ಅಷ್ಟಾಧ್ಯಾಯಿ ಅಧ್ಯಯನ!
ಸ್ವಾಮಿ ವಿವೇಕಾನಂದರು ಜೈಪುರದಲ್ಲಿದ್ದಾಗ ಅವರಿಗೆ ಖ್ಯಾತ ಸಂಸ್ಕೃತ ವ್ಯಾಕರಣ ಪಂಡಿತರೊಬ್ಬರ ಪರಿಚಯವಾಯಿತು. ವ್ಯಾಕರಣವನ್ನು ಆಳವಾಗಿ ಅಧ್ಯಯ ಮಾಡಬೇಕೆಂಬ ಅಪೇಕ್ಷೆ ಬಹಳ ದಿನಗಳಿಂದಿತ್ತು. ಈಗ ಈ ಪಂಡಿತನ ಸಹಾಯದಿಂದ ಪಾಣಿನಿಯ 'ಅಷ್ಟಾಧ್ಯಾಯಿ' ವ್ಯಾಕರಣ ಗ್ರಂಥವನ್ನು ಅಭ್ಯಾಸ ಮಾಡಬೇಕೆಂದು ಸ್ವಾಮೀಜಿ ನಿಶ್ಚಯಿಸಿದರು. ಪಂಡಿತನು ವ್ಯಾಕರಣವನ್ನು ಬೋಧಿಸಲು ಒಪ್ಪಿದ. ಆದರೆ ಆತ ಈ ಗ್ರಂಥದ ಮೊದಲ ಸೂತ್ರದ ಭಾಷ್ಯವನ್ನು ಸ್ವಾಮೀಜಿಗೆ ಅರ್ಥಮಾಡಿಸಲು ಮೂರು ದಿನಗಳ ಕಾಲ ಪ್ರಯತ್ನಿಸಿದ. ಆದರೂ ಯಶಸ್ವಿಯಾಗಲಿಲ್ಲ. ಇದನ್ನು ಕಂಡು ಪಂಡಿತನಿಗೇ ಬೇಸರ ಹುಟ್ಟಿ ಹೇಳಿದ, 'ಸ್ವಾಮೀಜಿ, ನನ್ನ ಬಳಿಯಲ್ಲಿ ಅಧ್ಯಯನ ಮಾಡುವುದರಿಂದ ನಿಮಗೇನೂ ಪ್ರಯೋಜನವಾಗುತ್ತಿಲ್ಲ ಎನಿಸುತ್ತದೆ. ಮೂರು ದಿನಗಳಾದರೂ ಒಂದು ಸೂತ್ರವನ್ನೂ ನಿಮಗೆ ಅರ್ಥ ಮಾಡಿಸಲು ನನ್ನಿಂದ ಸಾಧ್ಯವಾಗಿಲ್ಲ' ಎಂದ.
ಈಗ ಸ್ವಾಮೀಜಿ ಆ ಸೂತ್ರದ ಭಾಷ್ಯವನ್ನು ತಾವೇ ಅಧ್ಯಯನ ಮಾಡಿ ಕರಗತಮಾಡಿಕೊಳ್ಳುವುದೆಂದು ನಿಶ್ಚಯಿಸಿದರು. ಬಳಿಕ ಆ ಗ್ರಂಥವನ್ನು ಹಿಡಿದು ಅದರಲ್ಲೇ ಏಕಾಗ್ರಚಿತ್ತರಾಗಿ ಕುಳಿತುಬಿಟ್ಟರು. ಆ ಪಂಡಿತನಿಗೆ ಮೂರು ದಿನಗಳಲ್ಲಿ ಕಲಿಸಲಾಗದ್ದನ್ನು ಮೂರು ಗಂಟೆಗಳಲ್ಲಿ ಸ್ವಪ್ರಯತ್ನದಿಂದ ಹೃದ್ಗತಗೊಳಿಸಿಕೊಂಡರು! ಆ ಪಂಡಿತನಿಗೆ ಪರಮಾಶ್ಚರ್ಯ. ಅನಂತರ ಸೂತ್ರದಿಂದ ಸೂತ್ರಕ್ಕೆ, ಅಧ್ಯಯನದಿಂದ ಅಧ್ಯಯಕ್ಕೆ ಮುಂದುವರಿದು ಇಡೀ ಗ್ರಂಥವನ್ನೇ ಸ್ವಾಧೀನಪಡಿಸಿಕೊಂಡುಬಿಟ್ಟರು. ಮನುಷ್ಯನಿಗೆ ತೀವ್ರ ಹಂಬಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟರು
-ಆನಂದ ಎಸ್.ಎನ್.