ್ ಡೈನಾಸ್ಟೆ ಎಂಬಾತ ಕ್ರಿ.ಪೂ. 206ರಲ್ಲಿ ಕಂಡುಹಿಡಿದ. ಮರದಿಂದ ತಯಾರಿಸಲಾಗಿದ್ದು, ಸಮುದ್ರದಲ್ಲಿ ಸಂಚರಿಸಲು, ವಸ್ತುಗಳನ್ನು ಸಾಗಿಸಲು ಉಪಯೋಗಿಸಲಾಗುತ್ತಿತ್ತು.
ಗ್ಯಾಲಿಯನ್ ಹಡಗಿಗಿಂತ ಕಡಿಮೆ ಉದ್ದವಿರುವ, ಸ್ವಲ್ಪ ಎತ್ತರವಿರುವ ಹಡಗು- ಈ ಹಡಗಿನಲ್ಲಿ ಹಾಯಿ ಬಳಸಲಾಗಿದೆ. ಸಾಗಣೆ, ವ್ಯಾಪಾರ, ಯುದ್ಧಗಳಿಗೆ ಬಳಸಿಕೊಳ್ಳಲಾಗುತ್ತಿತ್ತು. ಇದರ ವೇಗ ಹಾಗೂ ಬಹುಕಾರ್ಯೋಪಯೋಗಿತ್ವವು 16ನೇ ಶತಮಾನದಲ್ಲಿ ಹೆಚ್ಚು ಜನಪ್ರಿಯವಾಯಿತು.  
ಆವಿ ಹಡಗು- ಇದು ಹುಟ್ಟಿನ ಸಹಾಯವಿಲ್ಲದೇ ನೀರಿನಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. 19ನೇ ಶತಮಾನದ ಕೊನೆಯಲ್ಲಿ ಕಂಡುಹಿಡಿಯಲಾಯಿತು.

4. ಭೂಪಟ
ಕ್ರಿ.ಪೂ.6500
ಭೂಪಟದ ಬಗ್ಗೆ ಅರಿವೇ ಇಲ್ಲದೇ ಬದುಕುವುದು ಎಂದರೆ ಬಾವಿಯೊಳಗಿನ ಕಪ್ಪೆಯಂತೆಯೇ. ಕ್ರಿ.ಪೂ. 6500 ರ ಹಿಂದೆ ಪ್ರಾಚೀನ ಬ್ಯಾಬಿಲೋನಿಯಾದಲ್ಲಿ ಭೂಮಾಪನ ಶಾಸ್ತ್ರ ಪ್ರಾರಂಭವಾಗದಿದ್ದರೆ ಈ ಬಗ್ಗೆ ತಿಳಿಯುವುದು ಮತ್ತಷ್ಟು ವಿಳಂಬವಾಗುತ್ತಿತ್ತು. ಆದರೆ ಈಗಿನ ಟರ್ಕಿಯಲ್ಲಿರುವ ಕ್ಯಾಟಲೋಯುಕ್‌ನಲ್ಲಿ ಆ ನಗರದ ಮತ್ತು ಸುತ್ತಮುತ್ತಲ ಪ್ರದೇಶದ ಗೋಡೆ ಭೂಪಟವನ್ನು ಕಂಡುಹಿಡಿಯಲಾಗಿತ್ತು.

5. ಚಕ್ರ
ಕ್ರಿ.ಪೂ.5150
ಇದನ್ನು ದೊಡ್ಡ ಆವಿಷ್ಕಾರವೆಂದೇ ಹೇಳಬಹುದು. 7150 ವರ್ಷಗಳ ಹಿಂದೆ ಕಂಡುಹಿಡಿಯಲಾಯಿತು. 1000 ವರ್ಷದ ಹಿಂದಿನಿಂದ ರಸ್ತೆಯಲ್ಲಿ ಚಕ್ರ ತಿರುಗುತ್ತಿದೆ. 21ನೇ ಶತಮಾನದಲ್ಲಿ ಆವಿಷ್ಕಾರ ಹೆಚ್ಚಿದ್ದು, ಇಂದಿನ ದಿನವನ್ನು ಅತ್ಯಂತ ಪರಿಣಾಮಕಾರಿ ಹಾಗೂ ಸುಲಭವನ್ನಾಗಿಸಿಕೊಂಡಿದೆ.

6. ಗ್ಲಾಸ್
ಕ್ರಿ.ಪೂ. 4,500
ಇದರ ಬಳಕೆ ಬಗ್ಗೆ ಹೇಳಬೇಕೆಂದಿಲ್ಲ. ಇಂದು ನಾವು ಕಟ್ಟುವ ವಾಚ್, ಕಂಪ್ಯೂಟರ್, ಕನ್ನಡಿ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಸುಮಾರು 4,500 ವರ್ಷಗಳ ಹಿಂದೆ ಮಧ್ಯ ಪ್ರಾಚ್ಯ ಕಾಲದ ಲೋಹಯುಗದಲ್ಲಿ ಕಂಡುಹಿಡಿಯಲಾಯಿತು. ಪ್ರಾಚೀನ ರೋಮನ್ನರು ಗ್ಲಾಸನ್ನು ಅತ್ಯಧಿಕವಾಗಿ ಬಳಸಿದರು.

7. ಅಂಟು
ಕ್ರಿ.ಪೂ.4000
3,000 ವರ್ಷ ಹಿಂದೆಯೇ ಪ್ರಾಚೀನ ಈಜಿಪ್ಟ್‌ನವರು ಅಂಟನ್ನು ಕಂಡುಹಿಡಿದಿದ್ದರು. ಯುರೋಪ್‌ನಲ್ಲಿಯೂ 6,000 ವರ್ಷ ಹಿಂದೆಯೇ ಸಸ್ಯ ಹಾಗೂ ಮರದ ತೊಗಟೆಯಿಂದ ಅಂಟನ್ನು ತಯಾರಿಸಿದ್ದರು.

8. ಅಕ್ಷರ ಮಾಲೆ (ವರ್ಣಮಾಲೆ)
ಕ್ರಿ.ಪೂ.4000
6,000 ವರ್ಷ ಹಿಂದೆ ಮಧ್ಯಪ್ರಾಚ್ಯದ ಪಶ್ಚಿಮ ಪ್ಯಾಲೇಸ್ತೇನಿಯನ್ನರು ಸಂಕೇತದ ವರ್ಣಮಾಲೆ ಮೂಲಕ ಸಂವಹನ ನಡೆಸುತ್ತಿದ್ದರು. ಇದನ್ನು ಸರಳೀಕರಣಗೊಳಿಸಿಕೊಂಡು ಈಜಿಪ್ಟ್‌ನ ಚಿತ್ರಲಿಪಿ ಮೂಲಕ ಸಂವಹನವನ್ನು ಸುಲಭ ಮಾಡಿಕೊಂಡಿದ್ದರು. ಇದು ಸುಶಿಕ್ಷಿತರು, ಗಣ್ಯ ವ್ಯಕ್ತಿಗಳು, ಪಾದ್ರಿಗಳಿಗೆ ಸೀಮಿತವಾಗಿತ್ತು. ಬರ ಬರುತ್ತಾ ಸರಳೀಕರಣಗೊಳಿಸಿ, ಇದೀಗ ಪ್ರಪಂಚದಾದ್ಯಂತ ಒಂದೇ ಭಾಷೆಯಲ್ಲಿ ಸಂವಹನ ನಡೆಸಬಹುದಾಗಿದೆ.

