ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ನುಡಿದಂತೆ ನಡೆದರು

Mainashree
Updated On : 26 Aug 2013, 5:51 am

ಐದು ಅಡಿ ಉದ್ದದ 65 ವರ್ಷದ ವಾಮನಮೂರ್ತಿ. ಕಳೆದ 20 ವರ್ಷಗಳಿಂದ ದಿನಕ್ಕೆ ಒಂದೇ ಬಾರಿ ಆಹಾರ. ಇಡೀ ದೇಶದ ಉದ್ದಗಲವನ್ನು ಕಾಲ್ನಡಿಗೆಯಲ್ಲೇ ಸುತ್ತುತ್ತಿದ್ದಾರೆ. ಕಳೆದ ವರ್ಷ ಕೃಷ್ಣ ಜನ್ಮಾಷ್ಟಮಿಯಂದು ಕನ್ಯಾಕುಮಾರಿಯಿಂದ ಆರಂಭವಾದ ಕಾಲ್ನಡಿಗೆ ಭಾರತೀಯ ಪಂಚಾಂಗದ ಪ್ರಕಾರ, ಈ ಕೃಷ್ಣಾಷ್ಟಮಿಗೆ ಭರ್ತಿ ಒಂದು ವರ್ಷ.
ಇನ್ನೂ ಇವರ ಕಾಲ್ನಡಿಗೆ ಮುಗಿದಿಲ್ಲ, ಉದ್ದೇಶಿತ ಯಾತ್ರೆಯ ಕಾಲು ಭಾಗ ಅಂದರೆ, ಸುಮಾರು 4500 ಕಿ.ಮೀ. ಮುಗಿದಿದ್ದು, ನಡೆಯುವುದು ಇನ್ನೂ ಇದೆ. ಹಾಗಾಗಿ ಇವರು ನಡೆಯುತ್ತಲೇ ಇದ್ದಾರೆ, ಅದೂ ಭಾರತವನ್ನು ಜೋಡಿಸುವ ಸದುದ್ದೇಶದಿಂದ.
ಇವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಾಜಿ ಪ್ರಚಾರಕ ಸೀತಾರಾಮ ಕೆದಿಲಾಯ. ದಕ್ಷಿಣ ಕನ್ನಡದ ಪುತ್ತೂರಿನ ಸಾಲ್ಮರದವರು. 2009ರಲ್ಲಿ ಇವರ ನೇತೃತ್ವದಲ್ಲಿ ನಡೆದ ವಿಶ್ವ ಮಂಗಲ ಗೋಯಾತ್ರೆಯೂ ದೇಶಾದ್ಯಂತ ಸಂಚರಿಸಿದೆ. ದೇಶದ ಅಸ್ತಿತ್ವವಿರುವುದೇ ಗ್ರಾಮಗಳಲ್ಲಿ ಎಂಬುದನ್ನು ಅರಿತು ನಗರದಿಂದ ಗ್ರಾಮದೆಡೆಗೆ ಕಾಲ್ನಡಿಗೆಯಲ್ಲೇ ಯಾತ್ರೆ ಹೊರಟಿದ್ದಾರೆ. ಒಂದು ರಾಜ್ಯದ ಯಾತ್ರೆ ಮುಗಿದ ಬಳಿಕ ಆ ರಾಜ್ಯದಲ್ಲಿ ಗ್ರಾಮಗಳಲ್ಲಾಗಿರುವ ಅಭಿವೃದ್ಧಿ ಮತ್ತು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅಲ್ಲಿನ ಮುಖ್ಯಮಂತ್ರಿಗೆ ಪತ್ರ ಮೂಲಕ ತಿಳಿಸುತ್ತಿದ್ದಾರೆ. ಈಗ ಪರಿಕ್ರಮ ಯಾತ್ರೆ ರಾಜಸ್ಥಾನದಲ್ಲಿದ್ದು, ಇನ್ನೂ ಹಲವು ರಾಜ್ಯಗಳನ್ನು ಭೇಟಿಯಾಗುವುದಿದೆ.

ಪಾದಯಾತ್ರೆ 2ನೇ ವರ್ಷಕ್ಕೆ ಕಾಲಿರಿಸಿದ ಹಿನ್ನೆಲೆಯಲ್ಲಿ 'ಬೈಟು ಕಾಫಿ'ಯೊಂದಿಗೆ ಸೀತಾರಾಮ ಕೆದಿಲಾಯರ ಮಾತು:

ಭಾರತ ಪರಿಕ್ರಮ ಯಾತ್ರಾದ ಉದ್ದೇಶ? ಗುರಿ?
ಎರಡು ಉದ್ದೇಶ. ಮೊದಲನೆಯದು ಭಾರತ್ ಛೋಡೊ ಆಂದೋಲನದ ಬಳಿಕ ವಿದೇಶಿಯರು ಭಾರತವನ್ನು ಬಿಟ್ಟು ಹೋಗಿದ್ದಾರೆ. ಆದರೆ ನಾವು ಇನ್ನೂ ವಿದೇಶಿಯರನ್ನು ಬಿಟ್ಟಿಲ್ಲ. ನಮ್ಮ ಸಂಸ್ಕೃತಿ, ಬಟ್ಟೆ, ಭಾಷೆ ಇವುಗಳಲ್ಲೆಲ್ಲ ವಿದೇಶಿಗರ ಪ್ರಭಾವವಿದೆ. ಭಾರತೀಯರು ಒಂದಾಗಬೇಕು, ಭಾರತೀಯರಲ್ಲಿ ಭಾರತ ಅಭಿವ್ಯಕ್ತಗೊಳ್ಳಬೇಕು. ಎರಡನೇ ಉದ್ದೇಶ, ಹೆಚ್ಚುತ್ತಿರುವ ನಗರೀಕರಣ. ಗುಜರಾತ್ ಒಂದೇ ರಾಜ್ಯದಲ್ಲಿ 6 ಕೋಟಿ ಜನಸಂಖ್ಯೆಯಲ್ಲಿ ಎರಡುವರೆ ಕೋಟಿ ನಗರೀಕರಣಗೊಂಡಿದ್ದಾರೆ. ಭಾರತದ ಆತ್ಮ ಹಳ್ಳಿಗಳಲ್ಲೇ ಇದ್ದು, ಹಳ್ಳಿಜೀವನ ಪುನರುಜ್ಜೀವನಗೊಳ್ಳಬೇಕು. ಹೇಗೆ ಕೃಷ್ಣ ಹುಟ್ಟಿದ ಕೂಡಲೇ ಮಥುರಾನಗರದಿಂದ ನಂದಗಾಂವ್‌ಗೆ ತೆರಳಿ ಅಲ್ಲಿ ಗೋವುಗಳ ಕೆಲಸ ಕಾರ್ಯ ಮಾಡುತ್ತಿದ್ದ. ಹಾಲು, ಮೊಸರು, ಬೆಣ್ಣೆ ಪಂಚಗವ್ಯಗಳನ್ನು ಉಪಯೋಗಿಸುತ್ತಿದ್ದನೊ ಹಾಗೇ ನಾವು ಮತ್ತೆ ಗ್ರಾಮಗಳೆಡೆಗೆ ಮರಳಬೇಕು.

ಪಾದಯಾತ್ರೆಯಲ್ಲಿ ದೇಶದ ಬಗ್ಗೆ ತಾವು ಕಂಡುಕೊಂಡ ಸತ್ಯಗಳೇನು?
ಭಾರತ ಇನ್ನೂ ಹಳ್ಳಿಗಳಲ್ಲೇ ಜೀವಂತವಾಗಿದೆ ಎಂಬ ಸತ್ಯವನ್ನು ಕಂಡುಕೊಂಡಿದ್ದೇನೆ. ಹಳ್ಳಿಯ ಮುಗ್ಧ ಜನರ ಮೇಲೆ ಅನೇಕ ಅಕ್ರಮಗಳು ಸರ್ಕಾರಿ ಮಟ್ಟದಲ್ಲಿ, ವ್ಯಾಪಾರಿಗಳಿಂದ ಇನ್ನೂ ನಡೆಯುತ್ತಿದೆ. ಇಂಥ ಅಕ್ರಮಗಳನ್ನು ಸಹಿಸಿಯೂ ಜನರು ಹಳ್ಳಿಗಳಲ್ಲಿ ತಮ್ಮ ಪಾಡಿಗೆ ತಾವು ಇದ್ದಾರೆ. ಅಲ್ಲಲ್ಲಿ ಪ್ರಯತ್ನಗಳ ಪ್ರಯೋಗಶೀಲತೆ ನಡೆದಿದೆ. ಸಾವಯವ ಕೃಷಿ, ವನ ಸಂರಕ್ಷಣೆ, ಜಲ ಸಂರಕ್ಷಣೆ ನಡೆಸಿದ್ದನ್ನು ಕಾಲ್ನಡಿಗೆಯ ಸಂದರ್ಭ ಕಣ್ಣಾರೆ ಕಂಡಿದ್ದೇನೆ. ದೆಹಲಿಯಿಂದ ಗೋವಾ ವರೆಗೆ ಇಂಡಸ್ಟ್ರಿಯಲ್ ಕಾರಿಡಾರ್ ಯೋಜನೆ ಜಾರಿಗೊಳಿಸಲು ಸರ್ಕಾರ ಹೊರಟಿದೆ. ಈ ಯೋಜನೆಯಿಂದ ಲಕ್ಷಾಂತರ ಜನರು ಜಮೀನು ಕಳೆದುಕೊಳ್ಳುತ್ತಾರೆ.

