ಪ್ರೀತಿಯಿಂದ ಕೆಲಸ ಮಾಡಿ
ಆಸೆಗಳು, ನಿರೀಕ್ಷೆಗಳು ಕೆಲವೊಮ್ಮೆ ನಮ್ಮನ್ನು ಹೈರಾಣಾಗಿಸಿ ಬಿಡುತ್ತವೆ. ಅದು ಸಹಜ ಬಿಡಿ. ಯಾರು ಏನೇ ಹೇಳಲಿ, ಯಾವುದೇ ಕೆಲಸವನ್ನು ಪ್ರತಿಫಲಾಪೇಕ್ಷೆ ಇಲ್ಲದೇ ಮಾಡಲಿಕ್ಕಾಗದು. ಒಂದೊಮ್ಮೆ ಹಾಗೆ ಹೊರಟರೆ ಅದರಲ್ಲಿ ಪೂರ್ಣ ಆಸಕ್ತಿಯಿಂದ ತೊಡಗಿಸಿಕೊಳ್ಳುವುದು ಅನುಮಾನ. ಬೇಕಿದ್ದರೆ ಭಾಷಣ ಬಿಗಿಯಬಹುದು. ಆದರೆ, ಯಾರೊಬ್ಬರೂ, ಯಾವ ಕೆಲಸದಲ್ಲೂ ಒಂದಿನಿತೂ ಫಲ ನಿರೀಕ್ಷಿಸುವುದಿಲ್ಲ ಎಂತಾದರೆ ಹಾಗಾದರೆ ಅವನಿಗೆ ಅಂಥ ದರ್ದು ಏನಿದೆ ಎಂಬ ಪ್ರಶ್ನೆ ಏಳುವುದು ಸಹಜ. ಒಂದು ಒಳ್ಳೆಯ ಕೆಲಸ ಮಾಡಿದಾಗ ಕೊನೇಪಕ್ಷ ಯಾರಾದರೊಬ್ಬರು ಒಳ್ಳೆಯ ಮಾತುಗಳನ್ನಾದರೂ ಆಡಲಿ ಎಂದು ಬಯಸುವುದರಲ್ಲಿ ತಪ್ಪೇನಿಲ್ಲ. ಹಾಗೆಯೇ ಇಂಥದ್ದು ಮಾಡಿದರೆ ಇಂಥದ್ದಾಗಬಹುದು, ಇಂಥ ರಿಸಲ್ಟ್ ಸಿಗಬಹುದು ಎಂದು ಅನ್ನಿಸಿಯೇ ಇರುತ್ತದೆ. ನಾವಂದುಕೊಂಡಂತೆಯೇ ಆದರೆ ಮನಸು ಅರಳುತ್ತದೆ. ಇನ್ನಷ್ಟು ಮಾಡಬೇಕೆಂಬ ಹುಮ್ಮಸ್ಸು ಬರುತ್ತದೆ. ಉತ್ಸಾಹ ಪುಟಿಯುತ್ತದೆ. ಇದು ಸಹಜ ಪ್ರಕ್ರಿಯೆ. ಅದು ಗೊತ್ತಿದ್ದರೂ ಎಲ್ಲ ತೊರೆದವರಂತೆ ವಿರಾಗಿಯ ಫೋಸು ಕೊಡುತ್ತ ಮಾತಿನಲ್ಲಿ ಮಾತ್ರ 'ಅದರಿಂದ ನನಗೇನೂ ಆಗಬೇಕಾದದ್ದಿಲ್ಲ' ಎನ್ನುತ್ತಿರುತ್ತೇವೆ. ಇಂಥ ದ್ವಂದ್ವಗಳು ನಮ್ಮನ್ನು ಉದ್ದಕ್ಕೂ ಹಿಂಬಾಲಿಸುತ್ತವೆ. ಮೂಲಭೂತವಾಗಿ ಇಂಥ ದ್ವಂದ್ವಗಳಲ್ಲೇ ನಾವು ಸಮಯವನ್ನು ಕಳೆದುಬಿಟ್ಟಿರುತ್ತೇವೆ. ಅದರ ಬದಲು ಯಾವುದೇ ಕೆಲಸವನ್ನು ಮಾಡುವಾಗಲೂ ಅದನ್ನು ಅತ್ಯಂತ ಪ್ರೇಮದಿಂದ ಮಾಡುತ್ತ ಹೋದರಾಯಿತು. ಪ್ರೇಮವಿಲ್ಲದ ಕಡೆ ಫಲ ಇರಲು ಸಾಧ್ಯವೇ ಇಲ್ಲ. ಪ್ರೀತಿಯಿಂದ ತೊಡಗಿಕೊಳ್ಳುವ ಯಾವುದೇ ಕೆಲಸ ವಿಫಲವಾಗಲು ಸಾಧ್ಯವೇ ಇಲ್ಲ. ಅದರ ಬದಲು ಆರಂಭದಲ್ಲೇ ಬೆಟ್ಟದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡು ಕೆಲಸದ ಮೇಲಿನ ಪ್ರೀತಿಯನ್ನೇ ಕಳೆದುಕೊಳ್ಳುವುದರಲ್ಲಿ ಯಾವ ಅರ್ಥವಿದೆ? ನಿರೀಕ್ಷೆಗಳ ಜತೆ ಜತೆಯಲ್ಲೇ ಕೆಲಸದ ಬಗೆಗಿನ ಆಪ್ತತೆ ದಟ್ಟವಾಗುತ್ತ ಸಾಗಿದಾಗ ನಿರಾಸೆ ಎಂಬುದು ಇರಲಿಕ್ಕೆ ಸಾಧ್ಯವೇ ಇಲ್ಲ. ಏಕೆಂದರೆ ನಾವು ಅಂಥ ಕೆಲಸವನ್ನು ಮಾಡುವುದೇ ನಮ್ಮ ತೃಪ್ತಿಗಾಗಿ. ಆ ತೃಪ್ತಿ ಸಿಗುತ್ತಿದೆ ಎಂದ ಮೇಲೆ ಬೇರಾವುದೇ ಫಲ ನಮಗೆ ಬೇಕಾಗಿಯೇ ಇರುವುದಿಲ್ಲ ಅಲ್ಲವೇ?
-ಸಹನೆ