9. ನೇಯ್ಗೆ
ಕ್ರಿ.ಪೂ.3500
ಕ್ರಿ.ಪೂ. 4 ಮಿಲಿಯ ವರ್ಷ ಹಿಂದೆ ಈಜಿಪ್ಟಿನವರು ಕಂಡುಹಿಡಿದರು. ಮೊದಲು ನಿರ್ದಿಷ್ಟ ಅಳತೆಯಲ್ಲಿ ಬಟ್ಟೆ ನೇಯ್ಗೆ ಮಾಡಲಾಗುತ್ತಿತ್ತು. ನಂತರ ಬೇಕಾದ ಮಾದರಿಯಲ್ಲಿ ಏಷ್ಯಾ ಖಂಡ, ಆಫ್ರಿಕಾ, ಯುರೋಪ್, ಪ್ರಾಚೀನ ಗ್ರೀಕ್‌ಗಳಲ್ಲೂ ಇದರ ವ್ಯಾಪ್ತಿ ಹರಡಿತು.

10. ಸೋಪ್
ಕ್ರಿ.ಪೂ.2800
ಬ್ಯಾಬಿಲೋನಿಯಾದಲ್ಲಿ 5000 ವರ್ಷ ಹಿಂದೆಯೇ ಕಂಡುಹಿಡಿಯಲಾಯಿತು. ಕೊಬ್ಬು ಮತ್ತು ಆ್ಯಶ್ ಮರದ ಬೂದಿಯನ್ನು ಹಾಕಿ ಕುದಿಸಿ, ನಂತರ ದೊಡ್ಡ ಕಡಾಯಿಗೆ ಹಾಕಿ ಕಚ್ಚಾ ಸಾಬೂನನ್ನು ತಯಾರು ಮಾಡಲಾಗುತ್ತಿತ್ತು. 19ನೇ ಶತಮಾನದಲ್ಲಿ ಸ್ಪೇನ್‌ನವರು ಗಟ್ಟಿ ಸಾಬೂನನ್ನು ಜಗತ್ತಿಗೆ ಪರಿಚಯಿಸಿದರು.

11. ಚರಂಡಿ ಪದ್ಧತಿ
ಕ್ರಿ.ಪೂ.2500
ಸಿಂಧೂ ನಾಗರಿಕರು ಚರಂಡಿ ಪದ್ಧತಿಯನ್ನು ಕ್ರಿ.ಪೂ. 2,500 ಇಸವಿಯ ಹಿಂದೆ ಕಂಡುಹಿಡಿದರು. ಮಳೆ ನೀರು, ಕೊಳಚೆ ನೀರು ವಾಸಸ್ಥಳದಲ್ಲಿಯೇ ಹರಿಯುತ್ತಿತ್ತು. ಇದಕ್ಕೆ ಪರ್ಯಾಯ ಮಾರ್ಗದ ಬಗ್ಗೆ ಯೋಚಿಸಿದಾಗ ನೆಲ ಮಟ್ಟದಿಂದ ಕೆಳಗೆ ಕಾಲುವೆ ರೀತಿ ತೋಡುವ ಉಪಾಯ ಹೊಳೆಯಿತು.

12. ಆಯಸ್ಕಾಂತೀಯ ದಿಕ್ಸೂಚಿ
ಕ್ರಿ.ಪೂ,200
ಕ್ರಿ.ಪೂ. 200ರಲ್ಲಿ ಚೀನಾದವರು ಮೊದಲ ಬಾರಿಗೆ ಕಲ್ಲು ಹಾಗೂ ಕಾಂತೀಯ ಗುಣಗಳಿರುವ ಕಬ್ಬಿಣದ ಅದಿರನ್ನು ಉಪಯೋಗಿಸಿ ದಿಕ್ಸೂಚಿ ಕಂಡುಕೊಂಡರು. 1,000 ವರ್ಷ ನಂತರ ಮತ್ತೆ ಚೀನಾದವರೇ ಸಮುದ್ರಯಾನಕ್ಕಾಗಿ ಆಯಸ್ಕಾಂತೀಯ ದಿಕ್ಸೂಚಿ ಕಂಡುಕೊಂಡರು. ಈ ಅನ್ವೇಷಣೆ 16 ಮತ್ತು 17ನೇ ಶತಮಾನದಲ್ಲಿ ಸಾಕಷ್ಟು ಬಳಕೆಯಾಯಿತು.

13. ಚರ್ಮ ಕಾಗದ ಕ್ರಿ.ಪೂ.150
ಜೋಡುಹುಲ್ಲುಗಳ ಸಹಾಯದಿಂದ ಮೊದಲು ತೊಗಲು ಹಾಳೆ ಕಂಡುಹಿಡಿಯಲಾಯಿತು. ಇವುಗಳಲ್ಲಿ ಪ್ರಾಚೀನ ಶಾಸನ ಲಿಪಿ ಬರೆಯಲಾಗುತ್ತಿತ್ತು. ಇದರಿಂದಲೇ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸಲು ಸಹಾಯಕವಾಯಿತು. ಮೊದಲಿಗೆ ಸುರುಳಿಯಾಕಾರದಲ್ಲಿ ತೊಗಲು ಹಾಳೆ ತಯಾರಿಸಲಾಗುತ್ತಿತ್ತು. ನಂತರ ನೆಟ್ಟಗೆ ಇಡಬಲ್ಲ ಹಾಳೆ ರಚಿಸಲಾಯಿತು.

14. ಕ್ಯಾಲೆಂಡರ್
ಕ್ರಿ.ಪೂ.46
ಕ್ರಿ.ಪೂ. 2000ದಲ್ಲಿ ಸುಮೇರಿಯನ್ ನಾಗರಿಕರು ಸುಮೇರಿಯನ್ ಕ್ಲೂನರ್ ಎಂಬ ಕ್ಯಾಲೆಂಡರ್ ಅನ್ನು ಕಂಡುಹಿಡಿದರು. ಕ್ರಿ.ಪೂ. 46ರಲ್ಲಿ ರೋಮ್‌ನಲ್ಲಿ ಜ್ಯೂಲಿಯಸ್ ಸೀಸರ್ ರೋಮ್ ಕ್ಯಾಲೆಂಡರ್ ಕಂಡು ಹಿಡಿದ. ಕ್ರಿ.ಶ. 1583ರಲ್ಲಿ 8ನೇ ಪೋಪ್ ಜಾರ್ಜ್ ಕಾಲದಲ್ಲಿ ಜಾರ್ಜಿಯನ್ ಕ್ಯಾಲೆಂಡರ್ ಅನ್ವೇಷಿಸಲಾಯಿತು. ಪ್ರಸ್ತುತ ಇಡೀ ವಿಶ್ವದಲ್ಲಿ ಇದನ್ನು ಬಳಸಲಾಗುತ್ತಿದೆ.

15. ಗನ್ ಪೌಡರ್
(ಬಂದೂಕು ಪುಡಿ)

800
ಚೀನಾದ ರಸವಾದಿ ತಜ್ಞ ಇದನ್ನು ಕಂಡುಹಿಡಿದ. ಪೊಟಾಶಿಯಂ ನೈಟ್ರೇಟ್, ಇದ್ದಿಲು ಮತ್ತು ಗಂಧಕವನ್ನು ಬಳಸಿ ಗನ್ ಪೌಡರ್ ಕಂಡುಹಿಡಿಯಲಾಯಿತು. ಬಿದಿರಿನ ಕೊಳವೆಗೆ ಲೋಹದ ದುಂಡು ಪಟ್ಟಿಯನ್ನು ಜೋಡಿಸಿ ಈ ಪುಡಿ ಹಾಕಿ ಉಡಾಯಿಸಲಾಗುತ್ತಿತ್ತು. ಇದನ್ನು ಮಧ್ಯಕಾಲೀನ ಯುಗದಲ್ಲಿ ಬಾಂಬು ತೋಪುಗಳಲ್ಲಿ ಬಳಸಿಕೊಳ್ಳಲಾಗುತ್ತಿತ್ತು.

16. ಗಾಳಿಯಂತ್ರ
800
ಪೂರ್ವ ಪರ್ಷಿಯಾದವರು 9ನೇ ಶತಮಾನದಲ್ಲಿ ಗಾಳಿಯಂತ್ರ ಕಂಡುಹಿಡಿದರು. ಇದರ ಶಕ್ತಿಯನ್ನು ಬಟ್ಟೆಗೆ ಹೊಳಪು ನೀಡಲು, ಬೇಸಾಯಕ್ಕೆ ನೀರನ್ನು ಎತ್ತಲು ಬಳಸಲಾಗುತ್ತಿತ್ತು. ನಂತರ ಹಾಲೆಂಡ್‌ನಲ್ಲಿ ಹಾಗೂ 18ನೇ ಶತಮಾನದಲ್ಲಿ ಯುರೋಪ್‌ನಲ್ಲಿ ಪರಿಷ್ಕೃತ ರೂಪದ ಗಾಳಿಯಂತ್ರವನ್ನು ತಯಾರಿಸಲಾಯಿತು.

17. ರಾಕೆಟ್
904
ಬಂದೂಕು ಪುಡಿಯನ್ನು ಕಂಡು ಹಿಡಿದ ಚೀನಾ ಕೆಲವೇ ವರ್ಷಗಳಲ್ಲಿ ರಾಕೆಟ್ ಅನ್ನು ಸಹ ಕಂಡುಹಿಡಿಯಿತು. ಇದಕ್ಕೆ ಫೈರ್ ಆರೋಸ್ ಎಂದು ಕರೆಯಿತು. ಈ ಆಯುಧ ಉತ್ತಮ ತಂತ್ರಜ್ಞಾನದಿಂದ ಕೂಡಿದ್ದು, ಬಂದೂಕು ಪುಡಿಯನ್ನು ಇದರ ನಳಿಕೆಯೊಳಗೆ ತುಂಬಿ ಉಡಾಯಿಸಲಾಗುತ್ತಿತ್ತು. 13ನೇ ಶತಮಾನದಲ್ಲೇ ಬಳಕೆ.

18. ಕನ್ನಡಕ
1286
13ನೇ ಶತಮಾನದಲ್ಲಿ ಇಟಲಿಯವರು ಇದನ್ನು ಕಂಡುಹಿಡಿದರು. ಆಗ ಪವರ್ ಲೆನ್ಸ್‌ನ ಬಗ್ಗೆ ಅಷ್ಟಾಗಿ ತಿಳಿವಳಿಕೆ ಇರಲಿಲ್ಲ. ಓದಲು ಅಥವಾ ನೋಡಲು ಸಾಧ್ಯವಾಗುವಷ್ಟು ಮಟ್ಟಿಗೆ ಕನ್ನಡಕದ ಗ್ಲಾಸ್ ಅನ್ನು ಕಂಡುಕೊಳ್ಳಲಾಗಿತ್ತು.

19. ಗಡಿಯಾರ
13ನೇ ಶತಮಾನ
13ನೇ ಶತಮಾನದಲ್ಲಿ ಯಂತ್ರಚಾಲಿತ ಗಡಿಯಾರ ಬರುವವರೆಗೂ ನೀರಿನ ಹಾಗೂ ಸೂರ್ಯನ ಕಿರಣಗಳ ಸಹಾಯದಿಂದ ಸಮಯ ಅಂದಾಜಿಸಲಾಗುತ್ತಿತ್ತು.

20.ಮುದ್ರಣ ಯಂತ್ರ

15ನೇ ಶತಮಾನದ ಮಧ್ಯಭಾಗದಲ್ಲಿ ಜಾಹನಸ್ ಗುಟೆನ್‌ಬರ್ಗ್ ಕಂಡುಹಿಡಿದ. ಇದರಿಂದ ಪುಸ್ತಕ, ಕಡತಗಳನ್ನು ಸುಲಭವಾಗಿ ಮುದ್ರಿಸಿ ಸಂಗ್ರಹಿಸಿಡಲು ಅನುಕೂಲವಾಯಿತು. ಕಡಿಮೆ ವೆಚ್ಚದಲ್ಲಿ ಅಚ್ಚು ಮಾಡಬಹುದಾಗಿದ್ದರಿಂದ ಹೆಚ್ಚು ಜನಪ್ರಿಯವಾಯಿತು.


21. ಮೈಕ್ರೋಸ್ಕೋಪ್ (ಸೂಕ್ಷ್ಮ ದರ್ಶಕ)
1590
ಡಚ್‌ನ ದರ್ಪಣ ತಯಾರಕ ಜಚಾರಿಸ್ ಜಾನ್ಸನ್ ಎಂಬಾತ ಟೆಲಿಸ್ಕೋಪ್‌ನ ರಚನೆಯನ್ನು ತಲೆಕಳಗೆ (ವಿಪರ್ಯಕ) ಮಾಡಿದ್ದರಿಂದ ಸೂಕ್ಷ್ಮದರ್ಶಕ ಉತ್ಪತ್ತಿಯಾಯಿತು. ಇದು ಪ್ರಾಥಮಿಕ ಹಂತ. 1655ರಲ್ಲಿ ರಾಬರ್ಟ್ ಹೂಕ್ ಕಂಡು ಹಿಡಿದ ಮೈಕ್ರೋಗ್ರಾಫಿಯಾ ವಿಜ್ಞಾನಿಗಳ ಬಳಕೆಗೆ ಹೆಚ್ಚು ಅನುಕೂಲವಾಯಿತು.

22. ಫ್ಲಶ್ ಟಾಯ್ಲೆಟ್
1596
ಚರಂಡಿ ಪದ್ಧತಿ ಬಂದಾಗಲೇ ಶೌಚಾಲಯ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿತ್ತು. ಆದರೆ ಶೌಚಾಲಯದಲ್ಲಿ ಕೆಲವೊಮ್ಮೆ ನೀರು ಹಾಕಿದರೂ ಗಲೀಜು ಹಾಗೇ ಉಳಿದುಕೊಳ್ಳುತ್ತಿತ್ತು. ಇಂಗ್ಲೆಂಡ್‌ನ ಬರಹಗಾರ ಜಾನ್ ಹ್ಯಾರಿಂಗ್ಟನ್ ತನ್ನ ಶೌಚಾಲಯದಲ್ಲಿ ರಭಸವಾಗಿ ನೀರು ಹರಿಯುವಂತೆ ಮಾಡುವ ವ್ಯವಸ್ಥೆ ಮಾಡಿಕೊಂಡ. ಇದಕ್ಕಾಗಿ ಕವಾಟ ರಚಿಸಿ, ನೀರಿನ ತೊಟ್ಟಿಯಿಂದ ರಭಸವಾಗಿ ನೀರು ಬರುವಂತೆ ಮಾಡಿ ಶೌಚಗುಂಡಿ ಸ್ವಚ್ಛಗೊಳಿಸುವ ರಚನೆ ಮಾಡಿದ್ದ.

23. ಟೆಲಿಸ್ಕೋಪ್(ದೂರದರ್ಶಕ)
1609
ಜರ್ಮನಿ-ಡಚ್‌ನ ದರ್ಪಣಕಾರ ಹ್ಯಾನ್ಸ್ ಲಿಪ್ಪರ್‌ಶೆ ಇದನ್ನು ಕಂಡುಹಿಡಿದ ಎಂದು ಕೆಲವರು ವಾದಿಸುತ್ತಾರೆ. ಗೆಲಿಲಿಯೋ ಎಂದು ಕೆಲ ಇತಿಹಾಸಕಾರರು ವಾದಿಸುತ್ತಾರೆ. ಹ್ಯಾನ್ಸ್ ಕಂಡುಹಿಡಿದ ಮಾದರಿಯನ್ನು ಪರಿಷ್ಕರಿಸಿ 1609ರಲ್ಲಿ ಗೆಲಿಲಿಯೋ ಟೆಲಿಸ್ಕೋಪ್ ಕಂಡುಹಿಡಿದ ಎಂಬ ವಾದವೂ ಪ್ರಚಲಿತದಲ್ಲಿದೆ. ಗೆಲಿಲಿಯೋ ಟೆಲಿಸ್ಕೋಪ್‌ನಿಂದ 20 ಅಡಿಗಿಂತ ಹೆಚ್ಚಿನ ದೂರವನ್ನು ವೀಕ್ಷಿಸಬಹುದಾಗಿತ್ತು. 1668ರಲ್ಲಿ ನ್ಯೂಟೋನಿಯನ್ ಟೆಲಿಸ್ಕೋಪ್ ಅನ್ನು ಐಸಾಕ್ ನ್ಯೂಟನ್ ಕಂಡುಹಿಡಿದ.

24. ಎಂಜಿನ್
1712
1712ರಲ್ಲಿ ನ್ಯೂಕಾಮನ್ ಅಭಿವೃದ್ಧಿಪಡಿಸಿದ ಉಗಿ ಎಂಜಿನ್‌ನಿಂದ ಕಾರ್ಲ್ ಬೆನ್ಜ್ ಅವರ ಎರಡು-ಸ್ಟ್ರೋಕ್‌ಗಳ ಪೆಟ್ರೋಲ್ ಎಂಜಿನ್, ಈಗ ಚಾಲ್ತಿಯಲ್ಲಿರುವ ಹೈಟೆಕ್ ಹೈಡ್ರೋಜನ್ ಯಂತ್ರಗಳವರೆಗೂ ಎಂಜಿನ್‌ನ ಸಂಶೋಧನೆಯು ಮಹತ್ವದ್ದು. ಪ್ರಥಮ ಶತಮಾನದಲ್ಲೇ ಸ್ಟೀಮ್ ಎಂಜಿನ್ ಚಾಲ್ತಿಯಲ್ಲಿದ್ದರೂ ಅದು ಹೆಚ್ಚು ಬಳಕೆಗೆ ಬಂದಿದ್ದು 1712ರ ಬಳಿಕ. ನಂತರ ಬಂದಿದ್ದೇ ಪೆಟ್ರೋಲ್ ಎಂಜಿನ್. ಇದನ್ನು ಮೋಟಾರು ಕಾರುಗಳಲ್ಲಿ ಬಳಸಲಾಗುತ್ತಿತ್ತು. ತದನಂತರ ರುಡಾಲ್ಫ್ ಡೀಸೆಲ್ ಎಂಬಾತ ಡೀಸೆಲ್ ಎಂಜಿನ್ ಅಭಿವೃದ್ಧಿಪಡಿಸಿದ. 1899ರಲ್ಲಿ ಕ್ಯಾಮಿಲ್ ಜೆನಾಟ್ಝಿ ಎಲೆಕ್ಟ್ರಿಕ್ ಕಾರು ಅಭಿವೃದ್ಧಿಪಡಿಸಿದರು. ಮೊದಲು ಎಲ್ಲರ ಅಪಹಾಸ್ಯಕ್ಕೊಳಗಾದರೂ ಕೆಲವೇ ವರ್ಷಗಳಲ್ಲಿ ಅದು ಅಭೂತಪೂರ್ವ ಸಾಧನೆ ತೋರಿತು.

25. ವಿದ್ಯುಚ್ಛಕ್ತಿ
1752
ತತ್ವಜ್ಞಾನಿ ಥೇಲ್ಸ್ ಕ್ರಿ.ಪೂ. 600ರಲ್ಲೇ ಸ್ಥಾಯಿ ವಿದ್ಯುತ್ ಬಗ್ಗೆ ಹಲವಾರು ಸಂಶೋಧನೆ ಕೈಗೊಂಡಿದ್ದರು. ಅದು ಪೂರ್ಣಗೊಂಡಿರಲಿಲ್ಲ. 1752ರಲ್ಲಿ ಈ ಸಂಶೋಧನೆಗಳ ಅಂಶಗಳನ್ನೂ ಸೇರಿಸಿಕೊಂಡು ಬೆಂಜಮಿನ್ ಫ್ರಾಂಕ್ಲಿನ್ ಅಧ್ಯಯನ ಕೈಗೊಂಡ ಬಳಿಕವೇ ಅದರ ನೈಜ ಶಕ್ತಿ ಹೊರಹೊಮ್ಮಿತು. ಫ್ರಾಂಕ್ಲಿನ್‌ನ ಅವಿರತ ಶ್ರಮದಿಂದಾಗಿ ನಾವೀಗ 'ಬೆಳಕು' ಕಾಣುತ್ತಿದ್ದೇವೆ.

26. ಲಸಿಕೆಗಳು
1796
ಸಿಡುಬು ರೋಗ ಜನರನ್ನು ಕಿತ್ತು ತಿನ್ನುತ್ತಿತ್ತು. ಈ ವೇಳೆ, ಇಂಗ್ಲಿಷ್ ವೈದ್ಯ ಎಡ್ವರ್ಡ್ ಜೆನ್ನರ್, ಸ್ಮಾಲ್‌ಪಾಕ್ಸ್ ಮತ್ತು ಕೌಪಾಕ್ಸ್ ನಡುವೆ ಲಿಂಕ್ ಇರುವುದನ್ನು ಮನಗಂಡರು. ಆ ನಿಟ್ಟಿನಲ್ಲಿ ಪ್ರಯೋಗ ನಡೆಸಿದರು. 1798ರಲ್ಲಿ ತಮ್ಮ ಅಧ್ಯಯನದ ವರದಿ ಪ್ರಕಟಿಸಿದರು. ಬಳಿಕ ಅವರು ಕಂಡುಹಿಡಿದ ಲಸಿಕೆಯು ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಕಡ್ಡಾಯವಾಯಿತು.

27. ಬ್ಯಾಟರಿ
1799
ನಾವು ಇಂದು ಬಳಸುವ ಎಲೆಕ್ಟ್ರೋಕೆಮಿಕಲ್ ಬ್ಯಾಟರಿ ಅಭಿವೃದ್ಧಿಪಡಿಸಿದವರು ಇಟಲಿಯ ವಿಜ್ಞಾನಿ ಅಲೆಸ್ಸ್ಯಾಂಡ್ರೋ ವೋಲ್ಟಾ. ಪೈಲ್‌ನ ತುದಿಗಳನ್ನು ಲೋಹದ ವೈರ್ ಮೂಲಕ ಕನೆಕ್ಟ್ ಮಾಡಿದಾಗ ಸಣ್ಣಮಟ್ಟಿನ ವಿದ್ಯುತ್‌ನ ಹರಿವು ಕಂಡುಬಂದಿತು. ವರ್ಷದಿಂದ ವರ್ಷಕ್ಕೆ ಈ ಬ್ಯಾಟರಿಯಲ್ಲಿ ಸುಧಾರಣೆ ತರಲಾಯಿತು.

28. ಕ್ಯಾನ್ಡ್ ಫುಡ್
1810
19ನೇ ಶತಮಾನದ ಆರಂಭದಲ್ಲಿ ಕಂಡುಹಿಡಿಯಲಾಯಿತು. ಇದು ಆಹಾರವನ್ನು ಸುರಕ್ಷಿತವಾಗಿಡಲು ನೆರವಾಗುವುದಲ್ಲದೆ, ಸಾಗಿಸಲು ಸುಲಭವಾಗುವಂತೆ ಕಂಟೈನರ್ ಒಳಗೊಂಡಿದೆ. ಮೊದಮೊದಲು ವ್ಯಕ್ತಿಯೊಬ್ಬ ಸರಾಸರಿ ಎಷ್ಟು ತಿನ್ನುತ್ತಾನೋ ಅಷ್ಟನ್ನು ಮಾತ್ರವೇ ಕ್ಯಾನ್ಡ್ ಫುಡ್‌ನಲ್ಲಿ ಸಾಗಿಸಲಾಗುತ್ತಿತ್ತು.

29.  ಫೋಟೋಗ್ರಫಿ
1826
ಒಬ್ಬ ವ್ಯಕ್ತಿ ಅಥವಾ ಸ್ಥಳವನ್ನು ದಾಖಲು ಮಾಡಲು ಎಷ್ಟೋ ಶತಮಾನಗಳ ಕಾಲ ಬಣ್ಣ, ಚಿತ್ರಕಲೆಯನ್ನೇ ನೆಚ್ಚಿಕೊಳ್ಳಲಾಗಿತ್ತು. 1826ರಲ್ಲಿ ಪ್ಯೂಟರ್ ಪ್ಲೇಟ್ ಅನ್ನು ಬಿಟುಮನ್‌ನಿಂದ ಮುಚ್ಚುವ ಮೂಲಕ ಜೋಸೆಫ್ ನೈಸ್‌ಫೋರ್ ನೀಪ್ಸ್ ಎಂಬ ಫ್ರೆಂಚ್ ಸಂಶೋಧಕ ಮೊದಲ ಶಾಶ್ವತ ಫೋಟೋಗ್ರಾಫಿಕ್ ಚಿತ್ರವನ್ನು ಸೆರೆಹಿಡಿದರು. ಬಳಿಕ ಬಿಟುಮನ್‌ನ ಸ್ಥಳಕ್ಕೆ ಬೆಳ್ಳಿಯನ್ನು ಇಟ್ಟು ವಿವಿಧ ಸುಧಾರಣೆಗಳನ್ನು ತರಲಾಯಿತು.

30.  1835 ವಿದ್ಯುದ್ದೀಪ
ಥಾಮಸ್ ಎಡಿಸನ್ ಹಾಗೂ ಜೋಸೆಫ್ ಸ್ವಾನ್ ಲೈಟ್ ಬಲ್ಬ್ ಸಂಶೋಧಿಸುವ ಎಷ್ಟೋ ವರ್ಷ ಮೊದಲೇ ಜೇಮ್ಸ್ ಬೋಮನ್ ಲಿಂಡ್ಸೆ ಎಂಬುವರು ತಾನು ಕಂಡುಹಿಡಿದ ಲೈಟ್ ಬಲ್ಬ್ ಅನ್ನು ಡಂಡೀಯಲ್ಲಿ ಸಾರ್ವಜನಿಕವಾಗಿ ಪ್ರದರ್ಶಿಸಿದ್ದರು. ಅದು ಎಷ್ಟು ಪವರ್‌ಫುಲ್ ಆಗಿತ್ತೆಂದರೆ ಈ ಬಲ್ಬ್ ಇದ್ದರೆ 0.4 ಮೀಟರ್ ದೂರದಿಂದ ಪುಸ್ತಕ ಓದಬಹುದಾಗಿತ್ತು. ಆದರೆ, ಲಿಂಡ್ಸ್ ತಮ್ಮ ಬಲ್ಬ್‌ಗೆ ಪೇಟೆಂಟ್ ಪಡೆಯಲೇ ಇಲ್ಲ. ಈ ಕ್ರಾಂತಿಕಾರಿ ಬೆಳಕು ನೀಡುವ ಸಾಧನಕ್ಕೆ ಸ್ಥಿರ ವಿದ್ಯುತ್ ಜನರೇಟರ್ ಸೇರಿಸಿ ಎಡಿಸನ್ ವಿದ್ಯುತ್ ಬಲ್ಬ್ ಕಂಡುಹಿಡಿದರು.

31.  1856 ಪ್ಲಾಸ್ಟಿಕ್
ಬ್ರಿಟಿಷ್ ವಿಜ್ಞಾನಿ ಅಲೆಕ್ಸಾಂಡರ್ ಪಾರ್ಕ್ಸ್ ಅವರು ನೈಟ್ರಿಕ್ ಆಮ್ಲದೊಂದಿಗೆ ಸಂಸ್ಕರಿಸಿದ ಸೆಲ್ಯುಲೋಸ್ ಮೂಲಕ ಮೊದಲ ಮಾನವ ನಿರ್ಮಿತ ಪ್ಲಾಸ್ಟಿಕ್ ಸೃಷ್ಟಿಸಿದರು. ಇದಕ್ಕೆ ಪಾರ್ಕೆಸಿನ್ ಎಂದು ಹೆಸರಿಸಲಾಗಿತ್ತು. 1862ರಲ್ಲಿ ಲಂಡನ್‌ನ ಕೈಗಾರಿಕಾ ವಸ್ತುಪ್ರದರ್ಶನದಲ್ಲಿ ಈ ಪ್ಲಾಸ್ಟಿಕ್‌ಗೆ ಕಂಚಿನ ಪದಕ ದೊರೆಯಿತು. ಬಳಿಕ ಪಾರ್ಕ್ಸ್ ಪ್ಲಾಸ್ಟಿಕ್‌ನ ಹೊಸ ಹೊಸ ರೂಪಗಳ ಸೃಷ್ಟಿಯಲ್ಲಿ ತೊಡಗಿದರು.

32.  ಟೆಲಿಫೋನ್
1876
ವಿಶ್ವದ ಪ್ರಥಮ ಟೆಲಿಫೋನ್ ಸಂಶೋಧಕ ಅಂಟೋನಿಯೋ ಮೆಕ್ಕಿ. ಆದರೆ, ದೂರವಾಣಿಯ ಒಟ್ಟಾರೆ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡು ಪೇಟೆಂಟ್ ಪಡೆಯುವ ಮೂಲಕ ಅಲೆಕ್ಸಾಂಡರ್ ಗ್ರಹಾಂಬೆಲ್ ಅವರು ಟೆಲಿಫೋನ್ ಸಂಶೋಧಕ ಎಂಬ ಹೆಸರು ಗಳಿಸಿದರು. ಬಳಿಕ ಬೆಲ್ ಟೆಲಿಫೋನ್ ಕಂಪನಿಯನ್ನೂ ಸ್ಥಾಪಿಸಿದರು. 1886ರ ವೇಳೆಗೆ ಅಮೆರಿಕದ 1.50 ಲಕ್ಷ ಕಟ್ಟಡಗಳು ದೂರವಾಣಿ ಸಂಪರ್ಕ ಪಡೆದವು.

33.  ಫೋನೋಗ್ರಾಫ್
1877
ಧ್ವನಿಯನ್ನು ರೆಕಾರ್ಡ್ ಮಾಡಿ, ಮತ್ತೆ ಪ್ಲೇ ಮಾಡುವಂತಹ ಮೊತ್ತಮೊದಲ ಸಾಧನವೇ ಫೋನೋಗ್ರಾಫ್. 1877ರಲ್ಲಿ ಥಾಮಸ್ ಎಡಿಸನ್ ಕಂಡುಹಿಡಿದ ಫೋನೋಗ್ರಾಫ್ ನಮ್ಮ ಇಂದಿನ ಸಂಗೀತ ಕ್ಷೇತ್ರಕ್ಕೆ ಅಡಿಪಾಯ ಹಾಕಿಕೊಟ್ಟಿತು. ಬಳಿಕ ಗ್ರಾಮೋಫೋನ್, ತದನಂತರ ಟರ್ನ್‌ಟೇಬಲ್ ಅಸ್ತಿತ್ವಕ್ಕೆ ಬಂದವು.

34.  ಕಾರು
1882ಉಗಿ ಮತ್ತು ಅಶ್ವಶಕ್ತಿ ಪ್ರಯಾಣವನ್ನು ಹಿಂದಿಕ್ಕಿ ನಾವೀಗ ಓಡಾಡುವ ಕಾರನ್ನು ಅಭಿವೃದ್ಧಿಪಡಿಸಿದವರು ಜರ್ಮನ್‌ನ ಎಂಜಿನಿಯರ್ ಕಾರ್ಲ್ ಬೆಂಜ್. ಈಗ ವಿಶ್ವಾದ್ಯಂತ ಒಂದು ಶತಕೋಟಿಗೂ ಹೆಚ್ಚು ಕಾರುಗಳಿವೆ.