ಬೇರೆ ಬೇರೆ ರಾಜ್ಯಗಳಲ್ಲಿ ಜನರ ಪ್ರತಿಕ್ರಿಯೆ ಹೇಗಿದೆ?
ಕಳೆದ ಒಂದು ವರ್ಷದಿಂದ ಸುತ್ತಾಡುತ್ತಿದ್ದೇನೆ. ಉತ್ತಮ ಸ್ಪಂದನ ದೊರಕಿದೆ. ಹಳ್ಳಿ ಜನರ ನಿಷ್ಕಾಮ ಪ್ರೇಮ, ಆತ್ಮೀಯತೆ ಗ್ರಾಮಗಳಲ್ಲಿ ಲಭಿಸಿದೆ. ಕೇರಳದಲ್ಲಿ ನಡೆದ ಒಂದು ಘಟನೆಯನ್ನು ಇಲ್ಲಿ ಸ್ಮರಿಸಲೇ ಬೇಕು. ನಮಗೆ ಬೆಳಿಗ್ಗೆ ಗೋಪೂಜೆ ಮಾಡಲಿದೆ. ಕೇರಳದ ಹಳ್ಳಿಯೊಂದರಲ್ಲಿ ಗೋವುಗಳೇ ಇರಲಿಲ್ಲ. ಆದರೆ ಗ್ರಾಮಸ್ಥರು ಬೇರೆ ಊರಿಂದ ಗೋವನ್ನು ಕರೆಸಿ ಪೂಜೆಗೆ ಅನುವು ಮಾಡಿಕೊಟ್ಟರು. ಅಷ್ಟೇ ಅಲ್ಲ, ಹಿಂದೆಲ್ಲ ತಮ್ಮಲ್ಲಿ ಗೋವುಗಳಿದ್ದವು, ಈಗ ಇಲ್ಲ. ಮುಂದೆ ಮತ್ತೆ ಸಾಕುತ್ತೇವೆ ಎಂದು ಗೋವಿನ ಮೇಲೆ ಪ್ರಮಾಣ ಮಾಡಿ ಹೇಳಿದರು. ಪಾದಯಾತ್ರೆ ಜನರಲ್ಲಿ ಇಷ್ಟು ಪರಿಣಾಮ ಬೀರಿದೆ.

ದಿನಚರಿ ಹೇಗಿರುತ್ತೆ?
ಬೆಳಗಿನ ಜಾವ ಎರಡುವರೆ- ಮೂರು ಗಂಟೆಗೆ ಏಳುವುದು, ವ್ಯಾಯಾಮ, ಪ್ರಾಣಾಯಾಮ, ಪ್ರಾರ್ಥನೆ, ಗೋಪೂಜೆ. ಬಳಿಕ ಪಾದಯಾತ್ರೆ. ದಿನಕ್ಕೆ 10ರಿಂದ 12 ಗಂಟೆ ಪಾದಯಾತ್ರೆ. 12.30ಕ್ಕೆ ಭಿಕ್ಷಾನ್ನ, ಬಳಿಕ ವಿಶ್ರಾಂತಿ. ಸಂಜೆ ಊರಿನ ಶಾಲೆಗೆ ತೆರಳಿ ವಿದ್ಯಾರ್ಥಿಗಳಿಂದ ವೃಕ್ಷಾರೋಪಣ, ಗ್ರಾಮದಲ್ಲಿ ಬೇರೆ ಬೇರೆ ಸಮಾಜದ ಮುಖಂಡರ ಭೇಟಿ, ಗ್ರಾಮಸಭೆ, ಸಾಧಕರಿಗೆ ಸನ್ಮಾನ ಹೀಗೆ ಸಾಗಿರುತ್ತೆ ಪಾದಯಾತ್ರೆ ದಿನಚರಿ.

ಪಾದಯಾತ್ರೆಯಲ್ಲಿ ನಿಮ್ಮ ಜತೆ ಎಷ್ಟು ಮಂದಿ ಇರುತ್ತಾರೆ?

ಆರಂಭದಿಂದ ಹೊರಟಿದ್ದು ನಾನೊಬ್ಬನೆ. ಬಳಿಕ ಅಲ್ಲಲ್ಲಿ ಸ್ಥಳೀಯ ಕಾರ್ಯಕರ್ತರು ಸೇರಿಕೊಳ್ಳುತ್ತಾರೆ.

- ರಾಘವೇಂದ್ರ ಅಗ್ನಿಹೋತ್ರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement