ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಸಮಯ ಪಾಲನೆ ಇಲ್ಲ!

Lingaraj Badiger
Updated On : 4 Dec 2013, 4:11 am

ಖಾಸಗಿ ಬಸ್‌ಗಳಿಗೆ ವೇಗ ಮಿತಿ ಇರುವುದಿಲ್ಲ. ಇಂತಿಷ್ಟೇ ಸೀಟುಗಳು ಎಂಬುದು ನಿಗಧಿಯಾಗಿರುವುದಿಲ್ಲ. ಅಲ್ಲದೇ ಬಸ್ಸಿನ ಮೇಲೆ ಕೂಡ ಪ್ರಯಾಣಿಕರನ್ನು ಕೂಡಿಸಿ ಅಪಘಾತಗಳಿಗೆ ಅನುವು ಮಾಡಿಕೊಡುತ್ತಾರೆ. ಪ್ರತಿಹಳ್ಳಿ, ಕ್ರಾಸ್‌ಗಳಲ್ಲಿ ಹೀಗೆ ಎಲ್ಲೆಂದರಲ್ಲಿ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಸರಿಯಾದ ಸಮಯಕ್ಕೆ ತಾವು ಹೋಗಬೇಕಾದ ಸ್ಥಳಗಳಿಗೆ ಮುಟ್ಟಿಸುವುದಿಲ್ಲ. ಈ ಮಧ್ಯೆ ಅತಿಯಾದ ವೇಗದಲ್ಲಿ ಬಸ್ ಚಲಾಯಿಸಿ ಪದೇ ಪದೆ ಬ್ರೇಕ್ ಒತ್ತುತ್ತಾ ಬಸ್‌ನ ಒಳಗೆ ಕುಳಿತಿರುವ ಪ್ರಯಾಣಿಕರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ಕೂರುವಂತೆ ಮಾಡುತ್ತಾರೆ. ಮೇಲಾಗಿ ಖಾಸಗಿ ಬಸ್‌ನ ಅಪಘಾತದಲ್ಲಿ ಮಡಿದವರಿಗೆ ಯಾವುದೇ ಸವಲತ್ತು ಸಿಗುವುದಿಲ್ಲ. ಇದೆಲ್ಲವನ್ನು ಗಮನಿಸಿದರೆ ಸರ್ಕಾರಿ ಬಸ್‌ನ ಪ್ರಯಾಣ ಸುಖಕರ. ರಾಂಗ್ ಸೈಡ್‌ನಲ್ಲಿ 'ಓವರ್ ಟೇಕ್‌' ಮಾಡುವುದರಲ್ಲಿ ಖಾಸಗಿ ಬಸ್‌ನವರು ಎತ್ತಿದ ಕೈ. ಅಪಘಾತಕ್ಕೆ ಅವಸರವೇ ಕಾರಣ ಎಂಬುದಕ್ಕೆ ಖಾಸಗಿ ಬಸ್‌ಗಳೇ ನಿದರ್ಶನ.
- ಎಸ್.ಪಿ.ಶಿಂಪಿ, ಬಾದಾಮಿ

ಖಾಸಗಿ ಬಸ್‌ನ ಸೌಲಭ್ಯ ಹಿತಕರ!
ಖಾಸಗಿ ಬಸ್‌ನವರು ಆದಾಯಕ್ಕೆ ಪ್ರಾಮುಖ್ಯತೆ ನೀಡುತ್ತಾರೆ. ಸಮಯ ಪಾಲನೆ ಅವರ ಆದರ್ಶವಾಗಿದೆ. ಖಾಸಗಿ ಬಸ್ಸುಗಳು ನಿಗದಿತ ಸಮಯಕ್ಕೆ ಸರಿಯಾಗಿ ಹೊರಡುತ್ತವೆ. ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಅವರು ಇಳಿಯಬೇಕಾದಲ್ಲಿ ಅದು ನಿಲ್ದಾಣವಲ್ಲದಿದ್ದರೂ ಬಸ್ ನಿಲ್ಲಿಸಿ ಸಹಕರಿಸುತ್ತಾರೆ. ಸಾಮಗ್ರಿಗಳನ್ನು ಇಳಿಸಲು ಕೂಡ ಸಹಾಯ ಹಸ್ತ ನೀಡಿ ಪ್ರಯಾಣಿಕರಿಗೆ ನೆರವಾಗುತ್ತಾರೆ. ಸರ್ಕಾರಿ ಬಸ್‌ಗಳಲ್ಲಿ ಇವನ್ನೆಲ್ಲ ನಿರೀಕ್ಷೆ ಮಾಡುವುದು ಕಷ್ಟ. ಸರ್ಕಾರಿ ಬಸ್‌ಗಳಲ್ಲಿನ ಚಾಲಕರು ಮತ್ತು ನಿರ್ವಾಹಕರು ಸಂಬಳಸ್ಥರಾಗಿರುವುದರಿಂದ ಪ್ರಯಾಣಿಕರನ್ನು ಓಲೈಸುವ ಗೋಜಿಗೆ ಹೋಗುವುದಿಲ್ಲ. ಖಾಸಗಿ ಬಸ್ ಪ್ರಯಾಣ ಸ್ವಲ್ಪ ದುಬಾರಿಯಾದರೂ ಸುರಕ್ಷಿತವೆಂಬುದು ನನ್ನ ಅಭಿಪ್ರಾಯ.
-ಬಿ.ಬಿ.ಮಾಧಮ್ಮಯ್ಯ, ಮಡಕೇರಿ

ಜೀವಕ್ಕೆ ಕುತ್ತು
ಖಾಸಗಿ ಬಸ್ ಪ್ರಯಾಣ ಅಷ್ಟು ಸುರಕ್ಷಿತವಲ್ಲ. ಕೆಲವು ಖಾಸಗಿ ಬಸ್‌ಗಳಲ್ಲಿ ವಾಹನ ಚಾಲಕರು ಬೆಳಗಿನ ಹೊತ್ತೆ ಮದ್ಯಪಾನ ಮಾಡಿ ವಾಹನ ಓಡಿಸುತ್ತಾರೆ. ದೂರದ ಪ್ರಯಾಣ ಮಾಡುವಾಗ ವಾಹನ ಚಾಲಕರು ತಮಗೆ ಆಯಾಸವಾದಾಗ ಕ್ಲೀನರ್‌ಗೆ ವಾಹನ ಚಲಿಸಲು ಅವಕಾಶ ಕೊಡುತ್ತಾರೆ. ಅಲ್ಲದೆ ಕೆಲವೊಮ್ಮೆ ನಿರಂತರವಾಗಿ ಮೂರ್ನಾಲ್ಕು ದಿನಗಳು ಹಗಲು-ರಾತ್ರಿ ಎನ್ನದೇ ವಾಹನ ಚಲಾಯಿಸುತ್ತಾರೆ.  ಇದರಿಂದ ಅಪಘಾತದ ಸಂಭವ ಹೆಚ್ಚಾಗಿರುತ್ತದೆ. ಚಾಲಕರಿಂದ ಅಪಘಾತ ಪ್ರಕರಣಗಳು ಹೆಚ್ಚಾಗುತ್ತವೆ. ಖಾಸಗೀ ವಾಹನಗಳಲ್ಲಿ ಸರಕು ಸಾಗಣೆ ಮಾಡುವುದು ಸರ್ವೇ ಸಾಮಾನ್ಯ. ಆದರೆ ಪ್ರಯಾಣಿಕರಿದ್ದಾಗ ಸರಕು ಸಾಗಣೆ ಮಾಡುವುದು ಎಷ್ಟು ಸುರಕ್ಷಿತ ಎನ್ನುವುದೇ ಯಕ್ಷ ಪ್ರಶ್ನೆ. ಪ್ರಯಾಣಿಕರ ಸುರಕ್ಷತೆ ಬಗ್ಗೆ ಸ್ವಲ್ಪವೂ ಎಚ್ಚರ ವಹಿಸುವುದಿಲ್ಲ. ಹೀಗಾಗಿ ಸರ್ಕಾರಿ ಸಾರಿಗೆಯೇ ಉತ್ತಮ.
- ಅಂಕುಶ್.ಬಿ, ಬೆಂಗಳೂರು

'ಜಗುಲಿ'ಯಲ್ಲಿ ಈ ಸಲದ ವಿಷಯ 'ಸಚಿನ್ ನಿವೃತ್ತಿ'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments