ಸುಖವ ಅಪಹರಿಸುವ ಕ್ಷಣ
ಅವರಿಗೆ ಇಹದ ಪರಿವೆಯೇ ಇಲ್ಲ. ರತಿ ಸುಖದಿ ಮೈಮರೆತ ದಂಪತಿಗೆ ಸುತ್ತಲ ವಾತಾವರಣವ ಗ್ರಹಿಸುವ ತಾಳ್ಮೆ ಎಲ್ಲಿಂದ ಬರಬೇಕು? ಆದರೂ ಮೊಸರನ್ನ ಸವಿಯುವವನಿಗೆ ನಡುವೆ ಕಲ್ಲು ಸಿಕ್ಕಂತೆ ಬೆತ್ತಲ ಮೈಯ್ಯಿಗೆ ಬರಿಯ ನೆಲ ಒತ್ತುತ್ತಿದೆ. ಹಿತದಿ ಮುಲುಗುತ್ತ ಮಲಗಿದವಳಿಗೆ ನೆಲದ ಒರಟು ಬಾಧಿಸುತ್ತಿದೆ. ಕಾವೇರಿದ ಮೈಯನ್ನೂ ಕೊರೆಯುತ್ತಿದೆ ಮಾಗಿಯ ಚಳಿ. ಇಷ್ಟು ಸಾಲದೆಂಬಂತೆ ದಂಪತಿಗೊಂದು ಹಸುಗೂಸು. ನಡು ಮನೆಯಲ್ಲಿ ಮಲಗಿಸಿ ಬಂದ ಅದು ಎಚ್ಚರಗೊಂಡು ಅಳುವ ಆತಂಕ. ಇವ್ಯಾವುದನ್ನೂ ಪರಿಗಣಿಸದೇ, ಪತಿರಾಯ ಬಿಡದೇ ಕೇಳಿಗೆಳೆಸುತ್ತಿದ್ದಾನೆ. ಅತ್ತ ತನ್ನ ತಾನೂ ಮರೆಯಲೂ ಆಗದ, ಇತ್ತ ನಿರಾಕರಿಸಲೂ ಆಗದ ಸ್ಥಿತಿ ಆ ಲಲನೆಯದ್ದು. ಹುಸಿಮುನಿಸಿನಲ್ಲಿಯೇ ಆಕೆ ಗಂಡನಿಗೆ ಪಿಸುಗುಡುತ್ತಾಳೆ. ಬರಿಯ ನೆಲ ಬಾಧಿಸುತ್ತಿದೆ. ನೀನುಟ್ಟ ಬಟ್ಟೆ ತುಂಡನ್ನಾದರೂ ನನಗೆ ಕೊಡು, ಕೆಳಗಷ್ಟು ಒಣ್ಣ ಹುಲ್ಲಾದನ್ನಾದರೂ ಹಾಸು, ಮಗುವನ್ನು ಮಲಗಿಸಿ ಬಾ, ನಂತರ ನಿನ್ನ ಕಾಯಿಸಲಾರೆ...
ವಾಸ-ಖಂಡಮಿದಂ ಪ್ರಯಚ್ಛ ಯದಿ ವಾ
ಸ್ವಾಂಕೇ ಗೃಹಾಣಾರ್ಭಕಂ
ರಿಕ್ತಂ ಭೂತಲಮತ್ರ ನಾಥ ಭವತಃ
ಪೃಷ್ಠೇ ಪಲಾಲೋಚ್ಛಯಃ
ದಂಪತ್ಯೋರಿತಿ ಜಲ್ಪಿತಂ ನಿಶಿ ಯಥಾ
ಚೌರಃ ಪ್ರವಿಷ್ಟಸ್ತದಾ ಲಬ್ದಂ ಕರ್ಪಟಮನ್ಯತಸ್ತದುಪರಿ
ಕ್ಷಿಪ್ತ್ವಾ ರುದನ್ನಿರ್ಗತಃ
ಉದ್ರೇಕಿತ ದಂಪತಿಯ ನಡುವೆ ಇಂಥ ಪಿಸುಮಾತು ನಡೆಯುತ್ತಿರುವಾಗಲೇ ಅವರ ಮನೆಗೊಬ್ಬ ಕಳ್ಳ ನುಗ್ಗಿಬಿಡಬೇಕೇ? ಪತಿರಾಯ ಆಕೆಯ ಯೌವನ ಭರಿತ ದೇಹಸಿರಿಯನ್ನು ಒಂದಿನಿತೂ ಬಿಡದಂತೆ ದೋಚುತ್ತಿದ್ದರೆ, ಮನೆಯೊಳಗಣ ಬೆಲೆಬಾಳುವ ವಸ್ತುಗಳನ್ನು ಅಪಹರಿಸುವ ಹುನ್ನಾರ ಚೋರನದ್ದು. ಹೆಂಡತಿಯ ನುಡಿಗಳನ್ನು ಗಂಡ ಕೇಳಿಸಿಕೊಂಡನೋ ಇಲ್ಲವೋ, ಆದರೆ ಅವು ಕಳ್ಳನ ಕಿವಿಗೆ ಬಿದ್ದದ್ದಂತೂ ನಿಜ. ಅವಳ ಅಸಹಾಯಕ ಸ್ಥಿತಿ ಕಳ್ಳನಿಗೆ ಅರ್ಥಿವಾಗಿರಬೇಕು. ಆತ ತಾನು ಬಂದ ಕೆಲಸವನ್ನು ಮರೆತು ಎಲ್ಲಿಂದಲೋ ಕದ್ದು ತಂದಿದ್ದ ಕೌದಿಯನ್ನು ಅವಳ ಬೆತ್ತಲೆ ಮೈ ಮೇಲೆಸೆದು ಕತ್ತಲೆಯಲ್ಲಿ ಕರಗಿ ಹೋದನಂತೆ!
- ಹರಿಹರ