ಎಸ್.ವಿ. ರಂಗನಾಥ್- ಅಧಿಕಾರ ಗಿರಿಯ ಮೆಟ್ಟಿನಿಂತ ಗೊಮ್ಮಟ
ಭಾರತೀಯ ಆಡಳಿತ ಸೇವೆಯ ಅತ್ಯಂತ ಮಹತ್ವದ ಹೆಸರುಗಳಲ್ಲಿ ಎಸ್.ವಿ. ರಂಗನಾಥ್ ಪ್ರಮುಖ. ವಿದ್ಯಾರ್ಥಿ ದಿನಗಳಿಂದಲೇ ತಮ್ಮ ಬುದ್ಧಿಮತ್ತೆ ಮತ್ತು ನೆನಪಿನ ಶಕ್ತಿಯಿಂದಾಗಿ ಹೆಸರು ಮಾಡಿದವರು. 22ರ ಎಳೆವಯಸ್ಸಿನಲ್ಲೇ ಆ ಪ್ರತಿಷ್ಠಿತ ಸೇವೆಗೆ ಆಯ್ಕೆ. ಆದರೆ, ತದನಂತರದ ಅವರ ಕಾರ್ಯನಿರ್ವಹಣೆ, ಎಂಥ ಆಯಕಟ್ಟಿನ ಹುದ್ದೆಯಲ್ಲಿದ್ದರೂ ಕಿಂಚಿತ್ತೂ ಕೈಕೆಡಿಸಿಕೊಳ್ಳದ ಅವರ ಪಾರದರ್ಶಕ ಕ್ರಿಯೆ ವಿಸ್ಮಯಕಾರಿ. Honesty is the first chapter in the book of wisdom ಎಂಬ ಥಾಮಸ್ ಜಫರ್ಸನ್ನ ಮಾತಿಗನುಗುಣವಾದ ಇಂಥ ಐಎಎಸ್ನ ಆದರ್ಶ ಪುರುಷ. ಸಕಲೇಶಪುರ ವಿಶ್ವೇಶ್ವರಯ್ಯ ರಂಗನಾಥ (ಎಸ್.ವಿ. ರಂಗನಾಥ್) ರಾಜ್ಯದ ಮುಖ್ಯ ಕಾರ್ಯದರ್ಶಿ ಹುದ್ದೆಯಿಂದ ಇದೀಗ ತಾನೆ ನಿವೃತ್ತರಾಗಿದ್ದಾರೆ. ರಾಜ್ಯಪಾಲರಾದಿಯಾಗಿ ಶ್ರೀಸಾಮಾನ್ಯನವರೆಗೂ ದೇವತಾಮನುಷ್ಯನೆಂದೇ ನಾಮಾಂಕಿತಗೊಂಡ ಶ್ರೀಯುತರು ಮೂಲಭೂತವಾಗಿ ಒಬ್ಬ ಸರಳ ಮುನುಷ್ಯ. ಅಲ್ಲಿ ಯಾವುದೇ ಕೃತಕತೆ, ಡಾಂಭಿಕತೆಗಳಿಗೆ ಆಸ್ಪದವಿಲ್ಲ. 38 ವರ್ಷಗಳ (1975-2013) ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಸೇವೆಯಲ್ಲಿ ಇವರದು ನಿಷ್ಕಳಂಕ ನಡೆ. ಈಗ ಅವರನ್ನು ನೆನೆಯುವದು ಸಕಾಲಿಕ.
3 ದಶಕಗಳಿಂತಲೂ ಹೆಚ್ಚುಕಾಲ ಇವರ ಕೆಲಸಗಳನ್ನು ಸಮೀಪದಿಂದ ನೋಡುತ್ತ ಬಂದಿರುವವರಿಗೆಲ್ಲ ಇವರೊಂದು ವಿಸ್ಮಯ. 1980ರ ದಶಕದ ಪ್ರಾರಂಭದಲ್ಲೇ ಡಿಸಿ ಆಗಿ ಹಿಂದುಳಿದ ಗುಲ್ಬರ್ಗ ಜಿಲ್ಲೆಯಲ್ಲಿ ಸಮಗ್ರ ಗ್ರಾಮೀಣ ಅಭಿವೃದ್ಧಿ ಯೋಜನೆ (ಐಆರ್ಡಿಪಿ), ಬಯೋಗ್ಯಾಸ್, ಗೋಬರ್ ಗ್ಯಾಸ್ ಘಟಕ ನಿರ್ಮಾಣ, ಮಣ್ಣು ಮತ್ತು ನೀರು ಸಂರಕ್ಷಣೆ ಯೋಜನೆಗಳು, ಭೂಮಂಜೂರಾತಿ ಹಾಗು ಪಟ್ಟಾ ವಿತರಣೆ, ಕಂದಾಯ ದಾಖಲೆಗಳ ಇಂದೀಕರಣ (Updation), ಬಡವರಿಗೆ ಮನೆ ನಿವೇಶನ, ಹೆಚ್ಚುವರಿ ಭೂಮಿ ಹಂಚಿಕೆ ಮುಂತಾದ ಕಾರ್ಯದಲ್ಲಿ ಇವರದು ದಾಖಲಾರ್ಹ ಕೆಲಸ. ಅಂದಿನ 20 ಜಿಲ್ಲೆಗಳಲ್ಲಿ ಕೊನೆಯದಾಗಿದ್ದ ಗುಲ್ಬರ್ಗ ರಾಜ್ಯದಲ್ಲೇ ಅತ್ಯುತ್ತಮ ಸಾಧನೆಗೈದ ಮೊದಲ ನಾಲ್ಕೈದು ಸ್ಥಾನಗಳಲ್ಲಿ ಕಂಗೊಳಿಸಿದ್ದು ಇತಿಹಾಸ.
30 ವರ್ಷಗಳ ಹಿಂದೆ 11.11.1983ರಂದು ಗುಲ್ಬರ್ಗದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಅಂದಾಜು 5 ಸಾವಿರದಷ್ಟು ಫಲಾನುಭವಿಗಳಿಗೆ ವಿತರಿಸಲು ಇಟ್ಟ ವಿವಿಧ ಸೌಲಭ್ಯಗಳ ಮಂಜೂರಿಪತ್ರಗಳನ್ನು ಸ್ವತಃ ಪರಿಶೀಲನೆಗೊಳಪಡಿಸಿದ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು, ಅವುಗಳ ಅಸಲಿತನದ ಅರಿವಾಗಿ (ತುಸು ಮೊದಲು ಬೀದರ್ನ ಸಮಾರಂಭದಲ್ಲಿ ಹೀಗಾಗಿರಲಿಲ್ಲ) ತೀವ್ರ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಪರಿಣಾಮ ನಾಲ್ಕು ತಿಂಗಳಲ್ಲೇ ರಂಗನಾಥ ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿಯಾಗಿ ನೇಮಕಗೊಂಡರು.
ಅಂದು ಪ್ರಾರಂಭವಾದ ವಿಧಾನಸೌಧದ ನಂಟು, ಶಕ್ತಿ ಪೀಠದ ಸಾಮಿಪ್ಯ ಮುಂದಿನ ಐವರು ಮುಖ್ಯಮಂತ್ರಿಗಳ (ವೀರಪ್ಪ ಮೊಯ್ಲಿ, ಎಸ್.ಎಂ. ಕೃಷ್ಣ, ದೇವೇಗೌಡ, ಧರ್ಮಸಿಂಗ್, ಕುಮಾರಸ್ವಾಮಿ) ಪ್ರಧಾನ ಕಾರ್ಯದರ್ಶಿಯಾಗಿ ತದನಂತರ 4 ವರ್ಷ ಮುಖ್ಯ ಕಾರ್ಯದರ್ಶಿ ಹುದ್ದೆಯಲ್ಲಿ ಮುಂದುವರಿಯಿತು. ಅಧಿಕಾರದ ಈ ಪರಮೋಚ್ಚ ಸ್ಥಾನಕ್ಕೆ ನಿಕಟವರ್ತಿಯಾಗಿ ಇಷ್ಟೊಂದು ದೀರ್ಘ ಕಾಲ ಇದ್ದ ಮತ್ತೊಬ್ಬ ಅಧಿಕಾರಿ ಇಲ್ಲ. ಪಕ್ಷ ಯಾವುದೇ ಇರಲಿ, ಮುಖ್ಯ ಮಂತ್ರಿಗಳಾದವರ ಜಾತಿ ಯಾವುದೇ ಆಗಿರಲಿ ಎಲ್ಲರಿಗೂ ರಂಗನಾಥ್ ಬೇಕು, ಅವರ ಕಾರ್ಯಕ್ಷಮತೆ ಜ್ಞಾನಭಂಡಾರ ಬೇಕು. ಇವರನ್ನು ಮುಖ್ಯ ಕಾರ್ಯದರ್ಶಿಯಾಗಿ ಯಡಿಯೂರಪ್ಪನವರು ಆರಿಸಿದರೆ, ಮುಂದೆ ಬಂದ ಸದಾನಂದಗೌಡರು, ಜಗದೀಶ್ ಶೆಟ್ಟರು ಮತ್ತೆ ಸಿದ್ದರಾಮಯ್ಯನವರು ಇವರನ್ನು ಮುಂದುವರಿಸಿದ್ದೊಂದು ಇದಕ್ಕೆ ಸಾಕ್ಷಿ.
ಎಪ್ಪತ್ತರ ದಶಕದಲ್ಲಿ ರಂಗನಾಥ್ ದೆಹಲಿ ಸ್ಟೀಫನ್ಸ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗಲೇ 'ಮಾನವ ಕಂಪ್ಯೂಟರ್' ಎಂದು ಖ್ಯಾತಿ ಪಡೆದಿದ್ದರು. ಅವರ ನೆನಪಿನ ಶಕ್ತಿ ಅಷ್ಟು ಅಗಾಧ. 3-4 ವರ್ಷಗಳ ಹಿಂದೆ ಬೇರಾವುದೋ ಹುದ್ದೆಯಲ್ಲಿ ಇವರಿದ್ದಾಗ ಅರ್ಜಿ ಸಲ್ಲಿಸಿದವರು ಮತ್ತೆ ಎದುರಿಗೆ ಸಿಕ್ಕರೆ, 'ನಿಮ್ಮ ಆ ಕೆಲಸ ಆಗಿರಬೇಕಲ್ಲಾ?' ಎಂದು ಕಡತ ಸಂಖ್ಯೆ, ಊರು, ವಿಷಯ ಹೇಳಿ ಅವರನ್ನೇ ದಂಗು ಬಡಿಸಿದ್ದೂ ಉಂಟು. ಇದಕ್ಕೆ ತೀರ ಇತ್ತೀಚಿನ ಉದಾಹರಣೆ ಎಂದರೆ, ಪ್ರಧಾನಮಂತ್ರಿಗಳು 2010ರಲ್ಲಿ ನಮ್ಮ ರಾಜ್ಯದ ನೆರೆಹಾವಳಿ ಪ್ರದೇಶಗಳ ಸಮೀಕ್ಷೆ ಕೈಗೊಂಡು ಮರಳಿ ದೆಹಲಿಗೆ ಹೋಗುವಾಗ ವಿಮಾನ ಪಕ್ಕದಲ್ಲಿ ಮುಖ್ಯ ಕಾರ್ಯದರ್ಶಿ ರಂಗನಾಥರನ್ನು ಕರೆದು ಸಂಕ್ಷಿಪ್ತವಾಗಿ ಪರಿಸ್ಥಿತಿ ವಿವರಿಸಲು ಕೇಳಿದಾಗ, ಇಡೀ ಅಂಕಿಅಂಶಗಳನ್ನು, ಕೈಗೊಂಡ ಕ್ರಮಗಳನ್ನು, ಮುಂದೆ ಹಾಕಿಕೊಂಡ ಯೋಜನೆಗಳನ್ನು ಬಾಯಿಪಾಠದಲ್ಲೇ ಇವರು ವಿವರಿಸಿದಾಗ ತೀವ್ರ ಖುಷಿಗೊಂಡರು ಪ್ರಧಾನಿಗಳು. ಪರಿಣಾಮ, ತಕ್ಷಣ ರಾಜ್ಯಕ್ಕೆ 850 ರು. ಕೋಟಿ ಅನುದಾನದ ಬಿಡುಗಡೆ. ಅದೇ ಪಕ್ಕದ ರಾಜ್ಯ ಆಂಧ್ರದಲ್ಲೂ ಇದೇ ಪರಿಸ್ಥಿತಿ ಇದ್ದರೂ ಅವರಿಗೆ ದಕ್ಕಿದ್ದ ಅನುದಾನ ತೀರ ಕಡಿಮೆ.
ತಾವು ಕೆಲಸ ಮಾಡಿದ ಮುಖ್ಯಮಂತ್ರಿ ಮಾತ್ರವಷ್ಟೇ ಅಲ್ಲ, ಯಾವ ಸಿಬ್ಬಂದಿಗಳ ಬಗ್ಗೆಯೂ ರಂಗನಾಥ್ ಎಂದೂ ಯಾವ ಆಕ್ಷೇಪವನ್ನು ಎತ್ತುವುದಿಲ್ಲ. ಇದಕ್ಕೆ ಕಾರಣ ಇವರ ಸೌಜನ್ಯಪರ ನಮ್ರ ನಡತೆ. ಇವರೊಬ್ಬ ಅಜಾತಶತ್ರು. ಯಾರನ್ನೂ ಅನವಶ್ಯಕವಾಗಿ ಟೀಕಿಸದೆ ಇತರರಿಗಿಂತ ತಾವೇ ಹೆಚ್ಚು ಕೆಲಸ ಮಾಡಿ ಮಾದರಿಯಾಗಿ ನಿಲ್ಲುವವರು. ಶಿಕ್ಷಣ ಆಯುಕ್ತರಾಗಿದ್ದಾಗ ಇವರ ಕಚೇರಿಗೆ ಬಂದು ಇವರ ಮೇಲೆ ಕೂಗಾಡಿ ರಂಪ ಮಾಡಿ ತದನಂತರ ಸಾರ್ವಜನಿಕವಾಗಿ ವಿಷಾದ ವ್ಯಕ್ತಪಡಿಸಿದ ಜನನಾಯಕರೇ ಮುಂದೆ ಉಚ್ಚ ಹುದ್ದೆ ಅಲಂಕರಿಸಿದಾಗ ತಮ್ಮ ಇಲಾಖೆಗೆ ರಂಗನಾಥ್ ಬೇಕೆಂದು ಹಾಕಿಸಿಕೊಂಡರು. ಎಂದೂ ಯಾವ ಹುದ್ದೆಯನ್ನೂ ಹಂಬಲಿಸಿ ಲಾಬಿ ಮಾಡಿ ಪಡೆದುಕೊಂಡವರಲ್ಲ ಇವರು. ಕರ್ತವ್ಯ ನಿಷ್ಠೆಗೆ, ಅಹರ್ನಿಶಿ ದುಡಿತಕ್ಕೆ ಒಲಿದು ಬಂದವು ಇವರು ಧಾರಣೆ ಮಾಡಿದ ಎಲ್ಲ ಹುದ್ದೆಗಳು. ನೇರವಾಗಿ ಪ್ರಧಾನಮಂತ್ರಿಗಳ ಸುಪರ್ದಿಗೆ ಒಳಪಡುವ ಕೇಂದ್ರ ಸರ್ಕಾರದ ಅತಿಸೂಕ್ಷ್ಮ ಹುದ್ದೆ, ಇಸ್ರೋ, ಅರ್ಥ್ ಕಮಿಷನ್, ಅಟಾಮಿಕ್ ಎನರ್ಜಿ ಕಮಿಶನ್ಗಳ ಹಣಕಾಸು ಕಾರ್ಯದರ್ಶಿಯಾಗಿ ಏಕಕಾಲಕ್ಕೆ ನಿರ್ವಹಿಸಿದ ಹಿರಿಮೆ ಇಂತಹುದರಲ್ಲಿ ಒಂದು.
ರಂಗನಾಥ್ ಮೆಲುಧ್ವನಿಯವರು, ಮೃದು ಧೋರಣೆಯವರು ಎಂದು ಖ್ಯಾತಿ ಪಡೆದಿದ್ದರೂ, ಅವಶ್ಯವೆನಿಸಿದಾಗ ಅದು ಯಾವ ಹಂತದಲ್ಲೇ ಆಗಿರಬಹುದು, ಅತ್ಯಂತ ಕಠಿಣ ನಿಲುವು ತಾಳಬಲ್ಲವರಾಗಿದ್ದಾರೆ. ರಾಜ್ಯದ ಹಿತ ಕಾಪಾಡುವಲ್ಲಿ, ಕಾವೇರಿ ನದಿ ನೀರು ಹಂಚಿಕೆ ವಿಷಯವಾಗಿ ದೆಹಲಿಯಲ್ಲಿ ನಡೆದ ಅತ್ಯುಚ್ಚ ಮಟ್ಟದ ಅಂತರರಾಜ್ಯ ಮಾತುಕತೆಯಲ್ಲಿ ಇವರ ಅಧಿಕಾರಯುತ ವಿಷಯ ಮಂಡನೆ ಫಲಿಸದಿದ್ದಾಗ ಸಭಾತ್ಯಾಗದ ದೃಢ ಹೆಜ್ಜೆ ಇದಕ್ಕೊಂದು ಸೂಕ್ತ ನಿದರ್ಶನ. ಇದರಿಂದಾಗಿ ರಾಜ್ಯಕ್ಕೆ ದಕ್ಕಬೇಕಾದ ನ್ಯಾಯಯುತ ನೀರು ನಮ್ಮ ಪಾಲಿಗೆ ಉಳಿಯುವಂತಾಗಿದ್ದೊಂದು ಅವಿಸ್ಮರಣೀಯ ಘಟನೆ.
ಎಂತಹ ಕ್ಲಿಷ್ಟಕರ ಸಮಸ್ಯೆ ಬಂದರೂ ಸಮಚಿತ್ತದಿಂದ ಅದನ್ನು ನಿಭಾಯಿಸುವವನೆ ನಿಜವಾದ ಅಧಿಕಾರಿ. ಈ ಕಲೆ ರಂಗನಾಥರಿಗೆ ಕರತಲಾಮಲಕ. ಮುಂಬರುವ ಪ್ರಸಂಗಗಳನ್ನು ಮುಂಚಿತವಾಗೇ ಊಹಿಸಿ, ಸಕಲ ಸಿದ್ಧತೆ ಮಾಡಿಕೊಂಡು ಅವನ್ನೆದುರಿಸುವ ನಿಪುಣತೆ ಇವರಿಗಿದೆ. ದೇಶದ ಗಮನ ಸೆಳೆದ ಕರ್ನಾಟಕದ ಗಣಿ ಹಗರಣ, ಸಿಇಸಿಯನ್ನು ರಾಜ್ಯದ ಪರವಾಗಿ ಎದುರಿಸಿದ್ದು ಇದಕ್ಕಾಗಿ ಇವರು ಮಾಡಿದ ಪೂರ್ವತಯಾರಿ, ಆಳ ಅಭ್ಯಾಸ ದಂಗುಬಡಿಸುವಂತಹದು. ಅದು ಆ ಸಮಿತಿಯವರೇ ತಲೆದೂಗುವಂತೆ ಮಾಡಿಬಿಟ್ಟಿತು.
ಎಲ್ಲ ಕಡೆ ಇರುವಂತೆ ಐಎಎಸ್ ವಲಯದಲ್ಲೂ ಜಾತಿ, ಪ್ರದೇಶ, ಪಕ್ಷದೊಲವು, ವ್ಯಕ್ತಿನಿಷ್ಠೆ ಇತ್ಯಾದಿ ಗುಂಪುಗಳಿವೆ. ರಂಗನಾಥ್ ಇದ್ಯಾವುದಕ್ಕೂ ಸೀಮಿತಗೊಂಡವರಲ್ಲ. ಅವರದು ಕೆಲಸ ಮಾಡುವವರ ಗುಂಪು, ಅವರು ಕರ್ತವ್ಯಪ್ರಜ್ಞೆ ಉಳ್ಳವರ ಪರ. ಇದರಿಂದಾಗಿ ಅವರು ಎಲ್ಲರಿಗೂ ಅಚ್ಚುಮೆಚ್ಚು. 'ಅಂದರಿಕಿ ಮಂಚಿವಾಳ್ಳು' (ಎಲ್ಲರಿಗೂ ಒಳ್ಳೆಯವನಾಗಿರುವವ ಎಂಬ ವ್ಯಂಗ್ಯೋಕ್ತಿ) ಎಂದು ಇವರನ್ನು ಟೀಕಿಸುವ ಕೆಲವೇ ಕೆಲವರು ಕೂಡ, 'ಹೇಳಿ ನೋಡೋಣ ಇವರ ದೌರ್ಬಲ್ಯಗಳನ್ನು' ಎಂಬ ಪ್ರಶ್ನೆಗೆ ನಿರುತ್ತರರಾಗುತ್ತಾರೆ. ರಂಗನಾಥ ಜನ ಮೆಚ್ಚಿಸಲಿಕ್ಕಲ್ಲದೆ ತಮ್ಮ ಮನ ಮೆಚ್ಚುವಂತೆ ಕೆಲಸ ಮಾಡುವವರು. ಪ್ರಸಿದ್ಧಿ ಪ್ರಚಾರಕ್ಕಾಗಿ ಎಂದೂ ಎಳೆಸಿದವರಲ್ಲ. ಪ್ರಾಮಾಣಿಕತೆ, ಕರ್ತವ್ಯಪ್ರಜ್ಞೆ ಅವರಿಗೆ ಕೇವಲ ಒಂದು ನೀತಿ ಮಾತ್ರ ಅಲ್ಲ, ಅವು ಅವರ ಜೀವನ ಮೌಲ್ಯ. 'ಗರ್ವಪಡದ ಉಪಕಾರಿ ದರ್ಪವಿರದ ಅಧಿಕಾರಿ ಲೋಕದಲ್ಲೇ ಶ್ರೇಷ್ಠರು' ಎಂಬ ಡಿವಿಜಿಯವರ ಮಾತಿನಂತೆ, ರಂಗನಾಥ್ ಅಧಿಕಾರ ಬಂದಾಗ ಅರಿತು ನಡೆದವರು. ಶಿಖರಪ್ರಾಯ ಸ್ಥಾನಗಳಲ್ಲಿದ್ದರೂ ಆ ಮದವ ಮನಸ್ಸಿಗೇರಿಸಿಕೊಳ್ಳದೇ ಅಧಿಕಾರ ಗಿರಿಯ ಮೆಟ್ಟಿನಿಂತ ಗೊಮ್ಮಟಸದೃಶರು. ಅಧಿಕಾರದಲ್ಲಿದ್ದಾಗಿನ ನಿರ್ಲಿಪ್ತತೆ, ಸ್ಥಿತಪ್ರಜ್ಞ ಭಾವ ಈಗಲೂ ಅವರ ಮುಖದ ಮೇಲಾಡುತ್ತಿದೆ. ಮಾಗಿದ ದೇಹದೊಳು ಜೀವನೋತ್ಸಾಹ ಎಂದಿನಂತೆ ಗುಪ್ತಗಾಮಿನಿಯಾಗಿ ಪ್ರವಹಿಸುತ್ತಿದೆ. ಇನ್ನು ಮುಂದೆಯೂ ಇವರ ಸೇವೆಯ ಸದುಪಯೋಗಪಡಿಸಿಕೊಳ್ಳುವುದು ಸಮಾಜಕ್ಕೆ ಸರಕಾರಕ್ಕೆ ಬಿಟ್ಟ ವಿಷಯ.
- ಡಾ. ಮನು ಬಳಿಗಾರ್