ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ನಾರಿಗೆ ಅಭಯ

ಸಶಕ್ತ ಮಹಿಳೆ; ಸಶಕ್ತ ಭಾರತ. ಸ್ವಾವಲಂಬಿ ಭಾರತ. ಇಂಥದೊಂದು ಘೋಷ ವಾಕ್ಯದೊಂದಿಗೆ ನಮ್ಮ ಬೆಂಗಳೂರು ಸೇರಿದಂತೆ ದೇಶದ...

Vishwanath S
Updated On : 2 Dec 2013, 12:18 pm

ಸಶಕ್ತ ಮಹಿಳೆ; ಸಶಕ್ತ ಭಾರತ. ಸ್ವಾವಲಂಬಿ ಭಾರತ. ಇಂಥದೊಂದು ಘೋಷ ವಾಕ್ಯದೊಂದಿಗೆ ನಮ್ಮ ಬೆಂಗಳೂರು ಸೇರಿದಂತೆ ದೇಶದ ಏಳು ನಗರಗಳಲ್ಲಿ ಹೊಸತಾಗಿ ಆರಂಭವಾಗಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಪೂರ್ಣ ಮಹಿಳಾ ಬ್ಯಾಂಕ್‌ನ ಘೋಷವಾಕ್ಯವಿದು. ಅಂದ ಹಾಗೆ ಇದರ ಪ್ರಧಾನ ಕಚೇರಿ ಇರುವುದು ನವದೆಹಲಿಯಲ್ಲಿ.
ಎಲ್ಲರಿಗೂ ಗೊತ್ತಿರುವ ವಿಚಾರವೇ ಇದು. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಪಾತಕಿಗಳಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ 'ನಿರ್ಭಯಾ'ಳ ಹೆಸರಲ್ಲಿ ಈ ಬ್ಯಾಂಕ್ ಆರಂಭಕ್ಕೆ ಪ್ರೇರಣೆ. ಅದಕ್ಕೆ ಪೂರಕವಾಗಿ ಪ್ರಸಕ್ತ ವರ್ಷ ಮುಂಗಡ ಪತ್ರ ಭಾಷಣದಲ್ಲಿ ಕೇಂದ್ರ ಹಣಕಾಸು ಸಚಿವ ಪಳನಿಯಪ್ಪನ್ ಚಿದಂಬರಂ ಸಂಪೂರ್ಣ ಮಹಿಳಾ ಬ್ಯಾಂಕ್ ಆರಂಭಿಸುವ ಘೋಷಣೆ ಮಾಡಿದ್ದರು. ಅದಕ್ಕಾಗಿ ಅವರು ಮುಂಗಡಪತ್ರದಲ್ಲಿ 1 ಸಾವಿರ ಕೋಟಿ ನಿಧಿಯನ್ನೂ ತೆಗೆದಿರಿಸಿದ್ದರು.

ಉದ್ದೇಶವೇನು?
*    ಮಹಿಳೆಯರಲ್ಲಿ ಹೆಚ್ಚಿನ ಆರ್ಥಿಕ ಚಟುವಟಿಕೆಗೆ ಪ್ರೋತ್ಸಾಹ. ವಿಶೇಷವಾಗಿ ಹಣಕಾಸು ವಿಚಾರದಲ್ಲಿ ಸ್ವಾವಲಂಬನೆ.
*    ಮಹಿಳೆಯರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಾಣಿಜ್ಯೋದ್ದಿಮೆ ನಡೆಸುವ ಪ್ರವೃತ್ತಿ ಬೆಳೆಸುವುದು.
*   ಇದಕ್ಕಾಗಿ ಸ್ಥಳೀಯ ಸ್ವಸಹಾಯ ಸಂಘಟನೆಗಳು ಮತ್ತು ಇತರ ಸಂಘಟನೆಗಳ ನೆರವಿನಿಂದ ಮಹಿಳೆಯರಿಗೆ ಗುಡಿ ಕೈಗಾರಿಕೆ, ಮೊಬೈಲ್ ರಿಪೇರಿ, ಗೊಂಬೆಗಳ ತಯಾರಿ ಬಗ್ಗೆ ತರಬೇತಿ.

