ಅಂತರಂಗ ಬಹಿರಂಗ
ರಾಜನ ಆಸ್ಥಾನದ ತರುಣ ಕವಿಯೊಬ್ಬನಿಗೆ ರಾಜಕುಮಾರಿಯ ಮೇಲೆ ಕಣ್ಣು. ಆಕೆಯ ಯವ್ವನ, ಸೊಗಸು ಆತನಿಗೆ ಹುಚ್ಚು ಹಿಡಿಸಿವೆ. ಆಕೆಯ ಜತೆಗೆ ರಮಿಸಬೇಕೆಂಬ ತನ್ನ ಇಚ್ಛೆಯನ್ನು ಹತ್ತಿಕ್ಕಲಾರದವನಾಗಿದ್ದಾನೆ. ಆದರೆ ತನ್ನ ಮನದ ಅಭಿಲಾಷೆಯನ್ನು ಆಕೆಗೆ ಹೇಳುವುದು ಹೇಗೆ? ಆಕೆಯೇನಾದರೂ ಸಿಟ್ಟಿಗೆದ್ದು, ತನ್ನಪ್ಪನಿಗೆ ದೂರು ಕೊಟ್ಟು, ಆತ ಕ್ರೋಧದಿಂದ ನನ್ನ ತಲೆ ಹಾರಿಸಿದರೆ?
ಸಮಯ ಕಾಯುತ್ತಿದ್ದ ಕವಿಗೆ ಅದು ಸಿಕ್ಕಿಯೇ ಬಿಟ್ಟಿತು. ವಸಂತ ಮಾಸ. ರಾಜಕುಮಾರಿ ಉದ್ಯಾನದ ಬಳ್ಳಿಮಂಟಪದಲ್ಲಿ ಕುಳಿತುಕೊಂಡು ಮೈಗೆ ಚಂದನವನ್ನು ಲೇಪಿಸಿಕೊಳ್ಳುತ್ತಿದ್ದಾಳೆ. ಅದನ್ನು ನೋಡಿ ಕವಿ ಆಕೆಗೆ ಹೇಳಿದ:
ಮನ್ಮಥಾಗ್ನಿ ಪರಿತಪ್ತಮನಸ್ಕೇ ಚಂದನಂ ಕಿಮನುಲಿಂಪಸಿ ಬಾಲೇ ಕಿಂ ನ ವೇತ್ಸಿ ಬಹಿರಂಗ ವಿಧಾನಾತ್ ಅಂತರಂಗ ವಿಧಿರೇವ ಬಲೀಯಾನ್
'ಎಲೆ ಬಾಲೆ! ಮನ್ಮಥ ಮೈಯನ್ನು ಸುಡುತ್ತಿರುವನೇನು? ಅದಕ್ಕಾಗಿ ಚಂದನವನ್ನು ಲೇಪಿಸಿಕೊಳ್ಳುತ್ತಿರುವೆಯಾ? ಕಾಮನನ್ನು ಶಮನಗೊಳಿಸುವ ಈ ಬಹಿರಂಗದ ವಿಧಾನದಿಂದ ಪ್ರಯೋಜನವೇನು? ಅಂತರಂಗದಲ್ಲೇ ಅದನ್ನು ನಿವಾರಿಸಿಕೊಳ್ಳಬೇಕಲ್ಲವೇ?'
ಕವಿಯ ಬುದ್ಧಿವಂತಿಕೆ ನೋಡಿ. ನನ್ನನ್ನು ಅಂತರಂಗಕ್ಕೆ ಕರೆ ಎಂದು ಸೂಚ್ಯವಾಗಿ ಹೇಳಿದ ಹಾಗೂ ಆಯಿತು. ಕವಿಯ ಗ್ರಹಚಾರ ಕೆಟ್ಟು ಆಕೆಯೇನಾದರೂ ರಾಂಗ್ ಆದರೆ, 'ಮನಸ್ಸಿನಲ್ಲಿ ಕಾಮಕ್ಕೆ ತಡೆ ಹಾಕು ಎಂದೆ ಅಷ್ಟೇ' ಎಂದರಾಯಿತು! ಇವನ ಶಾಣ್ಯಾತನ ಕಂಡು ಆಕೆ ಒಲಿದಳೋ ಅಥವಾ ರಾಜನಿಂದ ಸಮ್ಮಾನ ಸಿಕ್ಕಿತೋ ನಮಗೆ ತಿಳಿಯದು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.