ಜೀವನ ಪರೀಕ್ಷೆ
ಇನ್ನೇನು ಎರಡು ದಿನದಲ್ಲಿ ಹಸಮಣೆ ಏರಿ ನೂತನ ದಾಂಪತ್ಯ ಜೀವನಕ್ಕೆ ಕಾಲಿಡಬೇಕಿದ್ದ ಎರಡು ಜೀವಗಳು ನೋವುಣ್ಣುವಂತಾಯಿತು. ಅದಕ್ಕೆ ಕಾರಣ ಎಚ್ಐವಿ ಎಂಬ ಮಾರಿ.
ನಿಜವಾಗಲೂ ಆತ ಎಚ್ಐವಿ ಪೀಡಿತನೇ ಎಂಬುದು ಇಂದಿಗೂ ಬಗೆಹರಿಯದ ಪ್ರಶ್ನೆ. ಆದರೆ ಹಾಗೊಂದು ಅನುಮಾನ ಮೂಡಿದ ಕಾರಣ ಇಂದು ಎರಡು ಕುಟುಂಬಗಳು ಕಣ್ಣೀರಿನಲ್ಲಿ ಕೈ ತೊಳೆಯುತ್ತಿವೆ. ಎರಡು ಯುವ ಜೀವಗಳು ಭವಿಷ್ಯದ ಅರಿವಿಲ್ಲದೆ ಪರಿತಪಿಸುತ್ತಿವೆ. ಇಷ್ಟಕ್ಕೂ ಕತೆ ಏನು ಅಂತೀರಾ?
ಎಲ್ಲವೂ ಸುಗಮವಾಗಿ ನಡೆದಿದ್ದರೆ ನಾಳೆ ಅಂದರೆ ಭಾನುವಾರ ಆತ ಅವಳಿಗೆ ತಾಳಿ ಕಟ್ಟಬೇಕಿತ್ತು. ಆಕೆ ಆತನ ಕೈ ಹಿಡಿದು ಸಪ್ತಪದಿ ತುಳಿಯಬೇಕಿತ್ತು. ಇಬ್ಬರೂ ಕೈ ಹಿಡಿದು ಅರಂಧತಿ ನಕ್ಷತ್ರ ನೋಡಬೇಕಿತ್ತು. ಸರ್ವರ ಸಮ್ಮುಖದಲ್ಲಿ ಸತಿಪತಿಗಳಾಗಬೇಕಿತ್ತು. ಆದರೆ ಆಗಿದ್ದೇ ಬೇರೆ!
ಅದು ಬೀಚಗಾನಹಳ್ಳಿ ಪಕ್ಕದ ಒಂದು ಪುಟ್ಟ ಊರು. ಅಲ್ಲಿ ಲಕ್ಷ್ಮಿನರಸಮ್ಮನ ಮಗ ರಾಜು ಎಂಬಾತನಿಗೆ ಕಳೆದ ನಾಲ್ಕೈದು ವರ್ಷಗಳಿಂದ ವಧುವಿನ ಅನ್ವೇಷಣೆ ನಡೆಸುತ್ತಿದ್ದರು. ಸಮೀಪದ ಹಳ್ಳಿಯಲ್ಲಿ ಒಂದು ವಧು ಇರುವುದಾಗಿ ಹಿರಿಯರಿಂದ ತಿಳಿದು ಬಂತು. ಹಾಗೆ ವಧು ತೋರಿಸಿದ್ದು ರಾಜುವಿಗೆ ವರಸೆಯಲ್ಲಿ ಮಾವ ಆಗಬೇಕಿದ್ದ ಕೃಷ್ಣಪ್ಪ. ಈತ ವಧುವಿನ ಕಡೆಯವರಿಗೂ ಸಂಬಂಧಿ. ಹಾಗಾಗಿಯೇ ಎರಡೂ ಕಡೆಯವರನ್ನು ಸುಲಭವಾಗಿ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದರು.
