ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ನಮ್ಮ ನೆಮ್ಮದಿಯ ಕ್ಷಣಗಳು ಯಾವವು?

Mainashree
Updated On : 28 Aug 2013, 2:55 am

ಒಂದು ವೇಳೆ ನಾವು ಬೇರೊಂದು ಕೆಲಸದಲ್ಲಿರುವಾಗ ಹಣದ ಬಗ್ಗೆಯಾಗಲೀ, ಆಸ್ತಿಯ ಬಗ್ಗೆಯಾಗಲೀ ಯೋಚಿಸುತ್ತೇವೆ ಎಂದಾದರೆ, ಆ ಕ್ಷಣದಲ್ಲಿ ಅವೆಲ್ಲ ಒಂದು ನೆನಪಿನಂತೆ. ಏಕೆಂದರೆ, ನಾವು ಏನನ್ನೋ ಬಳಸುತ್ತಿರುತ್ತೇವೆ. ಇನ್ಯಾವುದರ ಬಗ್ಗೆಯೋ ಯೋಚಿಸುತ್ತಿರುತ್ತೇವೆ. ಅದನ್ನೇ 'ಹಗಲುಗನಸು' ಎನ್ನಬಹುದು. ಒಬ್ಬ ವ್ಯಕ್ತಿ ಆಸ್ಪತ್ರೆಯಲ್ಲಿಯೋ, ಜೈಲಿನಲ್ಲಿಯೋ ನೋವು ಅನುಭವಿಸುತ್ತಿರುವಾಗ ತನ್ನ ಆಸ್ತಿ ಅಥವಾ ಐಷಾರಾಮಿ ಜೀವನದ ಬಗ್ಗೆ ಯೋಚಿಸಲು ಸಾಧ್ಯವೇ? ಒಂದು ವೇಳೆ ತನ್ನ ಶ್ರೀಮಂತಿಕೆಯ ವಿಚಾರ ಅವನಲ್ಲಿ ಬಂದರೂ, ಅದು ಕ್ಷಣಿಕವಾದ ಸಾಂತ್ವನ ಕೊಡಬಹುದೇ ವಿನಾ ಅವನ ಕೊರಗುವಿಕೆಯನ್ನು ನಿವಾರಿಸುವ ಶಕ್ತಿ ಅದಕ್ಕಿಲ್ಲ. ಕೇವಲ ಶ್ರೀಮಂತಿಕೆಯ ನೆನಪುಗಳಿಂದ ಯಾರೂ ಬದುಕಲು ಸಾಧ್ಯವಿಲ್ಲ.
ಆದರೆ, ಧ್ಯಾನದಲ್ಲಿರುವಾಗ ನಾವು ಯಾವುದೇ ವಸ್ತು ಅಥವಾ ವಿಚಾರ ಇಲ್ಲದೆಯೇ ಆನಂದ ಪಡೆಯಬಹುದು. ಧ್ಯಾನದಲ್ಲಿರುವಾಗ ಎಲ್ಲವನ್ನೂ ಮರೆಯಬೇಕಾಗುತ್ತದೆ. ಮನಸ್ಸು ಶೂನ್ಯದ ಸ್ಥಿತಿಯಲ್ಲಿರುವುದರಿಂದ ಯಾವುದೇ ವಿಚಾರಗಳು ನಮ್ಮಲ್ಲಿ ಸುಳಿಯುವುದಿಲ್ಲ. ಆಗಲೇ ನಮಗೆ ನಿಜವಾದ ಆನಂದದ ಅನುಭವವಾಗುತ್ತದೆ. ಧ್ಯಾನದಿಂದ ಸಿಗುವ ಆನಂದ ಬಾಹ್ಯದ ಯಾವುದೇ ವಸ್ತುವಿನ, ಯೋಚನೆಯ ಅಥವಾ ಇಂದ್ರಿಯಗಳ ಗ್ರಹಿಕೆಯನ್ನು ಅವಲಂಬಿಸಿರುವುದಿಲ್ಲ. ಎಷ್ಟೇ ಸುಂದರವಾದ ಸ್ಥಳದಲ್ಲಿ, ಎಷ್ಟೇ ಮೆದುವಾದ ಹಾಸಿಗೆ ಮೇಲೆ ಕುಳಿತರೂ, ನಾವು ಧ್ಯಾನಮಗ್ನರಾಗಿ ಕೇವಲ ನಮ್ಮ ಉಸಿರಾಟ ಅಥವಾ ಯೋಚನೆಯನ್ನೇ ಅವಲೋಕಿಸುತ್ತಿದ್ದರೆ, ನಾವಿರುವ ಸ್ಥಳ, ಕುಳಿತ ಹಾಸು ಎಲ್ಲವನ್ನೂ ಮರೆಯುತ್ತೇವೆ.
ನಿಜ ಅರ್ಥದಲ್ಲಿ ವ್ಯಕ್ತಿ ತನ್ನನ್ನು ತಾನು ಮರೆತಾಗಲೇ ಆನಂದದಲ್ಲಿರುತ್ತಾನೆ. ಅವೇ ನೆಮ್ಮದಿಯ ಕ್ಷಣಗಳು. ಏಕೆಂದರೆ, ತನ್ನನ್ನೇ ಮರೆತರೆ ಅವನಲ್ಲಿ ಯಾವುದೇ ಯೋಚನೆಗಳೂ ಇರುವುದಿಲ್ಲ. ಯೋಜನೆಗಳೂ ಇರುವುದಿಲ್ಲ. ಯಾವ ಚಿಂತೆಯೂ ಇರುವುದಿಲ್ಲ. ಆದ್ದರಿಂದಲೇ ವ್ಯಕ್ತಿ ಧ್ಯಾನದ ನಂತರ ಅಥವಾ ಗಾಢನಿದ್ರೆಯ ನಂತರ ಶಾಂತ ಚಿತ್ತನಾಗಿಯೂ, ನೆಮ್ಮದಿಯ ಸ್ಥಿತಿಯಲ್ಲಿಯೂ ಇರುತ್ತಾನೆ. ಈ ಎರಡೂ ಅವಸ್ಥೆಯಲ್ಲಿ ಯಾವುದೇ ಯೋಚನೆಗಳು ಮನದಲ್ಲಿ ಸುಳಿಯದಿರುವುದರಿಂದ, ಮನಸ್ಸು ವಿಶ್ರಾಂತಿಯ ಸ್ಥಿತಿಯಲ್ಲಿದ್ದು, ಹಗುರಾಗಿರುತ್ತದೆ. ಆದ್ದರಿಂದಲೇ ವ್ಯಕ್ತಿ ನಿಜವಾದ ಧ್ಯಾನ ಅಥವಾ ಗಾಢ ನಿದ್ರೆಯನ್ನು ಆಸ್ವಾದಿಸುತ್ತಾನೆ, ಆನಂದಿಸುತ್ತಾನೆ. ಪುನಃ ಪುನಃ ಅದನ್ನು ಬಯಸುತ್ತಾನೆ.
ನಿಜವಾಗಿ ನೋಡಿದರೆ, ಮನಸ್ಸು ಯಾವುದೇ ವಸ್ತು ಲಭ್ಯವಿಲ್ಲದಿದ್ದರೂ, ಯೋಚನೆಯಿಂದಲೇ ಸಂತೋಷಪಡುವ ಸ್ಥಿತಿಯನ್ನು ನಿರ್ಮಾಣ ಮಾಡುತ್ತದೆ. ನಮಗೆ ಲಾಟರಿಯಲ್ಲಿ ಹಣ ಸಿಕ್ಕಿದೆ ಎಂದಾಗಲೀ, ನಮ್ಮ ನಿವೇಶನದ ಬೆಲೆ ಏರಿದೆ ಎಂದಾಗಲೀ ಅಥವಾ ದೊಡ್ಡ ವ್ಯವಹಾರ ಒಂದನ್ನು ಕುದುರಿಸುವಲ್ಲಿ ನಾವು ಸಫಲರಾಗಿದ್ದೇವೆಂಬ ವಾರ್ತೆ ಬಂದಾಗ, ಅದು ಸತ್ಯವೋ ಅಸತ್ಯವೋ ಎಂಬುದನ್ನು ವಿಮರ್ಶಿಸದೆಯೇ ನಾವು ಸಂತಸ ಪಡುವುದೋ, ಉದ್ವೇಗಕ್ಕೆ ಒಳಗಾಗುವುದೋ ಇದೆ. ಆ ಕ್ಷಣದಲ್ಲಿ ಭೌತಿಕವಾಗಿ ಯಾವ ಘಟನೆಯೂ ನಡೆದಿರುವುದಿಲ್ಲವಾದರೂ ನಾವು ಸಂತಸಪಡುತ್ತೇವೆ. ಇವಾನ್ ಹೇಳುವಂತೆ, 'ಬಾಹ್ಯದಲ್ಲಿ ಘಟಿಸುವ ಕೆಲವು ನಿರ್ದಿಷ್ಟ ಕ್ರಿಯೆಗೆ ಮನಸ್ಸು ಮತ್ತು ದೇಹದಲ್ಲಿ ಸ್ಥಿರವಾದ ಪ್ರತಿಕ್ರಿಯೆ ಇರುತ್ತದೆ. ಸತ್ಯಾಸತ್ಯತೆ ಏನೇ ಇದ್ದರೂ, ಲಾಭವಾದಾಗ ಸಂತೋಷಪಡುವುದು, ನಷ್ಟವಾದಾಗ ದುಃಖಿಸುವ ಮನೋಭಾವವನ್ನು ನಾವು ಬೆಳೆಸಿಕೊಂಡು ಬಂದಿದ್ದೇವೆ. ಅನಿವಾರ್ಯಕ್ಕಿಂತ, ಅಗತ್ಯಕ್ಕಿಂತ ಹೆಚ್ಚು ಗಳಿಸಬೇಕೆಂಬುದೂ ಕೂಡ ನಾವೇ ನಿರ್ಮಿಸಿಕೊಂಡ ಒಂದು ಮನೋಭಾವನೆ. ಅದನ್ನು ನಿರ್ಮಿಸಿಕೊಂಡದ್ದಲ್ಲದೆ, ಅದಕ್ಕೇ ಅಂಟಿಕೊಂಡು, ಅದನ್ನು ಪೋಷಿಸಿ, ಬೆಳೆಸಲು ನಿಜವಾದ ಕಾರಣವಿಲ್ಲದೇ ಶ್ರಮಪಡುತ್ತೇವೆ'
(ಮುಂದುವರಿಯುವುದು)

ಕಿರಣ್‌ಉಪಧ್ಯಾಯ
keyrun1970@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement