ವಿಸೀ ಮನೆ ನೆಲಸಮ
ಕನ್ನಡ ಸಾಹಿತ್ಯ ಲೋಕದಲ್ಲಿ 'ವಿಸೀ' ಎಂದೇ ಹೆಸರಾದವರು ವಿ. ಸೀತಾರಾಮಯ್ಯ. ಅವರ ಎಲ್ಲ ರಚನೆಗಳಲ್ಲೂ ಎದ್ದು ತೋರುವುದು ಕವಿಯಾಗಿ ಮಾಡಿದ ಕೃಷಿ, ವಿಮರ್ಶಕರಾಗಿ ಬೀರಿದ ದೃಷ್ಟಿ. ವಿಸೀ ಅವರ ವ್ಯಕ್ತಿತ್ವ ಅವರ ಕೃತಿಗಳಿಗಿಂತಲೂ ಮಹತ್ತರವಾದುದು. ಆದರೆ, ವಿಸೀಯ ಮನೆ 1984ರಲ್ಲೇ ನೆಲಸಮವಾಗಿದೆ. ಆ ಸ್ಥಳದಲ್ಲಿ ಹೊಸ ಮನೆ ನಿಂತಿದೆ. ಅದನ್ನು ಮಕ್ಕಳಿಗೆ ಹಂಚಲಾಗಿದೆ. ಈಗ ಹೊಸ ಮನೆಯ ಗೋಡೆಗೆ ನೇತುಹಾಕಿರುವ ಫೋಟೋದಲ್ಲಿ ಮಾತ್ರ ವಿ.ಸೀ. ಕಾಣಿಸುತ್ತಾರೆ.
ಆ ಮನೆ ಹೀಗಿತ್ತು...
ಬೆಂಗಳೂರಿನ ಚಾಮರಾಜಪೇಟೆಯ 2ನೇ ಮುಖ್ಯರಸ್ತೆಯ ಮೊದಲ ಮನೆ ಇವರದ್ದು. ಆ ರಸ್ತೆ ಈಗ 'ವಿ.ಸೀ. ರಸ್ತೆ' ಆಗಿದೆ. ನೂರಾರು ವರ್ಷಗಳ ಹಳೇ ಮನೆ ಅದು. ಮನೆಮುಂದೆ ಹೂಗಿಡ. ಎತ್ತರಕ್ಕೆ ಬೆಳೆದ ಅಪರೂಪದ ಖರ್ಜೂರದ ಗಿಡ. ಅಕ್ಕಪಕ್ಕದಲ್ಲಿ ಕಲ್ಲುಬೆಂಚುಗಳು. ಮನೆ ಪ್ರವೇಶಿಸಿದರೆ ಬಲಭಾಗಕ್ಕೆ ವೀಸೀ ಕೊಠಡಿ. ಮನೆಮೇಲೆ ಬೃಹದಾಕಾರವಾಗಿ ಹಬ್ಬಿದ್ದ ಜಾಜಿಯ ಬಳ್ಳಿ. ಜಾಜಿ ಪರಿಮಳ ದಾರಿಹೋಕರನ್ನೂ ಕರೆಯುತ್ತಿತ್ತು.
10x12ರ ಕೋಣೆ
ಈ ಬಗ್ಗೆ ಮಾತಿಗಿಳಿದ ವಿ.ಸೀ. ಅವರ ಆಪ್ತ ಎಂ.ವಿ. ವೆಂಕಟೇಶ ಮೂರ್ತಿ, 'ಆ ಮನೆಯ ವಿಸ್ತೀರ್ಣದಲ್ಲಿ 10x12 ವಿಸ್ತೀರ್ಣದ ಕೋಣೆ. ಕೋಣೆ ತುಂಬ ದೊಡ್ಡ ಅಲ್ಮೆರಾಗಳು. ಅವುಗಳ ತುಂಬ ಸಾಲು ಸಾಲು ಪುಸ್ತಕಗಳು. ಕಪಾಟಿನ ಮೇಲೆ ರೇಡಿಯೋ. ನೆಲದ ಉದ್ದಕ್ಕೆ ಹಾಸಿದ್ದ ಚಾಪೆಯ ಮೇಲೆ ಗೋಡೆಯ ತುದಿಗೆ ಸುತ್ತಿಟ್ಟಿದ್ದ ಹಾಸಿಗೆಯ ಸುರಳಿಗೊರಗಿ ವಿ.ಸೀ. ಕೂರುತ್ತಿದ್ದರು. ಮುಂದೆ ದಿನಪತ್ರಿಕೆ, ನಿಯತಕಾಲಿಕೆಗಳು, ಅವರ ಎರಡೂ ಬದಿಯಲ್ಲಿ ಸಾಹಿತ್ಯ ಸಂಬಂಧ ಕೃತಿಗಳು. ಬಲಗಡೆ ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಎಡಗಡೆ ಇಂಗ್ಲಿಷ್ ಸಾಹಿತ್ಯ ಸಂಬಂಧಿಸಿದ ಪುಸ್ತಕಗಳಿರುತ್ತಿದ್ದವು. ಕುಳಿತಲ್ಲೆ ಅವರು ವಿಶ್ವಪರ್ಯಟನೆ ಮಾಡುತ್ತಿದ್ದರು. ಆ ಕೋಣೆ ಬಾಗಿಲು ಉಳಿದ ಬಾಗಿಲುಗಳಿಗಿಂತ ಕೊಂಚ ಎತ್ತರವಿತ್ತು. ಕಾರಣ, ಅಲ್ಲಿಗೆ ಬರುವ ದಿಗ್ಗಜರು ತಲೆಬಾಗಿ ಬಂದರೆ ಅಪಚಾರವಾಗುತ್ತದೆ ಎಂದು ಭಾವಿಸಿ ಬಾಗಿಲನ್ನು ಎತ್ತರಿಸಿದ್ದರು. ಇದು ವೀ.ಸಿ. ಅವರ ಸೂಕ್ಷ್ಮಗ್ರಹಿಕೆಗೆ ಸಾಕ್ಷಿ.
ಮನೆಯನ್ನು ಸ್ಮಾರಕವಾಗಿಸಲು ಸರ್ಕಾರ ಮನಸ್ಸು ಮಾಡಲಿಲ್ಲ. ಅವರ ಮಕ್ಕಳೂ ಆ ಬಗ್ಗೆ ಯೋಚಿಸಲಿಲ್ಲ. ಒಂದು ವೇಳೆ ಯೋಚಿಸಿ ಮನಸ್ಸಾಗಿದ್ದಿದ್ದರೆ ಅವರಿಗಾಗಿ ಮೀಸಲಿದ್ದ ಕೊಠಡಿಯನ್ನಾದರೂ ಉಳಿಸಬಹುದಿತ್ತು. ಆದರೆ, ಹಾಗೆ ಮಾಡಲಿಲ್ಲ. ವಿಸೀ, ಅವರ ಪತ್ನಿ, ಮೂವರು ಮಕ್ಕಳು ಕಾಲವಾಗಿದ್ದಾರೆ. ಒಬ್ಬರು ಈಗಿದ್ದಾರೆ. ಸೊಸೆಯಂದಿರು, ಮೊಮ್ಮಕ್ಕಳು ಹೊಸಾ ಮನೆಯಲ್ಲಿದ್ದಾರೆ.
- ಶಾಂತ ತಮ್ಮಯ್ಯ
ಚಿತ್ರಗಳು: ಸುರೇಶ್