36. ವೈರ್‌ಲೆಸ್ ಸಂವಹನ  
1891
ನಿಕೋಲಾ ಟೆಸ್ಲಾ 1891ರಲ್ಲಿ ಕಂಡುಹಿಡಿದ ವೈರ್‌ಲೆಸ್ ಕಮ್ಯೂನಿಕೇಷನ್ಸ್ ನೆಟ್‌ವರ್ಕ್ ಹತ್ತು ಹಲವು ಸಂಶೋಧನೆಗಳಿಗೆ ನಾಂದಿ ಹಾಡಿತು. ಸರ್ ಒಲಿವರ್ ಲಾಡ್ಜ್ 1894ರಲ್ಲಿ ಪ್ರಥಮ ಟ್ರಾನ್ಸ್‌ಮಿಷನ್ ಸಿಗ್ನಲ್ ಕಳುಹಿಸುವಲ್ಲಿ ಯಶಸ್ವಿಯಾದರು. ಬಳಿಕ ಮಾರ್ಕೋನಿಯಿಂದ ರೇಡಿಯೋ, ಜಾನ್ ಲಾಗ್ಗಿ ಬೈರ್ಡ್‌ರಿಂದ ಟಿವಿ, ಮೊಬೈಲ್, ವೈಫೈ ಹೀಗೆ ಒಂದೊಂದೇ ಸಾಧನ ಬರತೊಡಗಿದವು.

37. ಏರೋಪ್ಲೇನ್
1903
ರೈಟ್ ಸಹೋದರರು ಮೊದಲ ಬಾರಿಗೆ ವಿಮಾನಯಾನದ ಯುಗಕ್ಕೆ 1903ರಲ್ಲಿ ನಾಂದಿಹಾಡಿದರು. ಕೇವಲ 73 ವರ್ಷಗಳಲ್ಲಿ ಎಷ್ಟು ಮುಂದುವರಿದೆವು ಎಂದರೆ, ಕೇವಲ 260 ಮೀಟರ್ ಚಲಿಸಿದ ರೈಟ್ ಫ್ಲೈಯರ್‌ನಿಂದ ಗಂಟೆಗೆ ಬರೋಬ್ಬರಿ 2,172 ಕಿ.ಮೀ. ಚಲಿಸುವ ಸೂಪರಸಾನಿಕ್ ಪ್ಯಾಸೆಂಜರ್ ಜೆಟ್‌ವರೆಗೆ ವಿಮಾನಯಾನ ಕ್ಷೇತ್ರದಲ್ಲಿ ಬದಲಾವಣೆ ಕಂಡುಬಂತು.

38.  ರೆಫ್ರಿಜರೇಟರ್
1922
ದೀರ್ಘಕಾಲ ಆಹಾರವನ್ನು ಕೆಡದಂತೆ ಇಡಬಲ್ಲ ರೆಫ್ರಿಜರೇಟರ್ ಸಂಶೋಧಿಸಿದ್ದು 1922ರಲ್ಲಿ. ಅದು ಹೇಗೆಂದರೆ, ಸ್ವೀಡನ್‌ನ ರಾಯಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಇಬ್ಬರು ವಿದ್ಯಾರ್ಥಿಗಳು ಅನಿಲವನ್ನು ಹೀರಬಲ್ಲಂತಹ ಚಿಲ್ಲಿಂಗ್ ಕ್ಯಾಬಿನೆಟ್‌ವೊಂದನ್ನು ಅಭಿವೃದ್ಧಿಪಡಿಸಿದರು. ಆಗ ಇದರಲ್ಲಿ ವಿದ್ಯುತ್ ಬಳಕೆ ಮಾಡಿರಲಿಲ್ಲ. ಸ್ಥಿತಿ ಬದಲಾಯಿಸುವ ಅನಿಲಗಳೇ ಆಂತರಿಕ ತಾಪಮಾನವನ್ನು ನಿಯಂತ್ರಿಸುತ್ತಿತ್ತು. ಆದರೆ, ಈ ಫ್ರಿಜ್‌ಗೆ ಹೆಚ್ಚು ಜನಪ್ರಿಯತೆ ದೊರೆಯಲೇ ಇಲ್ಲ. ಬಳಿಕ ಬಂದ ಎಲೆಕ್ಟ್ರಿಕ್ ಫ್ರಿಜ್ ವಿಶ್ವಾದ್ಯಂತ ಕ್ಲಿಕ್ ಆಯಿತು.

39. ಟೆಲಿವಿಷನ್
1926
ಜಾನ್ ಲಾಗಿ ಬೇರ್ಡ್ ಅವರು ಆವಿಷ್ಕರಿಸಿದ ಟೆಲಿವಿಷನ್ ಈಗ ಎಲ್ಲರ ಮನೆಯ ಮೂಲಸೌಕರ್ಯದಂತಾಗಿ ಬಿಟ್ಟಿದೆ. ಅಮೆರಿಕದ ಸಂಶೋಧಕ ಫಿಲೋ ಫಾರ್ನ್ಸ್‌ವರ್ತ್ 1930ರಲ್ಲಿ ಮೊದಲ ಆಲ್-ಎಲೆಕ್ಟ್ರಾನಿಕ್ ಟಿವಿ ಕಂಡುಹಿಡಿದರು. ಬಳಿಕ ಕಲರ್ ಟಿವಿ, ಎಲ್‌ಸಿಡಿ ಟಿವಿ, ಎಲ್‌ಇಡಿ ಟಿವಿಗಳು ಒಂದೊಂದಾಗಿ ಮಾರುಕಟ್ಟೆಗೆ ಲಗ್ಗೆಯಿಟ್ಟವು.

40. ಪೆನ್ಸಿಲಿನ್  
1928
ಪೆನ್ಸಿಲಿನ್ ಆವಿಷ್ಕಾರ ನಡೆದಿದ್ದು ಆಕಸ್ಮಿಕವಾಗಿ. ಆದರೆ ಅಲೆಕ್ಸಾಂಡರ್ ಫ್ಲೆಮಿಂಗ್ ಅವರ ಈ ಆವಿಷ್ಕಾರ ಆಧುನಿಕ ಮೆಡಿಸಿನ್‌ನಲ್ಲೂ ಪ್ರಭಾವ ಬೀರುತ್ತಿರುವುದು ವಿಶೇಷ. ಹಲವು ಬಗೆಯ ಸೋಂಕುಗಳನ್ನು ತಡೆಯಲು ಇಂದಿಗೂ ಪೆನ್ಸಿಲಿನ್ ಬಳಸಲಾಗುತ್ತದೆ.

   
41.  ರೇಡಾರ್
1935
ಎರಡನೇ ವಿಶ್ವಯುದ್ಧದ ಸಂದರ್ಭ ಬ್ರಿಟಿಷರು ನಡೆಸಿದ 'ಡೆತ್ ರೇ' ಪ್ರಾಜೆಕ್ಟ್ ವೇಳೆ ಆವಿಷ್ಕರಿಸಲ್ಪಟ್ಟದ್ದೇ ರೇಡಾರ್. ವ್ಯಕ್ತಿಗಳನ್ನು ನಾಶಮಾಡಬಲ್ಲ ಸಾಧನವನ್ನು ಕಂಡುಹಿಡಿಯಬೇಕೆಂದು ಬ್ರಿಟಿಷ್ ಸರ್ಕಾರವು ಸ್ಕಾಟಿಷ್ ವಿಜ್ಞಾನಿ ರಾಬರ್ಟ್ ವ್ಯಾಟ್ಸನ್ ವ್ಯಾಟ್‌ಗೆ ಆದೇಶಿಸಿತ್ತು. ಆದರೆ, ಸಾಯಿಸು ಕಿರಣ ನಿರ್ಮಿಸುವುದು ಅಸಾಧ್ಯ ಎಂದರಿತ ವ್ಯಾಟ್ಸನ್, ರೇಡಿಯೋ ಅಲೆಗಳ ಮೂಲಕ ದೂರದಲ್ಲಿನ ವಸ್ತುಗಳ ಮೇಲೆ ನಿಗಾ ವಹಿಸಲು ಸಾಧ್ಯ ಎಂಬ ಸಲಹೆಯನ್ನಷ್ಟೇ ನೀಡಿದರು.

