ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ನಮ್ಮಲ್ಲೇ ಇರುವ ವೈದ್ಯರನ್ನು ಮರೆಯಬೇಡಿ!

Lingaraj Badiger
Updated On : 27 Aug 2013, 3:42 am

ವ್ಯಕ್ತಿ ಎಷ್ಟೇ ಆರೋಗ್ಯವಂತನಿರಲಿ, ಒಂದಿಲ್ಲೊಂದು ಸಂದರ್ಭದಲ್ಲಿ ಆತನಿಗೆ ಉದರ ತೊಂದರೆ ಕಾಣಿಸಿಕೊಳ್ಳುತ್ತದೆ. ಆಹಾರದಲ್ಲಿ ಕಟ್ಟುನಿಟ್ಟು ಎಂದುಕೊಂಡರೂ ಎಂದಾದರೊಮ್ಮೆ ಗಡದ್ದಾಗಿ ತಿಂದುಬಿಡುತ್ತೇವೆ. ಒಂದು ಪರಿಮಿತಿಗೆ ಒಗ್ಗಿಕೊಂಡಿದ್ದ ಜೀರ್ಣಾಂಗ ವ್ಯವಸ್ಥೆ ಆಗ ಏರುಪೇರಾಗುವುದು ಸಹಜ. ಇಷ್ಟದ ತಿಂಡಿಗಳನ್ನು ತಿನ್ನುವುದು ತಪ್ಪಲ್ಲ, ಅತಿಯಾಗಿ ತಿನ್ನುವುದು ಸರಿಯಲ್ಲ. ನಮ್ಮ ದೇಹ ಎಷ್ಟನ್ನು ಜೀರ್ಣಿಸಿಕೊಳ್ಳಬಹುದು ಎನ್ನುವ ಕಲ್ಪನೆ ನಮಗೆ ಇರಬೇಕಾದದ್ದು ಅಗತ್ಯ. ಬ್ರೇಕ್‌ಫಾಸ್ಟ್ ಇಂತಿಷ್ಟೇ ಗ್ರಾಂ ಇರಬೇಕು, ಊಟ ಇಷ್ಟೇ ಇರಬೇಕು ಅಂತ ಕರಾರುವಕ್ ಲೆಕ್ಕ ಹಾಕುವುದು ಸಾಧ್ಯವಿಲ್ಲ. ಆದರೆ ನಮ್ಮ ಹೊಟ್ಟೆಯ ಸಾಮರ್ಥ್ಯ ನಮಗೆ ಗೊತ್ತಿರಬೇಕು ಅಲ್ಲವೆ? ಎರಡು ಹೋಳಿಗೆಗಳನ್ನು ಆರಾಮವಾಗಿ ತಿನ್ನಬಹುದು. ಮೂರನೇಯದು ತಿನ್ನುವಾಗ ಸ್ವಲ್ಪ ಸಮಸ್ಯೆಯಾಗುತ್ತದೆ. ಸಿಹಿ ತೇಗು ಬರುತ್ತದೆ. ಅದು 'ಇನ್ನು ತಿನ್ನಬೇಡ' ಎಂದು ಹೊಟ್ಟೆ ನಮಗೆ ಕಳಿಸುವ ಸಂದೇಶ. ತನ್ನ ಸಾಮರ್ಥ್ಯ ಮೀರಿದಾಗ ಹೊಟ್ಟೆ ಒಂದಿಲ್ಲೊಂದು ರೀತಿಯಲ್ಲಿ ಮೆಸೇಜ್ ರವಾನಿಸುತ್ತದೆ. ನಾವು ಅದನ್ನು ಅರ್ಥ ಮಾಡಿಕೊಳ್ಳಬೇಕು ಅಷ್ಟೆ. ಬಹುತೇಕ ಸಂದರ್ಭಗಳಲ್ಲಿ ನಾಲಿಗೆ ಆ ಸಂದೇಶಗಳನ್ನು ಕಡೆಗಣಿಸಿ, ಮತ್ತಷ್ಟು ತಿನ್ನಲು ನಮ್ಮನ್ನು ಹುರಿದುಂಬಿಸುತ್ತದೆ.

ಕರಾವಳಿ, ಮಲೆನಾಡಿನ ಬ್ರಾಹ್ಮಣರಲ್ಲಿ ಒಂದು ಪದ್ಧತಿ ಇದೆ. ಮಧ್ಯಾಹ್ನ ಮತ್ತು ರಾತ್ರಿ ಊಟದ ನಂತರ ವೀಳ್ಯದೆಲೆ, ಅಡಕೆ, ಸುಣ್ಣ ಸೇರಿಸಿಕೊಂಡು ತಿನ್ನುವುದು. ಅದನ್ನು ನಾವು ಕವಳ ಎನ್ನುತ್ತೇವೆ. ಅದು ಜೀರ್ಣಕಾರಿ. ಕೆಲವರಿಗೆ ಊಟವಾದ ತಕ್ಷಣ ತುಳಸಿ ಎಲೆಯೊಂದನ್ನು ಬಾಯಲ್ಲಿ ಇಟ್ಟುಕೊಳ್ಳುವ ಅಭ್ಯಾಸ. ಅದು ಕೂಡ ಜೀರ್ಣಕಾರಿಯೇ.

ಅಪರೂಪಕ್ಕೆ ಯಾರ ಮನೆಗಾದರೂ ಹೋದಾಗ ಒತ್ತಾಯ ಮಾಡಿ ಬಡಿಸುತ್ತಾರೆ. ಅದು ಅವರ ಪ್ರೀತಿ. ನಮಗೋ ಪ್ರಾಣ ಸಂಕಟ. ಉದರಕ್ಕೆ ಸಂಬಂಧಿಸಿದ ವ್ಯವಸ್ಥೆಯಲ್ಲಿ ಸ್ವಲ್ಪ ವ್ಯತ್ಯಯವಾದರೂ ಸಾಕು. ಅದು ಉಂಟುಮಾಡುವ ಸಮಸ್ಯೆಗಳು ಒಂದೆರಡೆ? ವಾಯು ಬಾಧೆಯಂತೂ... ಅಬ್ಬಬ್ಬಾ, ಏತಕ್ಕಾದರೂ ತಿಂದೆನೋ ಅನ್ನಿಸಿಬಿಡುತ್ತದೆ. ದಿಢೀರ್ ಬೇಧಿ ಕಾಣಿಸಿಕೊಂಡರೂ ಅಷ್ಟೆ. ಇಂಥ ತೊಂದರೆಗಳಿಂದ ನಾವು ಅನುಭವಿಸುವ ಫಜೀತಿ, ಮುಜುಗರ ಬಗ್ಗೆ ಹೆಚ್ಚೇನೂ ಹೇಳಬೇಕಾದದ್ದಿಲ್ಲ ಅಲ್ಲವೆ? ಒಮ್ಮೊಮ್ಮೆ ನೀರಿನಿಂದಲೂ ತೊಂದರೆ ಉದ್ಭವಿಸುವುದುಂಟು. ನಮ್ಮ ಜೀವನಶೈಲಿಯೂ ಜೀರ್ಣಾಂಗಗಳಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ.

ಮಲಬದ್ಧತೆ, ಜಠರ ಹುಣ್ಣು, ಪಿತ್ತಗಲ್ಲು, ಅತಿಸಾರ, ಲ್ಯಾಕ್ಟೋಸ್ ಅಸಹಿಷ್ಣತೆ, ಉರಿಯೂತ, ಕರುಳು ಉರಿ, ಗ್ಯಾಸ್ಟ್ರಿಕ್, ಎದೆಯುರಿ, ಉದರಶೂಲೆ, ಮೂತ್ರಕೋಶದ ಕಲ್ಲು ಇವು ಉದರಕ್ಕೆ ಸಂಬಂಧಪಟ್ಟ ಸಾಮಾನ್ಯ ತೊಂದರೆಗಳು. ಇಂಥ ತೊಂದರೆಗಳು ಕಾಣಿಸಿಕೊಂಡಾಗ ವೈದ್ಯರಲ್ಲಿ ಓಡುತ್ತೇವೆ. ದುಬಾರಿ ಔಷಧಗಳನ್ನು ಸೇವಿಸುತ್ತೇವೆ. 'ಈ ಡಾಕ್ಟರು ಪರವಾಗಿಲ್ಲ' ಎಂದು ವೈದ್ಯರಿಗೊಂದು ಶಹಬ್ಬಾಸ್‌ಗಿರಿ ನೀಡುತ್ತೇವೆ. ಆದರೆ ಕಾಸು ಖರ್ಚು ಮಾಡಿಸದ ವೈದ್ಯ ನಮ್ಮಲ್ಲಿಯೇ ಇದ್ದಾನೆ ಎನ್ನುವುದನ್ನು ಮರೆತುಬಿಡುತ್ತೇವೆ. ತಕ್ಷಣದ ಪರಿಹಾರ ಬಯಸುವವರು ವೈದ್ಯರಲ್ಲಿ ಹೋಗುವುದು ತಪ್ಪಲ್ಲ. ಅಂಥ ತೊಂದರೆ ಮರುಕಳಿಸದಿರಲು ನಮ್ಮ ಡಾಕ್ಟರ್‌ರನ್ನು ಮರೆಯಬಾರದು. ಆ ವೈದ್ಯ ಮತ್ತಾರೂ ಅಲ್ಲ, ನಮ್ಮ ಆಹಾರ ಪದ್ಧತಿ!

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement