ಮಹೋನ್ನತ ಶಕ್ತಿ
ಆಕೆಯಲ್ಲಿ ಸಂಯಮವಿದೆ. ಸಹನೆಯಿದೆ. ಶಕ್ತಿಯಿದೆ. ಸೌಂದರ್ಯವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸಚೇತನವಿದೆ. ಮೇಲ್ನೋಟಕ್ಕೆ ಕಾಣಲು ಆಕೆ ಸೌಮ್ಯ ಸ್ವರೂಪಿಣಿ. ನಿಂತ ನೀರನ್ನೊಮ್ಮೆ ನಿರುಕಿಸಿ ನೋಡಿ. ಅದೆಷ್ಟು ಸುಂದರ. ಅಲ್ಲಿ ಯಾವುದೇ ಏರಿಳಿತಗಳಿರುವುದಿಲ್ಲ. ತುಂಬಿ ತುಳುಕಾಡುತ್ತಿದ್ದರೂ ಅಬ್ಬರವಿರುವುದಿಲ್ಲ. ಅತ್ಯಂತ ಶಾಂತವಾಗಿ ಬೀಸುವ ಗಾಳಿಗೆ ಮೈಯ್ಯೊಡ್ಡಿ ತೊನೆದಾಡುತ್ತ ಪುಟ್ಟಪುಟ್ಟ ತರಂಗಗಳನ್ನು ಎಬ್ಬಿಸುತ್ತ ಕಣ್ಮನ ಸೆಳೆಯುತ್ತಿರುತ್ತದೆ. ಹೆಚ್ಚೆಂದರೆ ಒಂದು ಕಲ್ಲನ್ನೆಸೆದರೆ ಅದಕ್ಕೆ ಸ್ಪಂದಿಸಿ ಸಣ್ಣದ್ದೊಂದು ಶಬ್ದವನ್ನು ಹೊರಹೊಮ್ಮಿಸಿ ಒಂದಷ್ಟು ವೃತ್ತಾಕಾರದ ಅಲೆಗಳನ್ನು ಸೃಷ್ಟಿಸಿ ಒಂದಷ್ಟು ಹೊತ್ತು ಅದರ ಅಸ್ತಿತ್ವವನ್ನು ಉಳಿಸಿ ಮತ್ತೆ ಯಥಾ ಸ್ಥಿತಿಗೆ ಮರಳುತ್ತದೆ.
ಹೆಣ್ಣೆಂಬ ಹೆಣ್ಣು ಸಹ ಪಕ್ಕಾ ಅದೇ ಸ್ವಭಾವದವಳು. ನೀರೆಂದರೆ ನೀರೆಯಾ ಅಥವಾ ನೀರೆಯೆಂದರೆ ನೀರಾ? ಎಂಬಷ್ಟರ ಮಟ್ಟಿಗಿನ ತಾದಾತ್ಮ್ಯ ಅವರಿಬ್ಬರದೂ. ಹಾಗೆಂದು ಅಂಥ ಸಹನೆ ಅವರ ದೌರ್ಬಲ್ಯವೇನೂ ಅಲ್ಲ. ಒಂದೊಮ್ಮೆ ಯಾವುದೇ ಕ್ಷಣದಲ್ಲಿ ಒಂದಿನಿತೂ ಸಂಯಮ ಮೀರಿದರೂ ಮುಂದಿನದೆಲ್ಲವೂ ಸರ್ವನಾಶ ನಿಶ್ಚಿತ. ಎರಡೂ ಶಕ್ತಿಗಳ ವಿಚಾರದಲ್ಲಿ ಇದು ದಿಟ. ಅಬ್ಬಾ, ಅದೆಂಥಾ ರೌದ್ರ! ಒಮ್ಮೆ ಸಹನೆಯ ಕಟ್ಟೆಯೊಡೆದುಹೋಯಿತೆಂದರೆ ಮತ್ತವನ್ನು ಹಿಡಿದು ನಿಲ್ಲಿಸಲು ಈ ಜಗತ್ತಿನ ಯಾವ ಶಕ್ತಿಗಳಿಂದಲೂ ಸಾಧ್ಯವೇ ಇಲ್ಲ. ದುರಂತವೆಂದರೆ ಅಂಥ ಮಹಾಬಲದ ಅರಿವಿಲ್ಲದೆ ನಾವು ಕ್ಷುಲ್ಲಕವಾಗಿ ವರ್ತಿಸುತ್ತೇವೆ. ನೀರು- ನೀರೆಯರ ಅಂಥ ಅಸೀಮ ಸಹನೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತೇವೆ. ಅ ಸೌಂದರ್ಯದ ಮೇಲೆ ನಿರಂತರ ದೌರ್ಜನ್ಯವೆಸಗುತ್ತೇವೆ. ಅದರೆದುರು ನಮ್ಮ ಮನದ ಕುರೂಪವನ್ನೆಲ್ಲ ಹರವಿಡುತ್ತೇವೆ. ಆ ಮಹಾ ಚೈತನ್ಯವನ್ನು ಮನಗಾಣದೆ ಅಹಂಕಾರದಿಂದ ವರ್ತಿಸುತ್ತೇವೆ. ಹಿಡಿ ಪ್ರೀತಿ ಮಾತ್ರದಿಂದಲೇ ನಮ್ಮ ವಶ ಮಾಡಿಕೊಳ್ಳಬಹುದಾದ ಜಗತ್ತಿನ ಮಹೋನ್ನತ ಆಶಯಗಳನ್ನು ಮಣ್ಣುಪಾಲುಮಾಡುತ್ತಿದ್ದೇವೆ. ಇದು ಯುಕ್ತವೇ?
- ಸಹನೆ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.