ವಿಶೇಷತೆ ಏನು?
ಸದ್ಯ ಬೆಂಗಳೂರು ಸೇರಿದಂತೆ ದೇಶದ ಏಳು ನಗರಗಳಲ್ಲಿ ಈ ಬ್ಯಾಂಕ್ ಆರಂಭವಾಗಿದೆ. ಹಾಗಿದ್ದರೆ ಇದರ ವಿಶೇಷತೆ ತಿಳಿದುಕೊಳ್ಳಬೇಕಲ್ಲವೇ?
*    ಆರಂಭದಲ್ಲಿ ಇದು ಸಂಪೂರ್ಣ ಮಹಿಳೆಯರಿಗೆ ಮತ್ತು ಅದರ ಸೇವಾ ಸೌಲಭ್ಯ ಮಹಿಳೆಯರಿಗೆ ನೀಡಲಾಗುತ್ತದೆ ಎಂದು ಹೇಳಿಕೊಳ್ಳಲಾಗಿತ್ತು.
*    ಇದೀಗ ಶೇ.80ರಷ್ಟು ಮಹಿಳೆಯರಿಗೆ ಮತ್ತು ಶೇ.20ರಷ್ಟು ಪುರುಷರಿಗೂ ಈ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ತೆರೆದು ಹಣಕಾಸಿನ ವಹಿವಾಟುಗಳನ್ನು ನಡೆಸಲು ಅವಕಾಶ ಉಂಟು.
*    ಮಹಿಳೆಯರಿಗೆ ಉಳಿತಾಯ ಖಾತೆ
*    ಬ್ಯಾಂಕ್ ಸೌಲಭ್ಯ ತಲುಪದ ಗ್ರಾಮೀಣ ಮತ್ತು ನಗರ ಪ್ರದೇಶದ ಮಹಿಳೆಯರಿಗೆ ಹೆಚ್ಚಿನ ಆದ್ಯತೆ.

ತಾಂತ್ರಿಕ ಸೌಲಭ್ಯ
ಅಮೆರಿಕ ಮೂಲದ ಎಫ್‌ಐಎಸ್ ಗ್ಲೋಬಲ್ ಮತ್ತು ವಿಪ್ರೋ ಜತೆಗೂಡಿ ಮೊದಲ ಮಹಿಳಾ ಬ್ಯಾಂಕ್‌ಗೆ ಬೇಕಾದ ತಾಂತ್ರಿಕ ಸೌಲಭ್ಯ ನೀಡುತ್ತಿದೆ.

ಎಸ್‌ಬಿಐ ಜತೆ ಸಹಭಾಗಿತ್ವ

ಸರ್ಕಾರಿ ಸ್ವಾಮ್ಯದ ಭಾರತೀಯ ಮಹಿಳಾ ಬ್ಯಾಂಕ್ (ಬಿಎಂಬಿ) ತನ್ನ ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್ ನೀಡಲು ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಜತೆ ಸಹಭಾಗಿತ್ವವನ್ನು ಹೊಂದಿದೆ.

ಆಡಳಿತಕ್ಕೆ ಯಾರು?
ಹೊಸ ಬ್ಯಾಂಕ್‌ನ ಅಧ್ಯಕ್ಷರನ್ನಾಗಿ ಉಷಾ ಅನಂತಸುಬ್ರಹ್ಮಣ್ಯಂ ಅವರನ್ನು ಆಯ್ಕೆ ಮಾಡಲಾಗಿದೆ. ಜತೆಗೆ ನಿರ್ದೇಶಕರನ್ನಾಗಿ ನೂಪುರ್ ಮಿತ್ರಾ, ರೇಣುಕಾ ರಾಮನಾಥ್, ತಾನ್ಯಾ ದುಭಾಷ್, ಕಲ್ಪನಾ ಸರೋಜ್, ಛಾವಿ ರಾಜವತ್, ಪಕೀಜಾ ಸಮದ್ ಮತ್ತು ಪ್ರಿಯಾ ಕುಮಾರ್‌ರನ್ನು ನೇಮಿಸಲಾಗಿದೆ.

ಬ್ಯಾಂಕ್‌ನಿಂದ ಯಾರಿಗೆ ಅನುಕೂಲ?
ಬ್ಯಾಂಕ್‌ನ ಅನುಕೂಲಗಳ ಬಗ್ಗೆ ಮಾತನಾಡಿದ ಬೆಂಗಳೂರು ಶಾಖೆಯ ಮ್ಯಾನೇಜರ್ ವಿ.ಜಿ.ಜ್ಯೋತಿಲಕ್ಷ್ಮೀ, ಮಹಿಳಾ ಸ್ವಸಹಾಯ ಸಂಘಟನೆಗಳಿಗೆ, ಮಹಿಳಾ ಉದ್ಯೋಗಿಗಳಿಗೆ ಬ್ಯಾಂಕ್‌ನಿಂದ ನೆರವು ನೀಡುತ್ತೇವೆ ಎನ್ನುತ್ತಾರೆ.

ಖಾತೆ ತೆರೆಯವುದು ಹೇಗೆ?
ಕೆಲವೊಂದು ಬಾರಿ ಮಹಿಳಾ ಸಂಘಟನೆಗಳು ತಮ್ಮ ತಮ್ಮೊಳಗೆ ಹಣಕಾಸಿನ ವ್ಯವಹಾರ ನಡೆಸುತ್ತಿದ್ದರೂ ಬ್ಯಾಂಕಿಂಗ್ ವಹಿವಾಟಿನ ಬಗ್ಗೆ ಅವರಲ್ಲಿ ಹೆಚ್ಚಿನ ಅರಿವು ಇರುವುದಿಲ್ಲ. ಅಂಥವರಿಗೆ ಮಹಿಳಾ ಬ್ಯಾಂಕ್ ಹೆಚ್ಚಿನ ನೆರವು ನೀಡುತ್ತದೆ. ಬ್ಯಾಂಕ್‌ನಲ್ಲಿ ಮಹಿಳಾ ಸಂಘಟನೆಗಳು ಖಾತೆ ತೆರೆಯುವ ವಿಧಾನವನ್ನು ವಿ.ಜಿ.ಜ್ಯೋತಿಲಕ್ಷ್ಮೀ ವಿವರಿಸುವುದು ಹೀಗೆ.
*    ಮಹಿಳಾ ಸಂಘಟನೆಗಳು ತಮ್ಮ ಸಭೆಯಲ್ಲಿ ಭಾರತೀಯ ಮಹಿಳಾ ಬ್ಯಾಂಕ್‌ನ ಶಾಖೆಯಲ್ಲಿ ಖಾತೆ ತೆರೆಯುವ ಬಗ್ಗೆ ನಿರ್ಣಯ ಅಂಗೀಕರಿಸಬೇಕು.
*    ಸಭೆಯಲ್ಲಿ ಒಮ್ಮತದ ನಿರ್ಧಾರ ಅಂಗೀಕರಿಸಿದ ಬಳಿಕ ಅವರು ಸಭೆಯ ನಿರ್ಣಯ ಮತ್ತು ಸಂಘಟನೆ ನೋಂದಣಿಯಾಗಿರುವ ಬಗ್ಗೆ ಸಂಬಂಧಿತ ದಾಖಲೆಗಳನ್ನು ಬ್ಯಾಂಕ್‌ಗೆ ಸಲ್ಲಿಸಬೇಕು.

ಬ್ಯುಸಿಯೋ ಬ್ಯುಸಿ
ಬೆಂಗಳೂರು ಶಾಖೆಯ ಬಗ್ಗೆ ಮ್ಯಾನೇಜರ್ ವಿವರಿಸುವುದು ಹೀಗೆ:
*    ಸಂಪೂರ್ಣ ಮಹಿಳಾ ಬ್ಯಾಂಕ್ ಎಂದು ಹೊಸತಾಗಿ ಆರಂಭವಾಗಿದ್ದರಿಂದ ಜನರಲ್ಲಿ ಸಾಮಾನ್ಯವಾಗಿ ಕುತೂಹಲ ಇರುತ್ತದೆ. ಹೀಗಾಗಿ, ಸಾಲದ ವಿವರ ಪಡೆದುಕೊಳ್ಳಲು, ಯಾವ ರೀತಿಯ ಸೌಲಭ್ಯ ಇದೆ ಎಂದು ತಿಳಿದುಕೊಳ್ಳಲು ಜನರು ಬರುತ್ತಾರೆ.
*    ಸ್ಥಳೀಯವಾಗಿ ಜನರ ನೆರವಿನೊಂದಿಗೆ ಬ್ಯಾಂಕ್‌ನ ಬೇಸ್ ಅನ್ನು ವಿಸ್ತರಿಸಬೇಕು. ಹೆಚ್ಚಿನ ಪ್ರಮಾಣದಲ್ಲಿ ಠೇವಣಿ ಸಂಗ್ರಹ ಆಗಬೇಕು. ಈ ಬಗ್ಗೆ ಪ್ರಯತ್ನ ಮಾಡುತ್ತೇವೆ.
*    ಸದ್ಯ ಬೆಂಗಳೂರು ಶಾಖೆಯಲ್ಲಿ ಒಬ್ಬ ಅಸಿಸ್ಟೆಂಟ್ ಮ್ಯಾನೇಜರ್ (ಪುರುಷ) ಸೇರಿ ಏಳು ಮಂದಿ ಇದ್ದೇವೆ.
*    ಕನ್ನಡ ಭಾಷೆ ಬಲ್ಲ ಏಕೈಕ ಮಹಿಳಾ ಉದ್ಯೋಗಿ ಇದ್ದಾರೆ. ಅವರು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಕಾರ್ಪೊರೇಷನ್ ಬ್ಯಾಂಕ್‌ನಿಂದ ಡೆಪ್ಯುಟೇಷನ್ ಮೇಲೆ ಬಂದಿದ್ದಾರೆ.
*    ಬೆಂಗಳೂರಿನಲ್ಲಿ ಭಾಷೆ ಸಮಸ್ಯೆಯಾಗದು. ಆದರೆ, ಬೆಂಗಳೂರಿನಿಂದ ಹೊರಗಿನ ಪ್ರದೇಶದಲ್ಲಿ ಬ್ಯಾಂಕ್ ಶಾಖೆ ತೆರೆದರೆ ಕೊಂಚ ಸಮಸ್ಯೆಯಾಗಬಹುದು.
*    ಸದ್ಯ ಬೆಂಗಳೂರಿನ ಹಡ್ಸನ್ ಸರ್ಕಲ್‌ನಲ್ಲಿರುವ ಶಾಖೆಯೇ ಕರ್ನಾಟಕದಲ್ಲಿರುವ ಏಕೈಕ ಮಹಿಳಾ ಬ್ಯಾಂಕ್ ಶಾಖೆ. ಶೀಘ್ರದಲ್ಲಿಯೇ ಮೈಸೂರಿನಲ್ಲಿ ಶಾಖೆ ತೆರೆಯುವ ಸಾಧ್ಯತೆ ಇದೆ.
*    ಸ್ಥಳೀಯ ಸಂಘಟನೆಗಳ ಜತೆ ಸಹಭಾಗಿತ್ವ ಹೊಂದುವ ಬಗ್ಗೆ ಇನ್ನಷ್ಟೇ ಆಲೋಚಿಸಬೇಕಾಗಿದೆ.

ಅಡುಗೆ ಮನೆಗೆ ಲೋನ್
ಉಳಿದ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ಎಲ್ಲ ಸಾಲ ಸೌಲಭ್ಯಗಳೂ ಬ್ಯಾಂಕ್‌ನಲ್ಲಿ ಸಿಗುತ್ತವೆ. ಆದರೆ ಕಿಚನ್ ಲೋನ್ ಮಾತ್ರ ಮಹಿಳಾ ಬ್ಯಾಂಕ್‌ನಲ್ಲೇ ಸಿಗುತ್ತದೆ ಎನ್ನುತ್ತಾರೆ ಮ್ಯಾನೇಜರ್ ಜ್ಯೋತಿಲಕ್ಷ್ಮಿ.

ಯಾಕೆ ಈ ಯೋಜನೆ?
ಅಡುಗೆ ಮನೆಯ ಪುನರ್‌ನಿರ್ಮಾಣ, ಮೇಲ್ದರ್ಜೆಗೆ ಏರಿಸುವಿಕೆ ಸೇರಿದಂತೆ ಇತರ ಅಗತ್ಯಕ್ಕೆ ಈ ಸಾಲ ಸೌಲಭ್ಯ ಬಳಸಬಹುದು.

ಅರ್ಹತೆಯೇನು?
ಕಾಯಂ ಉದ್ಯೋಗ ಹೊಂದಿದ ಮಹಿಳೆಯರು, ಸ್ವಸಹಾಯ ಸಂಘಟನೆ ಸದಸ್ಯರು, ಮಹಿಳಾ ವೃತ್ತಿಪರರು.

ವಯೋಮಿತಿ
*    ಕನಿಷ್ಠ ವಯಸ್ಸು 21. ಗರಿಷ್ಠ ಸಂಬಳದಾರರು (ಮಹಿಳೆಯರು) 55 ವರ್ಷ. ಇತರರು 60 ವರ್ಷ.
*    ಸಾಲ ಪಡೆಯುವ ಮಹಿಳೆಗೆ ನಿರಾತಂಕವಾಗಿ ಕನಿಷ್ಠ ಎರಡು ವರ್ಷವಾದರೂ ಆದಾಯ ಬರುವ ಉದ್ಯೋಗ ಇರಬೇಕು.
*    ಬ್ಯಾಂಕ್‌ನ ಜತೆ ಕನಿಷ್ಠ 6 ತಿಂಗಳು ಉಳಿತಾಯ ಖಾತೆ ಮೂಲಕ ವ್ಯವಹಾರ ನಡೆಸಿರಬೇಕು.  
*    ಸಾಲ ಪಡೆಯುವ ಮಹಿಳೆ ಹೆಸರಲ್ಲಿ ಮನೆ ಅಥವಾ ಅಪಾರ್ಟ್‌ಮೆಂಟ್ ಇರಬೇಕು. ಒಂದು ವೇಳೆ ತಂದೆ/ಪತಿಯ ಹೆಸರಲ್ಲಿದ್ದರೆ ಅವರು ಸಹ ಸಾಲದಾರರಾಗುತ್ತಾರೆ.

