ಬಲ್ಲವಳ ಬೆಲ್ಲ ಅವನು
ಸಾಸಾವಿರಾರು ಗೆಳತಿಯರು, ಅಷ್ಟ ಮಹಿಷಿಯರು, 16 ಸಾವಿರ ಹೆಂಡತಿಯರಂತೆ ಅವನಿಗೆ. ಇಷ್ಟಾದರೂ ಅವನಿಯ ಮೇಲೆ ಅವನು ನಿತ್ಯ ಬ್ರಹ್ಮಚಾರಿಯಂತೆ. ಕೃಷ್ಣನ ಕಲ್ಪನೆಯೇ ಅತ್ಯದ್ಭುತವಾದದ್ದು! ಅವನು ನಾದ ಸ್ವರೂಪಿ, ರಾಗ ಭಿನ್ನವಾದರೂ ಶ್ರುತಿ ತಪ್ಪುವುದಿಲ್ಲ. ಅವನಲ್ಲಿ ಕಲ್ಮಶವಿಲ್ಲ. ಎಲ್ಲರ ಕಾಮನೆಗಳನ್ನು ತಣಿಸಿದರೂ ಸ್ವತಃ ಅವನಲ್ಲಿ ಕಾಮದ ವಾಸನೆಗಳಿಲ್ಲ. ದೇಹಕ್ಕಿಂತ ಹೆಚ್ಚಾಗಿ ಮಾನಸಿಕ ಸಾಂಗತ್ಯವೇ ಅಲ್ಲಿ ಪ್ರಾಧಾನ್ಯ. ಹೀಗಾಗಿ ರತಿಕ್ರೀಡೆಯೂ ಪಾರಮಾರ್ಥವಾಗುತ್ತದೆ. ಬೃಂದಾವನದಲ್ಲಿ ಎಲ್ಲ ಗೋಪಿಯರೊಂದಿಗೆ ನಿತ್ಯ ಕೇಳಿಯಲ್ಲಿ ನಡೆಸಿದ್ದರೂ ಶುಭ್ರನೂ ನಿರ್ಮಲನೂ ಆಗಿರುವ ಕೃಷ್ಣನ ರಸಿಕತೆಗೆ ಸಾಟಿಯಾದ ಸಂಗತಿ ಮತ್ತೊಂದಿಲ್ಲ. ಅದು ಸಲ್ಲಾಪದಲ್ಲಿ ಸಮಾಧಿ ಸ್ಥಿತಿಯನ್ನು ಕಾಣುವ ಸುಲಭ ಯೋಗ ಮಾರ್ಗ. ಶೃಂಗಾರ ರಸಕ್ಕೆ ಹೊಸ ವ್ಯಾಖ್ಯಾನವನ್ನೇ ಕಟ್ಟಿಕೊಟ್ಟ ಕೃಷ್ಣನನ್ನು ಬಣ್ಣಿಸುವ ಸಾಲುಗಳು ಅನಂತ.
ಲಗ್ನಂ ಮುಹುರ್ಮನಸಿ ಲಂಪಟ ಸಂಪ್ರದಾಯಿ
ಲೇಖಾವಲೇಖನಿ ರಸಜ್ಞ ಮನೋಜ್ಞವೇಷಮ್
ಲಜ್ಜನ್ಮೃದುಸ್ಮಿತ ಮಧುಸ್ರಪಿತಾಧರಾಂಶು
ರಾಕೇಂದು ಲಾಲಿತ ಮುಖೇಂದು ಮುಕುಂದ ಬಾಲ್ಯಮ್
ಜೇನನ್ನು ಸೂಸುವ ಅವನ ತುಟಿಗಳೇ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಂತೆ. ಅವು ನಿರಂತರ ಜೇನನ್ನು ಸ್ರವಿಸುವ ಬುಗ್ಗೆ. ಎಲ್ಲ ಗೋಪಿಯರನ್ನೂ ಒಬ್ಬನೇ ತಣಿಸಿದರೂ ಎಲ್ಲರ ಅನುಭವಗಳು ವಿಭಿನ್ನ. ಮತ್ತೆ ಮತ್ತೆ ಮನದಾಳದಲ್ಲಿ ಹುಟ್ಟುವ ರಸಗಳನ್ನು ತಣಿಸುವ ಸಾಮರ್ಥ್ಯ ಅವನಲ್ಲಿದೆ. ಏಕೆಂದರೆ, ಅವನು ರಸಜ್ಞ. ತನ್ನ ಮೋಹಕ ರೂಪದ ಸೆಳೆತಕ್ಕೊಳಗಾಗಿ ಅವನಲ್ಲಿ ಅನುರಕ್ತರಾಗುವ ಗೋಪಿಯರ ಮನಸ್ಸು ಮಾತ್ರವೇ ಅಲ್ಲ, ವಸ್ತ್ರಗಳೂ ಅಸ್ತವ್ಯಸ್ತಗೊಂಡಿರುತ್ತವಂತೆ. ಶೃಂಗಾರ ಲೀಲೆಯಲ್ಲಿ ತೊಡಗಿಕೊಳ್ಳುವ ತಮ್ಮನ್ನೇ ತಾವು ಮರೆಯುವ ಗೋಪಿಯರಿಗೆ ಇದಾವುದರ ಬಗ್ಗೆಯೂ ಅರಿವಿಲ್ಲ. ಆದರೆ ಕೃಷ್ಣನಿಗೋ... ಅದು ಮೋಜಿನ ಸಂಗತಿ. ಅವರು ಹೇಗೆ ಹೇಗೋ ಆಡುತ್ತಿದ್ದರೆ ತಾನೂ ನಾಚಿದಂತೆ ನಟಿಸುವ ಆ ಮುಗ್ಧನ ಮುಖ ಹುಣ್ಣಿಮೆಯ ಚಂದ್ರನಂತೆ ಮತ್ತೆ ಮತ್ತೆ ಗೋಪಿಯರನ್ನು ಸೆಳೆಯುತ್ತದಂತೆ. ಇಂಥ ಶೃಂಗಾರ, ಸಾಂಗತ್ಯ ದೈಹಿಕವಾಗಿ ಸಾಮಾನ್ಯ ಪೌರುಷಕ್ಕೆ ನಿಲುಕುವಂಥದ್ದೇ? ಇಷ್ಟಾಗಿಯೂ ಅದು ಲಂಪಟತನವಾಗದೇ? ಅಥವಾ ಅದು ಪಾರಮಾರ್ಥವೇ? ಬಲ್ಲವಳೇ ಬಲ್ಲ ಬೆಲ್ಲ ಅವನು, ಅಲ್ಲವೇ?
- ಹರಿಹರ