42.   ಅಣು ರಿಯಾಕ್ಟರ್
1942
ವಿಶ್ವದ ಪ್ರಥಮ ಅಣು ರಿಯಾಕ್ಟರ್ ಎಂದರೆ ಷಿಕಾಗೋ ಪೈಲ್-1. 2ನೇ ವಿಶ್ವಯುದ್ಧದಲ್ಲಿ ಅಮೆರಿಕದ ಮ್ಯಾನ್‌ಹ್ಯಾಟನ್ ಪ್ರಾಜೆಕ್ಟ್‌ನ ಅಂಗವಾಗಿ ಇದನ್ನು ನಿರ್ಮಿಸಲಾಯಿತು. ಯುರೇನಿಯಂ ಪೆಲ್ಲೆಟ್ ಹಾಗೂ ಗ್ರಾಫೈಟ್ ಬ್ಲಾಕ್‌ಗಳನ್ನು ಹೊಂದಿದ್ದ ರಿಯಾಕ್ಟರ್ 1942ರ ಡಿಸೆಂಬರ್ 2ರಂದು ನ್ಯೂಕ್ಲಿಯರ್ ಚೈನ್ ರಿಯಾಕ್ಷನ್ ಅನ್ನು ಆರಂಭಿಸಿತು. ಅಂದಿನಿಂದ ಅಣುಶಕ್ತಿಯ ಯುಗ ಆರಂಭವಾಯಿತು.


43.  ಮೈಕ್ರೋವೇವ್ ಓವನ್
1947
ಮೈಕ್ರೋವೇವ್ ಓವನ್ ಆಕಸ್ಮಿಕವಾಗಿ ಅಭಿವೃದ್ಧಿಯಾದ ಉಪಕರಣ. ಹೀಗಿದ್ದರೂ ಪ್ರಥಮ ವಾಣಿಜ್ಯ ಮೈಕ್ರೋವೇವ್ ಮಾರಾಟವಾಗಿದ್ದು 1947ರಲ್ಲಿ. ಇದರ ರೇಡಾರೇಂಜ್ ಯುನಿಟ್ ಅನ್ನು ರೇಥಿಯಾನ್ ಕಂಪನಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿತು. ಆಗ ರೇಡಾರೇಂಜ್ 1.8 ಮೀ. ಎತ್ತರ, 340 ಕೆಜಿ. ತೂಕವಿತ್ತು. ಅದರ ದರ 5 ಸಾವಿರ ಡಾಲರ್‌ನಿಂದ 51 ಸಾವಿರ ಡಾಲರ್‌ವರೆಗಿತ್ತು. ಈಗ ಹೆಚ್ಚಿನ ಅಡುಗೆ ಕೋಣೆಗಳಲ್ಲಿ ಮೈಕ್ರೋವೇವ್ ಸ್ಥಾನ ಪಡೆದಿದೆ.


44.  ಮೆಡಿಕಲ್ ಇಮೇಜಿಂಗ್
1953
ಅಲ್ಟ್ರಾಸೋನೋಗ್ರಫಿಯಂತಹ ಮೆಡಿಕಲ್ ಇಮೇಜಿಂಗ್ ತಂತ್ರಜ್ಞಾನವನ್ನು 1953ರಲ್ಲಿ ಸ್ವೀಡನ್‌ನ ಲಂಡ್ ಯುನಿವರ್ಸಿಟಿ ಆಸ್ಪತ್ರೆಯಲ್ಲಿ ಅಭಿವೃದ್ಧಿಪಡಿಸಲಾಯಿತು. ವೈದ್ಯರಿಗೆ ರೋಗಿಯ ದೇಹದೊಳಗೊಂದು ಕಿಟಕಿಯೊಂದನ್ನು ತೆರೆದುಕೊಟ್ಟಿದ್ದೇ ಈ ತಂತ್ರಜ್ಞಾನ.

45. ಕ್ರೆಡಿಟ್ ಕಾರ್ಡ್
1958
1958ರಲ್ಲಿ ಮೊತ್ತಮೊದಲ ಬಾರಿಗೆ ಬ್ಯಾಂಕ್ ಆಫ್ ಅಮೆರಿಕಾ ತನ್ನ ಬ್ಯಾಂಕ್ ಅಮೆರಿಕಾರ್ಡ್ ಕ್ರೆಡಿಟ್ ಕಾರ್ಡ್ ಅನ್ನು ಚಾಲ್ತಿಗೆ ತಂದಿತು. 1976ರಲ್ಲಿ ಅಮೆರಿಕಾರ್ಡ್ ಹೆಸರು ವೀಸಾ ಎಂದು ಬದಲಾಯಿತು. ಈಗ ವೀಸಾ ಕಾರ್ಡ್ ವಿಶ್ವದಲ್ಲೇ ಅತ್ಯಂತ ಹೆಚ್ಚು ಚಾಲ್ತಿಯಲ್ಲಿರುವ ಕ್ರೆಡಿಟ್ ಕಾರ್ಡ್ ಆಗಿದೆ.

46.  ಸ್ಪೇಸ್ ಪ್ರೋಬ್

1959
ಲೂನಾ-1 ವಿಶ್ವದ ಪ್ರಪ್ರಥಮ ಸ್ಪೇಸ್ ಪ್ರೋಬ್ ಅಲ್ಲ. ಆದರೆ, ಬಾಹ್ಯಾಕಾಶದಲ್ಲಿ ಜಿಯೋಸೆಂಟ್ರಿಕ್ ಆರ್ಬಿಟ್ ಅನ್ನು ಯಶಸ್ವಿಯಾಗಿ ಬಿಟ್ಟ ಹೆಗ್ಗಳಿಕೆ ಇದರದ್ದು. ಆ ಬಳಿಕ ಸರಣಿ ಲೂನಾ ಪ್ರೋಬ್‌ಗಳು ಚಂದ್ರನಲ್ಲಿನ ಅನೇಕ ವಿಶೇಷತೆಗಳನ್ನು ಆವಿಷ್ಕರಿಸುವಲ್ಲಿ ನೆರವಾದವು. ಈಗ ನಾವು ಎಷ್ಟು ಸುಧಾರಿತ ಸ್ಪೇಸ್ ಪ್ರೋಬ್‌ಗಳನ್ನು ಅಭಿವೃದ್ಧಿಪಡಿಸಿದ್ದೇವೆಂದರೆ ಅವುಗಳು ಏಲಿಯನ್ ಜಗತ್ತಿನ ಹೈಡೆಫಿನಿಷನ್ ಚಿತ್ರಗಳನ್ನೂ ಸೆರೆಹಿಡಿಯಬಲ್ಲವು. ಸೌರವ್ಯೂಹದಾಚೆಗೂ ಚಲಿಸಬಲ್ಲವು.

47.  ಅಣು ರಿಯಾಕ್ಟರ್
1960ರ ದಶಕ
ಇಂಟರ್ನೆಟ್ ಕಂಡುಹಿಡಿದಿದ್ದು ಯಾವಾಗ ಎಂಬ ದಿನಾಂಕ ಸಿಗುವುದಿಲ್ಲ. ಆದರೆ, ಇದರ ಮೂಲ ಅಮೆರಿಕದ ಸೇನೆ. 60ರ ದಶಕದಲ್ಲಿ ಕಂಪ್ಯೂಟರ್ ನೆಟ್‌ವರ್ಕ್‌ನಿಂದ ಮಾಹಿತಿಗಳನ್ನು ಕಳುಹಿಸಲು ದೊಡ್ಡ ದೊಡ್ಡ ನೆಟ್‌ವರ್ಕ್‌ಗಳನ್ನು ಅಭಿವೃದ್ಧಿಪಡಿಸಿದಾಗಲೇ ಇಂಟರ್ನೆಟ್ ಹುಟ್ಟಿಕೊಂಡಿತು. ಬಳಿಕ ವರ್ಲ್ಡ್ ವೈಡ್ ವೆಬ್‌ನ ಹುಟ್ಟು ಆನ್‌ಲೈನ್ ಸಂವಹನದಲ್ಲಿ ಹೊಸ ಯುಗವನ್ನು ಆರಂಭಿಸಿತು.

48. ಉಪಗ್ರಹ
1962
ಜು.10, 1962ರಲ್ಲಿ ಥಾರ್-ಡೆಲ್ಟಾ ರಾಕೆಟ್ ಮೂಲಕ ಟೆಲ್‌ಸ್ಟಾರ್ ಉಪಗ್ರಹವನ್ನು ಉಡಾವಣೆ ಮಾಡಲಾಯಿತು. ಯುರೋಪ್‌ನಾದ್ಯಂತ ಉಪಗ್ರಹ ಸಂವಹನ ಆರಂಭಿಸಲು ಇದು ನೆರವಾಯಿತು. ವಿಶ್ವದ ಪ್ರಥಮ ಟ್ರಾನ್ಸ್ ಅಟ್ಲಾಂಟಿಕ್‌ಟೆಲಿವಿಷನ್ ಚಿತ್ರಗಳು, ದೂರವಾಣಿ ಕರೆಗಳು, ಫ್ಯಾಕ್ಸ್ ಚಿತ್ರಗಳನ್ನು ಪ್ರಸಾರ ಮಾಡಿದ್ದು ಇದೇ ಸ್ಯಾಟಲೈಟ್. ಟೆಲ್‌ಸ್ಟಾರ್ 1 ಈಗಲೂ ಕಕ್ಷೆಯಲ್ಲಿದೆ. ಆದರೆ ಕಾರ್ಯನಿರ್ವಹಿಸುತ್ತಿಲ್ಲ.

49.  ಪರ್ಸನಲ್ ಕಂಪ್ಯೂಟರ್

1973
ಜೆರಾಕ್ಸ್ ಪಾರ್ಕ್ ಎಂಬ ಮೊದಲ ಕಂಪ್ಯೂಟರ್‌ನಲ್ಲಿ ಮಾನಿಟರ್, ಕೀಬೋರ್ಡ್, ಮೌಸ್, ಗ್ರಾಫಿಕಲ್ ಯೂಸರ್ ಇಂಟರ್‌ಫೇಸ್ ಇತ್ತು. ನಂತರ ಬಂದ ಕಮೋಡೋರ್ ಪೆಟ್ 2001, 1 ಮೆಗಾ ಹರ್ಟ್ಸ್ ಸಿಪಿಯು, 96 ಕೆಬಿ ಮೆಮೊರಿ ಒಳಗೊಂಡಿತ್ತು. ತಂತ್ರಜ್ಞಾನ ದಿಗ್ಗಜ ಐಬಿಎಂ ಅಭಿವೃದ್ಧಿಪಡಿಸಿದ ಐಬಿಎಂ ಪಿಸಿ 5150, 4.77 ಮೆಗಾ ಹರ್ಟ್ಸ್ ಸಿಪಿಯುವನ್ನು ಹೊಂದಿತ್ತು. ನಂತರ ಪವರ್ ಮ್ಯಾಕ್ 9500 ಬಂತು. ಈಗ ಬಳಕೆಯಲ್ಲಿರುವ ಐಮ್ಯಾಕ್ ಆಲ್ ಇನ್ ಒನ್ ವಿನ್ಯಾಸ, ಹೈರೆಸೊಲ್ಯೂಷನ್ ಎಲ್‌ಇಡಿ ಪರದೆ, ಸೂಪರ್‌ಫಾಸ್ಟ್, ಮಲ್ಟಿ ಸಿಪಿಯುಗಳನ್ನು ಹೊಂದಿದೆ.

50. 3ಡಿ ಪ್ರಿಂಟರ್
1984
ಹೆಚ್ಚು ಯಂತ್ರಗಳನ್ನು ಸೃಷ್ಟಿಸಬಲ್ಲ ಒಂದು ಯಂತ್ರ- ಅದೇ 3ಡಿ ಪ್ರಿಂಟರ್. 80ರ ದಶಕದ ಮಧ್ಯಭಾಗದಲ್ಲಿ ಇದನ್ನು ಅಭಿವೃದ್ಧಿಪಡಿಸಲಾಯಿತು. ಇಲ್ಲಿ ಕೇವಲ ಲಿಕ್ವಿಡ್ ಪ್ಲಾಸ್ಟಿಕ್‌ನ ಪದರದ ಮೂಲಕ ವಸ್ತು, ಶಿಲ್ಪಕಲೆ, ಬಿಡಿಭಾಗಗಳು, ಅಂಗಗಳು, ಕೃತಕ ಅಂಗಗಳು, ಆಟಿಕೆಗಳು ಮತ್ತೂ ಅನೇಕ ವಸ್ತುಗಳನ್ನು ಸೃಷ್ಟಿಸಬಹುದು. ನಿಮ್ಮ ಕಣ್ಣನ್ನು ನೀವೇ ನಂಬಲಸಾಧ್ಯ ಎಂಬಂತೆ ಈ ಪ್ರಿಂಟರ್ ಕಾರ್ಯನಿರ್ವಹಿಸುತ್ತದೆ. ಈಗ ಈ ಪ್ರಿಂಟರ್ ಮೂಲಕ ಇಡೀ ಮನೆಯ ನಕ್ಷೆ ಪ್ರಿಂಟ್ ಮಾಡುವ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜನರಲ್ ದ್ವಿವೇದಿ ಹೇಳಿಕೆ 'ಪ್ರಚೋದನಕಾರಿ'; ಇದು ವಿನಾಶಕ್ಕೆ ಕಾರಣವಾಗಬಹುದು: ಭಾರತಕ್ಕೆ ಪಾಕ್ ಸೇನೆ ಎಚ್ಚರಿಕೆ

2028ಕ್ಕೆ 75-80 ಕ್ಷೇತ್ರಗಳಲ್ಲಿ ಜೆಡಿಎಸ್ ಗೆದ್ದು, ಅಧಿಕಾರಕ್ಕೆ- ಹೆಚ್ ಡಿ ಕುಮಾರಸ್ವಾಮಿ ವಿಶ್ವಾಸ! ಕಾಂಗ್ರೆಸ್ ವಿರುದ್ಧ ವಾಗ್ದಾಳಿ

ಬೆಂಗಳೂರು: ಪೊಲೀಸರ ಭದ್ರತೆ ನಡುವೆ ನಿರಾಶ್ರಿತ ಕೇಂದ್ರದಿಂದ ನಾಲ್ವರು ವಿದೇಶಿ ಅಕ್ರಮ ಮಹಿಳಾ ವಲಸಿಗರು ಪರಾರಿ!

ಬೆಂಗಳೂರು: ಮಾಜಿ ಉಪ ಮೇಯರ್ ಸೊಸೆಯ ಕಾರನ್ನು ತಡೆದು ಕಿರುಕುಳ, ಆಕೆಯ ಪತಿ ಮೇಲೂ ಹಲ್ಲೆ!

ಬೇಲ್ ಫಸ್ಟ್ ಲುಕ್ ರಿಲೀಸ್ : ಸಾಲ್ಟ್ ಅಂಡ್‌ ಪೆಪ್ಪರ್ ಲುಕ್ ಶಿವಣ್ಣ, ವರಮಹಾಲಕ್ಷ್ಮಿ ಹಬ್ಬಕ್ಕೆ ಸಿನಿಮಾ ರಿಲೀಸ್ ! Video

SCROLL FOR NEXT