ರೋಹಿಣಿ ನಕ್ಷತ್ರ
ಕೈ ಕಾಲು ಸರಿ ಇದ್ದು, ಏನೂ ಸಾಧಿಸದೇ ಇರುವಂಥವರು ನಿಜವಾದ ಅಂಗವಿಕಲರು. ಹೀಗಾಗಿ, ರೋಹಿಣಿ ಅಂಗವಿಕಲೆ ಅಲ್ಲ!
40 ಎಕರೆ ವಿಸ್ತಾರವುಳ್ಳ ರೋಹಿಣಿ ಅವರ ಕಾಫಿ ಎಸ್ಟೇಟ್ ನೋಡಿದಾಗ ಆಕೆಯ ಸಾಹಸ ಏನೆಂಬುದು ಕಣ್ಮುಂದೆ ಕಟ್ಟುತ್ತದೆ. ಇಂಥದ್ದೊಂದು ಅದ್ಭುತ ತೋಟ ಕಾಣಸಿಗುವುದು ಬನಂದಾರಿಯಿಂದ 2 ಕಿ.ಮೀ. ಪಯಣಿಸಿದಾಗ ಗಾಳಿಗಂಡ (ಇದು ಅಲ್ದೂರ್ ಹೋಬಳಿ, ಚಿಕ್ಕಮಗಳೂರಿಗೆ ಸೇರಿದೆ) ಎಂಬ ಪುಟ್ಟ ಹಳ್ಳಿಯಲ್ಲಿ. ಅಲ್ಲಿರುವುದೇ ನರಹರಿ ಎಸ್ಟೇಟ್.
ಹುಟ್ಟಿ ಒಂದು ತಿಂಗಳಲ್ಲೇ ರೋಹಿಣಿ ಪೊಲಿಯೋಗೆ ತುತ್ತಾದರು. ಇದಾದ ನಂತರ ಪಾರ್ಶ್ವವಾಯು. ಕೆನ್ನೆಯಿಲ್ಲಿರುವಲ್ಲಿ ಬಾಯಿ ಇತ್ತು. ಊಹಿಸಿ, ಎಷ್ಟು ತೀವ್ರವಾದ ಸ್ಟ್ರೋಕ್ಗೆ ಗುರಿಯಾಗಿದ್ದಳು ಎಂಬುದನ್ನು. ಪ್ಯಾರಾಲಿಸಿಸ್ಗೆ ತುತ್ತಾದಾಗ ಅವರು ಹರೆಯಕ್ಕೆ ಕಾಲಿಟ್ಟಿದ್ದರು. ಪರಿಸ್ಥಿತಿ ಹೀಗಿರುವಾಗ ಮತ್ತಷ್ಟು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದರು. ಸಹೋದರನಿಗೆ ಆಗ ಮದುವೆ ನಿಶ್ಚಯವಾಗಿತ್ತು. ಆದರೆ, ಅವರು ಮದುವೆಗೆ ಕೆಲವೇ ದಿನವಿರುವಾಗ ಇಹಲೋಕ ತ್ಯಜಿಸಿದರು. ಇದ್ಯಾವುದಕ್ಕೂ ಆಕೆಯ ಧೃತಿಗೆಡಿಸಲಿಲ್ಲ. ಜೀವನದಲ್ಲಿ ಏನಾದರೊಂದು ಸಾಧಿಸಬೇಕೆಂಬ ತವಕ. ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಅವರಿಗೆ ತಂದೆ ಬಹುದೊಡ್ಡ ಆಸರೆ. ಆಕೆಗೆ 40 ವರ್ಷ. ಮದುವೆಯಿಲ್ಲ, ದುಃಖ, ಒತ್ತಡ, ಒಂಟಿತನವೇ ಸಂಗಾತಿ ಆಗಿತ್ತು.!
ಕೃಷಿ ಕನಸು
ಆಗ ಹೊಳೆದದ್ದೇ ಕೃಷಿಯ ಬಯಕೆ. ಅದೇ ಸಂದರ್ಭದಲ್ಲಿ 'ಅಲ್ದೂರಿನ ಹತ್ತಿರ ಗಾಳಿಗುಂಡಿ ಎಂಬಲ್ಲಿ ಖಾಲಿ ಗುಡ್ಡ ಇದೆ ನೋಡಿ' ಎಂದು ಯಾರೋ ಅಂದರು. ಮರುದಿನವೇ ತಂದೆಯೊಂದಿಗೆ ಬಂದು ಅಲ್ಲಿ 60 ಎಕರೆ ಜಾಗ ಕೊಂಡೇಬಿಟ್ಟರು. ಆಗ ಅವರಿಗೆ ಕೃಷಿಯ ಬಗ್ಗೆ ಒಂಚೂರು ಪರಿಜ್ಞಾನವಿರಲಿಲ್ಲ. ಅಡುಗೆ ಮಾಡಲೂ ಬರುತ್ತಿರಲಿಲ್ಲ. ಅಲ್ಲಿನ ಸಣ್ಣ ಮನೆಯಲ್ಲಿ ಕಲ್ಲಿನ ಒಲೆ, ಚಿಮಣಿ ದೀಪ, ಸಣ್ಣ ಬಚ್ಚಲು ಹೊರತಾಗಿ ಯಾವುದೇ ಸೌಲಭ್ಯಗಳಿರಲಿಲ್ಲ. ಸುತ್ತಲೂ ಕಾಡು. ಕೆಲವು ದಿನ ತಂದೆ ಮಗಳ ಜೊತೆಗೆ ಅಲ್ಲಿದ್ದರು. ಆಕೆಯ ತಂದೆ ಬೆಂಗಳೂರಿನ ಇಐನಲ್ಲಿ ಮ್ಯಾನೇಜರ್ ಆಗಿದ್ದರು. ರೋಹಿಣಿ ಅವರನ್ನು ಬಿಎಸ್ಸಿವರೆಗೆ ಓದಿಸಿದ್ದರು. ಪೊಲಿಯೋ ತುತ್ತಾಗಿದ್ದ, ಪ್ಯಾರಾಲಿಸಿಸ್ಗೆ ಈಡಾಗಿದ್ದ ನಾಲ್ಕು ಆಪರೇಷನ್ಗೆ ಒಳಗಾಗಿದ್ದ ರೋಹಿಣಿ ಅವರು ದಿಟ್ಟೆ.
ಪಾಠ ಕಲಿಕೆ
ಆಧುನಿಕ ಜೀವನಶೈಲಿ ಬಿಟ್ಟು ಅವರು ಅಲ್ಲಿನ ಕೆಲಸಗಾರರ ನೆರವು ಪಡೆದರು. ಬೆಳೆದ ಹುಲ್ಲು ಕತ್ತರಿಸಿ, ಬೇಡದ ಮರ ಕಡಿದು ಸಮತಟ್ಟುಗೊಳಿಸಿದರು. ಕಾಫಿ ಬೋರ್ಡ್, ಕೃಷಿ ತಜ್ಞರಿಂದ ಸ್ಥಳೀಯ ಕಾಫಿ ತೋಟದ ಕೆಲಸಗಾರರಿಂದ, ಪುಸ್ತಕ ಓದಿ ಕಾಫಿ ಗಿಡ ಹಾಕುವ ಬಗ್ಗೆ ಮಾಹಿತಿ ಪಡೆದರು. ನರ್ಸರಿ ಮಾಡಿದರು. ಕಾಫಿ ಬೀಜ ಹಾಕಿ ಅದು ಗಿಡವಾಗಿ ಬೆಳೆಯಲು 5 ವರ್ಷ ಕಾಯಬೇಕು. ಆದರೆ, ನಡುವೆ ಅದನ್ನು ನೆಡುವುದು ಹೇಗೆ? ಗೊಬ್ಬರ ಹಾಕುವುದು, ಚಿಗುರು ತೆಗೆಯುವುದು, ಔಷಧಿ ಸಿಂಪಡಿಸುವುದು ಹೇಗೆ ಎಂಬುದನ್ನೆಲ್ಲಾ ಕಲಿತರು.
15 ಎಕರೆ ಭೂಮಿಯಲ್ಲಿ ಕಾಫಿ ಮುಖ್ಯ ಬೆಳೆ. ನಡುವೆ ಅಡಕೆ, ಸಿಲ್ವರ್ ಗಿಡ, ಖಾಲಿ ಪ್ರದೇಶದಲ್ಲಿ ಬಾಳೆಗಿಡ ಕೆಲಸಗಾರರ ಸಹಾಯದಿಂದ ನೆಟ್ಟರು. ಪ್ರಾಮಾಣಿಕ ನಾಲ್ಕು ಜನರನ್ನು ಕೆಲಸಕ್ಕಿಟ್ಟುಕೊಂಡರು. ಅವರು ಎಸ್ಟೇಟ್ ಒಳಗೆ ಗುಡಿಸಲು ಕಟ್ಟಿಕೊಂಡು ಸಂಸಾರ ಸಮೇತ ವಾಸಿಸುತ್ತಿದ್ದಾರೆ.
ಭರ್ಜರಿ ಫಸಲು
ಈಗ ಕಾಫಿ ತೋಟ ಫಲವತ್ತಾಗಿ ಬೆಳೆದಿದೆ. 15 ಎಕರೆಯಲ್ಲಿ 2 ತರಹದ ಅರೇಬಿಕಾ, ರುಬೆಸ್ಟೋ ಕಾಫಿ ಗಿಡ ಹಾಕಿದ್ದಾರೆ. ಇದರ ನಡುವೆ ಅಡಕೆ, ತೆಂಗು, ಬಾಳೆಗಳ ಬಾಳ್ವೆ. 2000 ಸಿಲ್ವರ್ ಗಿಡಗಳ ಸೊಬಗು. ತಾವೇ ನಿಂತು ಮನೆ ಸರಿಪಡಿಸಿದ್ದಾರೆ. ಈಗ ಇವರೇ ರೆಬೆಸ್ಟೋ ಗಿಡಕ್ಕೆ ಅರೇಬಿಕಾ ಕ್ರಾಫ್ಟಿಂಗ್ ಕಸಿ ಮಾಡಿದ್ದಾರೆ. ಹಾಗಾಗಿ 5 ವರ್ಷಕ್ಕೊಮ್ಮೆ ಬರುವ ಫಸಲು 1 ವರ್ಷಕ್ಕೆ ಬರುತ್ತದೆ. ಇಳುವರಿಯೂ ಕೈಹಿಡಿದಿದೆ. ಪ್ರಸ್ತುತ 1 ಎಕರೆಯಲ್ಲಿ 10 ಚೀಲ ಕಾಫಿ ಬೆಳೆ ತೆಗೆಯುತ್ತಿದ್ದಾರೆ. 1 ಎಕರೆಯಲ್ಲಿ 800 ಗಿಡ ನೆಟ್ಟಿದ್ದಾರೆ.
ಇಂಥ ಛಲ ಎಷ್ಟು ಹೆಂಗಸರಿಗೆ ಬಂದೀತು? ನೀವೂ ಅವರಿಗೆ ಹಲೋ ಹೇಳಿ... ಮೊ. 9449541292.
- ವಿ. ಬಾಲಕೃಷ್ಣ ಶಿರ್ವ