ಹಿರಿಯರೆಲ್ಲ ಹೋಗಿ ಮಧು ಪರೀಕ್ಷೆ ಮಾಡಿದ್ದಾಯಿತು. ವಧು ಕಡೆಯವರು ಬಂದು ವರನನ್ನು ನೋಡಿದ್ದಾಯಿತು. ಎಲ್ಲರಿಗೂ ಒಪ್ಪಿಗೆ ಆಯಿತು. ಎರಡೂ ಕುಟುಂಬಗಳ ಒಪ್ಪಿಗೆ ಮೇರೆಗೆ ಅದೊಂದು ದಿನ ನಿಶ್ಚಿತಾರ್ಥವೂ ಮುಗಿಸಲಾಯಿತು. ಎಸ್ಎಸ್ಎಲ್ಸಿ ವರೆಗೂ ಓದಿದ್ದ ರಾಜು ಲಾರಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಕೈತುಂಬಾ ಸಂಪಾದನೆ ಮಾಡದಿದ್ದರೂ ಹೆಂಡತಿಯನ್ನು ಸಾಕುವಷ್ಟು ಸಂಪಾದಿಸುತ್ತಾನೆ ಎಂಬ ನಂಬಿಕೆ ವಧುವಿನ ಕಡೆಯವರಿಗೆ ಬಂದಿತ್ತು. ನಿಶ್ಚಿತಾರ್ಥ ಮುಗಿದು ಒಂದು ತಿಂಗಳು ಕಳೆಯುವುದರೊಳಗೆ ಮದುವೆ ದಿನಾಂಕ ಫಿಕ್ಸ್ ಮಾಡಿ ಆಹ್ವಾನ ಪತ್ರಿಕೆ ಮುದ್ರಿಸಲಾಯಿತು. ಎಲ್ಲ ಸಂಬಂಧಿಕರಿಗೂ ಹಂಚಿದ್ದೂ ಆಯಿತು. ಇನ್ನೇನು ಮದುವೆ ಎರಡು ದಿನಗಳಿದೆ ಎನ್ನುವಾಗ ಮದುವೆಯ ಹಿರಿಯ ಎನಿಸಿದ್ದ ಕೃಷ್ಣಪ್ಪ ಸಪ್ಪೆ ಮೋರೆ ಹಾಕಿಕೊಂಡು ಹುಡುಗಿ ಮನಗೆ ಬಂದು 'ದಯವಿಟ್ಟು ಮದುವೆ ನಿಲ್ಲಿಸಿ' ಎಂದ!
ಈತ ಹೀಗೆ ಹೇಳಲು ಕಾರಣವೇನು ಎಂದು ಪ್ರಶ್ನಿಸಿದರು. 'ಹುಡುಗನಿಗೆ ಏಡ್ಸ್ ಇದೆ ಎಂಬ ಮಾಹಿತಿ ಬಂದಿದೆ. ಆದರೆ ಅದು ನಿಜವಾ ಎಂಬುದು ಇನ್ನೂ ಖಚಿತವಾಗಬೇಕಿದೆ. ಇದು ಸ್ಪಷ್ಟವಾಗದ ಹೊರತು ಮದುವೆ ನಡೆಯುವುದು ಬೇಡ' ಎಂದು ಕೃಷ್ಣಪ್ಪ ಹೇಳಿದರು. ವಧುವಿನ ಕಡೆಯವರಿಗೆ ಅನುಮಾನ ಕಾಡಲಾರಂಭಿಸಿತು. ಈತನೇ ಹುಡುಗನನ್ನು ತೋರಿಸಿ ಮದುವೆಯ ಅಷ್ಟೂ ಕೆಲಸ ಹೆಗಲೇರಿಸಿಕೊಂಡಿದ್ದ ವ್ಯಕ್ತಿ, ಮದುವೆ ಇನ್ನು ನಾಲ್ಕು ದಿನ ಎನ್ನುವಾಗ ಏಕಾಏಕಿ ಬಂದು ಹುಡುಗನಿಗೆ ಏಡ್ಸ್ ಇದೆ ಎಂದದರೆ ವಧುವಿನ ಕಡೆಯವರ ಸ್ಥಿತಿ ಹೇಗಾಗಿರಬೇಕು. ಇದು ತಿಳಿದಿದ್ದಾದರೂ ಹೇಗೆ? ಎಂದು ಪ್ರಶ್ನಿಸಿದರು. ಆಗ ಕೃಷ್ಣಪ್ಪ ಹೇಳಿದ ಕತೆ ಹೀಗಿತ್ತು.
