ಅಪ್ರತಿಮ ಗುರುವಿನ ಪರಮಶಿಷ್ಯರು!
ವಿವೇಕಾನಂದರು ಲಂಡನ್ನಲ್ಲಿದ್ದಾಗ ಅವರ ವ್ಯಕ್ತಿತ್ವ ಹಾಗೂ ಸಂದೇಶದ ಮೋಡಿಗೊಳಗಾಗಿ ಸ್ವಾಮೀಜಿಯ ಕಾರ್ಯೋದ್ದೇಶಕ್ಕಾಗಿ ಸೇವೆ ಮಾಡಲು ಮುಂದೆ ಬಂದ ಇಬ್ಬರು ಶಿಷ್ಯರಲ್ಲಿ ಮಾರ್ಗರೆಟ್ ನೊಬೆಲ್ ಹಾಗೂ ಕ್ಯಾಪ್ಟನ್ ಜೇಮ್ಸ್ ಹೆನ್ರಿ ಸೇವಿಯರ್ ದಂಪತಿ. ಮಾರ್ಗರೆಟ್ ನೊಬೆಲ್ ಮುಂದೆ ಸಿಸ್ಟರ್ ನಿವೇದಿತಾ ಎಂದು ಹೆಸರಾದವರು.
ಸ್ವಾಮೀಜಿಯ ಮೊದಲ ಭೇಟಿಯಲ್ಲಿಯೇ ತೀವ್ರ ಪ್ರಭಾವಕ್ಕೊಳಗಾದ ನೊಬೆಲ್ ಅವರನ್ನು 'ಗುರುದೇವ' ಎಂದುಕರೆಯಲಾರಂಭಿಸಿದಳು. ಲಂಡನ್ನಿನಲ್ಲಿ ಅವರ ಪ್ರತಿಯೊಂದು ತರಗತಿಯಲ್ಲೂ, ಉಪನ್ಯಾಸದಲ್ಲೂ ಹಾಜರಿರುತ್ತಿದ್ದಳು. ಸ್ವಾಮೀಜಿಯ ಬೋಧನೆಗಳು, ಅವರ ವಿದ್ಯುತ್ವಾಣಿಯ ಕರೆಗಳು ಅವರನ್ನು ತ್ಯಾಗಕ್ಕೆ ಸಿದ್ಧಗೊಳಿಸಿದವು.
ಸೇವಿಯರ್ ದಂಪತಿ ಧರ್ಮದಲ್ಲಿ ಪ್ರಾಮಾಣಿಕ ಶ್ರದ್ಧೆಯುಳ್ಳವರಾಗಿದ್ದರು. ಅವರ ಮನಸ್ಸಿನ ಮೇಲೆ ತೀವ್ರ ಪ್ರಭಾವ ಬೀರಿದ್ದೆಂದರೆ ಸ್ವಾಮೀಜಿ ಪ್ರತಿಪಾದಿಸಿದ ಅದ್ವೈತ ವೇದಾಂತ! ಸ್ವಾಮೀಜಿ ಸೇವಿಯರ್ರ ಪತ್ನಿಯನ್ನು 'ತಾಯಿ' ಎಂದು ಕರೆಯುತ್ತಿದ್ದರು. ಈ ದಂಪತಿ ಸ್ವಾಮೀಜಿಯೊಂದಿಗೆ ಆತ್ಮೀಯತೆ ಬೆಳೆದಂತೆ ಅವರನ್ನು ಗುರುವೆಂದು ಸ್ವೀಕರಿಸಿದರು. ಅಲ್ಲದೆ, ತಮ್ಮ ಸ್ವಂತ ಮಗನಂತೆ ಸ್ವಾಮೀಜಿಯನ್ನು ಕಾಣತೊಡಗಿದರು. ಹೀಗೆ ಪ್ರಾರಂಭವಾದ ಬಾಂಧವ್ಯವು ಸ್ವಾಮೀಜಿಯ ಅತಿಮುಖ್ಯ ಕಾರ್ಯೋದ್ದೇಶವೊಂದರ ಈಡೇರಿಕೆಗೆ ಕಾರಣವಾಯಿತು.
- ಆನಂದ ಎಸ್.ಎನ್.
anandsn193@gmail.com