ಮಾರ್ಜಿನ್
* 1 ಲಕ್ಷ ವರೆಗಿನ ಲೋನ್- ಶೇ.5 ಟ 1 ಲಕ್ಷಕ್ಕಿಂತ ಹೆಚ್ಚಿನ ಲೋನ್ - ಶೇ. 20
ಸಾಲದ ಮೊತ್ತ: ಟ ಕನಿಷ್ಠ ಮೊತ್ತ 50,000 ಟ ಗರಿಷ್ಠ ಮೊತ್ತ ರು. 7 ಲಕ್ಷ
ಪುನರ್ ಪಾವತಿ ಅವಧಿ:  84 ಪ್ರತಿ ತಿಂಗಳ ಸಮಾನ ಮಾಸಿಕ ಕಂತುಗಳು
ಬಡ್ಡಿ ದರ :  ಶೇ.2.5
ನಾವು ಮಾಗಡಿ ರಸ್ತೆಯಲ್ಲಿರುವ ಜನನಿ ಮಹಿಳಾ ಸಂಘದಿಂದ ಬಂದಿದ್ದೆವು. ಸಂಪೂರ್ಣ ಮಹಿಳಾ ಬ್ಯಾಂಕ್ ಬಗ್ಗೆ ಪತ್ರಿಕೆಗಳಲ್ಲಿ ಓದಿ ತಿಳಿದುಕೊಂಡಿದ್ದೇವೆ. ನಮ್ಮ ಸಂಘದಿಂದ ವಿಧವೆಯರಿಗೆ ಪಿಂಚಣಿ, ಕ್ಯಾಂಡಲ್ ತಯಾರಿಕೆ ಬಗ್ಗೆ ತರಬೇತಿ ಕೊಡುತ್ತಿದ್ದೇವೆ. ಹೊಸ ಬ್ಯಾಂಕಿನ ಮೂಲಕ ಸಾಲ ಪಡೆದು ಸಂಘಕ್ಕೆ ಅನುಕೂಲ ಮಾಡಿಕೊಳ್ಳಬೇಕೆಂದಿದ್ದೇವೆ. ಬ್ಯಾಂಕಿನ ಅಧಿಕಾರಿಗಳು ನಮಗೆ ಎಲ್ಲ ವಿಚಾರ ವಿವರಿಸಿ ಹೇಳಿದ್ದಾರೆ.
- ವೃಂದಾ, ಜನನಿ ಮಹಿಳಾ ಸೇವಾ ಸಂಘದ ಖಜಾಂಚಿ
ಬ್ಯಾಂಕಿನ ಬಗ್ಗೆ ಟಿ.ವಿ, ಪೇಪರುಗಳಲ್ಲಿ ಓದಿದ್ದೆವು. ಹಾಗಾಗಿ ಏನೇನು ವ್ಯವಸ್ಥೆ ಇದೆ ಎಂದು ತಿಳಿದುಕೊಳ್ಳಲು ಬಂದಿದ್ದೇನೆ. ನಮ್ಮ ಸಂಘದ ಸದಸ್ಯೆಯರ ಜತೆ ಬಂದು ಹೊಸ ಅನುಭವ ಉಂಟಾಗಿದೆ.
- ಗೌರಮ್ಮ,
ಖಾತೆ ತೆರೆಯಲು ಬಂದವರು

ಬೆಂಗಳೂರು ಶಾಖೆಯ ವಿಳಾಸ
ಐಎಫ್‌ಸಿಐ ಭವನ, ಕಬ್ಬನ್‌ಪೇಟೆ ಮುಖ್ಯರಸ್ತೆ, ಎನ್.ಆರ್.ಚೌಕ (ಹಡ್ಸನ್ ಚೌಕ), ಬೆಂಗಳೂರು- ಹಲಸೂರು ಗೇಟ್ ಪೊಲೀಸ್ ಠಾಣೆ ಸಮೀಪ. ದೂರವಾಣಿ: 080-22221415/16. ಬೆಂಗಳೂರು ಶಾಖೆಯ ಆವರಣದಲ್ಲೇ ಬ್ಯಾಂಕ್‌ನ ಎಟಿಎಂ ಇದೆ. ವೆಬ್‌ಸೈಟ್ www.bmb.co.in

- ಸದಾಶಿವ ಕೆ.
khandige29@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments