ಡಯಟಿಕ್ ಸಕ್ಕರೆ ತರುವುದೇ ಆತಂಕ?
ಹಿಂದೊಮ್ಮೆ ಡಯಟಿಕ್ ಸಕ್ಕರೆ ಕುರಿತು ಹೇಳುವಾಗ 'ಸಾರ್ಬಿಟಾಲ್' ಬಗ್ಗೆ ಪ್ರಸ್ತಾಪಿಸಿದ್ದ ನೆನಪು. ಇದನ್ನು ಶುಗರ್ ಆಲ್ಕೋಹಾಲ್ ಎಂದೂ, ನ್ಯಾಚುರಲ್ ಶುಗರ್ ಎಂದೂ ಹೇಳುವುದುಂಟು. ಚಯಾಪಚಯ ಕ್ರಿಯೆಯಲ್ಲಿ ಮುಖ್ಯಪಾತ್ರ ವಹಿಸುವ ಇದು ಭೇದಿಗೂ ಕಾರಣವಾಗುತ್ತದೆ. ಸಕ್ಕರೆ ಇಲ್ಲದ ಮಿಂಟ್‌ಗಳು, ಶುಗರ್‌ಲೆಸ್ ಗಮ್, ಡಯಟಿಕ್ ಜಾಮ್‌ಗಳಲ್ಲಿ ಹೇರಳವಾಗಿರುವ ಇದು, ಐಬಿಎಸ್‌ಗೂ ಕಾರಣ ಆಗುವುದುಂಟು. ಡಯಟಿಕ್ ಶುಗರ್ ಬಳಸುವವರಲ್ಲಿ ಶೇ 40ರಷ್ಟು ಮಂದಿ ಸಾರ್ಬಿಟಾಲ್‌ನಿಂದಲೇ ಐಬಿಎಸ್ ಸಮಸ್ಯೆಗೆ ತುತ್ತಾಗುತ್ತಾರೆ ಎನ್ನುತ್ತದೆ ಒಂದು ಆರೋಗ್ಯ ಸಮೀಕ್ಷೆ. ಇನ್ನೂ ಅಚ್ಚರಿ ವಿಷಯ ಏನೆಂದರೆ ಬಿಳಿಯರಿಗಿಂತ ಕರಿಯರಲ್ಲೇ ಸಾರ್ಬಿಟಲ್ ಅಲರ್ಜಿ ಹೆಚ್ಚು ಎನ್ನುವುದು. ಶುಗರ್ ಆಲ್ಕೋಹಾಲ್‌ನಿಂದ ಶೇ 43ರಷ್ಟು ಶ್ವೇತವರ್ಣೀಯರು ತೊಂದರೆಗೆ ಒಳಗಾದರೆ, ಶೇ 55ರಷ್ಟು ಕಪ್ಪುವರ್ಣೀಯರು ಐಬಿಎಸ್‌ನಿಂದ ಬಳಲುತ್ತಾರಂತೆ! ಪೀಚ್, ಒಣದ್ರಾಕ್ಷಿ, ಪೇರಳೆ, ಶುಗರ್‌ಲೆಸ್ ಗಮ್, ಚಾಕೊಲೆಟ್, ಡಟಯಿಕ್ ಜಾಮ್‌ಗಳಲ್ಲಿ ಸಾರ್ಬಿಟಲ್ ಹೇರಳವಾಗಿರುತ್ತದೆ.
ಇನ್ನೊಂದು ನೈಸರ್ಗಿಕ ಸಕ್ಕರೆ ಫ್ರುಕ್ಟೋಸ್ ಕೂಡ ಕೆಲವರಲ್ಲಿ ಐಬಿಎಸ್‌ಗೆ ಕಾರಣವಾಗುತ್ತದೆ. ಕೆಲವು ಸಲ ಇದು ಏಕಾಂಗಿಯಾಗಿ ಜೀರ್ಣಾಂಗಗಳಲ್ಲಿ ಕಿರಿಕಿರಿ ಉಂಟುಮಾಡಬಹುದು. ಒಮ್ಮೊಮ್ಮೆ ಸಾರ್ಬಿಟಾಲ್ ಜತೆ ಸೇರಿಕೊಂಡು ತೊಂದರೆ ಹುಟ್ಟುಹಾಕುವುದುಂಟು. ಐಬಿಎಸ್‌ಗೆ ತುತ್ತಾಗುವ ಹೆಚ್ಚಿನವರಲ್ಲಿ ಕನಿಷ್ಠ ಒಂದು ಔನ್ಸ್‌ನಷ್ಟು ಫ್ರುಕ್ಟೋಸ್ ಸೇವಿಸಿದ ಕೆಲ ಸಮಯದಲ್ಲಿಯೇ ಕರುಳಿನ ಭಾಗದಲ್ಲಿ ನೋವು ಉಂಟಾಗುತ್ತದೆ ಎನ್ನುವುದು ಅಧ್ಯಯನಗಳಿಂದ ತಿಳಿದುಬಂದಿದೆ. ಫ್ರುಕ್ಟೋಸ್ ಎಂದರೆ ಹಣ್ಣುಗಳಲ್ಲಿ ಇರುವ ನೈಸರ್ಗಿಕ ಸಕ್ಕರೆ ಎನ್ನುವುದನ್ನು ವಿವರಿಸಿ ಹೇಳಬೇಕಿಲ್ಲ. ಕೆಲವರಲ್ಲಿ ಕಾಫಿ ಕೂಡ ಐಬಿಎಸ್‌ಗೆ ಕಾರಣವಾಗಬಲ್ಲದು. ಆದರೆ ಅಂತಹವರ ಪ್ರಮಾಣ ಬಹಳ ಕಡಿಮೆ. ಆದ್ದರಿಂದ ಕಾಫಿ ವಿಚಾರದಲ್ಲಿ ಅತಿಯಾಗಿ ತಲೆ ಕೆಡಿಸಿಕೊಳ್ಳುವ ಪ್ರಸಂಗವಿಲ್ಲ.
'ನಿತ್ಯ ಗೋಧಿ ಹಿಟ್ಟಿನ ಪದಾರ್ಥ ಸೇವಿಸುತ್ತಿರಿ. ಸಾಧ್ಯವಾದರೆ ದಿನಕ್ಕೊಂದು ಕಿತ್ತಳೆ ಅಥವಾ ಸೇಬು ನಿಮ್ಮ ಆಹಾರದಲ್ಲಿ ಸೇರಿರಲಿ. ಇದು ಐಬಿಎಸ್, ಮಲಬದ್ಧತೆ ಮತ್ತು ಜೀರ್ಣಾಂಗಗಳಿಗೆ ಸಂಬಂಧಿಸಿದ ಬಹುತೇಕ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ' ಎನ್ನುತ್ತಾರೆ ಸ್ಕಾಟ್ಲೆಂಡ್‌ನ ಯೂನಿವರ್ಸಿಟಿ ಆಫ್ ಎಡಿನ್‌ಬರ್ಗ್ ಮೆಡಿಕಲ್ ಸ್ಕೂಲ್‌ನ ಸಂಶೋಧಕ ಮತ್ತು ಗ್ಯಾಸ್ಟ್ರೊಎಂಟೆರೊಲಾಜಿಸ್ಟ್ ಡಾ.ಮಾರ್ಟಿನ್ ಎ.ಈಸ್ಟ್‌ವುಡ್ ಅವರು.
- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com