ನಿಮಗಷ್ಟೇ ಉತ್ತರಿಸಿಕೊಳ್ಳಿ
ಬದುಕಿನ ಕೆಲವು ಸಂಗತಿಗಳಿರುತ್ತವಲ್ಲಾ, ಅವು ಯಾವತ್ತೂ ಜಗತ್ತಿನ ಸೂಕ್ಷ್ಮ ಅವಲೋಕನಕ್ಕೆ ಒಳಪಟ್ಟಿಯೇ ಇರುತ್ತವೆ. ಅದು ನಿಮ್ಮ ಖಾಸಗಿ ಸಂಗತಿಗಳೇ ಇರಬಹುದು, ಅವನ್ನು ಸಮಾಜ ಗ್ರಹಿಸುವ ರೀತಿಯೇ ಬೇರೆಯದ್ದಾಗಿರುತ್ತದೆ. ಅದು ನಿಮ್ಮ ವರ್ತನೆಗಳಿರಬಹುದು, ಸಂಬಂಧಗಳಿರಬಹುದು, ಒಡನಾಟವಿರಬಹುದು, ಘಟನೆಗಳಿರಬಹುದು... ಇವು ನಮ್ಮ ಸುತ್ತಲಿನ ಸಮಾಜಕ್ಕೆ ಸದಾ ಆಸಕ್ತಿಯ ವಿಷಯವಾಗಿರುತ್ತದೆ. ನಿಮ್ಮ ಸಾಧನೆಯ ಹಾದಿಯಲ್ಲಿ ನಿಮ್ಮ ಬೆಳವಣಿಗೆಯನ್ನು ಯಾರೂ ಗಂಭೀರವಾಗಿ ಪರಿಗಣಿಸದೇ ಇರಬಹುದು. ಆದರೆ ಮಂದಿ ನೀವು ಎಲ್ಲಿ ಎಡವುತ್ತೀರಿ ಎಂಬುದನ್ನು ಕಾಯುತ್ತಾ ಕುಳಿತಿರುತ್ತಾರೆ. ಒಂದೇ ಒಂದು ತಪ್ಪು ಹೆಜ್ಜೆಯಿಟ್ಟರೂ ಸಾಕು, ನಿಮ್ಮೆಲ್ಲ ಸಾಧನೆ, ಸಾಹಸಗಳನ್ನೂ ಬದಿಗೊತ್ತಿ ಆ ಬಗ್ಗೆ ಜನ ಮಾತನಾಡಲಾರಂಭಿಸುತ್ತಾರೆ. ಅದಕ್ಕೆ ತಪ್ಪದೇ ಮೂಗಿನ ನೇರಕ್ಕೆ ವ್ಯಾಖ್ಯಾನವನ್ನು ಕಟ್ಟಿಬಿಡುತ್ತಾರೆ. ಅದು ಮನುಷ್ಯನ ಮನೋಭಾವ. ತಮ್ಮೆಲ್ಲ ವಿಕೃತಿಗಳನ್ನು ನಿಮ್ಮ ಮೇಲೇ ಆರೋಪಿಸಿ ಕತೆ ಕಟ್ಟಲು ಆರಂಭಿಸುತ್ತಾರೆ. ವಸ್ತುಸ್ಥಿತಿ ಹೇಗೆಯೇ ಇರಲಿ, ಅದು ತಾವಂದುಕೊಂಡಂತೆಯೇ ಎಂದು ವಾದಿಸುತ್ತಾರೆ. ಅದನ್ನೇ ಬಣ್ಣಬಣ್ಣದ ಕತೆಗಳನ್ನಾಗಿ ಕಟ್ಟಿ, ವದಂತಿ ರೂಪದಲ್ಲಿ ಹರಿಯಬಿಡುತ್ತಾರೆ. ವಿಶೇಷವೆಂದರೆ ಅದನ್ನು ನಂಬುವವರ ಸಂಖ್ಯೆಯೂ ಹೆಚ್ಚೇ ಇರುತ್ತದೆ. ಯಾರೊಬ್ಬರೂ ನೈಜ ವಿಷಯವನ್ನು ಗ್ರಹಿಸಲಾಗಲಿ, ವಿಮರ್ಶಿಸಲಾಗಲೀ ಹೋಗುವುದೇ ಇಲ್ಲ. ಇಷ್ಟಕ್ಕೇ ನಿಲ್ಲುವುದಿಲ್ಲ. ನಿಮ್ಮ ಬಗೆಗೆ ಇದೂ ಹೀಗೆಯೇ ಎಂದು ನಿರೂಪಿಸಲು ಬೇಕಾದ ಎಲ್ಲ ಪ್ರಯತ್ನವನ್ನೂ ಮಾಡತೊಡಗುತ್ತಾರೆ. ಬಹುತೇಕರಿಗೆ ಇದೊಂದು ರೀತಿಯ ಚಟ. ಒಂದು ಸಣ್ಣ ವಿಷಯ ಸಿಕ್ಕರೂ ಸಾಕು ಅದಕ್ಕೆ ತಾವಂದುಕೊಂಡಿದ್ದನ್ನು ತಳುಕು ಹಾಕಿ 'ನಾನು ಹೇಳಿರಲಿಲ್ವಾ? ಇದು ಹೀಗೆಯೇ' ಎಂದು ಸಮರ್ಥನೆಗಿಳಿಯುತ್ತಾರೆ. ಸಮಾಜದಲ್ಲಿ ಇಂಥ ಮನೋಭಾವ ಯಾವತ್ತಿಗೂ ಅಪಾಯಕಾರಿ. ಈ ಬಗ್ಗೆ ಸದಾ ಎಚ್ಚರದಿಂದಿರಬೇಕಾದ ಅನಿವಾರ್ಯ ಕರ್ಮ ಸಾಧಕನದ್ದು. ಇಂಥ ಮನೋಭಾವಕ್ಕೆ ಸೂಕ್ತ ಪರಿಹಾರ ನಿರ್ಲಕ್ಷ್ಯ. ಯಾವುದೇ ಕಾರಣಕ್ಕೂ ಅದು ಹಾಗಲ್ಲ ಹೀಗೆ ಎಂಬ ವಿವರಣೆ ನೀಡಲು ಹೋದಿರೋ ನೀವು ಎಡವಿದ್ದೀರೆಂದೇ ಅರ್ಥ. ನೀವು ಉತ್ತರದಾಯಿಗಳಾಗಬೇಕಾದುದು ನಿಮ್ಮೊಳಗಿನ ನಿಮಗೆ ಮಾತ್ರವೇ ಎಂಬುದನ್ನು ನೆನಪಿನಲ್ಲಿಡಿ. ನಿಮ್ಮ ಸಾಧನೆಗೆ ಇಂಥವು ಎಂದಿಗೂ ಅಡ್ಡಿಯಾಗದಂತೆ ಎಚ್ಚರವಹಿಸಿ. ಇಂಥವುಗಳನ್ನೂ ಮೀರಿ ನಿಮ್ಮ ಸಾಧನೆಯ ಓಟದ ವೇಗ ಹೆಚ್ಚಿಸಿಕೊಳ್ಳಿ. ಆ ಮೂಲಕ ಎಲ್ಲದಕ್ಕೂ ನೀವು ಉತ್ತರ ನೀಡಬೇಕು. ಮಾತಿನ ಜಗ್ಗಾಟದ ಸಿಕ್ಕುಗಳನ್ನು ಹರಿದು ಬಿಸಾಡಿ ನಿಮ್ಮ ಗುರಿ ತಲುಪಿ. ಜಯದ ನಗೆ ನಿಮ್ಮದಾಗುತ್ತದೆ.
- ಸಹನೆ