ಅಳತೆಗೋಳು!
ಅಲ್ಲಿ ವಾರಗಟ್ಟಲೆ ಬೆಳಗ್ಗೆಯಿಂದ ಸಂಜೆಯ ತನಕ ನಡೆದಿದ್ದು ತೂಕ, ಉದ್ದಗಲ ಅಳತೆಯ ಗೋಷ್ಠಿ. ನೆರೆದಿದ್ದ ಅಭ್ಯರ್ಥಿಗಳನ್ನು...
ಅಲ್ಲಿ ವಾರಗಟ್ಟಲೆ ಬೆಳಗ್ಗೆಯಿಂದ ಸಂಜೆಯ ತನಕ ನಡೆದಿದ್ದು ತೂಕ, ಉದ್ದಗಲ ಅಳತೆಯ ಗೋಷ್ಠಿ. ನೆರೆದಿದ್ದ ಅಭ್ಯರ್ಥಿಗಳನ್ನು ಪೊಲೀಸಿಗೋ, ಮಿಲಿಟರಿಗೊ ಸೇರಿಸಬೇಕೆಂಬ ಆಸೆ ಸಂಘಟಕರದ್ದಾಗಿರಲಿಲ್ಲ. ಅದು ಅವರ ವರ್ಷದ ಡ್ಯೂಟಿ. ಲಂಡನ್ ಝೂನಲ್ಲಿರುವ ಎಲ್ಲ ಪ್ರಾಣಿಗಳ ತೂಕ, ಉದ್ದಗಲವನ್ನು ದಾಖಲಿಸುವ ವಾರ್ಷಿಕ ಯೋಜನೆ.
ಮನುಷ್ಯನಿಗಾದರೂ ಒಂದು ಕಾಮನ್ಸೆನ್ಸ್ ಇರುತ್ತೆ. ಸ್ಕೇಲಿನ ಮೇಲೆ ಹೀಗೆಯೇ ನಿಲ್ಲಬೇಕು, ಕಾಲಿನಿಂದ ನೆತ್ತಿಯವರೆಗೆ ಬಾಗದೆ ಅಳತೆ ಕೊಡಬೇಕಂತ. ಆದರೆ, ಪ್ರಾಣಿಗಳಿಗೆ? ಲಂಡನ್ ಝೂನ ಸಿಬ್ಬಂದಿಗೆ ಕಷ್ಟವಾಗಿದ್ದೂ ಅದೇ. ಕಪ್ಪೆಯನ್ನು ಹಿಡಿದು ತಕ್ಕಡಿಗೆ ಹಾಕಬೇಕೆನ್ನುವಷ್ಟರಲ್ಲಿ ಪುಳಕ್ಕನೆ ನೆಗೆದಿರುತ್ತದೆ; ಸಣ್ಣ ಮರಕಪ್ಪೆಗೆ ಒಗ್ಗರಣೆ ಸೌಟಿನಂಥ ಸ್ಕೇಲು ಸಾಲದು; ಗೂಬೆಯ ಕಾಲಿಗೆ ಹಗ್ಗ ಕಟ್ಟಿ ನಿಲ್ಲಿಸಿದರೆ ತೂಕಡಿಸುತ್ತಾ ಮೂರ್ಛೆ ಬೀಳುತ್ತದೆ. ಇದಕ್ಕೆಂದೇ ಹಿಂದಕ್ಕೊಬ್ಬರು ಸೆಕ್ಯುರಿಟಿ ಗಾರ್ಡನ್ನು ನಿಯೋಜಿಸಲೇಬೇಕು; ಹೆಬ್ಬಾವಿನ ವಯ್ಯಾರಕ್ಕೆ ತಕ್ಕಡಿಯೇ ಜಾರಿ ಕೆಳಕ್ಕೆ ಬೀಳುತ್ತದೆ; ಹಾಸಿಗೆಯಂಥ ಸ್ಕೇಲಿನ ಮೇಲೆ ನೆಟ್ಟಗೆ ನಿಲ್ಲೋ ಮಾರಾಯ ಅಂತ ಹೇಳಿದರೂ ಆ ಒಂಟೆ ಸತಾಯಿಸುವುದನ್ನು ಬಿಡುವುದಿಲ್ಲ; ಹುಲಿಗೆ 'ಸ್ಟ್ಯಾಂಡ್ ಅಪ್' ಎಂದು ಹೇಳಿದರೆ ಅದಕ್ಕೆ ಬ್ರಿಟನ್ ಇಂಗ್ಲಿಷ್ ಅರ್ಥವಾಗುತ್ತದೆ ಅಂತ ಯಾವ ಗ್ಯಾರೆಂಟಿ? ಮೊಲಕ್ಕೆ ಹಾಗೆ ಶಿಸ್ತುಬದ್ಧವಾಗಿ ಕೂರಿಸಲು ಏನಾದರೂ ಆಮಿಷವೊಡ್ಡಲೇಬೇಕು.
ಇಷ್ಟೆಲ್ಲ ಸರ್ಕಸ್ಸು ಮುಗಿಯುವಷ್ಟರ ಹೊತ್ತಿಗೆ ಝೂನ ಈ ಸಿಬ್ಬಂದಿಯ ತೂಕ ಕನಿಷ್ಠ ಐದಾರು ಕೆಜಿಯಾದರೂ ಇಳಿದಿರುತ್ತದೆ!
ಮೊನ್ನೆ ಲಂಡನ್ ಝೂನ ಸಿಬ್ಬಂದಿ ಹಾಗೆಯೇ ತೂಕ ಇಳಿಸಿಕೊಂಡರು. ಸುಮಾರು ಸಾವಿರಕ್ಕೂ ಅಧಿಕ ಪ್ರಾಣಿಗಳ ತೂಕದ ಮಾಹಿತಿಯನ್ನು ಝೂಲಾಜಿಕಲ್ ಇನ್ಫಾರ್ಮೇಶನ್ ಮ್ಯಾನೇಜ್ಮೆಂಟ್ ಸಿಸ್ಟಂಗೆ ಒಪ್ಪಿಸಲಾಯಿತು. ಒಂದು ವೇಳೆ ಆ ಜೀವಿ ಪ್ರೆಗ್ನೆಂಟ್ ಆಗಿದ್ದರೆ ಅದನ್ನು ವಿಶೇಷವಾಗಿಯೇ ತೂಗಬೇಕು. ಆದರೂ ಝೂ ಕೀಪರ್ಗಳು ಅಂದುಕೊಂಡಿದ್ದನ್ನು ಸಾಧಿಸಿಯೇಬಿಟ್ಟರು. ಎಷ್ಟಾದರೂ ಮಾನವನಲ್ಲವೇ..!?
- ಮಿಲೀ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.