=
ಮದುಮಗ ರಾಜು ಕಳೆದ ಎರಡು ತಿಂಗಳಿನಿಂದ ತುಂಬಾ ಅನಾರೋಗ್ಯ ಪೀಡಿತನಾಗಿದ್ದ. ಯಾವುದೇ ಆಸ್ಪತ್ರೆಗೆ ಹೋದರೂ ಕಾಯಿಲೆ ಗುಣವಾಗಲಿಲ್ಲ. ಆತನ ಸ್ನೇಹಿತರು, ನೆಂಟರು ಕೂಡಲೇ ಕಾಯಿಲೆ ವಾಸಿ ಮಾಡಿಕೋ ಮದುವೆ ವೇಳೆಗೆ ಅನಾರೋಗ್ಯದಿಂದಿದ್ದರೆ ಕಷ್ಟ ಎಂದು ಹೇಳುತ್ತಿದ್ದರು. ತಾಯಿ ಲಕ್ಷ್ಮಿನರಸಮ್ಮ ಮಗನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಜಿಲ್ಲಾ ಕೇಂದ್ರದ ಒಂದು ನರ್ಸಿಂಗ್ ಹೋಂಗೆ ಕರೆದುಕೊಂಡು ಹೋದರು. ಅಲ್ಲಿ ಎಲ್ಲ ಪರೀಕ್ಷೆಗಳನ್ನು ಮಾಡಿದ ವೈದ್ಯರು ನಾಳೆ ರಿಪೋರ್ಟ್ ನೀಡುವುದಾಗಿ ಹೇಳಿ ಕಳುಹಿಸಿದರು.
ಮಾರನೇ ದಿನ ಮಗನನ್ನು ಮನೆಯಲ್ಲೇ ಬಿಟ್ಟು ಆಸ್ಪತ್ರೆಗೆ ಹೋದ ಲಕ್ಷ್ಮಿನರಸಮ್ಮನಿಗೆ ಎಲ್ಲ ಪರೀಕ್ಷೆಯ ರಿಪೋರ್ಟ್ಗಳನ್ನು ಕೊಟ್ಟ ವೈದ್ಯರು ಏನು ಹೇಳಿದರು ಎಂಬುದು ಇಂದಿಗೂ ನಿಗೂಢವಾಗಿಯೇ ಇದೆ. ಆದರೆ ಅಂದೇ ಅವರು ಆ ವಿಷಯ ಅವರಿಗೆ ತಿಳಿಸಿದ್ದರೇ? ಅದು ತಿಳಿದರೂ ಆಕೆ ಮುಚ್ಚಿಟ್ಟಿದ್ದರೇ? ಗೊತ್ತಿಲ್ಲ. ಒಟ್ಟಿನಲ್ಲಿ ಅಂದು ಆಸ್ಪತ್ರೆಯಲ್ಲಿ ವೈದ್ಯರು ಏನು ತಿಳಿಸಿದರು ಎಂಬುದನ್ನು ತಾಯಿ ಮಗ ಇಬ್ಬರೂ ಮುಚ್ಚಿಟ್ಟಿದ್ದ ಪರಿಣಾಮ ಪರಿಸ್ಥಿತಿ ಈ ಮಟ್ಟಕ್ಕೆಹೋಗಲು ಕಾರಣವಾಯಿತು ಎಂದು ಹೇಳಬಹುದು.
=
ಅಂದು ಶ್ರಾವಣ ಶುಕ್ರವಾರವಾದ ಕಾರಣ ಸ್ನಾನ ಮಾಡಿ ಪೂಜೆಗೆ ಹೊರಟಿದ್ದ ಲಕ್ಷ್ಮಿನರಸಮ್ಮನಿಗೆ ಎದುರಾಗಿದ್ದು ಅಂಗನವಾಡಿ ಕಾರ್ಯಕರ್ತೆ. 'ಇವರು ನಿಮ್ಮನ್ನು ಹುಡುಕಿಕೊಂಡು ಬಂದಿದ್ದಾರೆ. ಸ್ವಲ್ಪ ಮನೆ ಒಳಗೆ ಬನ್ನಿ ಮಾತನಾಡಬೇಕು' ಎಂದು ಬಂದಿದ್ದ ಅಂಗನವಾಡಿ ಕಾರ್ಯಕರ್ತೆ ಹೇಳಿದರು. ಆದರೆ ಪೂಜೆಗೆ ಹೋಗುವ ಆತುರದಲ್ಲಿದ್ದ ಲಕ್ಷ್ಮಿನರಸಮ್ಮ ಬಂದಿದ್ದ ನಾಲ್ಕೈದು ಅಪರಿಚಿತರನ್ನು ಒಂದು ಬಾರಿ ದುರುಗುಟ್ಟಿ ನೋಡಿ 'ಅದೇನು ಇಲ್ಲಿಯೇ ಹೇಳಿ. ನಾನು ಅರ್ಜೆಂಟಾಗಿ ಹೋಗಬೇಕು'ಎಂದು ಕೇಳಿದರು.
ಅಂಗನವಾಡಿ ಕಾರ್ಯಕರ್ತೆ ನೀಡಿದ ಯಾವುದೇ ಎಚ್ಚರಿಕೆಯನ್ನು ಲೆಕ್ಕಿಸದೆ ಮನೆಗೂ ಬರದೆ ಬೀದಿಯಲ್ಲಿಯೇ ವಿಷಯ ತಿಳಿಸುವಂತೆ ಪಟ್ಟು ಹಿಡಿದ ಲಕ್ಷ್ಮಿನರಸಮ್ಮನ ಮನವೊಲಿಸಲು ಅಲ್ಲಿದ್ದವರಿಗೆ ಸಾಧ್ಯವಾಗಲಿಲ್ಲ. ಅಷ್ಟರಲ್ಲಿ ಅಲ್ಲಿಗೆ ನಾಲ್ಕೈದು ಜನ ಗ್ರಾಮಸ್ಥರು ಜಮಾಯಿಸಿದರು. ಇನ್ನು ಆಕೆ ಕೇಳುವುದಿಲ್ಲ ಎಂಬುದು ಅರ್ಥ ಮಾಡಿಕೊಂಡ ಅಂಗನವಾಡಿ ಕಾರ್ಯಕರ್ತೆ 'ನೋಡಿ ನಿಮ್ಮ ಮಗ ರಾಜುಗೆ ಎಚ್ಐವಿ ರೋಗ ಇದೆಯಂತೆ. ಈ ವಿಚಾರ ಆತ ಪರೀಕ್ಷೆ ಮಾಡಿದ ಆಸ್ಪತ್ರೆಯವರು ತಿಳಿಸಿದ್ದಾರೆ. ಇವರು ಆತನನ್ನು ಪರೀಕ್ಷೆಗೊಳಪಡಿಸಿ ಅಗತ್ಯ ಕೌನ್ಸೆಲಿಂಗ್ ನೀಡಿ ಔಷಧ ನೀಡಲು ಬಂದಿದ್ದಾರೆ. ಎಲ್ಲಿದ್ದಾನೆ ನಿಮ್ಮ ಮಗ?'ಎಂದು ಒಂದೇ ಉಸುರಿಗೆ ಹೇಳಿದರು.
ಇದನ್ನು ಕೇಳಿದ ಲಕ್ಷ್ಮಿನರಸಮ್ಮ ಅಂಗನವಾಡಿ ಕಾರ್ಯಕರ್ತೆಗೂ ಬಂದಿದ್ದವರಿಗೂ ವಾಚಾಮಗೋಚರ ಬೈದು ಕಳುಹಿಸಿದರು. ಗ್ರಾಮಸ್ಥರು ನಾನಾ ವಿಧವಾಗಿ ಆಡಿಕೊಳ್ಳಲು ಆರಂಭಿಸಿದರು. ಒಟ್ಟಿನಲ್ಲಿ ವಿಚಾರ ಬಹಿರಂಗವಾಯಿತು. ಅಂದಿಗೆ ರಾಜು ಮದುವೆಗೆ ಎರಡು ದಿನ ಇತ್ತು. ಅದು ನಿಜವಾ ಸುಳ್ಳಾ ಖಚಿತವಾಗುವುದಕ್ಕಿಂತ ಮೊದಲೇ ವಧು ಮನೆಯವರಿಗೆ ವಿಷಯ ತಿಳಿಯಿತು. ಗೊತ್ತಿದ್ದೂ ಎಚ್ಐವಿ ರೋಗಿಗೆ ಹೆಣ್ಣು ಕೊಡುವುದು ಹೇಗೆ ಎಂಬುದು ಒಂದು ಪ್ರಶ್ನೆ. ಲಗ್ನಪತ್ರಿಕೆ ಹಂಚಿ ಆಗಿದೆ.ಎರಡು ದಿನದಲ್ಲಿ ಆಗಬೇಕಿದ್ದ ಮದುವೆ ನಿಂತು ಹೋದರೆ ಮಗಳ ಭವಿಷ್ಯ ಏನಾಗುವುದೋ ಎಂಬ ದಿಗಿಲು ಮತ್ತೊಂದು ಕಡೆ. ಒಟ್ಟಿನಲ್ಲಿ ವಧುವಿನ ಕಡೆಯವರು ದಿಕ್ಕು ತೋಚದೆ ತಲೆ ಮೇಲೆ ಕೈ ಹೊತ್ತು ಕೂತರು.
