ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಬಿರಿಯಾನಿ ಟೆಕಿ!

ಅದೊಂದು ಐವರು ಗೆಳೆಯರ ಗುಂಪು. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಓದಲು ಊರು ಬಿಟ್ಟು ಬಂದವರು ಒಂದೇ...

Mainashree
Updated On : 30 Aug 2013, 7:16 am

ಅದೊಂದು ಐವರು ಗೆಳೆಯರ ಗುಂಪು. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಓದಲು ಊರು ಬಿಟ್ಟು ಬಂದವರು ಒಂದೇ ಮನೆಯಲ್ಲಿ ಟೆಂಟ್ ಹಾಕಿದ್ದರು. ವಾರವಿಡೀ ಓದಿನಲ್ಲಿ ತಲ್ಲೀನರಾದವರು ವಾರಾಂತ್ಯದಲ್ಲಿ ಮನೆಯಲ್ಲೇ ಅಡುಗೆ ಮಾಡಿಕೊಂಡು ಹರಟೆ ಹೊಡೆಯುತ್ತ ಊಟ ಮಾಡುತ್ತಿದ್ದರು. ಅದರಲ್ಲಿ ಉದಯ ತೇಜಾ ಕೈರುಚಿ ಅದ್ಭುತ. ಅದಕ್ಕೆ ಕೈ ಜೋಡಿಸುತ್ತಿದ್ದ ಶ್ರೀನಿವಾಸ ಗೌಡ ಕೂಡ ರುಚಿಕಟ್ಟಾದ ಅಡುಗೆಗೆ ಸಹಾಯಕ. ಉಳಿದ ಮೂವರು ಪೂರಕ. ಎಲ್ಲರೂ ಮಾಂಸಾಹಾರ ಪ್ರಿಯರು.
ಓದು ಮುಗಿದು ಒಬ್ಬೊಬ್ಬರು ಒಂದೊಂದು ಕಡೆ ಕೆಲಸ ಗಿಟ್ಟಿಸಿಕೊಂಡರು. ಉದಯ ತೇಜಾ 'ಡೆಲ್‌' ಕಂಪನಿಯಲ್ಲಿ ಸಾಫ್ಟವೇರ್ ಎಂಜಿನಿಯರ್ ಆಗಿ ಸೇರಿದರು. ವಾರಾಂತ್ಯಕ್ಕೆ ದೋಸ್ತರೆಲ್ಲಾ ಒಂದೆಡೆ ಕೂತು ಹಳೇ ನೆನಪು ಮೆಲುಕು ಹಾಕುತ್ತಿದ್ದರು. ಕೈ ತುಂಬಾ ಸಂಬಳ ಬರುತ್ತಿದ್ದರೂ 'ನೆಮ್ಮದಿ' ವಿಚಾರದಲ್ಲಿ ಎಲ್ಲರದ್ದೂ ಭಿನ್ನರಾಗವೇ.

ಹುಟ್ಟಿಕೊಂಡಿತು ಅಡ್ಡಾ
ಉದಯ್ ತೇಜಾಗೆ ಮೊದಲಿನಿಂದಲೂ ಅಡುಗೆ ಮಾಡುವುದೆಂದರೆ ಬಲು ಖುಷಿ. ಕೈ ತುಂಬ ಸಂಬಳ ಬರುತ್ತಿದ್ದರೂ ನೆಮ್ಮದಿ ಇರಲಿಲ್ಲ. ಬೇರೇನಾದರೂ ಮಾಡಬೇಕೆಂಬ ತುಡಿತ. ಗೆಳೆಯರ ಮುಂದೆ ಹೇಳಿದಾಗ 'ಮುನ್ನುಗ್ಗು' ಎಂಬ ಅಭಯ. ಬಿರಿಯಾನಿ ಹೋಟೆಲ್ ಆರಂಭಿಸುವ ಐಡಿಯಾ ಹೊಳೆಯಿತು. ಶ್ರೀನಿವಾಸ ಗೌಡ ಕೈ ಜೋಡಿಸಿದರು.
ಹೊಟೇಲ್ ಹೆಸರು? ಮತ್ತೊಬ್ಬ ಗೆಳೆಯ 'ಬಿರಿಯಾನಿ ಅಡ್ಡಾ' ಇಟ್ಟರೆ ಚೆನ್ನಾಗಿರುತ್ತೆ ಅನ್ನುತ್ತಿದ್ದಂತೆ ಸರ್ವಾನುಮತದಿಂದ ಓಕೆ. ಎಲ್ಲರೂ ತನು, ಮನ, ಧನ ಜೋಡಿಸಿದರು. ಈಗ ಬೆಂಗಳೂರಿನ ಚಂದ್ರಾ ಲೇಔಟ್‌ನಲ್ಲಿ ಉದಯ್ ತೇಜಾ ಕೈ ರುಚಿಯ 'ಬಿರಿಯಾನಿ ಅಡ್ಡಾ' ಆರಂಭವಾಗಿದೆ. ಗ್ರಾಹಕರಿಂದ ತುಂಬಿ ತುಳುಕುತ್ತಿದ್ದ ಹೊಟೇಲ್‌ಗೆ ಹೋದಾಗ ಮಾಲೀಕ ಉದಯ್ ತೇಜಾ ಇದೆಲ್ಲ ಕಥೆ ಹೇಳಿದ. ಅದಕ್ಕೆ ಶ್ರೀನಿವಾಸ ಗೌಡ ಧ್ವನಿಗೂಡಿಸಿದ. ಟೆಕಿಯೊಬ್ಬ ಬಿರಿಯಾನಿವಾಲಾ ಆದದ್ದು ಮಾತ್ರ ವಿಚಿತ್ರ ಹಾಗೂ ಸೋಜಿಗವೆನಿಸಿದ್ದು ಸುಳ್ಳಲ್ಲ. ಉದಯ್ ತೇಜಾ ಸಂಪರ್ಕಕ್ಕೆ 9900019477ಗೆ ಡಯಲ್ ಮಾಡಿ ಅಥವಾ www.biriyaniadda.inಗೆ ಲಾಗ್‌ಇನ್ ಆಗಿ.

ಅಡುಗೆಗೆ ಒಲೆ!
ಬಿರಿಯಾನಿ ಅಡ್ಡಾದ ಇನ್ನೊಂದು ವಿಶೇಷ, ಇಲ್ಲಿ ಒಲೆಯ ಮೇಲೆಯೇ ಬಿರಿಯಾನಿ ತಯಾರಿಸಲಾಗುತ್ತದೆ. ನೆಲಮಹಡಿಯಲ್ಲಿ ಹಳ್ಳಿ ಮಾದರಿಯ ಮಣ್ಣಿನ ಒಲೆಗಳಿವೆ. ಇದರಿಂದ ರುಚಿ ಮತ್ತಷ್ಟು ಹೆಚ್ಚುತ್ತದೆ. ಕುಳಿತುಕೊಳ್ಳಲು ತೆಂಗಿನ ಮರದ ಕುರ್ಚಿಗಳು. ಗೋಡೆಗಳ ಮೇಲೆ ದೇಸಿ ಶೈಲಿಯ ಚಿತ್ರಗಳು. ಇದು ಹೊಟೇಲ್ ಮೆರುಗು ಹೆಚ್ಚಿಸಿದೆ. ಅಡ್ಡಾ ಚಿಕ್ಕದಾಗಿದ್ದರೂ ಗ್ರಾಹಕರ ಸಂಪಾದನೆಯಲ್ಲಿ ಹಿಂದೆ ಬಿದ್ದಿಲ್ಲ. ಬಂದು ತಿನ್ನುವವರಿಗಿಂತ ಮನೆಗೆ ತರಿಸಿಕೊಳ್ಳುವವರೇ ಹೆಚ್ಚು. ಮನೆ ಮನೆಗೆ ಸರ್ವಿಸ್ ಇದ್ದಿದ್ದರಿಂದ ಗ್ರಾಹಕರ ಸಂಖ್ಯೆಯೂ ಹೆಚ್ಚಿದೆ.

- ಚನ್ನು ಮೂಲಿಮನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments