ಬ್ರ್ಯಾಂಡ್ ಮಂಡೇಲಾ
ದಕ್ಷಿಣ ಆಫ್ರಿಕಾದಲ್ಲಿ ಓಡಾಡುವಾಗ ಅಲ್ಲಿನ ದಟ್ಟ ಅರಣ್ಯ, ವನ್ಯಜೀವಿ ಸಂಕುಲ...
ಮಕ್ಕಳಿಗೆ ಮಾಡೆಲ್, ದೇಶಕ್ಕೆ ರೋಲ್ ಮಾಡೆಲ್
ದಕ್ಷಿಣ ಆಫ್ರಿಕಾದಲ್ಲಿ ಓಡಾಡುವಾಗ ಅಲ್ಲಿನ ದಟ್ಟ ಅರಣ್ಯ, ವನ್ಯಜೀವಿ ಸಂಕುಲ, ವಿಶಾಲ ಸಮುದ್ರ, ಶ್ರೀಮಂತ ಸಂಸ್ಕೃತಿ, ಸೊಗಸಾದ ಜೀವವೈವಿಧ್ಯ ನಮ್ಮ ಮೇಲೆ ಗಾಢ ಪ್ರಭಾವ ಬೀರುವಂತೆ, ಅಷ್ಟೇ ಗಾಢವಾಗಿ ಆವರಿ ಸಿಕೊಳ್ಳುವ ಮತ್ತೊಂದು ಸಂಗತಿಯೆಂದರೆ, ವರ್ಣಭೇದ ನೀತಿಯ ವಿರುದ್ಧ ಇಪ್ಪತ್ತೇಳು ವರ್ಷ ಜೈಲುವಾಸ ಅನುಭವಿಸಿ ಕೊನೆಗೂ ಕೈಗೊತ್ತಿಕೊಂಡು ಹೋರಾಟದಲ್ಲಿ ಯಶಸ್ಸು ಸಾಧಿಸಿದ ಅದ್ವಿತೀಯ ನಾಯಕ ನೆಲ್ಸನ್ ರೋಲಿಹ್ಲಾಲ ಮಂಡೇಲಾ!
ಹಾಗೆ ನೋಡಿದರೆ ಮಂಡೇಲಾ, ದಕ್ಷಿಣ ಆಫ್ರಿಕಾಕ್ಕಿಂತ ದೊಡ್ಡ ಬ್ರ್ಯಾಂಡ್! ದಕ್ಷಿಣ ಆಫ್ರಿಕಾ ಗೊತ್ತಿದ್ದವರಿಗೆ ಮಂಡೇಲಾ ಗೊತ್ತೇ ಗೊತ್ತು. ದಕ್ಷಿಣ ಆಫ್ರಿಕಾ ಗೊತ್ತಿಲ್ಲದವರಿಗೂ ಮಂಡೇಲಾ ಗೊತ್ತು. ಅವರ ದೇಶದ ಹೆಸರನ್ನು ಕೇಳದವರು ಇದ್ದಿರಬಹುದು. ಆದರೆ, ಮಂಡೇಲಾ ಹೆಸರನ್ನು ಕೇಳದವರು ಇಲ್ಲ! ಒಂದು ದೇಶಕ್ಕಿಂತ ಎತ್ತರಕ್ಕೆ ಬೆಳೆದ ವ್ಯಕ್ತಿತ್ವ ಅದು. ಮಂಡೇಲ ದಕ್ಷಿಣ ಆಫ್ರಿಕಾದಲ್ಲಿ ಮಾತ್ರವಲ್ಲ, ಜಗತ್ತಿನಲ್ಲಿಯೇ ಪರಿಚಿತ ಹೆಸರು.
ದಕ್ಷಿಣ ಆಫ್ರಿಕಾದ ಎಲ್ಲ ಊರುಗಳಲ್ಲೂ ಈ ಬ್ರ್ಯಾಂಡ್ ಮಂಡೇಲಾ ಗೋಚರಿಸುತ್ತದೆ. ಮಂಡೇಲಾ ಬರೀ ವ್ಯಕ್ತಿ ಅಲ್ಲ. ಒಬ್ಬೊಬ್ಬರಿಗೆ ಒಂದೊಂದು ರೀತಿ. ಅವರಿಂದ ಸ್ಫೂರ್ತಿ ಪಡೆದವರೆಷ್ಟೋ? ಪ್ರತಿಯೊಬ್ಬ ರನ್ನೂ ಒಂದೊಂದು ರೀತಿಯಲ್ಲಿ ತಟ್ಟಿದವರು, ತಡಕಿದವರು ಮಂಡೇಲಾ. ಹೀಗಾಗಿ ಮಂಡೇಲಾ ಅಂದ್ರೆ ಯಾರು ಅಂತ ಕೇಳಿದರೆ ಒಂದು ನಿರ್ದಿಷ್ಟ ಉತ್ತರ ಬರುವುದಿಲ್ಲ. ಈ ಪ್ರಶ್ನೆಯನ್ನು ಎಷ್ಟು ಜನರಿಗೆ ಕೇಳುತ್ತೀರೋ, ಅಷ್ಟೇ ಸಂಖ್ಯೆಯ ಉತ್ತರಗಳೂ ಬಂದಾವು!
ನಾನು ಇದೇ ಪ್ರಶ್ನೆಯನ್ನು ನಮ್ಮ ಗೈಡ್ ಅಬ್ದುಲ್ಗೆ ಕೇಳಿದ್ದೆ. `ಹಾಗೆಲ್ಲ ಹೇಳಲು ಆಗೊಲ್ಲ. ನಿಮ್ಮ ತಂದೆ ಅಂದ್ರೆ ಯಾರು? ಅವರಿಗೂ ನಿಮ್ಮ ಜೀವನಕ್ಕೂ ಏನು ಸಂಬಂಧ ಅಂತ ಯಾರಾದರೂ ಕೇಳಿದರೆ ಏನಂತ ಹೇಳ್ತೀರಾ? ಇದೂ ಒಂಥರ ಅದೇ ರೀತಿಯ ಪ್ರಶ್ನೆ' ಎಂದಿದ್ದ. ಅದು ನಿಜ ಸಹ. ಕಾರಣ ಮಂಡೇಲಾರನ್ನು ಜನ ದೇವರಿಗೆ ಸಮಾನ ವಾಗಿ ನೋಡುತ್ತಾರೆ. ದೇವರನ್ನು ಬಣ್ಣಿಸುವುದಾದರೂ ಹೇಗೆ? ಆದರೂ ಮಂಡೇಲಾ ಬಗ್ಗೆ ಅಬ್ದುಲ್ ಹೇಳಿದ್ದು `ಒಂದು ದೇಶ, ಜನ ಸಮುದಾಯಕ್ಕೆ, ಜಗತ್ತಿಗೇ ಯೋಚನೆ, ವಿಚಾರಗಳನ್ನೆಲ್ಲ ಕದಲಿಸಿದ ವ್ಯಕ್ತಿ ಮಂಡೇಲಾ ಎಂದು ಹೇಳಬಹುದು. ಹಾಗೆ ಹೇಳಿದರೆ ಏನನ್ನೂ ಹೇಳಿದಂತೆ ಆಗುವುದಿಲ್ಲ ಎಂಬುದು ಗೊತ್ತು. ಅದಕ್ಕಿಂತ ಹೆಚ್ಚು ಏನು ಹೇಳುವುದೆಂದು ಗೊತ್ತಾಗುತ್ತಿಲ್ಲ'. ಒಬ್ಬ ವ್ಯಕ್ತಿ ನಮ್ಮನ್ನು ಈ ಪರಿ ಆವರಿಸಿಕೊಂಡಾಗ, ಅವರ ವಿಚಾರ ಒಂದು ಸಮಸ್ತ ಜನಮಾನಸವನ್ನು ವ್ಯಾಪಿಸಿದಾಗ ಅದನ್ನು ಮಾತಿನಲ್ಲಿ ಹಿಡಿದಿಡುವುದಾದರೂ ಹೇಗೆ? `ನಿಮಗೆ ಗಾಂಧಿ ಹೇಗೋ ನಮಗೆ ಮಂಡೇಲಾ. ಆದರೂ ಇದು ಸರಿಯಾದ ಹೋಲಿಕೆ ಅಲ್ಲ. ಕಾರಣ ಮಂಡೇಲಾ ಮಂಡೇಲಾನೇ' ತಪ್ಪು ತಿದ್ದಿಕೊಂಡವನಂತೆ ಅಬ್ದುಲ್ ಹೇಳಿದ.
ಒಂದು ತತ್ತ್ವ, ಬದ್ಧತೆ, ಬೇಡಿಕೆಗಾಗಿ ಮಂಡೇಲಾ ಇಪ್ಪತ್ತೇಳು ವರ್ಷಗಳ ಕಾಲ ಸೆರೆಮನೆವಾಸ ಅನುಭವಿಸಿದ್ದು, ಈಡೇರುವ ತನಕ ವಿರಮಿಸದೇ ಇದ್ದದ್ದು, ಆನಂತರ ದಕ್ಷಿಣ ಆಫ್ರಿಕಾದ ರಾಷ್ಟ್ರಾಧ್ಯಕ್ಷನ ಹುದ್ದೆಯನ್ನು ಅಲಂಕರಿಸುವ ಮಟ್ಟಕ್ಕೆ ಬೆಳೆದದ್ದು ಸಾಮಾನ್ಯ ಸಾಧನೆಯಲ್ಲ. ಮಂಡೇಲಾ ದಕ್ಷಿಣ ಆಫ್ರಿಕಾದ ಮೊದಲ ಕರೆಯ ರಾಷ್ಟ್ರಾಧ್ಯಕ್ಷ! ಕರಿಯರಿಗೆ ಅಧಿಕಾರದ ಗದ್ದುಗೆ ಕನಸು ಎಂಬ ಮಾತನ್ನು ನೆಲಸಮಗೊಳಿಸಿದ್ದು ಅಸಾಧಾರಣ ಸಂಗತಿಯೇ.
ಮಂಡೇಲಾ ವಿವಾದಾತ್ಮಕ ವ್ಯಕ್ತಿಯಾಗಿರಬಹುದು. ಅವರನ್ನು ಟೀಕಿಸುವವರೂ ಇದ್ದಾರೆ. ಅವರು ಅಹಿಂಸಾವಾದಿಯಲ್ಲ, ಆರಂಭದ ದಿನಗಳಲ್ಲಿ ಭಯೋತ್ಪಾದಕ ಚಟುವಟಿಕೆಯಲ್ಲಿ, ವಿಧ್ವಂಸಕ ಕ್ರಿಯೆಯಲ್ಲಿ ತೊಡಗಿದ್ದರು, ಬೇರೆ ದೇಶಗಳಲ್ಲಿ ಅಡಗಿಕುಳಿತು ತಾಯ್ನಾಡಿನ ವಿರುದ್ಧ ಸಮರ ಸಾರಿದ್ದರು ಎಂದು ಜರೆಯುವವರೂ ಇದ್ದಾರೆ. ಆದರೆ, ಈಗ ಆ ವಾದವನ್ನು ಪುರಸ್ಕರಿಸುವವರು ಯಾರೂ ಇಲ್ಲ. ಬಹಳ ಜನರಿಗೆ ಈ ಸಂಗತಿ ಗೊತ್ತೂ ಇಲ್ಲ. ಯಾವಾಗ ಅವರು ವರ್ಣಭೇದ ನೀತಿ ವಿರುದ್ಧ ಹೋರಾಟ ನಡೆಸಿ ಇಪ್ಪತ್ತೇಳು ವರ್ಷ ಸೆರೆಮನೆವಾಸ ಅನುಭವಿ ಸಿದರೋ, ಅವರು ಒಂದು ರೀತಿಯಲ್ಲಿ `ದೇವಾಂಶ ಸಂಭೂತ'ರಾದರು. ಧೈರ್ಯ, ಕೆಚ್ಚು, ಹೊಸಭರವಸೆ, ಶಾಂತಿಯ ಪ್ರತೀಕವಾದರು.
ಮಂಡೇಲಾ ಜೈಲಿನಿಂದ ಬಿಡುಗಡೆಯಾದ ಬಳಿಕ `ಗ್ಲೋಬಲ್ ಬ್ರಾಂಡ್' ಆದರು. ಇದನ್ನೇ ಅಬ್ದುಲ್ ಹೇಳಿದ್ದು ಈ ರೀತಿ `many Africans have felt like they'd like to 'own' a little piece of him'. ಮಂಡೇಲಾ ಅವರನ್ನು ಅನೇಕರು ರಾಷ್ಟ್ರಪಿತ ಎಂದು ಪರಿಗಣಿಸಿದರೂ, ಅವರನ್ನು ಪ್ರೀತಿಯಿಂದ `ಮದೀಬಾ' ಎಂದೂ ಕರೆಯುತ್ತಾರೆ.
ದಕ್ಷಿಣ ಆಫ್ರಿಕಾದಲ್ಲಿ ಓಡಾಡುವಾಗ ಹೆಜ್ಜೆ ಹೆಜ್ಜೆಗೆ ಮಂಡೇಲಾ ಇರುವಿಕೆ ಒಂದಿಲ್ಲೊಂದು ರೀತಿಯಲ್ಲಿ ಆಗುತ್ತದೆ. ರಸ್ತೆ, ಸೇತುವೆ, ಸರ್ಕಲ್, ಪ್ರದೇಶ, ಶಾಲೆ, ಕಾಲೇಜು, ಸಂಸ್ಥೆ, ಮಾರುಕಟ್ಟೆ, ವಿಶ್ವವಿದ್ಯಾಲಯ, ವಠಾರ... ಹೀಗೆ ಎಲ್ಲೆಡೆ ಮಂಡೇಲಾ ಹೆಸರು. ದೊಡ್ಡ ಕಟ್ಟಡ, ಶಾಪಿಂಗ್ ಮಾಲ್, ವಿಮಾನ ನಿಲ್ದಾಣದ ಲೌಂಜ್, ಕ್ರೀಡಾಂಗಣ, ಸಾರ್ವಜನಿಕ ಸ್ಥಳಗಳಲ್ಲೆಲ್ಲ ಮಂಡೇಲಾ ಬೃಹತ್ ಫೋಟೊ. ಕೆಲವರ ಮನೆಯ ಕಿಟಕಿಯ ಗಾಜುಗಳಲ್ಲಿ, ಹಾರಾಡುವ ಬಾವುಟಗಳಲ್ಲಿ, ಗೋಡೆಗಳಲ್ಲಿ ಮಂಡೇಲಾ. ಕಾರಿನ ಹಿಂದೆ, ಮುಂದೆ, ವಾಹನಗಳ ಮೈ ಮೇಲೆಲ್ಲ ಮಂಡೇಲಾ. ಟೀ-ಶರ್ಟ್ಗಳಂತೂ ಮಂಡೇಲಾಮಯ. ಅವುಗಳ ಮೇಲೆಲ್ಲ ಅವರ ವಿಚಾರ, ಉಕ್ತಿ `Madiba, we love you, Mandela you are me, Mandela, we die for you, Freedom means Mandela, Mandela means peace, Long walk to freedom...' ಮುಂತಾದ ಶೀರ್ಷಿಕೆಗಳ ಜತೆಗೆ ಮಂಡೇಲಾ ಚಿತ್ರವಿರುವ ಟೀ-ಶರ್ಟ್ ಎಲ್ಲೆಡೆ ರಾರಾಜಿಸುತ್ತವೆ. ಈ ಟೀ-ಶರ್ಟ್ ಧರಿಸುವುದೇ ಒಂದು ಹೆಮ್ಮೆ. ಮಂಡೇಲಾ ಅವರ ಪ್ರಸಿದ್ಧ ವಾಕ್ಯ - The greatest glory in living lies not in never falling, but in rising every time we fall ಹಾಗೂ It always seem impossible until its done ಗಳಂತೂ ಅವರು ಟೀ-ಶರ್ಟ್ಗಾಗಿಯೇ ಬರೆದಿರ ಬಹುದಾ ಎಂಬ ಸಂದೇಹವನ್ನು ಮೂಡಿಸುತ್ತವೆ.
ಕ್ಯಾಪು, ಕೀಚೈನ್, ಕಪ್-ಸಾಸರ್, ಕೋಸ್ಟರ್, ಪೇಪರ್ ವೇಟ್ ಹೀಗೆ ಎಲ್ಲವುಗಳ ಮೇಲೂ ಮದೀಬಾ! ಮ್ಯಾಟು, ಕಾರ್ಪೆಟ್, ಟವೆಲ್, ಬೆಡ್ಶೀಟ್, ಚಾದರ, ಕರ್ಟನ್ಗಳ ಮೇಲೆಲ್ಲ ಮಂಡೇಲಾ, ಮಂಡೇಲಾ, ಮಂಡೇಲಾ!
ಮಂಡೇಲಾ ಉಳಿದ ಜೈಲು ಕೋಣೆಯ ನಂಬರ್ನ್ನು ಚೈನ್ಗೆ ಪದಕವಾಗಿ, ಬ್ರೇಸ್ಲೆಟ್ ಮೇಲೆ ಬರೆಸಿಕೊಂಡವರೂ ಇದ್ದಾರೆ. ಇನ್ನು ಅವರ ಹೆಸರು, ಚಿತ್ರಗಳನ್ನು ಕೈಮೇಲೆ, ಎದೆಯ ಮೇಲೆ, ತೋಳಿನ ಮೇಲೆ ಹಚ್ಚೆ ಹಾಕಿಸಿಕೊಂಡವರು ಅದೆಷ್ಟೋ! ಮಂಡೇಲಾ ಹೆಸರಿನಲ್ಲಿರುವ `House of Mandela' ವೈನ್ ಬಹಳ ಪ್ರಸಿದ್ಧ. ಈ ವೈನ್ ಬಾಟಲಿ ಜತೆಗಿನ ಎರಡು ಗ್ಲಾಸುಗಳ ಮೇಲೂ ಮಂಡೇಲಾ ಚಿತ್ರ. ಮಂಡೇಲಾ ಹೆಸರಿನ ಬಿಯರ್, ಸೋಡಾ, ತಂಪು ಪಾನೀಯಗಳೂ ಇವೆ. ಈ ಮಂಡೇಲಾ ಮೇನಿಯಾಕ್ಕೆ ಕೊನೆ ಎಂಬುದೇ ಇಲ್ಲ. ಎಲ್ಲರಿಗೂ ಅವರೇ ಬೇಕು. ಕಾಮೋತ್ತೇಜಕ ವಯಾಗ್ರ ಮಾರಾಟಕ್ಕೂ ಮಂಡೇಲಾ ಅವರೇ ಬೇಕು ಅಂದ್ರೆ ಅವರ ನಾಮಬಲದ ಮಹಿಮೆ ಹೇಗಿರಬಹುದು ಊಹಿಸಿ. ಅವರಿಗೆ ತೊಂಬತ್ತು ವರ್ಷ ತುಂಬಿದಾಗ, ವಯಾಗ್ರ ಅವರಿಗೆ ಶುಭಾಶಯ ಸಲ್ಲಿಸಿದ ಜಾಹೀರಾತಿನಲ್ಲಿದ್ದ ಘೋಷವಾಕ್ಯ `Mandela turns 90, Viagra turns10.' ಇದು ವಿವಾದವನ್ನು ಹುಟ್ಟು ಹಾಕಿತ್ತು. ಆದರೆ, ಅನೇಕರು ಇದನ್ನು ಬೆಂಬಲಿಸಿದ್ದರು. ಯಾವಾಗ ವಯಾಗ್ರ ಜಾಹೀರಾತಿಗೆ ಮಂಡೇಲಾ ಅವರನ್ನು ಬಳಸಿದರೋ, ಮಹಿಳೆಯರ ನ್ಯಾಪ್ಕಿನ್, ಬ್ರಾ ಮಾರುವ ಕಂಪನಿಗಳೂ ಅವರ ಹೆಸರು ಹಾಗೂ ಚಿತ್ರಗಳನ್ನು ಬಳಸಿಕೊಂಡವು. ಇಷ್ಟಕ್ಕೇ ಮಂಡೇಲಾ ಹೆಸರು ಬಳಕೆಯಾಗಿದ್ದರೆ ಪರವಾಗಿರಲಿಲ್ಲ. ಬಾತ್ರೂಮು ಟೈಲ್ಸ್, ಕಮೋಡ್, ಗೋಡೆಗೆ ಬಳಸುವ ಟೈಲ್ಸ್ಗಳಲ್ಲೂ ಮಂಡೇಲಾ! ಇಂಥ ಒಂದು ಕಡೆ ಮಂಡೇಲಾ ಇಲ್ಲ ಎನ್ನುವಂತಿಲ್ಲ. ಎಲ್ಲೆಡೆಯೂ ಮಂಡೇಲಾ, ಮಂಡೇಲಾ!
ಮಂಡೇಲಾ ಅವರಿಗೆ ಕಾಪಿರೈಟ್ ಇಲ್ಲ ಎನ್ನುವ ಅನುಮಾನ ಮೂಡುವ ರೀತಿಯಲ್ಲಿ ಅವರನ್ನು ಎಲ್ಲೆಡೆ ಬಳಸಿಕೊಂಡಿರುವುದನ್ನು ಗಮನಿಸಬಹುದು. ಶಾಲೆಯ ಪಠ್ಯಪುಸ್ತಕ, ನೋಟ್ಬುಕ್ಗಳಿಂದ ಹಿಡಿದು ನೋಟು(ಕರೆನ್ಸಿ)ಗಳವರೆಗೆ ಅವರ ಚಿತ್ರಗಳನ್ನು ನೋಡಬಹುದು. ಒಬ್ಬ ವ್ಯಕ್ತಿ ಒಂದು ದೇಶವನ್ನು ಹೇಗೆ ಆವರಿಸಬಹುದು, ಆಕ್ರಮಿಸಬಹುದು ಎಂಬುದಕ್ಕೆ ಇದಕ್ಕಿಂತ ದೊಡ್ಡ ನಿದರ್ಶನ ಸಿಗಲಾರದು.
ದುರ್ದೈವದ ಸಂಗತಿ ಅಂದ್ರೆ ಮಂಡೇಲಾ ಕ್ರೇಜು ಅವರ ಕುಟುಂಬವನ್ನು ಒಡೆದು ಹಾಕಿದೆ. ಮಂಡೇಲಾ ಯಾರಿಗೆ ಸೇರಬೇಕು ಎಂಬ ವಿಷಯದ ಬಗ್ಗೆ ಅವರ ಮಕ್ಕಳಲ್ಲಿ ಸಹಮತ ಇಲ್ಲ. ಅವರ ಮಕ್ಕಳಿಗೆ ತಂದೆಯ ಹೆಸರು ಹಣ ಮಾಡುವ ಒಂದು ಮಾರ್ಗ. ಮಂಡೇಲಾ ಆಸ್ತಿಯ ಬಗ್ಗೆ ವಿವಾದವಾಗಿ, ಅವರ ಇಬ್ಬರು ಹೆಣ್ಣು ಮಕ್ಕಳು ಈಗಾಗಲೇ ಕೋರ್ಟ್ ಮೆಟ್ಟಿಲು ಏರಿದ್ದಾರೆ. ಎರಡು ಪತ್ನಿಯರಿಂದ ನೆಲ್ಸನ್ ಮಂಡೇಲಾ, ಮೂವರು ಹೆಣ್ಣು ಮಕ್ಕಳು, ಹದಿನೇಳು ಮೊಮ್ಮಕ್ಕಳು ಹಾಗೂ ಹದಿನಾಲ್ಕು ಮರಿ ಮೊಮ್ಮಕ್ಕಳನ್ನು ಹೊಂದಿದ್ದಾರೆ. ಅವರ ಒಬ್ಬ ಮಗ (ಮಂಡ್ಲಾ ಮಂಡೇಲಾ) ಈ ಎಲ್ಲ ವಿವಾದ ಗಳಿಂದ ದೂರಸರಿದು ತನ್ನ ತಾತನ ಹಳ್ಳಿಯಲ್ಲಿ ನೆಲೆಸಿದ್ದಾನೆ. ಮಂಡೇಲಾ ಹೆಸರನ್ನು ಮಾರ್ಕೆಟಿಂಗ್ ಹಾಗೂ ಹಣ ಮಾಡುವ ಉದ್ದೇಶಕ್ಕೆ ಬಳಸಿದರೆ ಅವರ ಹೆಣ್ಣು ಮಕ್ಕಳು ಲೀಗಲ್ ನೋಟಿಸ್ ಕಳುಹಿಸಿ, ಅವರಿಂದ ಹಣ ಕೀಳುವವರೆಗೆ ಬಿಡುವುದಿಲ್ಲ. ಒಬ್ಬ ಮಗಳಂತೂ `ಹೌಸ್ ಆಫ್ ಮಂಡೇಲಾ' ಎಂಬ ಬ್ರ್ಯಾಂಡಿನಲ್ಲಿ ಅಮೆರಿಕದಲ್ಲಿ ಪ್ರೀಮಿಯಂ ವೈನ್ ಬಿಜಿನೆಸ್ ಮಾಡುತ್ತಿದ್ದಾಳೆ. ಮತ್ತೊಬ್ಬಳು ತಂದೆಯ ಹೆಸರಿನಲ್ಲಿ `Being Mandela' ಎಂಬ ಶೀರ್ಷಿಕೆಯಡಿಯಲ್ಲಿ ಟಿವಿ ರಿಯಾಲಿಟಿ ಷೋ ನಡೆಸಲು ಪರವಾನಗಿ ಕೊಟ್ಟು ಕೋಟ್ಯಂತರ ರುಪಾಯಿಯ ಒಪ್ಪಂದಕ್ಕೆ ಸಹಿ ಹಾಕಿದ್ದಾಳೆಂದು ದೂರಲಾಗಿದೆ.
ಮಂಡೇಲಾ ದಕ್ಷಿಣ ಆಫ್ರಿಕಾದ ಜನತೆಗೆ ಸ್ಫೂರ್ತಿ, ಸ್ವಾತಂತ್ರ್ಯ, ಶಾಂತಿಯ ಪ್ರತೀಕವಾದರೆ ಅವರ ಮಕ್ಕಳಿಗೆ ಹಣ ಮಾಡುವ ಯಂತ್ರ. ಅವರ ಪಾಲಿಗೆ ಮಂಡೇಲಾ ಒಂದು ಬ್ರ್ಯಾಂಡ್. ದೇಶವಾಸಿಗಳಿಗೆ ಅವರು ರೋಲ್ ಮಾಡೆಲ್. ಆದರೆ ಅವರ ಮಕ್ಕಳಿಗೆ ಮಾಡೆಲ್(ರೂಪದರ್ಶಿ).
ಬದುಕಿಗಿಂತ ದೊಡ್ಡ ವ್ಯಕ್ತಿತ್ವ ಹೊಂದಿರುವ ಮಂಡೇಲಾ ನನ್ನೊಳಗೂ ಆವಾಹಿಸಿದ್ದ. ಆಬ್ಬ, ಅವರ ಹಿಡಿತದಿಂದ ತಪ್ಪಿಸಿಕೊಳ್ಳುವುದು ಕಷ್ಟ!
- ವಿಶ್ವೇಶ್ವರ್ ಭಟ್