ಇಲ್ ನೋಡಿ ಎಲ್‌ಬಿ ಮನೆ
ಹಳೆಗನ್ನಡದ ಕಾವ್ಯಗಳನ್ನು ಆಧುನಿಕ ಸಾಹಿತ್ಯಕ್ಕೆ ರೂಪಾಂತರಿಸಿ, ಸಾಮಾನ್ಯ ಜನರಿಗೆ ಅದರ ಮಹತ್ವ ಪಸರಿಸಿದ ಡಾ. ಎಲ್. ಬಸವರಾಜು ಅವರನ್ನು ಸಾಹಿತ್ಯ ವಲಯ ಎಲ್‌ಬಿ ಎಂದೇ ಗುರುತಿಸುತ್ತದೆ. ಪ್ರಾಚೀನ ಸಾಹಿತ್ಯಕ್ಕೆ ಹೊಸ ಮೆರಗು ನೀಡಿದ ಈ ಕವಿ ಬಾಳಿ ಬದುಕಿದ ಮನೆ ಇಂದಿಗೂ ಹಳೆಯ ವಿನ್ಯಾಸದಲ್ಲಿಯೇ ಇರುವುದು ವಿಶೇಷ.
ಮೈಸೂರಿನ ಜಯಲಕ್ಷ್ಮೀಪುರಂ ಬಡಾವಣೆಯಲ್ಲಿ ಇರುವ ಈ ಮನೆ ದೊಡ್ಡ ಅಳತೆಯ ನಿವೇಶನ. 1960ರಲ್ಲಿ ಈ ಜಾಗವನ್ನು ಕೊಂಡು ಮನೆಕಟ್ಟಿಸಲಾಯಿತು. ಮೂರು ಕೊಠಡಿಗಳ ಈ ಮನೆಯ ನಿರ್ಮಾಣಕ್ಕೆ ಆಗಿನ ಕಾಲದಲ್ಲಿ ಸೈಟ್ ಬೆಲೆ ಸೇರಿ ಒಟ್ಟು 50 ಸಾವಿರ ಮಾತ್ರ ಖರ್ಚಾಯಿತಂತೆ!
ಎಲ್‌ಬಿ ಅವರ ಮಗಳು ಈ ಮನೆಯನ್ನು ಕೆಡವಿ ಭವ್ಯ ಬಂಗಲೆ ನಿರ್ಮಿಸಲು ತಂದೆಯೊಂದಿಗೆ ಪ್ರಸ್ತಾಪ ಮಾಡಿದ್ದುಂಟು. ಆದರೆ ಇದಕ್ಕೆ ಸಮ್ಮತಿಸದ ಅವರು, ನಾನು ಕಟ್ಟಿಸಿರುವ ಮನೆ ಹಾಗೆಯೇ ಇರಬೇಕು ಎಂದು ಹೇಳಿದರಂತೆ. ಅವರ ಆಶಯದಂತೆ ಹಾಗೇ ಉಳಿಸಿಕೊಂಡಿದ್ದಾರೆ.
ಕೋಲಾರ ಜಿಲ್ಲೆಯ ಈಡಗೂರು ಎಲ್‌ಬಿ ಹುಟ್ಟೂರು. 6-7 ನೇ ವಯಸ್ಸಿನಲ್ಲಿಯೇ ಊರು ಬಿಟ್ಟು ಬಂದ ಎಲ್‌ಬಿಯವರನ್ನು ವಕೀಲ ಜಿ.ಸಿ. ವೀರಪ್ಪ ಎಂಬ ಆ ಕಾಲದ ವಕೀಲರೊಬ್ಬರು ಸಿದ್ದಗಂಗಾ ಮಠಕ್ಕೆ ಸೇರಿಸಿದರಂತೆ. ಮೈಸೂರು ವಿವಿಯಲ್ಲಿ ಪದವಿ ಪಡೆದು, ಪ್ರಾಧ್ಯಾಪಕರಾದರು. ಹೀಗಾಗಿ ಹುಟ್ಟೂರಿನಲ್ಲಿ ಇವರಿಗೆ ಸೇರಿದ ಮನೆ ಇಲ್ಲ. ಮೈಸೂರೇ ಇವರ ನೆಲೆ ಮತ್ತು ಕರ್ಮಭೂಮಿ. ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಎಲ್‌ಬಿ ಅವರ 95ನೇ ಹುಟ್ಟುಹಬ್ಬವನ್ನು ಇತ್ತೀಚೆಗೆ ಇದೇ ಮನೆಯಲ್ಲಿ ಅವರ ವಿದ್ಯಾರ್ಥಿಗಳು ಹಾಗೂ ಹಿತೈಷಿಗಳು ಆಚರಿಸಿದರು. ಅವರಿಲ್ಲದ ಈ ಮನೆ ಇಂದು ಅವರ ಆಶಯವನ್ನು ಮುಂದುವರಿಸುವ ಕೌಟುಂಬಿಕ ಸೌಹಾರ್ದ ಕೇಂದ್ರವಾಗಿದೆ. ಇಲ್ಲಿ 15 ದಿನಗಳಿಗೊಮ್ಮೆ ಮಹಿಳೆಯರು ಸೇರಿ ಸಭೆ ಮಾಡುತ್ತಾರೆ. ಗಾಯನ, ಪ್ರಾರ್ಥನೆ, ಪ್ರವಚನ ನಡೆಸುತ್ತಾರೆ. ಬಸವರಾಜು ಮಗ ಬಿ.ವಿ. ಪ್ರಭುಶಂಕರ್ 28ನೇ ವಯಸ್ಸಿಗೆ ತೀರಿಕೊಂಡರು. ಅವರ ಮಗಳು ನಳಿನಿ ಜಿನಿವಾದಲ್ಲಿದ್ದಾರೆ. ಮೈಸೂರಿನ ಮನೆಯಲ್ಲಿ ಪತ್ನಿ ವಿಶಾಲಾಕ್ಷ್ಮಮ್ಮ ಹಾಗೂ ಅವರು ಸಾಕು ಮಗಳು ಕೆ. ಸೌಭಾಗ್ಯ ಮಾತ್ರವೇ ವಾಸವಾಗಿದ್ದಾರೆ.
- ಮಾ. ವೆಂಕಟೇಶ್