ಎಲ್ಲದಕ್ಕೂ ಚಾಲಕನೇ ಕಾರಣ
ಲಾರಿಯೊಂದರ ಹಿಂದೆ ಬರೆಯಲಾಗಿದ್ದ ಈ ಬರಹ ಎಷ್ಟೊಂದು ಅರ್ಥಪೂರ್ಣ! ಖಾಸಗಿಯಾದರೂ ಅಷ್ಟೆ, ಸರಕಾರಿಯಾದರೂ ಅಷ್ಟೆ ಚಾಲಕ ನಿಯತ್ತಿನಿಂದಿದ್ದರೆ ಬಸ್ ಪ್ರಯಾಣ ಸುರಕ್ಷಿತ. ಸಹಪ್ರಯಾಣಿಕರೊಂದಿಗೆ ಹರಟೆ ಹೊಡೆಯುತ್ತಲೋ, ಮೊಬೈಲ್ ಫೋನಿನಲ್ಲಿ ಮಾತನಾಡುತ್ತಲೋ, ಬೇಜವಾಬ್ದಾರಿಯಿಂದ ಬಸ್ ಚಲಾಯಿಸುವ ಚಾಲಕ ಇದ್ದರೆ ಆ ಬಸ್‌ನ ಪ್ರಯಾಣಿಕರ ಪ್ರಯಾಣ ಸುರಕ್ಷಿತವಲ್ಲ. ಜೊತೆಗೆ ಅಪಾಯಕರವೂ ಕೂಡ. ಕೆಲವು ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸುವಾಗ ನಾವು ನಮ್ಮ ಮನೆಯೊಳಗೇ ಮಲಗಿದ್ದೇವೋ ಎಂಬ ಸುರಕ್ಷಿತ ಅನುಭವವಾಗುತ್ತದೆ.
- ಪಿ.ಜೆ.ರಾಘವೇಂದ್ರ, ಮೈಸೂರು
ಖಾಸಗಿ ಬಸ್, ರಿಸ್ಕೇ ಜಾಸ್ತಿ!
ಎರಡು ವರ್ಷಗಳ ಹಿಂದೆ ನಮ್ಮ ತಂದೆಯವರ ಶ್ರಾದ್ಧ ಕಾರ್ಯಕ್ಕೆ ಹಿರಿಯೂರಿನಿಂದ ಬೆಂಗಳೂರಿಗೆ ಬರಲು ಖಾಸಗಿ ಬಸ್ ಹತ್ತಿದೆವು. ಬೆಳಿಗ್ಗೆ 6-30ಕ್ಕೆ ಹೊರಟಿತು. ಬಸ್ ತುಂಬಾ ಪ್ರಯಾಣಿಕರಿದ್ದರು. ವೇಗ ಗಮನಿಸಿದರೆ, ಅಂದು ಶ್ರಾದ್ಧ ನಮ್ಮ ತಂದೆಯ ಜೊತೆ ನಮ್ಮದೂ ಆಗಬಹುದೆಂಬ ಭಯವಿತ್ತು. ತುಮಕೂರಿನ ಹಿರೇಹಳ್ಳಿ ಬಳಿ ರಸ್ತೆ ದಾಟುತ್ತಿದ್ದ ಯುವಕನಿಗೆ ಬಸ್ ಗುದ್ದಿಯೇ ಬಿಟ್ಟಿತು. ಕ್ಷಣ ಮಾತ್ರದಲ್ಲಿ ಆ ಅಮಾಯಕ ಪರಲೋಕ ಸೇರಿದ. ಕ್ಷಣಾರ್ಧದಲ್ಲಿ ಡ್ರೈವರ್ ಮತ್ತು ಕ್ಲೀನರ್ ಇಬ್ಬರೂ ನಾಪತ್ತೆ. ಆದರೆ, ಬಸ್‌ನಲ್ಲಿದ್ದ ಪ್ರಯಾಣಿಕರ ಗತಿ ದೇವರಿಗೆ ಮುಟ್ಟಿತ್ತು. ಒಟ್ಟಿನಲ್ಲಿ ಖಾಸಗಿ ಬಸ್‌ನವರ ಸಹವಾಸವಂತೂ ಬೇಡ.
- ಎಲ್.ವಿ. ಕುಮಾರಸ್ವಾಮಿ, ಹಿರಿಯೂರು
ತರಬೇತಿ ಕೊರತೆ
ಪ್ರಯಾಣವೆಂದರೆ ಒಂದರ್ಥದಲ್ಲಿ ಇಂಚಿಂಚು ಎಚ್ಚರದಿಂದಿರಬೇಕು. ಖಾಸಗಿ ಬಸ್ ಆಗಿರಲಿ ಅಥವಾ ಸರ್ಕಾರಿ ವಾಹನಗಳೇ ಆಗಿರಲಿ. ಅದರಲ್ಲೂ ಖಾಸಗಿ ಬಸ್ ಆದರೆ ತುಂಬಾ ಎಚ್ಚರ ವಹಿಸಬೇಕು. ದೂರದೂರಿಗೆ ಪ್ರಯಾಣವಿದ್ದಾಗ ಬಸ್‌ನಲ್ಲಿ ಇಬ್ಬರು ಚಾಲಕರಿದ್ದರೆ ಒಳಿತು. ಹಾಗೆಯೇ ಅನಾಹುತ ಸಂಭವಿಸಿದಸಂದರ್ಭದಲ್ಲಿ ತಕ್ಷಣ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಚಾಲಕ, ನಿರ್ವಾಹಕರಿಗೆ ಪೂರ್ವ ತರಬೇತಿ ನೀಡುವುದು ಮುಖ್ಯ. ಪ್ರಯಾಣಿಕರ ಜೀವಕ್ಕಲ್ಲದೇ ಚಾಲಕ, ಕ್ಲೀನರ್‌ಗಳಿಗೂ ವಿಮೆ ಮಾಡಿಸಿರಬೇಕು. ಆದರೂ ಹಣೆಬರಹ ಯಾರಿಗೂ ಬಿಡದು.
- ಮಧು ಮಾಲ್ವೆ, ಸಾಗರ