=
ಪರಿಸ್ಥಿತಿ ಗಮನಕ್ಕೆ ಬಂದ ಕೂಡಲೇ ಕೆಲವು ಹಿರಿಯರು ಹುಡುಗನನ್ನು ಕರೆದು ನೇರವಾಗಿಯೇ ವಿಷಯ ಕೇಳಿದರು. ರಾಜು ಮೇಲಿನ ವಿಚಾರಗಳೆಲ್ಲವೂ ಸತ್ಯ ಎಂದು ಒಪ್ಪಿಕೊಂಡ. ಆದರೆ ತಾನು ಮತ್ತೊಂದು ನರ್ಸಿಂಗ್ಹೋಂನಲ್ಲಿ ಮತ್ತೆ ಎಚ್ಐವಿ ಪರೀಕ್ಷೆ ಮಾಡಿಸಿರುವುದಾಗಿ, ಅಲ್ಲಿ ನೆಗೆಟಿವ್ ರಿಪೋರ್ಟ್ ಬಂದು ತನಗೆ ಎಚ್ಐವಿ ಇಲ್ಲ ಎಂಬುದು ದೃಢಪಟ್ಟಿದೆ ಎಂಬುದನ್ನು ದಾಖಲೆ ಸಮೇತ ತೋರಿಸಿದ. ಇದರಿಂದ ಪರಿಸ್ಥಿತಿ ನಿಭಾಯಿಸುವುದು ಹೇಗೆ ಎಂದು ಅರ್ಥವಾಗದೆ ಅಲ್ಲಿದ್ದವರೆಲ್ಲಾ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಯಿತು.
ಅಂತಿಮವಾಗಿ ಹುಡುಗ ಮತ್ತು ಹುಡುಗಿ ಇಬ್ಬರಿಗೂ ಒಟ್ಟಿಗೆ ಎಚ್ಐವಿ ಪರೀಕ್ಷೆ ಮಾಡಿಸುವುದು ಎಂಬ ತೀರ್ಮಾನಕ್ಕೆ ಬರಲಾಯಿತಾದರೂ ಅದಕ್ಕೆ ಹುಡುಗಿ ಕಡೆಯವರ ವಿರೋಧ ವ್ಯಕ್ತವಾಯಿತು. ಆರೋಪ ಇರುವುದು ಆತನ ಮೇಲೆ, ಅದು ಸಾಬೀತು ಪಡಿಸಿಕೊಳ್ಳಬೇಕಾದ ಅನಿವಾರ್ಯತೆ ಇರುವುದು ಆತನಿಗೆ. ಹಾಗಾಗಿ ನಮ್ಮ ಹುಡುಗಿಯನ್ನು ಪರೀಕ್ಷೆಗೆ ಒಳಪಡಿಸುವುದಕ್ಕೆ ನಾವು ಒಪ್ಪಿಕೊಳ್ಳುವುದಿಲ್ಲ ಎಂದು ಖಡಾ ಖಂಡಿತವಾಗಿ ಹೇಳಿಬಿಟ್ಟರು. ಇದರಿಂದ ಹುಡುಗ ತಾನೂ ರಕ್ತ ಪರೀಕ್ಷೆ ಮಾಡಿಸಲು ಸಿದ್ಧನಿಲ್ಲ ಎಂದು ಹೇಳಿದ.
ರಾಜು ಪರೀಕ್ಷೆಗೆ ಮುಂದೆ ಬರುತ್ತಿಲ್ಲ ಎಂಬುದು ತಿಳಿದ ಕೂಡಲೇ ಆತನ ಮೇಲೆ ಹಲವು ಅನುಮಾನಗಳು ಮೂಡಲಾರಂಭಿಸದವು. ಸಮಸ್ಯೆ ಬಗೆಹರಿಯುವ ಮಟ್ಟದಲ್ಲಿರುವಾಗಲೇ ಮತ್ತೆ ಬಿಗಡಾಯಿಸಿತ್ತು.
'ಈ ಮದುವೆ ನಿಲ್ಲಿಸೋಣ. ಈಗಲೇ ಹುಡುಗನ ಬಗ್ಗೆ ಇಷ್ಟೆಲ್ಲಾ ಗೊಂದಲ ತಲೆ ಎತ್ತಿವೆ. ಆತ ಯಾವುದಕ್ಕೂ ಸ್ಪಷ್ಟವಾಗಿ ಒಪ್ಪಿಕೊಳ್ಳುತ್ತಿಲ್ಲ. ಇವೆಲ್ಲವನ್ನೂ ಮನಸ್ಸಿನಲ್ಲಿಟ್ಟುಕೊಂಡು ನಾಳೆ ಮದುವೆ ಆದ ನಂತರ ಹುಡುಗಿಯನ್ನು ಕಾಡಿಸಿದರೆ ಆಗ ಅವಳ ಪರಿಸ್ಥಿತಿ ಏನಾಗಬಹುದು? ನಾವು ಈ ಮದುವೆಗೆ ಒಪ್ಪುವುದಿಲ್ಲ' ಎಂದು ಹುಡುಗಿಯ ತಂದೆ ಕಡ್ಡಿ ತುಂಡು ಮಾಡಿದಂತೆ ಹೇಳಿ ಎದ್ದು ಹೊರಟು ಹೋದರು.
ಮದುವೆ ಮುರಿದು ಬಿತ್ತು. ದೃಢಪಟ್ಟಿಲ್ಲವಾದರೂ ಗ್ರಾಮಸ್ಥರ ದೃಷ್ಟಿಯಲ್ಲಿ ರಾಜು ಈಗ ಏಡ್ಸ್ ರೋಗಿ! ಎರಡು ದಿನದಲ್ಲಿ ಆಗಬೇಕಿದ್ದ ಮದುವೆ ಮುರಿದು ಬಿದ್ದು, ರಾಜು ಮತ್ತು ನಷ್ಟಜಾತಕದವಳಾಗಿ ರಮಾ (ಹೆಸರು ಬದಲಿಸಲಾಗಿದೆ) ಇಬ್ಬರೂ ನೋವಿನಲ್ಲಿ ಮುಳುಗಿದ್ದಾರೆ. ಇವರಿಬ್ಬರಿಗೂ ಮುಂದೆ ಮದುವೆ ಆಗುತ್ತಾ? ಗೊತ್ತಿಲ್ಲ. ಆದರೆ ಇದೊಂದು ಕಪ್ಪು ಚುಕ್ಕೆ ಅವರ ಜೀವನದುದ್ದಕ್ಕೂ ಕಾಡುವುದಂತೂ ಖಚಿತ.
ಮದುವೆಗೆ ಮೊದಲೇ ಎಚ್ಐವಿ ಪರೀಕ್ಷೆ ಕಡ್ಡಾಯ ಮಾಡಿಸುವ ಕಾಯ್ದೆ ಯಾಕೆ ಜಾರಿಯಾಗಬೇಕು ಎಂಬುದು ಈಗ ಅರಿವಾಯಿತಲ್ಲವೆ? ಅದು ಇಬ್ಬರ ಸಹಮತದೊಂದಿಗೆ ನಡೆದಿದ್ದೇ ಆದಲ್ಲಿ ಮುಂದೆ ಇಂತಹ ಅನಾಹುತಗಳನ್ನು ತಪ್ಪಿಸಬಹುದಲ್ಲವೆ?
- ಅಶ್ವತ್ಥನಾರಾಯಣ್ ಎಲ್.
sathyajns@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.